ತೊಗರಿ, ಶೇಂಗಾ ಬೆಳೆ ಹಾನಿಗೆ ವಿಮೆ ಬಿಡುಗಡೆ ಮಾಡಲು ರೈತರ ಆಗ್ರಹ

News Desk

ಚಂದ್ರವಳ್ಳಿ ನ್ಯೂಸ್, ಚಳ್ಳಕೆರೆ:
ಹವಾಮಾನ ವೈಪರೀತ್ಯದಿಂದ ಶೇಂಗಾ ತೊಗರಿ ಬೆಳೆ ಕುಂಠಿತವಾಗಿರುವುದರಿಂದ ಬೆಳೆ ವಿಮೆ ನೀಡುವಂತೆ ಚಳ್ಳಕೆರೆ ತಾಲ್ಲೂಕು ಕಸಬಾ ಹೋಬಳಿ ಶೇಂಗಾ ಮತ್ತು ತೊಗರಿ ಬೆಳೆಗಾರರ ಸಂಘವು ಜಿಲ್ಲಾಧಿಕಾರಿಗಳು ಹಾಗೂ ಕೃಷಿ ಇಲಾಖೆಯ ಜಂಟಿ ನಿರ್ದೇಶಕರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.

ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನ ಮುಂಗಾರು ಹಂಗಾಮಿನ ಮಳೆಯಾಶ್ರಿತ ಎಲ್ಲ ಬೆಳೆಗಳು ಹನಾಮಾನ ವೈಪರೀತ್ಯದಿಂದ ಕುಂಠಿತವಾಗಿರುವುದು ಕಟು ವಾಸ್ತವ. ಪ್ರಸಕ್ತ ಸಾಲಿನಲ್ಲಿ ಅಧಿಕ ಮಳೆಯಿಂದಾಗಿ ಶೇಂಗಾ ಮತ್ತು ತೊಗರಿ ಬೆಳೆ ಸಂಪೂರ್ಣವಾಗಿ ಹಾಳಾಗಿದೆ. ಇಟ್ಟ ಕೂಲಿ, ಗೊಬ್ಬರ ಸೇರಿದಂತ ಬೇಸಾಯದ ಖರ್ಚು ವಾಪಸ್ ಬರುತ್ತಿಲ್ಲ ಎಂದು ರೈತರು ಆತಂಕ ವ್ಯಕ್ತಪಡಿಸಿದರು.

ಮುಂಗಾರು ಮಳೆ ಸಕಾಲಕ್ಕೆ ಬಂದ ಹಿನ್ನೆಲೆಯಲ್ಲಿ ಮಳೆಯಾಶ್ರಿತ ಬೆಳೆಗಳನ್ನು ರೈತರು ಬಿತ್ತನೆ ಮಾಡಿದ್ದು ಸರಿಯಷ್ಟೇ. ಬಿತ್ತನೆ ಮಾಡಿ ತಿಂಗಳೊಪ್ಪತ್ತಾದರೂ ಮಳೆ ಸುರಿಯದೆ, ಬೆಳೆ ಒಣಗುವ ದುಸ್ಥಿತಿಗೆ ಸಿಲುಕಿ, ರೈತರು ಆತಂಕಕ್ಕೆ ಒಳಗಾಗಿದ್ದುಂಟು. ನಂತರದಲ್ಲಿ ಸುರಿದ ಮಳೆಯಿಂದ ಬೆಳೆ ಬಲವಾಗಿ ಬೆಳೆಯುವ ಹಂತದಲ್ಲಿ ಶೇಂಗಾ ಹೆಚ್ಚು ಊಡಿಳಿಯಲು ಅವಕಾಶವಾಗದಂತೆ, ಹತ್ತಾರು ದಿನಗಳು ಚಂಡಮಾರುತ ಮಳೆ ಧಾರಾಕಾರವಾಗಿ ಸುರಿಯಿತು ಇದರ ಪರಿಣಾಮವಾಗಿ ನೆಲಬಿಗಿತವಿಲ್ಲದ್ದರಿಂದ ನಿರ್ಗಾಯಿಗಳು ಅಧಿಕವಾಗಿ ಊಡಿಳಿಯಲು ಸಾಧ್ಯವಾಗಲಿಲ್ಲ.

