ರೈತ ಮಹಿಳೆಯೇ ನಿಜ ಸೆಲೆಬ್ರಿಟಿ: ಚಿತ್ರನಟಿ ಆದಿತಿ ಪ್ರಭುದೇವ

News Desk

 ಚಂದ್ರವಳ್ಳಿ ನ್ಯೂಸ್, ದಾವಣಗೆರೆ:
ಮುಖಕ್ಕೆ ಬಣ್ಣ ಹಾಕಿಕೊಂಡು ನಟಿಸುವ ಚಿತ್ರಕಲಾವಿದರಿಗಿಂತ ರೈತರು, ರೈತ ಮಹಿಳೆಯರೇ ನಿಜವಾದ ಸೆಲೆಬ್ರಿಟಿಗಳು. ಅವರನ್ನು ಗೌರವಿಸುವುದೇ ಶ್ರೇಷ್ಠ ಎಂದು ಚಿತ್ರನಟಿ ಆದಿತಿ ಪ್ರಭುದೇವ್ ಅಭಿಪ್ರಾಯಪಟ್ಟರು.
ದಾವಣಗೆರೆ ವಿಶ್ವವಿದ್ಯಾನಿಲಯ ವ್ಯವಹಾರ ನಿರ್ವಹಣೆ ಅಧ್ಯಯನ ವಿಭಾಗದ ವತಿಯಿಂದ ಬುಧವಾರ ಏರ್ಪಡಿಸಿದ್ದ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಕಲಾವಿದರಿಗೆ ಎಸಿ ಕೊಠಡಿ ಇರುತ್ತದೆ. ಸುರಕ್ಷಿತ ವಾತಾವರಣ ಇರುತ್ತದೆ. ಆದರೆ ರೈತರು ಬಿಸಿಲು ಮಹಿಳೆ, ಚಳಿ, ಗಾಳಿ ಎನ್ನದೇ ಕಷ್ಟಪಟ್ಟು ದುಡಿದು, ಬೆವರು ಸುರಿಸಿ ಸಾವಿರಾರು ಜನರಿಗೆ ಅನ್ನವನ್ನು ನೀಡುತ್ತಾರೆ. ಅವರ ಶ್ರಮಕ್ಕೆ, ಸೇವೆಗೆ ಮನ್ನಣೆ ನೀಡಬೇಕು. ಆದ್ದರಿಂದ ರೈತರನ್ನು ಗೌರವಿಸುವುದಲ್ಲಿ ವಿಶೇಷ ಅರ್ಥವಿದೆ ಎಂದು ತಿಳಿಸಿದರು.

ಸಾಧನೆಗೆ ವಯಸ್ಸು, ಬಡತನ, ಕುಟುಂಬದಲ್ಲಿ ಬೆಂಬಲ ಸಿಗಲ್ಲ, ಹಣ ಇಲ್ಲ ಎಂಬುದಾವುದೂ ಅಡ್ಡಿಯಲ್ಲ. ಸಾಧನೆಗೆ ಛಲ ಇರಬೇಕು, ಮನಸ್ಸು ದೃಢವಾಗಿರಬೇಕು. ಅಪ್ಪ. ಅಮ್ಮ ಮಕ್ಕಳ ಮೇಲಿಟ್ಟಿರುವ ನಂಬಿಕೆಯನ್ನು, ವಿಶ್ವಾಸವನ್ನು ಉಳಿಸಿಕೊಂಡು ಬದುಕನ್ನು ರೂಪಿಸಿಕೊಳ್ಳುವ ಸಾಧನೆ ಮಾಡಬೇಕು. ಸಮಸ್ಯೆಗೆ ಸಮಸ್ಯೆಯೇ ಪರಿಹಾರವಲ್ಲ, ಸಾಧನೆಯೇ ಉತ್ತರವಾಗಬೇಕು ಎಂದು ಸಲಹೆ ನೀಡಿದರು.

