ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಚಿತ್ರದುರ್ಗ ಕಚೇರಿಯಲ್ಲಿ ಸುದೀರ್ಘ 26 ವರ್ಷಗಳ ಕಾಲ ವಾಹನ ಚಾಲಕರಾಗಿ ಸೇವೆ ಸಲ್ಲಿಸಿ ವಯೋನಿವೃತ್ತಿ ಹೊಂದಿದ ಎಸ್.ಚಂದ್ರಶೇಖರ್ ಅವರಿಗೆ ಸನ್ಮಾನಿಸಿ, ಆತ್ಮೀಯವಾಗಿ ಬೀಳ್ಕೊಡುಗೆ ನೀಡಲಾಯಿತು.
ನಗರದ ಪತ್ರಿಕಾಭವನದಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಚಿತ್ರದುರ್ಗ, ದಾವಣಗೆರೆ ಹಾಗೂ ಬಳ್ಳಾರಿ ಜಿಲ್ಲೆಯ ಅಧಿಕಾರಿಗಳು, ಸಿಬ್ಬಂದಿ, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕದ ಪದಾಧಿಕಾರಿಗಳು, ಪತ್ರಕರ್ತರು, ಒಡನಾಡಿಗಳು ಎಸ್.ಚಂದ್ರಶೇಖರ ಅವರ ಪತ್ನಿ ನಾಗಮ್ಮ ಕುಟುಂಬದ ಸದಸ್ಯರು ಭಾಗಿಯಾಗಿ ಬೀಳ್ಕೊಡುಗೆ ಸಮಾರಂಭಕ್ಕೆ ಸಾಕ್ಷಿಯಾದರು.
ಚಿತ್ರದುರ್ಗ ಜಿಲ್ಲಾ ವಾರ್ತಾಧಿಕಾರಿ ಬಿ.ವಿ. ತುಕಾರಾಂರಾವ್ ಮಾತನಾಡಿ, ವಾಹನ ಚಾಲಕರಿಗೆ ಸಮಯ ಪ್ರಜ್ಞೆ, ಸಮಯ ಪಾಲನೆ ಹಾಗೂ ತಾಳ್ಮೆ ಬಹಳ ಮುಖ್ಯ ಇವೆಲ್ಲವೂ ಕೂಡ ಎಸ್.ಚಂದ್ರಶೇಖರ್ ಅವರಲ್ಲಿ ಮೇಳೈಸಿತ್ತು, ಕರ್ತವ್ಯದ ಅವಧಿಯಲ್ಲಿ ಉತ್ತಮ ಸೇವೆ ಸಲ್ಲಿಸಿದ್ದಾರೆ. ಕರ್ತವ್ಯದಲ್ಲಿ ಸಮಯ ಪಾಲನೆಗೆ ಒತ್ತು ನೀಡುತ್ತಿದ್ದ ಅವರ ಗುಣ ಅನುಕರಣೀಯ ಎಂದು ಸ್ಮರಿಸಿದರು.
ದಾವಣಗೆರೆ ಜಿಲ್ಲಾ ವಾರ್ತಾಧಿಕಾರಿ ಬಿ.ಧನಂಜಯಪ್ಪ ಮಾತನಾಡಿ, ಸುದೀರ್ಘ 26 ವರ್ಷಗಳ ಕಾಲ ಅತ್ಯುತ್ತಮವಾಗಿ ಸೇವೆ ಸಲ್ಲಿಸಿರುವುದು ಅವರ ಬದುಕಿನ ಮಹತ್ವದ ಸಂಗತಿ. ಎಸ್.ಚಂದ್ರಶೇಖರ್ ತಮ್ಮ ವೃತ್ತಿಯನ್ನು ಅಚ್ಚುಕಟ್ಟಾಗಿ ಹಾಗೂ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಿದ್ದಾರೆ. ಅವರ ಈ ಸೇವೆಗೆ ಅವರ ಕುಟುಂಬದವರ ಶ್ರಮವೂ ಬಹಳಷ್ಟಿದೆ. ಪತ್ರಕರ್ತರೊಂದಿಗೆ ಉತ್ತಮ ಒಡನಾಟದೊಂದಿಗೆ ಉತ್ತಮ ಸೇವೆ ಸಲ್ಲಿಸಿರುವ ಅವರ ನಿವೃತ್ತಿ ಜೀವನ ಸುಖಕರವಾಗಿರಲಿ ಎಂದು ಶುಭ ಹಾರೈಸಿದರು.
