ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ವಿವಿ ಸಾಗರ ಜಲಾಶಯ ಮತ್ತು ವೇದಾವತಿ ನದಿಯಿಂದ ಇಪ್ಪೆ ಕಣಿವೆ ಭೂತಪ್ಪನ ದೇವಸ್ಥಾನದ ಹತ್ತಿರದ ನಾಲೆಯ ಮುಖಾಂತರ ಉಡುವಳ್ಳಿ ಕೆರೆಗೆ ನೀರು ಹರಿಸುವಂತೆ ಒತ್ತಾಯಿಸಿ ರೈತರು ನಗರದ ತುಳಸಿ ಕಲ್ಯಾಣ ಮಂಟಪದಿಂದ ತಾಲೂಕು ಕಚೇರಿ ವರೆಗೂ ಕಾಲ್ನಡಿಗೆ ಮೂಲಕ ತಾಲೂಕು ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು.
ಉಡುವಳ್ಳಿ, ವಿ ವಿ ಪುರ, ಯಲ್ಲದಕೆರೆ, ಗೌಡನಹಳ್ಳಿ, ದಿಂಡವರ ಗ್ರಾಮ ಪಂಚಾಯತಿಯ ರೈತರು ವಿವಿ ಸಾಗರ ಜಲಾಶಯದಿಂದ ಉಡುವಳ್ಳಿ ಕೆರೆಗೆ ನೀರು ಹರಿಸುವಂತೆ ಶುಕ್ರವಾರ ತಹಶೀಲ್ದಾರ್ ರಾಜೇಶ್ ಕುಮಾರ್ ರವರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.
ಮನವಿ ಸಲ್ಲಿಸಿ ಮಾತನಾಡಿದ ಪರಮೇನಹಳ್ಳಿ ಎಂ ಮಹಾಲಿಂಗಪ್ಪ ಮಾತನಾಡಿ ಎಂಪಿ ಚುನಾವಣೆ ಸಂದರ್ಭದಲ್ಲಿ ಆ ಭಾಗದ ಜನರು ಚುನಾವಣೆ ಬಹಿಷ್ಕರಿಸಿದ್ದರು. ಅಂತಹ ಸಂದರ್ಭದಲ್ಲಿ ತಹಶೀಲ್ದಾರ್ ಹಾಗೂ ನೀರಾವರಿ ಇಲಾಖೆ ಇಂಜಿನಿಯರ್ ಸ್ಥಳಕ್ಕೆ ಆಗಮಿಸಿ ಚುನಾವಣೆ ಬಹಿಷ್ಕರಿಸಬೇಡಿ ಚುನಾವಣೆಯನಂತರ ನಿಮ್ಮ ಬೇಡಿಕೆ ಈಡೇರಿಸುತ್ತೇವೆ ಎಂದು ಭರವಸೆ ನೀಡಿದ್ದರು. ಆದರೆ ಇಂದಿಗೂ ಆ ಭರವಸೆ ಈಡೇರಿಸುವ ಗೋಜಿಗೆ ಅಧಿಕಾರಿಗಳು ಹೋಗಿಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದರು.
ವಿ ವಿ ಸಾಗರ ಜಲಾಶಯದಿಂದ ಉಡುವಳ್ಳಿ ಕೆರೆಗೆ ನೀರು ಹರಿಸದಿದ್ದರೆ ಆ ಭಾಗದ ಜನರು ತಾಲೂಕು ಕಚೇರಿ ಮುಂಭಾಗ ಧರಣಿ ನಡೆಸಬೇಕಾಗುತ್ತದೆ ಎಂದು ರೈತ ಮುಖಂಡರು ಎಚ್ಚರಿಸಿದ್ದಾರೆ.
