ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ :
ತಾಲ್ಲೂಕಿನ ಜೆ.ಎನ್.ಕೋಟೆ ಗ್ರಾಮದಲ್ಲಿ ಆಂಧ್ರಪ್ರದೇಶದ ಉದ್ಯಮಿಯೋರ್ವರು ನಲವತ್ತು ಎಕರೆ ವಿಸ್ತೀರ್ಣದಲ್ಲಿ ಕೋಳಿ ಫಾರಂ ಆರಂಭಿಸಲು ಹೊರಟಿರುವುದನ್ನು ವಿರೋಧಿಸಿ ಕರ್ನಾಟಕ ರಾಜ್ಯ ರೈತ ಸಂಘದಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಬುಧವಾರ ಪ್ರತಿಭಟನೆ ನಡೆಸಿ ಉಪ ವಿಭಾಗಾಧಿಕಾರಿಗೆ ಮನವಿ ಸಲ್ಲಿಸಲಾಯಿತು.
ಜೆ.ಎನ್.ಕೋಟೆ ಗ್ರಾಮದಲ್ಲಿ ಕೋಳಿ ಫಾರಂ ಆರಂಭಿಸುವುದರಿಂದ ಸುತ್ತಮುತ್ತಲಿನ ಕಸವನಹಳ್ಳಿ, ನರೇನಹಾಳ್, ದೊಡ್ಡಸಿದ್ದವ್ವನಹಳ್ಳಿ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಲಿದೆ. ಕೋಳಿ ಫಾರಂನಲ್ಲಿ ಸಾವಿರಾರು ನೊಣಗಳು ಮುತ್ತುತ್ತವೆ. ನಂತರ ಅವುಗಳು ಗ್ರಾಮಸ್ಥರು ಸೇವಿಸುವ ಆಹಾರಗಳ ಮೇಲೆ ಕುಳಿತುಕೊಳ್ಳುವುದರಿಂದ ನಾನಾ ರೀತಿಯ ರೋಗಗಳಿಗೆ ತುತ್ತಾಗಬೇಕಾಗುತ್ತದೆ ಎಂದು ಪ್ರತಿಭಟನಾನಿರತ ರೈತರು ಆಕ್ರೋಶ ವ್ಯಕ್ತಪಡಿಸಿದರು.
ರೈತ ಸಂಘದ ಹಿರಿಯ ಮುಖಂಡ ಕೆ.ಪಿ.ಭೂತಯ್ಯ ಮಾತನಾಡಿ ಗ್ರಾಮ ಪಂಚಾಯಿತಿ ಅನುಮೋದನೆ ಪಡೆದುಕೊಳ್ಳದೆ ಕೋಳಿ ಫಾರಂ ನಿರ್ಮಿಸಲು ಕಾಮಗಾರಿ ಆರಂಭಿಸಲಾಗಿದೆ. ಇದರಿಂದ ಸುತ್ತಮುತ್ತಲಿನ ನಿವಾಸಿಗಳು ಆತಂಕಕ್ಕೆ ಒಳಗಾಗಿದ್ದಾರೆ. ಯಾವುದೇ ಕಾರಣಕ್ಕೂ ಇಲ್ಲಿ ಕೋಳಿ ಫಾರಂ ಆರಂಭಿಸಲು ಆಂದ್ರದ ಉದ್ಯಮಿಗೆ ಅವಕಾಶ ನೀಡಬಾರದು. ಇದರಿಂದ ಪರಿಸರ ಹಾನಿಯಾಗುವುದಲ್ಲದೆ ರೈತರ ಬದುಕಿನ ಮೇಲೆ ಕಟ್ಟ ಪರಿಣಾಮ ಬೀರುತ್ತದೆ. ಕೂಡಲೆ ಕಾಮಗಾರಿಯನ್ನು ನಿಲ್ಲಿಸಬೇಕೆಂದು ಒತ್ತಾಯಿಸಿದರು.
ರೈತ ಮುಖಂಡ ಬಸ್ತಿಹಳ್ಳಿ ಜಿ.ಸುರೇಶ್‌ಬಾಬು ಮಾತನಾಡಿ ಕೋಳಿ ಫಾರಂಗೆ ನಾವುಗಳ್ಯಾರು ವಿರೋಧಿಗಳಲ್ಲ. ಆದರೆ ಕೋಳಿ ಫಾರಂನಿಂದ ಹೊರ ಬರುವ ತ್ಯಾಜ್ಯ ಮಳೆಗಾಲದಲ್ಲಿ ಹರಿದು ಕೆರೆಗೆ ಸೇರುವುದರಿಂದ ನೀರು ಕಲುಷಿತಗೊಳ್ಳುತ್ತದೆ. ನೊಣಗಳ ಕಾಟ ಜಾಸ್ತಿಯಾಗುವುದರಿಂದ ಸುತ್ತಮುತ್ತಲಿನ ನಾಲ್ಕೈದು ಗ್ರಾಮದವರು ಸಾಂಕ್ರಾಮಿಕ ರೋಗಗಳಿಗೆ ತುತ್ತಾಗಬೇಕಾಗುತ್ತದೆ. ಹಾಗಾಗಿ ಜೆ.ಎನ್.ಕೋಟೆಯಲ್ಲಿ ಕೋಳಿ ಫಾರಂ ಆರಂಭಕ್ಕೆ ಅನುಮತಿ ಕೊಡಬಾರದೆಂದು ಉಪ ವಿಭಾಗಾಧಿಕಾರಿಯವರಲ್ಲಿ ವಿನಂತಿಸಿದರು.
ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಧನಂಜಯ ಹಂಪಯ್ಯನಮಾಳಿಗೆ, ರೈತ ಮುಖಂಡರುಗಳಾದ ಚಿಕ್ಕಪ್ಪನಹಳ್ಳಿ ರುದ್ರಸ್ವಾಮಿ, ಕಾಂತರೆಡ್ಡಿ, ಈಶ್ವರಪ್ಪ, ಜಗನ್ನಾಥ
ಡಿ.ಪಿ.ಶಿವರುದ್ರಪ್ಪ, ಕೇಶವಪ್ಪ, ಕೆ.ಎಂ.ಕಾಂತರಾಜು, ಪಿ.ಆರ್.ಮಾರುತಿ, ಎನ್.ಚಂದ್ರಶೇಖರ್, ಡಿ.ಎಸ್.ಹಳ್ಳಿ ಮಲ್ಲಿಕಾರ್ಜುನ ಇನ್ನು ಅನೇಕರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.