ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ತಾಲೂಕು ಹೊಸಕೆರೆ ಗ್ರಾಮದಲ್ಲಿರುವ ಗೋಮಾಳ ವಶಪಡಿಸಿಕೊಂಡು ಸೋಲಾರ್ ಗೆ ನೀಡುವುದನ್ನು ರದ್ದುಪಡಿಸಬೇಕು ಹಾಗೂ ತಹಸೀಲ್ದಾರ್ ರಾಜೇಶ್ ಕುಮಾರ್ ಅವರನ್ನು ವರ್ಗಾವಣೆ ಮಾಡಿ ಅವರ ಅವಧಿಯಲ್ಲಿ ಕಂದಾಯ ಇಲಾಖೆಯಲ್ಲಿ ನಡೆದಿರುವ ಎಲ್ಲಾ ಹಗರಣಗಳ ತನಿಖೆ ನಡೆಸಬೇಕು ಎಂದು ರೈತರು, ರೈತ ಸಂಘದ ಪದಾಧಿಕಾರಿಗಳು ತಾಲೂಕು ಕಚೇರಿಗೆ ಮುತ್ತಿಗೆ ಹಾಕಿ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರಿಗೆ ಜಿಲ್ಲಾಧಿಕಾರಿಗಳ ಮೂಲಕ ರೈತ ಸಂಘ ಮನವಿ ಸಲ್ಲಿಸಿದರು.
ಹಿರಿಯೂರು ತಾಲೂಕು ಹೊಸಕೆರೆ ಗ್ರಾಮದಲ್ಲಿ ಸುಮಾರು 600ಕ್ಕೂ ಹೆಚ್ಚು ಕುಟುಂಬಗಳು ವಾಸವಾಗಿದ್ದು ಈಗಾಗಲೇ 220 ಕೆ ವಿ ಸ್ಟೇಷನ್ ಇದ್ದು ಇದಕ್ಕೆ ಹೊಂದಿಕೊಂಡಂತೆ ನೂರಾರು ಎಕರೆ ಸರ್ಕಾರಿ ಗೋಮಾಳವಿದ್ದು ಇದನ್ನು ಸರ್ಕಾರಕ್ಕೆ ವಶಪಡಿಸಿಕೊಂಡು ಸೋಲಾರ್ ಕಂಪನಿಗೆ ಕೊಡುವ ಉನ್ನಾರ ನಡೆದಿದ್ದು ಅಲ್ಲಿ ವಾಸ ಮಾಡುವ ರೈತರಿಗೆ ದನ ಕರು, ಕುರಿ ಮೇಕೆ ಜಾನುವಾರುಗಳಿಗೆ ಮತ್ತು ಮನೆ ಕಟ್ಟುವುದಕ್ಕೆ ಮುಂತಾದ ಸರ್ಕಾರದ ಇಲಾಖೆಗಳ ಕಾರ್ಯಕ್ರಮಕ್ಕೆ ಬಳಸಬೇಕಾಗಿರುತ್ತದೆ. ಕಂದಾಯ ಇಲಾಖೆಯ ಗ್ರಾಮ ಲೆಕ್ಕಾಧಿಕಾರಿಗಳು ಮತ್ತು ಕಂದಾಯ ನಿರೀಕ್ಷಕರು ಭೂಮಿ ಲಭ್ಯವಿಲ್ಲ ಎಂದು ವರದಿ ನೀಡಿರುತ್ತಾರೆ.
ಗ್ರಾಮಸ್ಥರು ಹಾಗೂ ರೈತ ಸಂಘಟನೆ ವತಿಯಿಂದ ಈ ಭೂಮಿಯನ್ನು ಯಾವುದೇ ಕಾರಣಕ್ಕೂ ವಶಪಡಿಸಿಕೊಳ್ಳಲು ಶಿಫಾರಸ್ಸು ಮಾಡಬಾರದು ಎಂದು ಪ್ರತಿಭಟನಾಕಾರರು ಆಗ್ರಹ ಮಾಡಿದರು.