ಆದ್ದರಿಂದ ಬೆಳೆ ಕುಂಠಿತವಾಗಲು ಮೂಲ ಕಾರಣದಾಯಿತು.ಶೇಂಗಾ ಗಿಡ ಅಬ್ಬರವಾಗಿ ಬೆಳೆದರೂ ಎರಡನೇ ಸುತ್ತಿನ ಚಂಡಮಾರುತದ ಅಧಿಕ ಮಳೆಯಿಂದ ಮಿತಿ ಮೀರಿದ ಬುಡ ರೋಗಕ್ಕೆ ಶೇಂಗಾ ಗಿಡಗಳು ಬಲಿಯಾಗಿ ದ್ದರಿಂದ ಬೆಳೆಗೆ ಹೊಡೆತ ಬಿತ್ತು ತದನಂತರದಲ್ಲಿ ಅಳಿದುಳಿದ ಶೇಂಗಾ ಬೆಳೆ ಕಟಾವು ಮಾಡುವ ಸಂದರ್ಭದಲ್ಲೂ ಬಂದ ಅನಿರೀಕ್ಷಿತ ಮಳೆಯಿಂದಾಗಿ ಬಳ್ಳಿ ಮತ್ತು ಶೇಂಗಾ ಕಾಯಿಗೂ ಸಂಚಕಾರ ಬಂದಿದೆ.

ಆದ್ದರಿಂದ ಸಕಾಲಕ್ಕೆ ಮಳೆ ಬಾರದೆ, ಅಕಾಲಿಕವಾಗಿ ಎರಡು ಬಾರಿ ದೀರ್ಘಕಾಲ ಸುರಿದ ಮಳೆಯಿಂದ ಹಾಗೂ ಹವಾಮಾನ ವೈಪರಿತ್ಯದಿಂದ ಆದ ಶೇಂಗಾ ಬೆಳೆ ಹಾನಿ ರೈತರು ಭರಿಸಲಾಗದ್ದು ಅದೇ ರೀತಿ ಮಳೆಯ ಏರುಪೇರಿನಿಂದ ತೊಗರಿ ಗಿಡ ಬೆಳೆದರೂ ಹೂ ತುಂಬಿದ ಸಂದರ್ಭದಲ್ಲಿ ಚಂಡಮಾರುತದ ಸುದೀರ್ಘ ಕಾಲ ಮಳೆ ಸುರಿದಿದ್ದರಿಂದ ಮತ್ತು ದಟ್ಟವಾಗಿ ಮೋಡಕವಿದ ಶೀತವಾತಾವರಣದಿಂದ ಬಹುಪಾಲು ಹೂಗಳು ಕಳಚಿ ಬಿದ್ದು ಬಾರಿ ಪ್ರಮಾಣದಲ್ಲಿ ನಷ್ಟವುಂಟಾಯಿತುಹೊಗರಿ ಗಿಡಗಳು ಅಬ್ಬರವಾಗಿ ಬೆಳೆದರೂ ನಂತರ ಹೂ ಹಿಡಿಯಲು ಅಸ್ಪದವಾಗದಂತೆ ಎರಡನೆ ಸುತ್ತಿನ ಚಂಡಮಾರುತ ಮಳೆ ಹಲವು ದಿನಗಳ ಕಾಲ ಸುರಿಯಿತು.ಇಂತಹ ಹನಾಮಾನ ವೈಪರೀತ್ಯದಿಂದ ಶೇಂಗಾ ಮತ್ತು ತೊಗರಿ ಬೆಳೆ ಕುಂಠಿತವಾಗಿರುವುದರಿಂದ ಬೆಳೆ ವಿಮೆ ವಿತರಣೆ ಮಾಡಿ ರೈತರ ಸಂಕಷ್ಟಗಳನ್ನು ಪರಿಹರಿಸಿ ನ್ಯಾಯ ಒದಗಿಸಬೇಕೆಂದು ರೈತರು ಮನವಿ ಮಾಡಿದರು.