ತಾಲೂಕು ಜೆಡಿಎಸ್ ಅಧ್ಯಕ್ಷ ಮಸ್ಕಲ್ ಮಟ್ಟಿ ಹನುಮಂತರಾಯಪ್ಪ ಮಾತನಾಡಿ ಈ ಕ್ಷೇತ್ರದ ಶಾಸಕರಿಗೆ ಮತದಾರರು ಹಾಗೂ ರೈತರ ಬಗ್ಗೆ ಕಾಳಜಿ ಇಲ್ಲ. ಆ ಭಾಗದ ರೈತರು ಜನರು ಕುಡಿಯುವ ನೀರಿಗೂ ಪರದಾಡುವಂತಹ ಪರಿಸ್ಥಿತಿ ಇದೆ. ಇತ್ತಕಡೆ ಗಮನಹರಿಸದ ಕ್ಷೇತ್ರದ ಶಾಸಕರ ಬಗ್ಗೆ ನಾವೇನು ಹೇಳಬೇಕು ತಿಳಿಯುತ್ತಿಲ್ಲ. ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಅವರಿಗೆ ನಾಚಿಕೆ ಆಗಬೇಕು ಈ ಕ್ಷೇತ್ರದಲ್ಲಿ ಕುಡಿಯುವ ನೀರಿಗೂ ಜನವಾರಗಳಿಗೂ ನೀರಿಲ್ಲದೆ ಜನರ ಪಾಡೇನು ಎಂಬಂತಾಗಿದೆ. ಬೇಸಿಗೆ ಕಾಲದಲ್ಲಿ ಮುಂದಿನ ದಿನಗಳಲ್ಲಿ ನೀರಿನ ಅಭಾವ ಹೇಳುತೀರದಷ್ಟು ಆಗುತ್ತದೆ. ಈಗಲಾದರೂ ಶಾಸಕರು ಎಚ್ಚೆತ್ತುಕೊಂಡು ಉಡುವಳ್ಳಿ ಕೆರೆಗೆ ನೀರು ಹರಿಸಲಿ ಮತದಾರರ ಋಣವಾದರೂ ತೀರಿಸಲಿ ಎಂದು ಒತ್ತಾಯಿಸಿದರು.
ತಾಲೂಕು ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ಕೆ. ಸಿ ಹೊರಕೇರಪ್ಪ ಮಾತನಾಡಿ ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಗೊಳಪಡುವ ದೊಡ್ಡ ಕೆರೆಗಳಲ್ಲಿ ಉಡುವಳ್ಳಿ ಕೆರೆ ದೊಡ್ಡ ಕೆರೆ ಆಗಿದೆ. 2022ರಲ್ಲಿ ಉಡುವಳ್ಳಿ ಕೆರೆ ಕೋಡಿ ಹರಿದಿದ್ದು ನೀರಾವರಿ ಇಲಾಖೆ ಅಧಿಕಾರಿಗಳು ಅವೈಜ್ಞಾನಿಕವಾಗಿ ಕೆರೆ ನೀರನ್ನು ಹರಿಸಿದ್ದರಿಂದ ಕೆರೆ ಸಂಪೂರ್ಣವಾಗಿ ಒಣಗಿ, ಕಲ್ಲವಳ್ಳಿ ಭಾಗದ ಸುಮಾರು 15 ರಿಂದ 20 ಕಿಲೋ ಮೀಟರ್ ವ್ಯಾಪ್ತಿಗಳಲ್ಲಿ ಅಂತರ್ಜಲ ಸಂಪೂರ್ಣ ಕುಸಿದೆ ಎಂದರು.
ಕುಡಿಯಲು ನೀರಿಲ್ಲದೆ ಕೊಳವೆ ಬಾವಿಗಳು ಬತ್ತಿ ಹೋಗಿ ರೈತರು ಬೆಳೆದಿರುವ ತೋಟಗಾರಿಕೆ ಬೆಳೆಗಳು ಸಂಪೂರ್ಣವಾಗಿ ಒಣಗುತ್ತಿದ್ದು ಕೂಡಲೇ ವೇದಾವತಿ ನದಿ ಪಾತ್ರದಿಂದ ಅಥವಾ ವಿ ವಿ ಸಾಗರದ ಯಾವುದಾದರೂ ಮೂಲದಿಂದ ಉಡುವಳ್ಳಿ ಕೆರೆಗೆ ನೀರು ಹರಿಸಿ ಆ ಭಾಗದ ರೈತರಿಗೆ ನೆರವಿಗೆ ದಾವಿಸಬೇಕು. 2022ರಿಂದ ಇದುವರೆಗೂ ನೀರು ಬಾರದೆ ಆ ಭಾಗದ ರೈತರು ಬೆಳೆದ ಬೆಳೆ ಉಳಿಸಿಕೊಳ್ಳಲು ಹರಸಾಹಸ ಪಡುತ್ತಿದ್ದು ತಕ್ಷಣ ನೀರಾವರಿ ಇಲಾಖೆ ಅಧಿಕಾರಿಗಳು ಜಿಲ್ಲಾಡಳಿತ ಕೂಡಲೆ ಉಡುವಳ್ಳಿ ಕೆರೆಗೆ ನೀರು ಹರಿಸುವಂತೆ ಸರ್ಕಾರಕ್ಕೆ ಅಧಿಕಾರಿಗಳು ಗಮನ ಸೆಳೆಯಬೇಕಾಗಿದೆ ಎಂದು ಹೇಳಿದರು.
