ಚಂದ್ರವಳ್ಳಿ ನ್ಯೂಸ್, ಶಿರಡಿ:
ದಕ್ಷಿಣ ಚಿತ್ರರಂಗದ ಖ್ಯಾತ ನಟ ಅಕ್ಕಿನೇನಿ ನಾಗಾರ್ಜುನ ಅವರು ಮಹಾರಾಷ್ಟ್ರದ ಶಿರಡಿಯಲ್ಲಿರುವ ಸಾಯಿಬಾಬಾ ದೇವಸ್ಥಾನಕ್ಕೆ ಹೊಸ ವರ್ಷ ಆರಂಭದ ಮುನ್ನ ದಿನವಾದ ಬುಧವಾರದಂದು ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದ್ದಾರೆ.
ದೇಶಾದ್ಯಂತ ಹೊಸ ವರ್ಷದ ಸಂಭ್ರಮ ಮನೆ ಮಾಡಿದ್ದು, ಜನಪ್ರಿಯ ನಟ ತಾವು ಆರಾಧಿಸುವ ಸಾಯಿಬಾಬಾರ ಆಶೀರ್ವಾದ ಪಡೆದಿದ್ದಾರೆ.
ದೇವರ ದರ್ಶನ ನಂತರ ಸುದ್ದಿಗಾರರೊಂದಿಗೆ ಮಾತನಾಡಿ ನಾಗಾರ್ಜುನ್ ಅವರು, ಸಾಯಿಬಾಬಾ ಬಹಳ ದಿನಗಳಿಂದ ನನ್ನನ್ನು ಕರೆಯುತ್ತಿದ್ದಾರೆ ಎಂದು ನನಗನಿಸುತ್ತಿತ್ತು. ಕೊನೆಗೂ 2025ರ ಕೊನೆ ದಿನದಂದು ದರ್ಶನ ಪಡೆಯುವ ಅವಕಾಶ ಸಿಕ್ಕಿತು. ಸಾಯಿಬಾಬಾ ಸಮಾಧಿಯ ದರ್ಶನ ಪಡೆದು ಧನ್ಯನಾದೆ ಎಂದು ತಿಳಿಸಿದರು.
ಶಿರಡಿ ಸಾಯಿಬಾಬಾ ಅವರ ಪರಮ ಭಕ್ತನಾಗಿ ಗುರುತಿಸಿಕೊಂಡಿರುವ ನಾಗಾರ್ಜುನ, ತಮ್ಮ ಅಭಿನಯದ 100ನೇ ಚಿತ್ರವನ್ನು ಇದೇ 2026ದಲ್ಲಿ ಪೂರ್ಣಗೊಳಿಸುವುದಾಗಿ ಮಾಹಿತಿ ನೀಡಿದ್ದಾರೆ.
2012ರಲ್ಲಿ ‘ಶಿರಡಿ ಸಾಯಿ‘ ಚಿತ್ರದಲ್ಲಿ ಸಂತನ ಪಾತ್ರವನ್ನು ನಿರ್ವಹಿಸಿದ್ದರು. ಅಂದಿನಿಂದ ಅವರು ಶಿರಡಿಗೆ ಭೇಟಿ ನೀಡುತ್ತಾ ಬಂದಿದ್ದಾರೆ.
ಸಾಯಿಬಾಬಾ ಸಮಾಧಿ ದರ್ಶನದ ನಂತರ, ನಾಗಾರ್ಜುನ ಅವರು ದ್ವಾರಕಾಮಯಿ ಮತ್ತು ಗುರುಸ್ಥಾನ ದೇವಾಲಯಗಳಿಗೂ ಭೇಟಿ ನೀಡಿದ್ದರು.
ಈ ಸಂದರ್ಭದಲ್ಲಿ ಸಾಯಿಬಾಬಾ ಸಂಸ್ಥಾನದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಗೋರಕ್ಷ್ ಗಡಿಲ್ಕರ್ ಅವರು ನಾಗಾರ್ಜುನ ಅವರಿಗೆ ಶಾಲು ಹೊದಿಸಿ, ಸಾಯಿಬಾಬಾ ವಿಗ್ರಹ ನೀಡಿ ಸನ್ಮಾನಿಸಿದರು.
ನಾಗಾರ್ಜುನ ಅವರು 2025ರಲ್ಲಿ ‘ಕುಬೇರ‘ ಸಿನಿಮಾ ಮೂಲಕ ಗಮನ ಸೆಳೆದಿದ್ದರು. ತೆಲುಗು, ತಮಿಳು, ಹಿಂದಿ, ಕನ್ನಡ ಮತ್ತು ಮಲಯಾಳಂ ಭಾಷೆಗಳಲ್ಲಿ ತೆರೆಕಂಡ ಕುಬೇರ ಚಿತ್ರದಲ್ಲಿ ಧನುಷ್, ರಶ್ಮಿಕಾ ಮಂದಣ್ಣ ಜೊತೆ ನಾಗಾರ್ಜುನ ಸ್ಕ್ರೀನ್ ಶೇರ್ ಮಾಡಿದ್ದರು. ಶೇಖರ್ ಕಮ್ಮುಲ ನಿರ್ದೇಶನದ ಈ ಸಿನಿಮಾ 2025ರ ಹಿಟ್ ಚಿತ್ರಗಳಲ್ಲಿ ಒಂದು ಎನ್ನುವುದು ವಿಶೇಷ.