ಚಳ್ಳಕೆರೆ ತಾಲ್ಲೂಕಿನಲ್ಲಿ ಈ ಬಾರಿ ಕೃಷಿ ಇಲಾಖೆಯ ಉತ್ತೇಜನದಿಂದ ಮತ್ತು ಪ್ರೋತ್ಸಾಹ ಧನ ಸಹಾಯ ಬರುವ ಪ್ರೇರಣೆಯಿಂದ ವಿಪುಲವಾಗಿ ಸಿರಿಧಾನ್ಯ ಸಾಮೆಯನ್ನು ಬಿತ್ತನೆ ಮಾಡಿದ್ದರು. ಸುಮಾರು ಐವತ್ತು ದಿನಗಳು ಮಳೆ ಬಾರದೆ ಬೆಳೆ ನಲುಗಿದರೂ, ನಂತರದ ಮಳೆಯಿಂದ ಸಾಮೆ ಬೆಳೆಯಿತು ಬಂದ ಬೆಳೆಗೆ ಬೆಲೆಯಿಲ್ಲದೆ ರೈತರ ಕೈ ಸುಟ್ಟು ಕೊಳ್ಳುವ ಪರಿಸ್ಥಿತಿ ಬಂದಿದೆ. ಆದ್ದರಿಂದ ಪ್ರೋತ್ಸಾಹ ಹಣ ಸಕಾಲಕ್ಕೆ ಬರುವಂತೆ ಅಧಿಕಾರಿಗಳು ಗಮನಹರಿಸಿ ರೈತರಿಗೆ ಸ್ಪಂದಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಬೆಳೆ ಕಟಾವು ಮಾಡುವ ಅಧಿಕಾರಿಗಳು ಸಂಬಂಧಿಸಿದ ರೈತರಿಗೆ ಕಟಾವು ಸಮೀಕ್ಷೆಯ ಮಾಹಿತಿಯನ್ನು ನೀಡದೆ ರೈತರನ್ನು ನಿರ್ಲಕ್ಷ್ಯ ಮಾಡಿದ್ದು ದುರಂತ. ಆದ್ದರಿಂದ ಬೆಳೆ ಹಾನಿಯ ಅರ್ಹತೆ ಪರಿಗಣಿಸಿ ಬೆಳೆ ವಿಮೆ ನೀಡುವಂತೆ ಶಿಪಾರಸ್ಸು ಮಾಡಬೇಕೆಂದು ಮತ್ತೊಮ್ಮೆ ಜಿಲ್ಲಾಧಿಕಾರಿಗಳಲ್ಲಿ ರೈತರು ಮನವಿ ಮಾಡಿದರು.

ಚಳ್ಳಕೆರೆ ತಾಲ್ಲೂಕು ಕಸಬಾ ಹೋಬಳಿ ಶೇಂಗಾ ಮತ್ತು ತೊಗರಿ ಬೆಳೆಗಾರರ ಸಂಘದ ಅಧ್ಯಕ್ಷ ಡಾ.ಸಿ.ಶಿವಲಿಂಗಪ್ಪ, ಉಪಾಧ್ಯಕ್ಷರಾದ ಎಂ. ಕರಿಯಪ್ಪ, ಎಸ್. ಪ್ರಕಾಶ್, ನಿರ್ದೇಶಕರಾದ ಡಿ. ಭರತೇಶ್‌ರೆಡ್ಡಿ, ಬಿ.ಎಸ್. ಸಿದ್ದೇಶ್ವರ ರೆಡ್ಡಿ, ಹೆಚ್. ಶರಣಪ್ಪ, ಎನ್. ಪ್ರಕಾಶ್ ಒಡೆಯರ್, ಬಿ.ಪಿ. ತಮ್ಮೇಗೌಡ, ಬಿ.ಹೆಚ್. ದೊಡ್ಡಣ್ಣ, ಎಸ್.ಬಿ. ಜೋಗಯ್ಯ, ಕೆ.ಆರ್. ಅನಂತರೆಡ್ಡಿ, ಬಿ.ಎಂ.ಶಶಿಧರ್, ಜಿ.ಎಂ.ನಂದೀಶ್, ಬಿ.ಕೃಷ್ಣ ಮತ್ತಿತರ ರೈತರು ಮನವಿ ಸಲ್ಲಿಸಿ ಒತ್ತಾಯಿಸಿದ್ದಾರೆ.

 

 

- Advertisement -  - Advertisement - 
Share This Article
error: Content is protected !!
";