ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಚಿತ್ರದುರ್ಗ ಜಿಲ್ಲಾ ಹಿರಿಯೂರು ತಾಲ್ಲೂಕು ಐಮಂಗಲ ಹೋಬಳಿ ಬುರುಜನರೊಪ್ಪ ಗ್ರಾಮ ಪಂಚಾಯಿತಿಯ ಚಿಕ್ಕಸಿದ್ದವ್ವನಹಳ್ಳಿ ಕೆರೆಗೆ ಭದ್ರಾ ನಾಲೆಯ ನೀರು ಹರಿಸುವಂತೆ ಒತ್ತಾಯಿಸಿ ಹತ್ತಾರು ಹಳ್ಳಿಯ ರೈತರು ಅನಿರ್ದಿಷ್ಟಾವಧಿ ಮುಷ್ಕರವನ್ನು ಗುರುವಾರದಿಂದ ಆರಂಭಿಸಿದ್ದಾರೆ.
ಇಂದು ಅಥವಾ ನಾಳೆ ನಮ್ಮ ಬೇಡಿಕೆ ಈಡೇರದಿದ್ದರೆ ಕಾಮಗಾರಿ ಮಾಡಲು ಯಾವುದೇ ಕಾರಣಕ್ಕೂ ಬಿಡುವುದಿಲ್ಲ, ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಚಿಕ್ಕಸಿದ್ದವ್ವನಹಳ್ಳಿ ಕೆರೆಗೆ ಕಡ್ಡಾಯವಾಗಿ ನೀರು ನೀಡುತ್ತೇವೆ ಎನ್ನುವ ಅಧಿಕೃತ ಆದೇಶದೊಂದಿಗೆ ಬರಬೇಕು ಎಂದು ಪ್ರತಿಭಟನಾ ನಿರತ ರೈತರು ಆಗ್ರಹ ಮಾಡಿದರು.
ಹಿರಿಯೂರು ತಾಲ್ಲೂಕು ಐಮಂಗಲ ಹೋಬಳಿ ಬುರುಜನರೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಲವು ಗ್ರಾಮಗಳ ಗ್ರಾಮಸ್ಥರು ಚಿತ್ರದುರ್ಗ ಬ್ರಾಂಚ್ ಕಾಲುವೆ ಸಮೀಪವೇ ಚಿಕ್ಕಸಿದ್ದವ್ವನಹಳ್ಳಿ ಕೆರೆಗೆ ನೀರು ಭರ್ತಿ ಮಾಡುವಂತೆ ಒತ್ತಾಯಿಸಿದರು.
ಚಿಕ್ಕಸಿದ್ದವ್ವನಹಳ್ಳಿ ಕೆರೆ ಇರುವ ಪ್ರದೇಶವು ಚಿತ್ರದುರ್ಗ ಮತ್ತು ಹಿರಿಯೂರು ತಾಲ್ಲೂಕುಗಳ ಎರಡು ತಾಲ್ಲೂಕಿನ ಗಡಿಭಾಗದಲ್ಲಿದ್ದು ಈ ಕೆರೆಗೆ ನೀರು ಭರ್ತಿ ಮಾಡುವುದರಿಂದ 10 ರಿಂದ 15 ಹಳ್ಳಿಗಳಿಗೆ ಅನುಕೂಲ ಆಗಲಿದೆ. ಚಿಕ್ಕಸಿದ್ದವ್ವನಹಳ್ಳಿ, ಕೋವೇರಹಟ್ಟಿ, ಹೊಸನಾಯಕರಹಟ್ಟಿ, ಹಳೇಊರು, ಮ್ಯಾಸರಹಟ್ಟಿ, ಪಾಲವ್ವನಹಳ್ಳಿ, ಹೋ.ಚಿ. ಬೋರಯ್ಯನಹಟ್ಟಿ, ಬುರುಜನರೊಪ್ಪ, ಸಾಲುಹುಣಸೆ, ಸಾಲುಹುಣಸೆ ಗೊಲ್ಲರಹಟ್ಟಿ, ಲಂಬಾಣಿಹಟ್ಟಿ, ಕಲ್ಲಹಟ್ಟಿ ಸೇರಿದಂತೆ ಮತ್ತಿತರ ಹಲವು ಹಳ್ಳಿಗಳ ಅಂತರ್ಜಲ ಮಟ್ಟ ವೃದ್ಧಿಸಲಿದೆ. 8-9 ಸಾವಿರ ಜನಸಂಖ್ಯೆ, ಹತ್ತಾರು ಸಾವಿರ ದನಕರುಗಳು ಹಾಗೂ ಕುರಿ ಮೇಕೆಗಳಿವೆ. ಕುಡಿಯಲು ನೀರಿನ ಸಮಸ್ಯೆ ಪ್ರತಿ ವರ್ಷ ತಲೆದೊರಲಿದೆ. ಈ ಭಾಗದಲ್ಲಿ ಮಳೆ ಕಡಿಮೆ ಆಗುತ್ತಿದ್ದು ಅಂತರ್ಜಲ ಕುಸಿದಿದೆ.
