ಚಂದ್ರವಳ್ಳಿ ನ್ಯೂಸ್, ಚಳ್ಳಕೆರೆ :
ಪ್ರತಿನಿತ್ಯ ಗ್ರಾಮೀಣ ಭಾಗಗಳಲ್ಲಿ ಸಮಯದ ಮಿತಿ ಇಲ್ಲದೆ ನಿರಂತರವಾಗಿ ವಿದ್ಯುತ್ ಕೈಕೊಡುತ್ತಿದ್ದು, ನೀರಾವರಿ ಪ್ರದೇಶದ ಜಮೀನಿನ ಬೆಳೆಯನ್ನು ಉಳಿಸಿಕೊಳ್ಳಲು ಕಷ್ಟವಾಗಿದೆ. ಅದೇ ರೀತಿ ಪರೀಕ್ಷಾ ಸಮಯದಲ್ಲಿ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಅಡಚಣೆ ಉಂಟಾಗುತ್ತಿದ್ದು, ಇದನ್ನು ವಿರೋಧಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ(ಪ್ರೊ.ಬಣ) ರಾಜ್ಯ ಉಪಾಧ್ಯಕ್ಷ ರೆಡ್ಡಿಹಳ್ಳಿವೀರಣ್ಣ, ರಾಜ್ಯ ಸಂಚಾಲಕ ಬೇಡರೆಡ್ಡಿಹಳ್ಳಿಬಸವರೆಡ್ಡಿ ನೇತೃತ್ವದಲ್ಲಿ ಸೋಮವಾರ ತಳಕು ಬೆಸ್ಕಾಂ ಕಚೇರಿ ಮುಂದೆ ಬೃಹತ್ ಪ್ರತಿಭಟನೆ ನಡೆಸಲಾಯಿತು.
ರಾಜ್ಯ ಉಪಾಧ್ಯಕ್ಷ ರೆಡ್ಡಿಹಳ್ಳಿವೀರಣ್ಣ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಹಗಲು, ರಾತ್ರಿಯಲ್ಲಿ ವಿದ್ಯುತ್ ಪೂರ್ಣಪ್ರಮಾಣದಲ್ಲಿ ಲಭ್ಯವಾಗುವುದೇ ಕಷ್ಟವಾಗಿದೆ. ಎಲ್ಲೆಡೆ ಮಳೆಯಾಗಿ ಡ್ಯಾಂಗಳು ತುಂಬಿದ್ದರೂ ಬೆಸ್ಕಾಂ ಇಲಾಖೆ ಮಾತ್ರ ಸಮರ್ಪಕವಾಗಿ ವಿದ್ಯುತ್ ನೀಡಲು ಮೀನಾಮೇಷ ಏಣಿಸುತ್ತಿದೆ. ರೈತರ ಬದುಕಿನ ಬಗ್ಗೆ ನೈಜ್ಯಕಾಳಜಿ ಬೆಸ್ಕಾಂ ಇಲಾಖೆಗೆ ಇಲ್ಲ. ಆದ್ದರಿಂದ ಕಚೇರಿ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲಾಗಿದೆ ಎಂದರು.
ರಾಜ್ಯ ಸಂಚಾಲಕ ಬೇಡರೆಡ್ಡಿಹಳ್ಳಿಬಸವರೆಡ್ಡಿ ಮಾತನಾಡಿ, ತಳಕು ಹೋಬಳಿ ವ್ಯಾಪ್ತಿಯಲ್ಲಿ ಇತ್ತೀಚೆಗೆ ವಿದ್ಯುತ್ ಸಂಪರ್ಕ ಪೂರ್ಣಪ್ರಮಾಣದಲ್ಲಿ ಸಿಗುತ್ತಿಲ್ಲ. ಪ್ರತಿನಿತ್ಯವೂ ರೈತರು ಹಾಗೂ ವಿದ್ಯಾರ್ಥಿಗಳು ಕರೆಂಟಾಗಿ ಕಾಯುವ ಸ್ಥಿತಿ ಉಂಟಾಗಿದೆ. ಯಾವುದೇ ಸಾರ್ವಜನಿಕ ಮಾಹಿತಿ ನೀಡದೆ ವಿದ್ಯುತ್ ಸ್ಥಗಿತಗೊಳಿಸಲಾಗುತ್ತಿದೆ. ಆದ್ದರಿಂದ ಇಂದು ತಳಕು ಬೆಸ್ಕಾಂ ಕಚೇರಿ ಮುತ್ತಿಗೆ, ಪ್ರತಿಭಟನೆ ನಡೆಸಲಾಗುತ್ತಿದೆ ಎಂದರು.
ಹಿರಿಯೂರು ಉಪವಿಭಾಗದ ಕಾರ್ಯಪಾಲಕ ಅಭಿಯಂತರ ರಾಮಚಂದ್ರ ಡಿ.ಸತಾರ್, ಬೆಸ್ಕಾಂ ಎಇಇ ಮಮತ, ಎಸ್‌ಒ ಸೂರಲಿಂಗಪ್ಪ, ರೈತರಾದ ಆರ್.ಬಿ.ನಿಜಲಿಂಗಪ್ಪ, ಮಂಜಣ್ಣ, ತಿಪ್ಪೇಸ್ವಾಮಿ, ಪ್ರಶಾಂತ್‌ರೆಡ್ಡಿ, ರಂಗಾರೆಡ್ಡಿ, ರಾಮರೆಡ್ಡಿ, ನರಸಿಂಹಪ್ಪ, ಅಶೋಕ್, ನಾಗೇಂದ್ರ, ಬಿ.ವಿ.ತಿಪ್ಪೇಸ್ವಾಮಿ, ಮಲ್ಲಿಕಾರ್ಜುನ್‌ರೆಡ್ಡಿ, ವೀರಣ್ಣ ಮುಂತಾದವರು ಉಪಸ್ಥಿತರಿದ್ದರು.