ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ :
ಇಂಜಿನಿಯರ್‌ಗಳಿಗೆ ಅನೇಕ ಸಮಸ್ಯೆ, ಸವಾಲುಗಳಿರುತ್ತವೆ. ನನ್ನ ೩೨ ವರ್ಷಗಳ ಸೇವಾ ಅವಧಿಯಲ್ಲಿ ಮೇಲಾಧಿಕಾರಿಗಳ, ಸಹೋದೋಗ್ಯಿಗಳ ಹಾಗೂ ಸಿಬ್ಬಂದಿಗಳ ಸಹಕಾರದಿಂದ ಎಲ್ಲವನ್ನು ಸಮರ್ಥವಾಗಿ ನಿಭಾಯಿಸಿಕೊಂಡು ಬಂದೆ ಎಂದು ವಿಶ್ವೇಶ್ವರಯ್ಯ ಜಲನಿಗಮ ನಿಯಮಿತ ಭದ್ರಾ ಮೇಲ್ದಂಡೆ ಯೋಜನೆ ವಿಭಾಗ ನಂ.೧೭ ಹಿರಿಯೂರು ಕಾರ್ಯಪಾಲಕ ಅಭಿಯಂತರ ಬಾರಿಕರ ಚಂದ್ರಪ್ಪ ತಮ್ಮ ಅನುಭವಗಳನ್ನು ಹಂಚಿಕೊಂಡರು.
ಸೇವೆಯಿಂದ ವಯೋ ನಿವೃತ್ತಿ ಹೊಂದಿದ ಅವರು ಮಂಗಳವಾರ ಕಚೇರಿಯಲ್ಲಿ ಬೀಳ್ಕೊಡುಗೆ ಸ್ವೀಕರಿಸಿ ಮಾತನಾಡಿದರು.
ಅಪ್ಪರ್ ಕೃಷ್ಣದಲ್ಲಿ ಹದಿನೆಂಟು ವರ್ಷಗಳ ಕಾಲ ಕೆಲಸ ಮಾಡಿದ್ದೇನೆ. ತಂತ್ರಜ್ಞಾನ ಎಷ್ಟು ಮುಂದುವರೆದಿದೆಯೋ ಅಷ್ಟೆ ಸವಾಲುಗಳು ನಮ್ಮ ಮುಂದಿವೆ. ಇಂಜಿನಿಯರ್‌ಗಳು ವೃತ್ತಿಯಲ್ಲಿ ಕೆಲವೊಮ್ಮೆ ಕಷ್ಟ ಎದುರಿಸಬೇಕಾಗುತ್ತದೆ. ಕಲಿಯುವುದು ತುಂಬಾ ಇದೆ. ಇಳಕಲ್, ಅಜ್ಜಂಪುರ, ತುಂಗಭದ್ರಾದಲ್ಲಿ ಕೆಲಸ ಮಾಡಿದ್ದೇನೆ.ನೀರು ನಿರ್ವಹಣೆ ದೊಡ್ಡ ಸವಾಲಿನ ಕೆಲಸ. ಭದ್ರಾ ಯೋಜನೆಯಿಂದ ಹೊಳಲ್ಕೆರೆ ತಾಲ್ಲೂಕಿನ ಮೂವತ್ತು ಕೆರೆಗಳಿಗೆ ನೀರು ಬರುವುದಿದೆ. ಬಾಗಲಕೋಟೆಯಲ್ಲಿ ನಾನು ಇಂಜಿನಿಯರಿಂಗ್ ಶಿಕ್ಷಣ ಪೂರೈಸಿದೆ. ದೇವರು ಅವಕಾಶ ಕೊಟ್ಟ. ಎಲ್ಲರ ಸಹಕಾರದಿಂದ ಯಶಸ್ವಿಯಾಗಿ ನನ್ನ ಜವಾಬ್ದಾರಿಯನ್ನು ನಿಭಾಯಿಸಿದೆ. ೧೧೮ ವರ್ಷಗಳ ಇತಿಹಾಸವಿರುವ ಹಿರಿಯೂರಿನ ವಾಣಿವಿಲಾಸಸಾಗರದಿಂದ ೩೦ ಸಾವಿರ ಎಕರೆಗೆ ನೀರು ಒದಗಿಸುತ್ತಿದ್ದೇವೆ. ಗಾಯತ್ರಿ ಜಲಾಶಯವೂ ಇದೆ. ಇಂಜಿನಿಯರ್‌ಗಳ ತಂತ್ರಜ್ಞಾನವನ್ನು ಮೀರಿಸುವ ರೀತಿಯಲ್ಲಿ ಈ ಡ್ಯಾಂ ಕಟ್ಟಲಾಗಿದೆ. ಉಳಿಸಿಕೊಳ್ಳುವುದು ಇಂಜಿನಿಯರ್‌ಗಳ ಕೆಲಸ. ಕೆನಾಲ್ ನೆಟ್‌ವರ್ಕ್ ಪೂರ್ ಇದೆ. ಅಷ್ಟೆ ಸವಾಲು ಕೂಡ ನಮ್ಮ ಮುಂದಿದೆ ಎಂದು ಹೇಳಿದರು.
