ಭದ್ರಾ ಸೇರಿ ವಿವಿಧ ಬೇಡಿಕೆ ಈಡೇರಿಸಲು ರೈತರ ಪ್ರತಿಭಟನೆ

News Desk

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ :
ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿಯನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಹಮತದಿಂದ ಶೀಘ್ರವೇ ಪೂರ್ಣಗೊಳಿಸಿ ಜಿಲ್ಲೆಗೆ ನೀರು ಹರಿಸುವುದು ಸೇರಿದಂತೆ ಹದಿನೈದು ಬೇಡಿಕೆಗಳನ್ನು ಈಡೇರಿಸುವಂತೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಎದುರು ಬುಧವಾರ ಪ್ರತಿಭಟನೆ ನಡೆಸಿ ಮುಖ್ಯಮಂತ್ರಿ ಹಾಗೂ ಪ್ರಧಾನ ಮಂತ್ರಿಗೆ ಜಿಲ್ಲಾಧಿಕಾರಿ ಮೂಲಕ ಮನವಿ ಸಲ್ಲಿಸಿದರು.

ಕೃಷಿ ಪಂಪ್‌ಸೆಟ್‌ಗಳಿಗೆ ಆಧಾರ್ ಸಂಖ್ಯೆ ಜೋಡಣೆಯನ್ನು ಕೈಬಿಡಬೇಕು. ಬೋರ್‌ವೆಲ್ ಕೊರೆಸಲು ಸರ್ಕಾರ ಬೆಲೆ ನಿಗಧಿಪಡಿಸಿ ಅಧಿಕಾರಿಗಳು, ಬೋರ್‌ವೆಲ್ ಮಾಲೀಕರು ಹಾಗೂ ರೈತರನ್ನೊಳಗೊಂಡ ಸಮಿತಿ ರಚಿಸಬೇಕು. ಬ್ಯಾಂಕ್‌ಗಳು ಒತ್ತಾಯಪೂರ್ವಕವಾಗಿ ಕೃಷಿ ಸಾಲ ವಸೂಲಿ ಮಾಡುವುದನ್ನು ನಿಲ್ಲಿಸಿ ಎನ್.ಓ.ಸಿ.ಗೆ ಶುಲ್ಕ ಸಂಗ್ರಹಿಸಬಾರದೆಂದು ಪ್ರತಿಭಟನಾನಿರತ ರೈತರು ಕೇಂದ್ರ ಮತ್ತು ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.

ರಾಜ್ಯ ಕಾರ್ಯಾಧ್ಯಕ್ಷ ಈಚಘಟ್ಟದ ಸಿದ್ದವೀರಪ್ಪ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡುತ್ತ ಸಾಲ ನೀಡುವಾಗ ರೈತರನ್ನು ಸಿಬಿಲ್‌ನಿಂದ ಹೊರತುಪಡಿಸಬೇಕು. ಮೈಕ್ರೋ ಫೈನಾನ್ಸ್ ಕಂಪನಿಗಳ ಹಣಕಾಸು ವ್ಯವಹಾರದ ಮೇಲೆ ಸರ್ಕಾರಗಳು ನಿಯಂತ್ರಣ ವಹಿಸಿ ರೈತರ ಜಮೀನುಗಳ ದಾರಿ ಸಮಸ್ಯೆಗಳನ್ನು ಕೂಡಲೆ ಬಗೆಹರಿಸಬೇಕು. ಪಹಣಿ ಮತ್ತು ಭೂದಾಖಲೆಗಳನ್ನು ಐದು ರೂ.ಗೆ ನೀಡಬೇಕು. ಇದನ್ನು ವ್ಯಾಪಾರವಾಗಿ ಪರಿಗಣಿಸದೆ ಸೇವೆಯಾಗಿ ಸಲ್ಲಿಸಬೇಕು. ಭೂದಾಖಲೆಗಳನ್ನು ಗಣಕೀಕೃತಗೊಳಿಸುವಾಗ ತಪ್ಪುಗಳಾದಲ್ಲಿ ಸಂಬಂಧಪಟ್ಟ ನೌಕರರನ್ನೆ ಹೊಣೆಗಾರರನ್ನಾಗಿಸಬೇಕು. ಬಗರ್‌ಹುಕಂ ಸಾಗುವಳಿದಾರರ ಅರ್ಜಿಗಳನ್ನು ಪರಿಶೀಲಿಸಿ ಸಾಗುವಳಿ ಚೀಟಿ ವಿತರಿಸಬೇಕು. ತೆಂಗಿಗೆ ಬಾಧಿಸುತ್ತಿರುವ ಕಪ್ಪುಹುಳು ಬಾಧೆಯನ್ನು ಹತೋಟಿಗೆ ತರಬೇಕು. ಕಾಲಮಿತಿಯಲ್ಲಿ ಬೆಳೆ ವಿಮೆ ನೀಡಿ ಬೆಳೆ ಪರಿಹಾರ ತಾರತಮ್ಯವನ್ನು ನಿವಾರಿಸಬೇಕೆಂದು ಸರ್ಕಾರವನ್ನು ಆಗ್ರಹಿಸಿದರು.

ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ಜಿಲ್ಲಾಧ್ಯಕ್ಷ ಡಿ.ಎಸ್.ಹಳ್ಳಿ ಮಲ್ಲಿಕಾರ್ಜುನ್, ಪ್ರಧಾನ ಕಾರ್ಯದರ್ಶಿ ಆರ್.ಬಿ.ನಿಜಲಿಂಗಪ್ಪ, ರೈತ ಮುಖಂಡರುಗಳಾದ ಮರ್‍ಲಹಳ್ಳಿ ರವಿಕುಮಾರ್, ಜಿ.ಇ.ರಾಜಪ್ಪ, ರಂಗಪ್ಪ, ಬಸಪ್ಪ, ಜಿ.ತಿಪ್ಪೇಸ್ವಾಮಿ, ಪರಸಪ್ಪ, ನಿರಂಜನಮೂರ್ತಿ, ನಾಗರಾಜಪ್ಪ, ನರಸಿಂಹಪ್ಪ, ತಿಮ್ಮಾರೆಡ್ಡಿ, ಎಸ್.ಜಿ.ನಿಜಲಿಂಗಪ್ಪ

ಓಂಕಾರಪ್ಪ, ಹರಳಯ್ಯ, ಮಂಜುನಾಥ, ಬಿ.ಎಸ್.ರಂಗಸ್ವಾಮಿ ಇನ್ನು ಮುಂತಾದವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

 

 

- Advertisement -  - Advertisement - 
Share This Article
error: Content is protected !!
";