ಹೆಣ್ಣು ಮಕ್ಕಳು ಎಷ್ಟೇ ಸಬಲರಾಗಿದ್ದರೂ ಗಂಡು ಮಕ್ಕಳ ಆಶ್ರಯ ಬೇಕೇಬೇಕು. ನಮಗೇನಾದರೂ ತೊಂದರೆಯಾದರೆ ಅಪ್ಪನಿಗೆ, ಅಣ್ಣನಿಗೆ, ಗಂಡನಿಗೆ ಫೋನ್ ಮಾಡಿ ನಮ್ಮ ನೋವು, ಕಷ್ಟವನ್ನು ತಿಳಿಸುತ್ತೇವೆ. ಹಾಗಂತ ಅದು ನಮ್ಮ ದೌರ್ಬಲ್ಯವಲ್ಲ, ಗಂಡು ಮಕ್ಕಳ ಮೇಲಿಟ್ಟಿರುವ ನಂಬಿಕೆಯಾಗಿದೆ. ಅದನ್ನು ಉಳಿಸಿಕೊಳ್ಳುವ ಕೆಲಸ ಮಾಡಬೇಕು. ಅಲ್ಲದೆ ಪ್ರತಿಯೊಬ್ಬ ಗಂಡು ಮಗುವಿಗೂ ಮಹಿಳೆ ತಾಯಿಯಾಗಿ, ತಂಗಿಯಾಗಿ, ಅಕ್ಕನಾಗಿಯೇ ಗುರುತಿಸಿಕೊಂಡಿರುತ್ತಾಳೆ. ಅಂಥ ಸಂಬಂಧಗಳು ಗಟ್ಟಿಯಾದಾಗ ತೊಂದರೆ ಬರುವುದಿಲ್ಲಎಂದು ತಿಳಿಸಿದರು.
ಗಂಡು ಮಕ್ಕಳು ಉತ್ತಮವಾಗಿ ಕೆಲಸ ಮಾಡಿ, ಸಂಪಾದಿಸಿ ಕುಟುಂಬವನ್ನು ನಿರ್ವಹಿಸುವ ಜವಾಬ್ದಾರಿ ಹೊತ್ತುಕೊಳ್ಳಬೇಕು. ಅದಕ್ಕೆ ಬೇಕಾದ ಸಿದ್ಧತೆಯನ್ನು ಓದಿನಿಂದಲೋ, ಕೌಶಲ್ಯದಿಂದಲೋ ಮಾಡಿಕೊಳ್ಳಿ. ಮುಂದೆ ಮದುವೆಯಾದಾಗ ಹೆಂಡತಿ ದುಡಿಯದ ಗಂಡನನ್ನು ಒಪ್ಪಿಕೊಳ್ಳಲ್ಲ, ಒದ್ದು ಹೊರಗೆ ಹೋಗುವಳು. ಈಗಿನ ವಾತಾವರಣವೇ ಹಾಗಿದೆ ಎಂದು ನುಡಿದರು.

ಗಂಡನ ದುಡಿಮೆ ಮಾಡುವಾಗ ಮಹಿಳೆಯರು ಅದನ್ನೇ ನಂಬಿಕೊಂಡು ಇರುವ ಬದಲಾಗಿ, ಅವಕಾಶವಿದ್ದಾಗ ಸ್ವಾವಲಂಬಿಯಾಗಿ ದುಡಿಯುವ ಮನೋಭಾವವನ್ನು ಬೆಳೆಸಿಕೊಳ್ಳಬೇಕು. ದೇವರು ಸುಂದರವಾದ ಬದುಕನ್ನು ಕೊಟ್ಟಿದ್ದಾಗ, ಅದನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಹೆಣ್ಣು ಮಕ್ಕಳು ಚೆನ್ನಾಗಿ ಓದಬೇಕು, ಸೃಜನಾತ್ಮಕವಾಗಿ ಕ್ರಿಯಾಶೀಲವಾಗಿ ತಮ್ಮನ್ನು ತಾವು ತೊಡಗಿಸಿಕೊಳ್ಳುವತ್ತ ಆದ್ಯತೆ ನೀಡಬೇಕು. ವೈಯಕ್ತಿಕವಾಗಿ ನೆಲೆನಿಲ್ಲುವ ಸಾಮರ್ಥ್ಯವನ್ನು ರೂಢಿಸಿಕೊಳ್ಳಬೇಕು ಎಂದು ತಿಳಿಸಿದರು.

