ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ :
ರೈತರ ಸಭೆ ಕರೆದು ಕೂಡಲೆ ಬೆಳೆ ವಿಮೆ, ಬೆಳೆ ಪರಿಹಾರ ಬಿಡುಗಡೆಗೊಳಿಸುವಂತೆ ಕರ್ನಾಟಕ ರಾಜ್ಯ ರೈತ ಸಂಘದಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಿ ಅಪರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.
ಪ್ರವಾಸಿ ಮಂದಿರದಿಂದ ಮೆರವಣಿಗೆ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದ ರೈತರು ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ತುರ್ತಾಗಿ ಸಭೆ ಕರೆದು ಸಂಕಷ್ಟದಲ್ಲಿರುವ ರೈತರಿಗೆ ಬೆಳೆವಿಮೆ, ಬೆಳೆ ಪರಿಹಾರ ಕೊಡಬೇಕು. ಕೃಷಿ ಇಲಾಖೆ ಜಂಟಿ ನಿರ್ದೇಶಕರು ಈ ಹಿಂದೆ ಎರಡು ಬಾರಿ ರೈತರ ಸಭೆಗೆ ದಿನಾಂಕ ನಿಗಧಿಪಡಿಸಿ ರದ್ದುಪಡಿಸಿದ್ದಾರೆ.
ಸಾಲದ ಸುಳಿಗೆ ಸಿಲುಕಿರುವ ರೈತರು ಅನೇಕ ಜ್ವಲಂತ ಸಮಸ್ಯೆಗಳನ್ನು ಎದುರಿಸುತ್ತಿದ್ದು, ಸಾಲಗಾರರ ಕಾಟಕ್ಕೆ ಆತ್ಮಹತ್ಯೆಯ ದಾರಿ ಹಿಡಿದಿದ್ದಾರೆ. ಅದಕ್ಕಾಗಿ ಮೇ.೩೧ ರೊಳಗಾಗಿ ಸಂಬಂಧಪಟ್ಟ ಇಲಾಖೆಯವರ ಸಭೆ ಕರೆದು ಪರಿಹಾರ ಬಿಡುಗಡೆಗೊಳಿಸಬೇಕೆಂದು ಪ್ರತಿಭಟನಾನಿರತ ರೈತರು ಒತ್ತಾಯಿಸಿದರು.
೨೦೨೪ ರಲ್ಲಿ ಈರುಳ್ಳಿ ಬೆಳೆ ನಷ್ಟವಾಗಿದ್ದು, ರೈತರು ಕೈಸುಟ್ಟುಕೊಂಡಿದ್ದಾರೆ. ಕೃಷಿ ಇಲಾಖೆಯಿಂದ ತೊಗರಿ ಬೀಜ ಖರೀಧಿ ಮಾಡಿ ಬಿತ್ತನೆ ಮಾಡಿದ್ದು, ಹೂವು ಕೂಡ ಬಿಟ್ಟಿಲ್ಲ. ಇಂತಹ ಸಂಕಷ್ಟದಲ್ಲಿದ್ದರೂ ರೈತರಿಗೆ ಪರಿಹಾರ ಸಿಕ್ಕಿಲ್ಲ. ಚಳ್ಳಕೆರೆ ತಾಲ್ಲೂಕಿಗೆ ಬೆಳೆ ವಿಮೆ ಸಂಪೂರ್ಣವಾಗಿ ಬಂದಿಲ್ಲ. ದೇವರಹಳ್ಳಿಯ ರೈತರ ಜಮೀನಿನಲ್ಲಿ
ಕೆ.ಪಿ.ಟಿ.ಸಿ.ಎಲ್. ದೊಡ್ಡ ದೊಡ್ಡ ವಿದ್ಯುತ್ ಕಂಬಗಳನ್ನು ಅಳವಡಿಸಿದೆ. ನಾಲ್ಕು ವರ್ಷಗಳಾದರೂ ಇನ್ನು ಪರಿಹಾರ ಕೈಗೆ ಸಿಕ್ಕಿಲ್ಲ. ಇಷ್ಟೆಲ್ಲಾ ಗಂಭೀರ ಸಮಸ್ಯೆಗಳಿರುವುದರಿಂದ ಯಾವುದೇ ಕಾರಣಕ್ಕು ತಡಮಾಡದೆ ರೈತರ ಸಭೆ ಕರೆದು ಸೂಕ್ತ ಪರಿಹಾರ ನೀಡಬೇಕು. ಇಲ್ಲವಾದಲ್ಲಿ ಜಿಲ್ಲಾ ಪಂಚಾಯಿತಿ ಕೆಡಿಪಿ. ಸಭೆಯಂದು ಜಿಲ್ಲಾ ಉಸ್ತುವಾರಿ ಸಚಿವರಿಗೆ ಘೇರಾವ್ ಹಾಕಲಾಗುವುದೆಂದು ಕರ್ನಾಟಕ ರಾಜ್ಯ ರೈತ ಸಂಘದ ಉಪಾಧ್ಯಕ್ಷ ಕೆ.ಪಿ.ಭೂತಯ್ಯ ಎಚ್ಚರಿಸಿದರು.
ಒ.ಟಿ.ತಿಪ್ಪೇಸ್ವಾಮಿ, ಕೆ.ಸಿ.ಹೊರಕೇರಪ್ಪ, ಜಿಲ್ಲಾಧ್ಯಕ್ಷ ಧನಂಜಯ, ಚಿಕ್ಕಪ್ಪನಹಳ್ಳಿ ರುದ್ರಸ್ವಾಮಿ, ಎಸ್.ಮಂಜುನಾಥ್, ಜಿ.ಬಿ.ಪಾಪಣ್ಣ, ಬಸ್ತಿಹಳ್ಳಿ ಜಿ.ಸುರೇಶ್‌ಬಾಬು,
ಎಸ್.ಸಿದ್ದಪ್ಪ, ಆರ್.ಚೇತನ, ಬಿ.ತಿಪ್ಪೇಸ್ವಾಮಿ, ವಿ.ಕಲ್ಪನಾ, ಸುಧಾ ಡಿ.ಎಸ್.ಹಳ್ಳಿ, ಲಕ್ಷ್ಮಕ್ಕ ಆರ್, ಟಿ.ಮುನಿಸ್ವಾಮಿ ಇನ್ನು ಮುಂತಾದವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.