ರೈತರ ವಿರೋಧದ ನಡುವೆ ತಹಸೀಲ್ದಾರ್ ಅವರು ಆಮಿಷಗಳಿಗೆ ಬಲಿಯಾಗಿ ಭೂಮಿ ವಶಪಡಿಸಿಕೊಳ್ಳಲು ಶಿಫಾರಸ್ಸು ಮಾಡಿರುತ್ತಾರೆ. ಇದಲ್ಲದೆ ಇನ್ನೂ ಮೂರ್ನಾಲ್ಕು ಕಡೆ ಸರ್ಕಾರಿ ಭೂಮಿ ಕೊಡಲು ಹುನ್ನಾರ ನಡೆದಿದೆ. ಕೂಡಲೇ ಅದನ್ನು ವಾಪಸ್ ಮಾಡಿ ಗ್ರಾಮದ ರೈತರಿಗೆ ಅನುಕೂಲ ಮಾಡಿಕೊಡಬೇಕು ಎಂದು ರೈತ ಹೋರಾಟಗಾರರು ಸರ್ಕಾರಕ್ಕೆ ಮನವಿ ಮಾಡಿದರು.
ಹಿರಿಯೂರು ತಾಲೂಕು ಕಚೇರಿ ಸೇರಿದಂತೆ ತಾಲೂಕಿನಾದ್ಯಂತ ಕಂದಾಯ ಇಲಾಖೆಯಲ್ಲಿ ಬಹಳಷ್ಟು ಹಗರಣಗಳು ನಡೆದಿರುವ ಬಗ್ಗೆ ಅನೇಕ ಬಾರಿ ದೂರು ನೀಡಲಾಗಿದ್ದರೂ ಅಧಿಕಾರಿಗಳು ಹಣ ಸ್ವೀಕರಿಸುವ ದೃಶ್ಯವನ್ನು ತಹಸೀಲ್ದಾರ್ ರವರ ಗಮನಕ್ಕೆ ತಂದರೂ ಯಾವುದೇ ಕ್ರಮ ವಹಿಸಿಲ್ಲ.
ರೆಕಾರ್ಡ್ ರೂಂ ಹಾಗೂ ನೋಂದಣಿ ಇಲಾಖೆಯಲ್ಲಿ ಜೆರಾಕ್ಸ್ ಮಿಷಿನ್ ಇಲ್ಲದೆ ಹೊರಗಡೆ ಜೆರಾಕ್ಸ್ ಗಾಗಿ ದಾಖಲೆಗಳನ್ನು ತೆಗೆದುಕೊಂಡು ಹೋದಾಗ ಮೂಲ ದಾಖಲೆಗಳಲ್ಲಿ ಅನೇಕ ತಿದ್ದುಪಡಿಗಳಾಗಿರುತ್ತವೆ. ಇದರ ಬಗ್ಗೆ ದೂರು ನೀಡಲಾಗಿತ್ತು. ವಂಶವೃಕ್ಷ, ಸಂಧ್ಯಾ ಸುರಕ್ಷಾ ಮತ್ತು ಡೆತ್ ಸರ್ಟಿಫಿಕೇಟ್ ಮುಂತಾದ ದಾಖಲೆಗಳನ್ನು ಅಕ್ರಮವಾಗಿ ನಕಲಿ ದಾಖಲಾತಿಗಳನ್ನು ಸೃಷ್ಟಿಸಿ ಸರ್ಕಾರದ ಅನುದಾನ ಪಡೆಯುತ್ತಿರುವ ಬಗ್ಗೆ ತಹಸೀಲ್ದಾರ್ ಗಮನಕ್ಕೆ ತರಲಾಗಿತ್ತು.
ಅನೇಕ ರೈತರ ಭೂಮಿ ಸರ್ಕಾರದ ಪಡ ಸೇರಿದ ಭೂಮಿಗಳನ್ನ ಗುರುತಿಸಿ ರಿಯಲ್ ಎಸ್ಟೇಟ್ ಅವರೊಂದಿಗೆ ಶಾಮೀಲಾಗಿ ರೈತರಿಗೆ ಕಡಿಮೆ ಬೆಲೆಗೆ ಭೂಮಿ ಖರೀದಿಸಿ ಅತಿ ಹೆಚ್ಚು ಲಾಭ ಮಾಡಿಕೊಟ್ಟಿರುತ್ತಾರೆ. ಸರ್ಕಾರಿ ಭೂಮಿ, ಕೆರೆ, ಗೋಕಟ್ಟೆ ಹಾಗೂ ಅರಣ್ಯ ಇಲಾಖೆಯ ಭೂಮಿಯಲ್ಲಿ ಅಕ್ರಮವಾಗಿ ಎಲ್ಲಾ ಕಾರ್ಯಗಳನ್ನು ಉಲ್ಲಂಘನೆ ಮಾಡಿ ನಿರಂತರವಾಗಿ ಅಕ್ರಮವಾಗಿ ಮಣ್ಣು ಹೊಡೆಯುತ್ತಿರುವ ಬಗ್ಗೆ ಅನೇಕ ಬಾರಿ ಕರೆ ಮಾಡಿ ತಿಳಿಸಿದರೂ ಯಾವುದೇ ಕ್ರಮ ವಹಿಸಿರುವುದಿಲ್ಲ.