ಮಹಿಳಾ ಉದ್ಯಮಿ ಸರೋಜ ಎನ್.ಪಾಟೀಲ ಮಾತನಾಡಿ, ಕೃಷಿ ಕೇತ್ರದಲ್ಲಿ ಸಾಧನೆ ಮಾಡಲು ಸಾಕಷ್ಟು ಅವಕಾಶಗಳಿವೆ. ಭೂಮಿಯ ರಕ್ಷಣೆಯ ಜೊತೆಗೆ ಬೆಳೆ ಪದ್ಧತಿ, ಮಾರುಕಟ್ಟೆ, ಉತ್ಪಾದನಾ ಕ್ಷೇತ್ರಗಳಲ್ಲಿ ವೈಜ್ಞಾನಿಕ ರೀತಿಯಲ್ಲಿ ಬೆಳೆ ನಿರ್ವಹಿಸಲು ಆದ್ಯತೆ ನೀಡಬೇಕಾಗಿದೆ. ಕೃಷಿ ಕ್ಷೇತ್ರದಲ್ಲಿ ಮಹಿಳೆಯರಿಗೆ ಅತಿ ಹೆಚ್ಚು ಉದ್ಯೋಗ ಅವಕಾಶಗಳಿದ್ದು, ಸಮರ್ಪಕ ರೀತಿಯಲ್ಲಿ ಬಳಕೆ ಮಾಡಿಕೊಳ್ಳಬೇಕು ಎಂದು ತಿಳಿಸಿದರು.

ಡಿಜಿಟಲ್ ಕಂಟೆಂಟ್ ಕ್ರಿಯೇಟರ್ ಗಾಯಿತ್ರಿ ಅವರು ಮಾತನಾಡಿ, ಹಣಕ್ಕಾಗಿ ಯೂಟೂಬ್‌ನಲ್ಲಿ ರೀಲ್ಸ್ ಅಥವಾ ಇನ್ನಾವುದೋ ವಿಷಯಗಳನ್ನು ಹಂಚಿಕೊಳ್ಳುವ ಬದಲಾಗಿ ಸಮಾಜಮುಖಿ ಬದುಕನ್ನು ರೂಪಿಸುವ ಸಾಧಕರನ್ನು ಪರಿಚಯಿಸಿ, ಇತರರಿಗೆ ಮಾದರಿಯಾಗುವ ಕೆಲಸ ಮಾಡಬೇಕು. ಕೃಷಿ ಮತ್ತು ಆರೋಗ್ಯಕ್ಕೆ ಪೂರಕವಾದ ಆರ್ಗಾನಿಕ್ ಉತ್ಪನ್ನಗಳನ್ನು ಮಾರುಕಟ್ಟೆ ಬಗ್ಗೆ ಮಾಹಿತಿ ನೀಡಿ ಜನರನ್ನು ಜಾಗೃತಗೊಳಿಸುವ ಪ್ರಯತ್ನ ಮಾಡಿದಾಗ ಸಾರ್ಥಕತೆ ಕಾಣಬಹುದು ಎಂದು ಹೇಳಿದರು.

ಕುಲಪತಿ ಪ್ರೊ.ಬಿ.ಡಿ.ಕುಂಬಾರ ಅಧ್ಯಕ್ಷತೆ ವಹಿಸಿದ್ದರು. ತನ್ನಿಂದ ಸಾಧ್ಯವಿಲ್ಲ ಎಂಬ ಮನಸ್ಥಿತಿ ಬಿಟ್ಟು, ಅವಕಾಶವನ್ನೇ ವೇದಿಕೆಯನ್ನಾಗಿ ಮಾಡಿಕೊಂಡು ಮುನ್ನಡೆದಾಗ ಯಶಸ್ಸಿನ ಹಾದಿ ಕಾಣುತ್ತದೆ. ಇದಕ್ಕೆ ಕಾರ್ಯಕ್ರಮದಲ್ಲಿ ಭಾಗವಹಿಸಿದ ಆದಿತಿ, ಸರೋಜ ಮತ್ತು ಗಾಯಿತ್ರಿ ಅವರ ಸಾಧನೆಯೇ ಎಲ್ಲರಿಗೂ ಮಾದರಿಯಾಗಿದೆ. ಈ ಸಾಧಕರು ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಿದ್ದಲ್ಲದೆ, ಕಾರ್ಯಕ್ರಮಕ್ಕೆ ಕಳೆಕಟ್ಟಿದ್ದಾರೆ ಎಂದು ಹೇಳಿದರು.
ಕುಲಸಚಿವ ಪ್ರೊ.ಆರ್.ಶಶಿಧರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರೊ. ಜೆ.ಕೆ.ರಾಜು ಮಾತನಾಡಿದರು. ಕಾರ್ಯಕ್ರಮದ ಸಂಘಟಕಿ ಡಾ.ಸುನೀತಾ ಆರ್ ಸ್ವಾಗತಿಸಿ, ನಿರೂಪಿಸಿದರು. ಡಾ.ಆಸೀಫ್ ಉಲ್ಲಾ ವಂದಿಸಿದರು.

- Advertisement -  - Advertisement - 
Share This Article
error: Content is protected !!
";