ಶೇಂಗಾ ಖರೀದಿ ಕೇಂದ್ರದ ವಿರುದ್ಧ ರೈತರ ಆಕ್ರೋಶ

News Desk

ಚಂದ್ರವಳ್ಳಿ ನ್ಯೂಸ್, ಚಳ್ಳಕೆರೆ:
ಕೇಂದ್ರ ಸರ್ಕಾರ ಶೇಂಗಾ ಬೆಳೆಗೆ ಬೆಂಬಲ ಬೆಲೆ ಘೋಷಿಸಿದ ಹಿನ್ನೆಲೆಯಲ್ಲಿ ಬರುವ ಗುರುವಾರದಿಂದ ಎಪಿಎಂಸಿ ಯಾರ್ಡ್ ನಲ್ಲಿ ಪ್ರಾರಂಭಗೊಳ್ಳುತ್ತಿರುವ ಶೇಂಗಾ ಖರೀದಿ ಕೇಂದ್ರಕ್ಕೆ ಇಂದು ನಡೆದ ಸಭೆಯಲ್ಲಿ ರೈತರು ವಿರೋಧ ವ್ಯಕ್ತಪಡಿಸಿದರು.

ಖರೀದಿ ಕೇಂದ್ರದಲ್ಲಿ ಶೇಂಗಾ ೭೦ರಷ್ಟು ಗುಣಮಟ್ಟದ ಶೇಂಗಾವನ್ನು ಮಾತ್ರ ಖರೀದಿಸುವುದು, ಪಹಣಿ ಇರುವವರೇ ಕೇಂದ್ರಕ್ಕೆ ಬಂದು ಹೆಬ್ಬೆರಳು ಗುರುತು ನೀಡಬೇಕು, ನಗರದ ಎಪಿಎಂಸಿ ಅಂಗಡಿಯಲ್ಲಿ ಬಿಳಿ ಚೀಟಿಯಲ್ಲಿ ಬಿಲ್ ನೀಡುತ್ತಾರೆ. ಜಿಎಸ್ಟಿ ಬಿಲ್ ನೀಡುತ್ತಿಲ್ಲ ಇದರಿಂದ ನಮಗೆ ಬೆಂಬಲ ಬೆಲೆ ಪಡೆಯಲು ಸಾಧ್ಯವಾಗದು, ಕರ್ನಾಟಕ ಸಹಕಾರಿ ಎಣ್ಣೆ ಬೀಜ ಬೆಳೆಗಾರರ ಮಹಾಮಂಡಳಿ ನಿಯಮಿತ(ಕೆಒಎಫ್) ವತಿಯಿಂದ ಶೇಂಗಾ ಖರೀದಿಸುತ್ತಾರೆ. ಆದರೆ, ಹಣ ಯಾವಾಗ ಬರುತ್ತದೆ ಎಂಬುವುದೇ ಗೊತ್ತಿಲ್ಲ ಎಂದು ಆರೋಪಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಪ್ರಭಾರ ಕಾರ್ಯದರ್ಶಿ ಸುರೇಶ್, ಕಳೆದ ಕೆಲವು ವರ್ಷಗಳಿಂದ ಎಪಿಎಂಸಿ ಕಚೇರಿಯಲ್ಲೇ ಕೆಒಎಫ್ ಗುಣಮಟ್ಟದ ಶೇಂಗಾ ಖರೀದಿ ಮಾಡಲು ಸರ್ಕಾರ ನಿರ್ದೇಶನ ನೀಡಿದೆ ಎಂದರು.

ರೈತ ಸಂಘದ ಅಧ್ಯಕ್ಷ ಚಿಕ್ಕಣ್ಣ ಮಾತನಾಡಿ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕೆಒಎಫ್ ಮೂಲಕ ಶೇ.೭೦ರಷ್ಟು ಗುಣಮಟ್ಟದ ಶೇಂಗಾವನ್ನು ಮಾತ್ರ ಖರೀದಿರುತ್ತಾರೆ. ಇದರಿಂದ ರೈತರಿಗೆ ಹೆಚ್ಚು ನಷ್ಟವಾಗುತ್ತದೆ. ಕಾರಣ, ಪ್ರಕೃತಿ ಮುನಿಸಿನಿಂದ ಶೇಂಗಾ ಬೆಳೆ ಜೊಳ್ಳಾಗಿದೆ. ಈ ನಿಟ್ಟಿನಲ್ಲಿ ಕೆಓಎಫ್ ಎಚ್ಚರಿಕೆ ಹೆಜ್ಜೆ ಇಡಬೇಕೆಂದರು.