ನಿವೃತ್ತ ವಾರ್ತಾಧಿಕಾರಿ ಮಹೇಶ್ವರಯ್ಯ ಮಾತನಾಡಿ, ಹೇಳಿದ ಕೆಲಸವನ್ನು ಅಚ್ಚುಕಟ್ಟಾಗಿ ನಿರ್ವಹಿಸುವ ಸಹೃದಯಿ ವ್ಯಕ್ತಿತ್ವದ ಎಸ್.ಚಂದ್ರಶೇಖರ್ ಅವರು, ಎಲ್ಲರೊಂದಿಗೆ ಆತ್ಮೀಯತೆಯೊಂದಿಗೆ ಉತ್ತಮವಾಗಿ ಒಡನಾಟ ಹೊಂದಿದ್ದರು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಮಿತ ಭಾಷಿಗ ಎಸ್.ಚಂದ್ರಶೇಖರ್, ಕರ್ತವ್ಯದಲ್ಲಿ ಕಪ್ಪುಚುಕ್ಕೆ ಇಲ್ಲದಂತೆ, ಸಮಯಪ್ರಜ್ಞೆ, ಸಮಯಪಾಲನೆ ಹಾಗೂ ಅಪರ್ಣಾಮನೋಭಾವದಿಂದ, ಸಂತೋಷದಾಯಕವಾಗಿ, ಯಾರಿಗೂ ಮುಜುಗರವಾಗದಂತೆ ಅನುಪಮ ಸೇವೆ ಸಲ್ಲಿಸಿದ್ದಾರೆ. ಸರ್ಕಾರಿ ಕಾರ್ಯಕ್ರಮಗಳಿಗೆ ಅಡೆತಡೆ ಇಲ್ಲದಂತೆ ಸಮಯಕ್ಕೆ ಸರಿಯಾಗಿ ಅಧಿಕಾರಿಗಳನ್ನು ಹಾಗೂ ಪತ್ರಕರ್ತರನ್ನು ಹಾಜರುಪಡಿಸುತ್ತಿದ್ದರು ಎಂದು ಹಿರಿಯ ಪತ್ರಕರ್ತರಾದ ಜಿ.ಎಸ್.ಉಜ್ಜಿನಪ್ಪ, ಶ.ಮಂಜುನಾಥ್, ಎಂ.ಎನ್.ಅಹೋಬಲಪತಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಬಿ.ದಿನೇಶ ಗೌಡಗೆರೆ, ಪ್ರಧಾನ ಕಾರ್ಯದರ್ಶಿ ಸಿದ್ದರಾಜು ಅವರು ಸ್ಮರಿಸಿ, ಮೆಚ್ಚುಗೆಯ ಮಾತುಗಳನ್ನಾಡಿದರು.
ಈ ಸಂದರ್ಭದಲ್ಲಿ ಹಿರಿಯ ಪತ್ರಕರ್ತರುಗಳಾದ ಟಿ. ಗೋವಿಂದಪ್ಪ, ಬಸವರಾಜ್, ನಾಕಿಕೆರೆ ತಿಪ್ಪೇಸ್ವಾಮಿ, ಕಲಾವಿದರಾದ ಆಯಿತೋಳು ವಿರೂಪಾಕ್ಷಪ್ಪ, ಡಿ.ಓ. ಮೊರಾರ್ಜಿ, ವಾರ್ತಾ ಇಲಾಖೆ ಸಿಬ್ಬಂದಿಗಳಾದ ವೆಂಕಟೇಶ, ವೇಣುಗೋಪಾಲ, ತಿಮ್ಮಶೆಟ್ಟಿ, ಬೋರೇಶ್, ಮೊಹಮದ್ ಇಮಾದ್ ಪಾಷ, ರಘು ಸೇರಿದಂತೆ ಪತ್ರಕರ್ತರು ಉಪಸ್ಥಿತರಿದ್ದು, ನಿವೃತ್ತರಾದ ಚಂದ್ರಶೇಖರ್ ಅವರಿಗೆ ಆತ್ಮೀಯ ಬೀಳ್ಕೊಡುಗೆ ನೀಡಿದರು.