ಹೀಗೆ ನೂರೆಂಟು ಅಕ್ರಮಗಳಲ್ಲಿ ಭಾಗಿಯಾಗಿ ಅಕ್ರಮ ದಾಖಲೆಗಳ ಸೃಷ್ಟಿ ಮಾಡಿ ಸರ್ಕಾರಕ್ಕೆ ಕೋಟ್ಯಾಂತರ ರೂಪಾಯಿ ನಷ್ಟ ಉಂಟು ಮಾಡಿರುತ್ತಾರೆ. ಕಂದಾಯ ಇಲಾಖೆಯ ಎಲ್ಲಾ ಕಡೆಯೂ ಮಧ್ಯವರ್ತಿಗಳ ಹಾವಳಿ ಹೆಚ್ಚಾಗಿದೆ.
ಸಾರ್ವಜನಿಕರು ಕಂದಾಯ ಇಲಾಖೆಯಲ್ಲಿ ಲಂಚ ಕೊಡದೆ ಯಾವ ಕೆಲಸವಾಗುತ್ತಿಲ್ಲ ಎಂದು ಬೊಬ್ಬೆ ಹೊಡೆಯುತ್ತಾರೆ. ಆದ್ದರಿಂದ ಕೂಡಲೇ ತಹಸೀಲ್ದಾರ್ ಅವರನ್ನ ವರ್ಗಾಯಿಸಿ ಇವರ ಅಧಿಕಾರಾವಧಿಯಲ್ಲಿ ನಡೆದಿರುವ ಅಕ್ರಮಗಳ ಬಗ್ಗೆ ಸಮಗ್ರ ತನಿಖೆ ನಡೆಸಿ ತಪ್ಪಿಸ್ಥ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕಾಗಿ ರೈತ ಸಂಘ ಒತ್ತಾಯಿಸಿದೆ. ಕ್ರಮ ಕೈಗೊಳ್ಳದಲ್ಲಿ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ರೈತ ಸಂಘ ಎಚ್ಚರಿಕೆ ನೀಡಿದೆ.
ರೈತ ಸಂಘದ ಜಿಲ್ಲಾಧ್ಯಕ್ಷ ಕೆ ಟಿ ತಿಪ್ಪೇಸ್ವಾಮಿ, ತಾಲೂಕು ಅಧ್ಯಕ್ಷ ಸಿದ್ದರಾಮಣ್ಣ, ಹೊಸಕೆರೆ ಗ್ರಾಮದ ಜಯಣ್ಣ, ಜಗದೀಶ್, ನಾರಾಯಣಪ್ಪ, ರಘುನಾಥ್ ಗೌಡ, ಧನಂಜಯ, ಪುಟ್ಟರಾಜ, ಲಕ್ಷ್ಮಿಪತಿ, ಶಿವಣ್ಣ , ಗಿರೀಶ, ಸತೀಶ, ತಿಪ್ಪೇಸ್ವಾಮಿ, ಸಣ್ಣೀರಪ್ಪ, ಪುಟ್ಟಯ್ಯ, ಮಲ್ಲಿಕಾರ್ಜುನ, ಜೆಸಿಬಿ ರಘುನಾಥ್, ಶಿವಮೂರ್ತಿ, ಸುರೇಶ, ಜಲ್ದೀರಪ್ಪ, ರಮೇಶ್, ತಿಮ್ಮಾರೆಡ್ಡಿ, ರಂಗಸ್ವಾಮಿ, ತಿಮ್ಮರಾಯ, ರಂಗಪ್ಪ ಸೇರಿದಂತೆ ಮುಂತಾದವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.