ರೈತ ಮುಖಂಡ ಚಟ್ಟೆಕೆಂಬದ ಸಿ.ಜಿ.ತಿಪ್ಪೇಸ್ವಾಮಿ ಮಾತನಾಡಿ, ರೈತರು ಬೆಳೆ ಇಲ್ಲದೆ ಚಿಂತನೆಗೆ ಒಳಗಾಗಿದ್ಧಾರೆ. ಕೆಲವು ರೈತರು ಮಾತ್ರ ಅಲ್ಪಮಟ್ಟದ ಬೆಳೆ ಬೆಳೆದಿದ್ದು ಅದನ್ನು ಇಲ್ಲಿನ ಮಾರುಕಟ್ಟೆಗೆ ತಂದರೆ ಬಿಳಿಚೀಟಿ ನೀಡಿ ರೈತರನ್ನು ವಂಚಿಸಲಾಗುತ್ತಿದೆ. ಕೆಒಎಫ್ ಶೇಂಗಾ ಖರೀದಿಸಿದರೆ ಹಣ ಯಾವಾಗ ನೀಡುತ್ತಾರೆಂಬುವುದು ಗ್ಯಾರಂಟಿ ಇಲ್ಲವೆಂದು ಆರೋಪಿಸಿದರು.

ಕೆಒಎಫ್ ಜಿಲ್ಲಾ ವ್ಯವಸ್ಥಾಪಕ ಹನುಮಂತನಾಯ್ಕ ಮಾತನಾಡಿ, ಸರ್ಕಾರದ ನಿರ್ದೇಶಕದಂತೆ ಈ ಗುರುವಾದ ಕೇಂದ್ರ ಪ್ರಾರಂಭಗೊಳ್ಳಲಿದೆ. ರೈತರ ಸಮಸ್ಯೆಯನ್ನು ತಹಶೀಲ್ದಾರ್, ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿಕೊಳ್ಳಿ. ಕೆಒಎಫ್ ಗೆ ರೈತ ಶೇಂಗಾ ನೀಡಿದ ಕೆಲವೇ ದಿನಗಳಲ್ಲಿ ರೈತ ಖಾತೆಗೆ ಹಣ ಜಮಾವಾಗುತ್ತದೆ. ಖಾತೆ ಹೊಂದಿದ ರೈತರು ಮಾತ್ರ ಇದರ ಸದುಪಯೋಗ ಪಡೆದುಕೊಳ್ಳಬಹುದಾಗಿದೆ ಎಂದರು.

ಕೆಒಎಫ್ ಜಿಲ್ಲಾ ನಿರ್ದೇಶಕ ರಾಮಜೋಗಿಹಳ್ಳಿದೇವರಾಜರೆಡ್ಡಿ ಮಾತನಾಡಿ, ಕೇಂದ್ರ ಸರ್ಕಾರ ಮಹತ್ವದ ಯೋಜನೆಗಳಲ್ಲಿ ಇದು ಒಂದಾಗಿದೆ. ರೈತರು ಯಾವುದೇ ದಲ್ಲಾಲಿಗಳ ಕೈಗೆ ಸಿಗದೆ ತಮ್ಮ ಉತ್ಪಾದನೆಯನ್ನು ನೇರವಾಗಿ ಕೆಒಎಫ್ ಗೆ ನೀಡಿ ಹೆಚ್ಚಿನ ಆರ್ಥಿಕ ಲಾಭಪಡೆಯಲಿ ಎಂಬುವುದು ಇದರ ಉದ್ದೇಶವಾಗಿದೆ ಎಂದರು.

ಕೆಒಎಫ್ ಅಧಿಕಾರಿ ಗುರುರಾಜ್, ರೈತರಾದ ನಾಗೇಂದ್ರಪ್ಪ, ನವೀನ್ ಕುಮಾರ್ಜಂಪಣ್ಣ, ಅಣ್ಣಪ್ಪ, ಪ್ರಕಾಶ್, ಹೊನ್ನೂರಪ್ಪ, ಪರಮೇಶ್ವರಪ್ಪ, ರಾಜಣ್ಣ, ಶಾಂತಣ್ಣ, ಶರಣಪ್ಪ, ಕೆಂಚಣ್ಣ, ಓಬಳೇಶ್ ಮುಂತಾದವರು ಉಪಸ್ಥಿತರಿದ್ದರು.

               

       

- Advertisement -  - Advertisement - 
Share This Article
error: Content is protected !!
";