ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಜನಪರ, ರೈತಪರ ಹೋರಾಟಗಾರ, ಭಾರತೀಯ ಕಿಸಾನ್ ಸಂಘದ ಚಿತ್ರದುರ್ಗ ಮಾಜಿ ಜಿಲ್ಲಾಧ್ಯಕ್ಷ ದೊಡ್ಡ ಸಿದ್ದವ್ವನಹಳ್ಳಿಯ ಬಾಳೆಕಾಯಿ ತಿಪ್ಪೇಸ್ವಾಮಿ(65) ತೀವ್ರ ಅನಾರೋಗ್ಯದಿಂದ ಬುಧವಾರ ಸಾವನ್ನಪ್ಪಿದ್ದಾರೆ.
ಕಳೆದ ಒಂದು ವಾರದ ಹಿಂದೆ ಮೆದುಳಿನ ಪ್ಯಾರಲೈಸಿಸ್(ಲಕ್ವಾ) ರೋಗಕ್ಕೆ ತುತ್ತಾಗಿದ್ದು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಸುಗುಣ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಬುಧವಾರ ಬೆಳಿಗ್ಗೆ 8:30ಕ್ಕೆ ಕೊನೆಯುಸಿರೆಳೆದಿದ್ದಾರೆ ಎಂದು ಕುಟುಂಬ ಮೂಲಗಳು ತಿಳಿಸಿವೆ.
ಮೃತರ ಅಂತ್ಯಕ್ರಿಯೆಯನ್ನು ಸ್ವಗ್ರಾಮ ಚಿತ್ರದುರ್ಗ ತಾಲೂಕಿನ ದೊಡ್ಡ ಸಿದ್ದವನಹಳ್ಳಿಯಲ್ಲಿ ಜನವರಿ-16 ರಂದು ಗುರುವಾರ ಬೆಳಿಗ್ಗೆ 10 ಗಂಟೆಗೆ ನೆರವೇರಿಸಲಾಗುವುದು ಕುಟುಂಬ ಮೂಲಗಳು ತಿಳಿಸಿವೆ.
ಮೃತರು ಪ್ರಗತಿಪರ ಕೃಷಿಕರಾಗಿ, ಭಾರತೀಯ ಕಿಸಾನ್ ಸಂಘದ ಚಿತ್ರದುರ್ಗ ಜಿಲ್ಲಾಧ್ಯಕ್ಷರಾಗಿ ಹಲವು ವರ್ಷಗಳ ಕಾಲ ಜವಾಬ್ದಾರಿಯಿಂದ ಕಾರ್ಯ ನಿರ್ವಹಿಸಿದ್ದರು. ಅಲ್ಲದೆ ರಾಜ್ಯ ಕಾರ್ಯಕಾರಣಿ ಜವಾಬ್ದಾರಿಯನ್ನು ನಿಭಾಯಿಸಿ ರೈತರ ಸಮಸ್ಯೆಗಳಿಗೆ ಹೋರಾಟಗಳ ಮುಖಾಂತರ ನ್ಯಾಯ ಒದಗಿಸಿಕೊಟ್ಟಿದ್ದಾರೆ.
ಇವರ ಸಾಮಾಜಿಕ ಕೆಲಸಗಳು ಹಾಗೂ ಇವರ ವ್ಯಕ್ತಿತ್ವ ಸಹನೆ ಹಾಗೂ ಇವರ ಮಾತುಗಳು ಸಾಮಾನ್ಯ ಮನುಷ್ಯನನ್ನು ಕೂಡ ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳಲು ಹಂಬಲಿಸುವಂತೆ ಪ್ರೇರೇಪಿಸುತ್ತಿದ್ದವು. ಇಂತಹ ವ್ಯಕ್ತಿಯನ್ನು ಕಳೆದುಕೊಂಡಿರುವುದು ಭಾರತೀಯ ಕಿಸಾನ್ ಸಂಘಕ್ಕೆ, ರೈತಾಪಿ ವರ್ಗಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಕಿಸಾನ್ ಸಂಘದ ಪದಾಧಿಕಾರಿಗಳು ಸಂತಾಪ ಸೂಚಿಸಿದ್ದಾರೆ.
ಶ್ರೀಯುತರ ಆತ್ಮಕ್ಕೆ ಚಿರ ಶಾಂತಿ ಸಿಗಲೆಂದು ಹಾಗೂ ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿಯನ್ನು ಆ ಭಗವಂತ ದಯಪಾಲಿಸಲಿ ಎಂದು ಭಾರತೀಯ ಕಿಸಾನ್ ಸಂಘದ ಚಿತ್ರದುರ್ಗ ಜಿಲ್ಲಾ ಹಾಗೂ ತಾಲ್ಲೂಕು ಮತ್ತು ಗ್ರಾಮ ಘಟಕಗಳು ಹಾರೈಸಿ ಸಂತಾಪ ಸೂಚಿಸಲಾಯಿತು ಎಂದು ಭಾರತೀಯ ಕಿಸಾನ್ ಸಂಘದ ಚಿತ್ರದುರ್ಗ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಂಜುನಾಥ ಕಾತ್ರಿಕೇನಹಳ್ಳಿ ಅವರು ತಿಳಿಸಿದ್ದಾರೆ.