ಕಾಂಗ್ರೆಸ್ ಸರ್ಕಾರದ ಉದ್ಧಟತನಕ್ಕೆ ರೈತ ಬಲಿ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕಾಂಗ್ರೆಸ್ ಸರ್ಕಾರದ ಉದ್ಧಟತನಕ್ಕೆ ಮತ್ತೋರ್ವ ರೈತ ಬಲಿಯಾಗಿದ್ದಾನೆಂದು ವಿಪಕ್ಷ ನಾಯಕ ಆರ್.ಅಶೋಕ್ ದೂರಿದ್ದಾರೆ.

ತನ್ನ ಸಮಸ್ಯೆ ಪರಿಹಾರಕ್ಕಾಗಿ ತಾಲ್ಲೂಕು ಕಚೇರಿ, ಜಿಲ್ಲಾಧಿಕಾರಿ ಕಚೇರಿ ಸುತ್ತಿ ಸುತ್ತಿ ಬೇಸತ್ತು ಕಡೆಗೆ ನಿನ್ನೆ ಮಂಡ್ಯದ ಜಿಲ್ಲಾಧಿಕಾರಿ ಕಚೇರಿ ಎದುರು ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ ಮಂಡ್ಯ ಜಿಲ್ಲೆ ಕೆ.ಆರ್. ಪೇಟೆ ತಾಲೂಕು ಮೂಡನಹಳ್ಳಿ ಗ್ರಾಮದ ಮಂಜೇಗೌಡ ಎಂಬ ಬಡ ರೈತ ಸಾವು ಬದುಕಿನ ಹೋರಾಟದಲ್ಲಿ ಸೋತು ಇಂದು ಸಾವನ್ನಪ್ಪಿರುವ ಹೃದಯವಿದ್ರಾವಕ ಘಟನೆ ಮನಸಿಗೆ ಘಾಸಿ ಉಂಟುಮಾಡಿದೆ.

- Advertisement - 

ಸಿಎಂ ಸಿದ್ದರಾಮಯ್ಯ ನವರೇ, ಕಾಟಾಚಾರಕ್ಕೆ ಒಂದು ದಿನ ಜನಸ್ಪಂದನ ಕಾರ್ಯಕ್ರಮ ನಡೆಸಿ ಫೋಟೋ ತೆಗೆಸಿಕೊಂಡು ಪುಟಗಟ್ಟಲೆ ಜಾಹೀರಾತು ಕೊಟ್ಟು ಬಿಟ್ಟಿ ಪ್ರಚಾರ ಪಡೆದುಕೊಂಡರಲ್ಲ ಸ್ವಾಮಿ, ಇದರಿಂದ ರೈತರು, ಜನಸಾಮಾನ್ಯರಿಗೆ ಏನು ಪ್ರಯೋಜನವಾಗಿದೆ?

ಪ್ರತಿ ತಿಂಗಳು ಜನಸ್ಪಂದನ ಮಾಡಿ ಜನರ ಅಹವಾಲು ಸ್ವೀಕರಿಸಿ ಎಂದು ತಾವು ಕೊಟ್ಟ ಆದೇಶ ಕೇವಲ ಕಾಗದಕ್ಕೆ ಮಾತ್ರ ಸೀಮಿತವಾಗಿದೆ. ನಿಮ್ಮ ಮಾತಿಗೆ ಸಚಿವರು, ಶಾಸಕರು, ಅಧಿಕಾರಿಗಳು ಯಾರೂ ಕವಡೆ ಕಾಸಿನ ಕಿಮ್ಮತ್ತು ಕೊಡುತ್ತಿಲ್ಲ. ಬಡವರು, ರೈತರು ಸರ್ಕಾರಿ ಕಚೇರಿಗಳಿಗೆ ಬಂದರೆ ಅವರನ್ನು ಒಳಗೆ ಕರೆದು ಅವರ ಅಹವಾಲು ಕೇಳುವ, ಅವರ ಅರ್ಜಿ ಸ್ವೀಕರಿಸುವ ಕನಿಷ್ಠ ಸೌಜನ್ಯವೂ ಇಲ್ಲದಂತಾಗಿದೆ ನಿಮ್ಮ ಸಂವೇದನಾರಹಿತ ಸರ್ಕಾರಕ್ಕೆ.

- Advertisement - 

ನಿಮ್ಮ ಈ ದುರಾಡಳಿತಕ್ಕೆ, ಬೇಜವಾಬ್ದಾರಿತನಕ್ಕೆ, ನಿರ್ಲಕ್ಷ್ಯಕ್ಕೆ ಇನ್ನೆಷ್ಟು ಅಮಾಯಕ ಜೀವಗಳು ಬಲಿಯಾಗಬೇಕು ಸ್ವಾಮಿ? ಜನರ ಪಾಲಿಗೆ ನಿಮ್ಮ ಸರ್ಕಾರ ಎಂದೋ ಸತ್ತು ಹೋಗಿದೆ. ಸಾಕು ಈ ಭಂಡ ಬಾಳು. ರಾಜೀನಾಮೆ ಕೊಟ್ಟು ಕರ್ನಾಟಕವನ್ನು ಉಳಿಸಿ ಎಂದು ಅಶೋಕ್ ಆಗ್ರಹ ಮಾಡಿದ್ದಾರೆ.

 

 

Share This Article
error: Content is protected !!
";