ನಮ್ಮದು ಕೂಡು ಕುಟುಂಬ. ಕೃಷಿ ಜೀವನಕ್ಕೆ ಆಧಾರ. ಆಗ ಶಿಕ್ಷಣಕ್ಕೆ ಆದ್ಯತೆ ಕಮ್ಮಿಯಿತ್ತು. ಅಂತಹ ಕಷ್ಟದ ಕಾಲದಲ್ಲಿ ನಮ್ಮ ಸಹೋದರರು ನನ್ನ ಶಿಕ್ಷಣಕ್ಕೆ ಪ್ರೋತ್ಸಾಹಿಸಿದರು. ನಮ್ಮ ಕಾಲದ ಶಿಕ್ಷಣಕ್ಕೂ ಈಗಿನ ಶಿಕ್ಷಣಕ್ಕು ಸಾಕಷ್ಟು ವ್ಯತ್ಯಾಸವಿದೆ. ನಮ್ಮ ಕುಟುಂಬದಲ್ಲಿ ಒಗ್ಗಟ್ಟಿದೆ. ಸಣ್ಣಪುಟ್ಟ ಸಮಸ್ಯೆಗಳಿದ್ದರು ಎಲ್ಲರೂ ಕುಳಿತು ಚರ್ಚಿಸಿ ಬಗೆಹರಿಸಿಕೊಳ್ಳುತ್ತೇವೆ. ನನ್ನ ಯಶಸ್ಸಿನ ಹಿಂದೆ ಮಡದಿಯ ಸಹಕಾರವಿದೆ ಎಂದು ಸ್ಮರಿಸಿದರು.
ಸಹಾಯಕ ಇಂಜಿನಿಯರ್ ಹರ್ಷದ್ ಮಾತನಾಡಿ ೩೨ ವರ್ಷಗಳ ಕಾಲ ಸೇವೆ ಸಲ್ಲಿಸಿರುವ ಬಾರಿಕರ ಚಂದ್ರಪ್ಪನವರು ಸದಾ ನಗುಮುಗದಿಂದ ಇರುತ್ತಿದ್ದರು. ಸಿಬ್ಬಂದಿಯೊಂದಿಗೆ ಎಂದಿಗೂ ಕಟುವಾಗಿ ವರ್ತಿಸಲಿಲ್ಲ. ಎಂತಹ ಸಮಸ್ಯೆಗಳಿದ್ದರು ಸಮಾಧಾನದಿಂದ ಹೇಳಿ ಕೆಲಸ ತೆಗೆದುಕೊಳ್ಳುತ್ತಿದ್ದರು. ನಿವೃತ್ತಿ ಜೀವನ ಸುಖಕರವಾಗಿರಲೆಂದು ಹಾರೈಸಿದರು.
ಇಂಜಿನಿಯರ್ ಪುಷ್ಪ ಮಾತನಾಡುತ್ತ ಸರಳ, ಸಜ್ಜನಿಕೆ, ಶಾಂತ ಸ್ವಭಾವದವರಾಗಿದ್ದ ಬಾರಿಕರ ಚಂದ್ರಪ್ಪನವರು ಸಿಬ್ಬಂದಿಗಳನ್ನು ಸದಾ ಗೌರವದಿಂದ ಕಾಣುತ್ತಿದ್ದರು. ಅವರ ಕೈಕೆಳಗೆ ನಾವುಗಳು ಖುಷಿಯಿಂದ ಕೆಲಸ ಮಾಡುತ್ತಿದ್ದೆವು. ನಿವೃತ್ತಿ ಜೀವನ ಸುಖಮಯವಾಗಿರಲಿ ಎಂದು ಶುಭ ಕೋರಿದರು.
ಮುಖ್ಯ ಇಂಜಿನಿಯರ್ ಲಮಾಣಿ ಹಾಗೂ ಬಾರಿಕರ ಚಂದ್ರಪ್ಪನವರ ಪತ್ನಿ ಶಾಂತಲ ವೇದಿಕೆಯಲ್ಲಿದ್ದರು.
ಭದ್ರಾ ಮೇಲ್ದಂಡೆ ಯೋಜನೆಯ ಉಪ ವಿಭಾಗದ ಇಂಜಿನಿಯರ್‌ಗಳು ಹಾಗೂ ಸಿಬ್ಬಂದಿಯವರು, ಜಿಲ್ಲಾ ನೀರಾವರಿ ಹೋರಾಟ ಸಮಿತಿಯವರು ಹಾಗೂ ಬಾರಿಕರ ಚಂದ್ರಪ್ಪನವರ ಕುಟುಂಬದವರು ಮತ್ತು ಅಭಿಮಾನಿಗಳು ಸನ್ಮಾನಿಸಿ ಗೌರವಿಸಿದರು.

