ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಹಾಲಿ ಶಾಸಕರು, ಮಾಜಿ ಶಾಸಕರ ಜಗಳದಲ್ಲಿ(ಅಪ್ಪ-ಅಮ್ಮನ ಜಗಳದಲ್ಲಿ) ರೈತರು ಬಡವಾಗಿದ್ದಾರೆ ಎಂದು ಚಿಕ್ಕಎಮ್ಮಿಗನೂರು ರೈತ ಚಂದ್ರಪ್ಪ ಆರೋಪಿಸಿದರು.
ಇಲ್ಲಿನ ಪತ್ರಕರ್ತರ ಸಭಾಂಗಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2017-18ರಲ್ಲಿ 600ಕ್ಕೂ ಹೆಚ್ಚಿನ ಕೊಳವೆ ಬಾವಿಗಳು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ಮಂಜೂರಾಗಿದ್ದವು.
ಆ ಸಂದರ್ಭದಲ್ಲಿ ಮಾಜಿ ಸಚಿವ ಹೆಚ್.ಆಂಜನೇಯ ಅವರು ಸಚಿವರಾಗಿದ್ದ ವೇಳೆ ಮಂಜೂರು ಕೊಳವೆ ಬಾವಿ ಕೊರೆಸಲಿಲ್ಲ. ಹಲವು ಹೋರಾಟಗಳ ನಂತರ ಕೊಳವೆ ಕೊರೆದರು.
ಆದರೆ ಅಲ್ಲಿಂದ ಇಲ್ಲಿ ತನಕ ವಿದ್ಯುತ್ ಸಂಪರ್ಕ ಕಲ್ಪಿಸಿಲ್ಲ, ಮೋಟರ್, ಪಂಪ್ ಸೇರಿದಂತೆ ಇತರೆ ವಿದ್ಯುತ್ ಪರಿಕರಗಳನ್ನು ಇಲಾಖೆ ನೀಡಿಲ್ಲ ಎಂದು ಕಿಡಿಕಾರಿದರು.
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಶಿಲ್ಪಾ ಅವರು ರೈತರನ್ನು ಕಚೇರಿಗೆ ಅಲೆಸುತ್ತಿದ್ದಾರೆ. ಯಾವುದೇ ಕೆಲಸ ಕಾರ್ಯ ಮಾಡಿ ಕೊಡುತ್ತಿಲ್ಲ, ಬರೀ ಸಬೂಬು ಹೇಳಿಕೊಂಡು ರೈತರನ್ನ ವಂಚಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಆಗಸ್ಟ್-15ರೊಳಗೆ ಗಂಗಾ ಕಲ್ಯಾಣ ಯೋಜನೆ ಅಡಿ ಕೊಳವೆ ಬಾವಿ ಕೊರೆದಿರುವ ಎಲ್ಲ ರೈತರಿಗೂ ವಿದ್ಯುತ್ ಸಂಪರ್ಕ ಸೇರಿದಂತೆ ಮೋಟರ್, ಪಂಪ್ ಇತರೆ ಪರಿಕರಗಳನ್ನು ನೀಡುವುದಾಗಿ ಸಮಯ ಪಡೆದಿರುವ ಅಧಿಕಾರಿ ಶಿಲ್ಪಾ ಅವರು ಆ ವೇಳೆ ಒಳಗೆ ಕೆಲಸ ಮಾಡಿಕೊಡದಿದ್ದರೆ ಆ.16 ರಂದು ಶಿಲ್ಪಾ ಅವರ ಕಚೇರಿ ಮುಂದೆ ಚಳುವಳಿಯೊಂದಿಗೆ ಉಪ ಸತ್ಯಾಗ್ರಹ ಮಾಡುವುದಾಗಿ ರೈತ ಚಂದ್ರಪ್ಪ ಎಚ್ಚರಿಸಿದರು.
ರೈತರಾದ ಲಕ್ಷ್ಮೇಶ್, ಕೆ.ಎಂ ವಿರೂಪಾಕ್ಷಪ್ಪ, ಕಲ್ಲೇಶ್ ಮತ್ತಿತರರು ಸುದ್ದಿಷ್ಠಿಯಲ್ಲಿದ್ದರು.