ಇತ್ತೀಚೆಗೆ ಉಡುವಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಅನೇಕ ಕೊಳವೆ ಬಾವಿ ಕೊರೆಸಿದರು ಸಹ ನೀರು ಬಾರದೆ ರೈತರು ಕಂಗಾಲಾಗಿ ಕುಡಿಯುವ ನೀರಿಗೂ ಸಹ ಸಂಕಷ್ಟ ಎದುರಿಸುತ್ತಿದ್ದು ಜನ ಜಾನುವಾರುಗಳಿಗೆ ಅನೇಕ ಗ್ರಾಮಗಳಲ್ಲಿ ಟ್ಯಾಂಕರ್ ಮುಖಾಂತರ ಕುಡಿಯುವ ನೀರು ಪೂರೈಕೆ ಮಾಡುತ್ತಿದ್ದಾರೆ. ಸರ್ಕಾರ ಕೂಡಲೇ ಅತಿ ಶೀಘ್ರವಾಗಿ ವಿ ವಿ ಸಾಗರ ಜಲಾಶಯದ ನೀರನ್ನು ಯಾವುದಾದರೂ ಮೂಲದಿಂದ ಉಡುವಳ್ಳಿ ಕೆರೆಗೆ ನೀರು ಹರಿಸುವಂತೆ ಆ ಭಾಗದ ರೈತರು ಒತ್ತಾಯಿಸಲಾಯಿತು.
“ನಾನು ಈ ಭಾಗದಲ್ಲಿ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ ಅವಧಿಯಲ್ಲಿ ಉಡುವಳ್ಳಿ ಕೆರೆಗೆ ಕತ್ತೆಹೊಳೆಯಿಂದ ಪೂರಕ ನಾಲೆಯನ್ನು ನಿರ್ಮಿಸಲು ಯೋಜನೆ ರೂಪಿಸಲಾಗಿತ್ತು. ಹಲವು ಕಾರಣಗಳಿಂದ ಆ ಯೋಜನೆ ಅರ್ಧ ಆಗಿ ಅಲ್ಲಿಗೆ ನಿಂತು ಹೋಗಿದೆ. ಶೀಘ್ರ ಕಾರ್ಯಾನುಷ್ಠಾನ ಆಗಬೇಕಿದೆ”.
ಎಂ.ರವೀಂದ್ರಪ್ಪ, ವಿಶ್ರಾಂತ ಮುಖ್ಯ ಇಂಜಿನಿಯರ್ ಹಾಗೂ ಜೆಡಿಎಸ್ ನಾಯಕರು.
ಈ ಸಂದರ್ಭದಲ್ಲಿ ಎಂ ರವೀಂದ್ರಪ್ಪ, ಪರಮೇನಹಳ್ಳಿ ಮಹಾಲಿಂಗಪ್ಪ, ತೇಜ್ ಕುಮಾರ್, ತಿಪ್ಪೇಸ್ವಾಮಿ, ಮಾರುತಿ, ಸಿ ಹೆಚ್ ಕಾಂತರಾಜ್, ಹುಲಿಗಲಕುಂಟೆ ಮಾಜಿ ಅಧ್ಯಕ್ಷ ರಂಗಸ್ವಾಮಿ, ಟಿ ಎಂ ಉಮೇಶ್, ಶಿವಮೂರ್ತಿ, ತಾಲೂಕು ಜೆಡಿಎಸ್ ಅಧ್ಯಕ್ಷ ಹನುಮಂತರಾಯಪ್ಪ, ಉಡುವಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ರಾಮಬೋವಿ ಹಾಗೂ ರೈತ ಮುಖಂಡರು ಇದ್ದರು.
“ರೈತರ ಮನವಿ ಸ್ವೀಕರಿಸಿ ತಹಶೀಲ್ದಾರ್ ಮಾತನಾಡಿ ಏಪ್ರಿಲ್ 15ರ ಒಳಗೆ ಆ ಭಾಗದ ರೈತರೊಂದಿಗೆ ಹಾಗೂ ಅಧಿಕಾರಿಗಳ ವರ್ಗದವರ ಜೊತೆ ತುರ್ತಾಗಿ ಸಭೆ ನಡೆಸಿ ಸರ್ಕಾರದ ಗಮನ ಸೆಳೆಯಲಾಗುವುದು”.
ರಾಜೇಶ್ ಕುಮಾರ್, ತಹಶೀಲ್ದಾರ್ ಹಿರಿಯೂರು.