ಕೆರೆಯ ವ್ಯಾಪ್ತಿಗೆ ಬರುವ ಜಮೀನುಗಳಲ್ಲಿ ಅಡಿಕೆ, ತೆಂಗು, ಸೇರಿದಂತೆ ಮತ್ತಿತರ ತೋಟಗಾರಿಕೆ ಬೆಳೆಗಳಿದ್ದು ಕೆರೆ ತುಂಬಿಸಿದರೆ ಮಾತ್ರ ಫಲ ನೋಡಲು ಸಾಧ್ಯ ಎಂದು ರೈತರು ಆಗ್ರಹಿಸಿದರು.
ಭದ್ರಾ ಮೇಲ್ದಂಡೆ ಯೋಜನೆ ಅಡಿ ಚಿತ್ರದುರ್ಗ ಬ್ರಾಂಚ್ ಕಾಲುವೆ ಕೆರೆ ಸಮೀಪವೇ ಹಾದು ಹೋಗಿದೆ. ಈ ಭಾಗದ ಅತಿ ಹೆಚ್ಚಿನ ರೈತರ ಜಮೀನುಗಳು ಭೂ ಸ್ವಾಧೀನವಾಗಿದೆ. ಜಮೀನಿಗೆ 30-40 ಲಕ್ಷ ರೂಪಾಯಿ ಮಾರುಕಟ್ಟೆ ಬೆಲೆ ಇದ್ದರೂ ಕೇವಲ ಮೂರ್ನಾಲ್ಕು ಲಕ್ಷ ರೂ.ಪಡೆದು ಜಮೀನು ಬಿಟ್ಟುಕೊಟ್ಟಿದ್ದೇವೆ. ಆದರೆ ನಮ್ಮ ಕೆರೆಗೆ ನೀರಿಲ್ಲ ಎಂದು ಹೇಗೆ ಎಂದು ಪ್ರತಿಭಟನಾಕಾರರು ಪ್ರಶ್ನಿಸಿದರು.
ಈ ಭಾಗದಲ್ಲಿ ಭದ್ರಾ ಯೋಜನೆಗಾಗಿ 150 ಹೆಕ್ಟೇರ್ ಪ್ರದೇಶವನ್ನು ಸರ್ಕಾರ ಭೂ ಸ್ವಾಧೀನಪಡಿಸಿಕೊಂಡಿದೆ. ಕೆರೆಗೆ ನೀರು ಹರಿಸುವ ಭರವಸೆ ನೀಡಿದ್ದ ಅಧಿಕಾರಿಗಳು ಈಗ ತಾಂತ್ರಿಕ ಕಾರಣಗಳನ್ನ ನೀಡಿ ವಂಚಿಸುವ ಹುನ್ನಾರ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತ ಪಡಿಸಿದರು.
ಪ್ರತಿಭಟನೆಯಲ್ಲಿ ಜಿಪಂ ಮಾಜಿ ಅಧ್ಯಕ್ಷ ಕೆ.ದ್ಯಾಮೇಗೌಡ, ರೈತ ಮುಖಂಡರಾದ ರವಿವರ್ಮ, ಸಂತೋಷ್ ಗೌಡ, ಶಿವಪ್ರಸಾದ್, ಹೆಚ್.ಟಿ ಶ್ರೀನಿವಾಸ್, ಬಿಜೆಪಿ ಮುಖಂಡ ಎನ್.ಆರ್.ಲಕ್ಷ್ಮಿಕಾಂತ, ಕೋವೇರಹಟ್ಟಿ ಅಮರ್ ಗೌಡ, ವೃಷಭೇಂದ್ರ, ಪಿಎಲ್ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ತಿಪ್ಪೇಸ್ವಾಮಿ, ಮಂಜುನಾಥ್, ಜೆ.ನಾಗರಾಜ್, ಬುರುನರೊಪ್ಪ ಗ್ರಾಪಂ ಅಧ್ಯಕ್ಷೆ ಕವಿತಾ, ರೈತ ಸಂಘದ ಅಧ್ಯಕ್ಷ ಕೆ.ಟಿ ತಿಪ್ಪೇಸ್ವಾಮಿ ಸೇರಿದಂತೆ ಕೋವೇರಹಟ್ಟಿ, ಪಾಲವ್ವನಹಳ್ಳಿ, ಬುರುಜನರೊಪ್ಪ, ಸಾಲಹುಣಸೆಗೊಲ್ಲರಹಟ್ಟಿ, ಹೊಸ ನಾಯಕರಹಟ್ಟಿ, ಚಿಕ್ಕಸಿದ್ದವ್ವನಹಳ್ಳಿ, ಕಾರಬೋನಹಟ್ಟಿ, ಭಾಗಣ್ಣನಹಟ್ಟಿ, ಕಲ್ಲಟ್ಟಿ ಸೇರಿದಂತೆ ಇತರೆ ರೈತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.