ಮೆಕ್ಕೆಜೋಳ ಖರೀದಿ ಕೇಂದ್ರ ತೆರೆಯಲು ರೈತರ ಮನವಿ

News Desk

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ :
ಮೆಕ್ಕೆಜೋಳ ಖರೀದಿ ಕೇಂದ್ರ ಆರಂಭಿಸಿ ಕ್ವಿಂಟಾಲ್‌ಗೆ ೨೬೦೦ ರೂ.ಗಳಂತೆ ಖರೀಧಿಸಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘ ಜಿಲ್ಲಾಧಿಕಾರಿ ಕಚೇರಿ ಎದುರು ಗುರುವಾರ ಪ್ರತಿಭಟನೆ ನಡೆಸಿ ಉಪ ವಿಭಾಗಾಧಿಕಾರಿ ಮೂಲಕ ರಾಜ್ಯದ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿತು.

ಪ್ರವಾಸಿ ಮಂದಿರದಿಂದ ಮೆರವಣಿಗೆ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದ ರೈತರು ಮೆಕ್ಕೆಜೋಳ ಖರೀಧಿ ಕೇಂದ್ರವನ್ನು ಶೀಘ್ರವೇ ಆರಂಭಿಸಿ ರೈತರ ನೆರವಿಗೆ ಮುಂದಾಗುವಂತೆ ಒತ್ತಾಯಿಸಿದರು.

- Advertisement - 

ಕರ್ನಾಟಕ ರಾಜ್ಯ ರೈತ ಸಂಘದ ಹಿರಿಯ ಉಪಾಧ್ಯಕ್ಷ ಕೆ.ಪಿ.ಭೂತಯ್ಯ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡುತ್ತ ಕಳೆದ ಹದಿನೈದು ದಿನಗಳಿಂದಲೂ ಜಿಲ್ಲೆಯಲ್ಲಿ ಮಳೆ ಸುರಿಯುತ್ತಿರುವುದರಿಂದ ಮೆಕ್ಕೆಜೋಳ ಕಟಾವಿಗೆ ಹಿನ್ನೆಡೆಯಾಗಿದೆ. ಮಳೆ ನಿಂತ ಕೂಡಲೆ ಕಟಾವು ಆರಂಭಗೊಳ್ಳಲಿರುವುದರಿಂದ ರಾಜ್ಯ ಸರ್ಕಾರ ಮುಂಜಾಗ್ರತಾ ಕ್ರಮವಾಗಿ ಖರೀಧಿ ಕೇಂದ್ರ ತೆರೆಯಬೇಕು.

ಕೇಂದ್ರ ಸರ್ಕಾರ ೨೩೯೦ ರೂ.ಗಳನ್ನು ನಿಗಧಿಪಡಿಸಿದ್ದು, ರಾಜ್ಯ ಸರ್ಕಾರ ಕನಿಷ್ಟ ೨೧೦ ರೂ. ಪ್ರೋತ್ಸಾಹ ಧನ ನೀಡಿ ೨೬೦೦ ರೂ.ನಂತೆ ಮೆಕ್ಕೆಜೋಳವನ್ನು ಖರೀಧಿಸಬೇಕು. ಕಬ್ಬಿಗೆ ಪ್ರೋತ್ಸಾಹ ಧನ ನೀಡುವಲ್ಲಿ ಕಾಳಜಿ ತೋರುತ್ತಿರುವ ರಾಜ್ಯ ಸರ್ಕಾರ ಬಯಲುಸೀಮೆ ಚಿತ್ರದುರ್ಗ ಜಿಲ್ಲೆಯ ರೈತರು ಬೆಳೆಯುವ ಮೆಕ್ಕೆಜೋಳ ಖರೀಧಿಗೇಕೆ ಆಸಕ್ತಿ ವಹಿಸುತ್ತಿಲ್ಲ ಎಂದು ಪ್ರಶ್ನಿಸಿದರು?

- Advertisement - 

ಜಿಲ್ಲೆಯಲ್ಲಿ ಹೆಚ್ಚು ಮೆಕ್ಕೆಜೋಳ ಬಿತ್ತನೆಯಾಗಿದ್ದು, ಬೆಂಕಿ ರೋಗ, ಸೈನಿಕ ಹುಳು ಬಾಧೆ ನಡುವೆಯೆ ಉತ್ತಮ ಇಳುವರಿ ಬರುವ ಸಾಧ್ಯತೆಯಿದೆ. ಮೆಕ್ಕೆಜೋಳ ಖರೀಧಿ ಮಾಡಿದ ತಕ್ಷಣವೆ ರೈತರಿಗೆ ಹಣ ಪಾವತಿಸಬೇಕು. ಆವರ್ತ ನಿಧಿ ಹೆಚ್ಚಿಸಿ ಕನಿಷ್ಠ ಒಂದು ಸಾವಿರ ಕೋಟಿ ರೂ.ಗಳನ್ನು ಕಾಯ್ದಿರಿಸಿ ರೈತರಿಗೆ ಸಾಗಾಣಿಕೆ ವೆಚ್ಚ ಕಡಿಮೆಗೊಳಿಸಲು ಹೋಬಳಿಗೊಂದು ಖರೀಧಿ ಕೇಂದ್ರ ತೆರೆಯುವಂತೆ ಕೆ.ಪಿ.ಭೂತಯ್ಯ ಜಿಲ್ಲಾಡಳಿತವನ್ನು ಆಗ್ರಹಿಸಿದರು.

ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಹಂಪಯ್ಯನಮಾಳಿಗೆ ಧನಂಜಯ, ಉಪಾಧ್ಯಕ್ಷ ಚಿಕ್ಕಪ್ಪನಹಳ್ಳಿ ರುದ್ರಸ್ವಾಮಿ, ಟಿ.ಲಕ್ಷ್ಮಿನರಸಿಂಹಸ್ವಾಮಿ, ಎಂ.ಬಿ.ತಿಪ್ಪೇಸ್ವಾಮಿ, ಎಸ್.ಕೆ.ಕುಮಾರಸ್ವಾಮಿ, ಆರ್.ಮಾರುತಿ, ಬಸ್ತಿಹಳ್ಳಿ ಜಿ.ಸುರೇಶ್‌ಬಾಬು ಇನ್ನು ಅನೇಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Share This Article
error: Content is protected !!
";