ಚಂದ್ರವಳ್ಳಿ ನ್ಯೂಸ್, ಚಳ್ಳಕೆರೆ;
ಪರಶುರಾಂಪುರ ಹೋಬಳಿ ಪರಶುರಾಂಪುರ ತಾಲೂಕು ಮಾಡುವುದು ನನ್ನ ಸಂಕಲ್ಪ ಎಂದು ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ ಹೇಳಿದರು.
ಚಳ್ಳಕೆರೆಯಲ್ಲಿ ಅಖಂಡ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಪರಶುರಾಂಪುರ ಹೋಬಳಿ ಕೇಂದ್ರವನ್ನು ತಾಲೂಕು ಕೇಂದ್ರವನ್ನಾಗಿ ಮಾಡಲು ರೈತರ ಬೃಹತ್ ಸಮಾವೇಶದಲ್ಲಿ ಮಾತನಾಡಿದ ಅವರು, ನಾನು ಮೂರು ಬಾರಿ ಶಾಸಕರಾಗುವಂತೆ ಮಾಡಲು ನೀವು ಶ್ರಮ ಪಟ್ಟಿದ್ದೀರಾ. ತಾಲೂಕು ಕೇಂದ್ರವಾಗಲು ಎಲ್ಲಾ ಅರ್ಹತೆಗಳು ಇವೆ. ಹಾಗಾಗಿ ನಿಮ್ಮ ಹೋರಾಟಕ್ಕೆ ಶಕ್ತಿ ತುಂಬುತ್ತೇನೆ. ತಾಲೂಕು ಕೇಂದ್ರ ಮಾಡುವುದು ಮೊದಲ ಆದ್ಯತೆ ಎಂದರು.
ರೈತ ನಾಯಕ ಸೋಮಗುದ್ದು ರಂಗಸ್ವಾಮಿ ಮಾತನಾಡಿ, ತಾಲೂಕು ಕೇಂದ್ರ ಮಾಡುವುದು ನಮ್ಮ ದಶಕಗಳ ಹೋರಾಟವಾಗಿದ್ದು, ನಮ್ಮ ಹೋರಾಟದಲ್ಲಿ ರಾಜೀ ಇಲ್ಲ. ಎಲ್ಲಾ ರೈತ ಸಂಘಟನೆಗಳು ಒಂದಾಗಿದ್ದು ಇಂದು ಅಖಂಡವಾಗಿದ್ದೇವೆ. ಶಾಸಕರು ಹೆಚ್ಚು ಜವಾಬ್ದಾರಿ ಹೊತ್ತಿದ್ದು ನಮ್ಮ ಹೋರಾಟಕ್ಕೆ ಬೆಂಬಲವಾಗಿ ನಿಂತಿದ್ದಾರೆ. ನಮ್ಮ ಕಷ್ಟಗಳನ್ನು ಸರ್ಕಾರ ಹರಿಯಬೇಕು ಎಂದರು.
ಅಖಂಡ ಕರ್ನಾಟಕ ರಾಜ್ಯ ರೈತ ಸಂಘದ ತಾಲೂಕು ಅಧ್ಯಕ್ಷ ನಾಗರಾಜ್ ಮಾತನಾಡಿ, ರೈತರೊಂದಿಗೆ ಇಡೀ ಹೋಬಳಿಯ ಎಲ್ಲಾ ಸಂಘಟನೆಗಳು ಜೊತೆಯಾಗಿವೆ. ನಾವು ಅಭಿವೃದ್ಧಿ ಯಾಗಲು ತಾಲೂಕು ಆಗಬೇಕು ಮತ್ತು ತಾಲೂಕು ಸೌಕರ್ಯಗಳನ್ನು ತರಬೇಕು. ಇದಕ್ಕಾಗಿ ನಿರಂತರವಾಗಿ ಹೋರಾಟ ಮಾಡುತ್ತೇವೆ ಎಂದರು.
ವೇದಿಕೆಯಲ್ಲಿ ವಕೀಲ ಮತ್ತು ಕರ್ನಾಟಕ ರಾಜ್ಯ ಶಿಕ್ಷಣ ಪರಿಷತ್ ಜಿಲ್ಲಾಧ್ಯಕ್ಷ ಮಾಲತೇಶ್ ಅರಸ್, ಅಖಂಡ ಕರ್ನಾಟಕ ರಾಜ್ಯ ರೈತ ಸಂಘದ ತಾಲೂಕು ಅಧ್ಯಕ್ಷ ನಾಗರಾಜ್, ಹೋಬಳಿ ಅಧ್ಯಕ್ಷ ಕೃಷ್ಣಪ್ಪ, ಮಹಂತೇಶ್, ಪುಟ್ಟಲಿಂಗಪ್ಪ ಮತ್ತು ಅನೇಕ ಮುಖಂಡರು ಉಪಸ್ಥಿತರಿದ್ದರು.