ಹೆಚ್.ಸಿ.ಗಿರೀಶ್, ಹರಿಯಬ್ಬೆ.
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಕಳಪೆ ತೊಗರಿ ಬಿತ್ತನೆ ಬೀಜವನ್ನು ಕೃಷಿ ಇಲಾಖೆಯೇ ಮಾರಾಟ ಮಾಡಿದ್ದು, ಸರ್ಕಾರ ಮತ್ತು ಕೃಷಿ ಇಲಾಖೆ ನಂಬಿಕೊಂಡು ದೊಡ್ಡ ಸಿದ್ದವ್ವನಹಳ್ಳಿ ರೈತರು ಸೇರಿದಂತೆ ಚಿತ್ರದುರ್ಗ ಜಿಲ್ಲೆಯ ಸಾವಿರಾರು ರೈತರು ತೊಗರಿ ಬಿತ್ತನೆ ಮಾಡಿದ್ದು ತೊಗರಿ ಕಾಯಿ ಕಟ್ಟದಿರುವುದರಿಂದ ತೊಗರಿ ಫಸಲು ಸಂಪೂರ್ಣ ಕೈಕೊಟ್ಟಿದೆ. ಇದರಿಂದಾಗಿ ತೊಗರಿ ಬಿತ್ತನೆ ಮಾಡಿದ ರೈತರು ಅಪಾರ ನಷ್ಟ ಅನುಭವಿಸಿದ್ದಾರೆ.
ಚಿತ್ರದುರ್ಗ ತಾಲೂಕಿನ ದೊಡ್ಡಸಿದ್ದವ್ವನಹಳ್ಳಿಯ ರೈತರಾದ ಸಾಕಮ್ಮ ಅನಂತರೆಡ್ಡಿ ಹಾಗೂ ನವೀನ್ ಕುಮಾರ್ ಅವರು ತಮ್ಮ 10 ಎಕರೆ ಜಮೀನಿನಲ್ಲಿ ಸರ್ಕಾರದ ಅಧಿಕೃತ, ನಂಬಿಕೆಗೆ ಅರ್ಹವಾದ ಸಂಸ್ಥೆ ಎಂದು ತಿಳಿದು
ಕರ್ನಾಟಕ ರಾಜ್ಯ ಬೀಜ ನಿಗಮದಿಂದ ಕೃಷಿ ಇಲಾಖೆ ರೈತ ಸಂಪರ್ಕ ಕೇಂದ್ರದ ಮೂಲಕ ವಿತರಿಸಿದ ಬಿ.ಆರ್.ಜಿ 5 ತಳಿಯ ತೊಗರಿ ಬಿತ್ತನೆ ಬೀಜ ಖರೀದಿಸಿ ಬಿತ್ತನೆ ಮಾಡಿದ್ದು 7 ತಿಂಗಳು ಕಳೆದರೂ ಒಂದೇ ಒಂದು ಕಾಯಿ ಕಟ್ಟಿಲ್ಲ.
ಬಿತ್ತಿದ ತೊಗರಿ ಫಸಲು ನೋಡಲು ಬಲು ಅಬ್ಬರವಾಗಿದೆ.
ಆದರೆ ಗಿಡಗಳಲ್ಲಿ ಒಂದು ತೊಗರಿ ಕಾಯಿ ಇಲ್ಲ. ಇದು ಕೇವಲ ದೊಡ್ಡಸಿದ್ದವ್ವನಹಳ್ಳಿಯ ಇಬ್ಬರು ರೈತರ ಕಥೆಯಲ್ಲ, ಇದು ಸಾಕಷ್ಟು ರೈತರ ನೋವಿನ ಕಥೆಯಾಗಿದೆ. ತೊಗರಿ ಗಿಡದಲ್ಲಿ ಕಾಯಿ ಕಟ್ಟದಿರುವುದರಿಂದ ರೈತರು ಆತಂಕಕ್ಕಿಡಾಗಿದ್ದಾರೆ. ಹಾನಿಗೊಳಗಾದ ತೊಗರಿಗೆ ಸೂಕ್ತ ಪರಿಹಾರ ಒದಗಿಸಬೇಕು. ಕಳಪೆ ತೊಗರಿ ಬೀಜ ವಿತರಿಸಿದ ಕಂಪನಿಗಳ ವಿರುದ್ಧ ಕ್ರಮ ಜರುಗಿಸಬೇಕಾಗಿದೆ.
ಈ ಸಂಬಂಧ ಜಿಲ್ಲಾಧಿಕಾರಿ ಅವರಿಗೆ ಕಳೆದ ಡಿಸೆಂಬರ್-13, ಜಂಟಿ ಕೃಷಿ ನಿರ್ದೇಶಕರಿಗೆ ಡಿಸೆಂಬರ್-17 ರಂದು ಸಂತ್ರಸ್ತ ರೈತರು ಮನವಿ ಸಲ್ಲಿಸಿದ್ದರೂ ಏನು ಪ್ರಯೋಜನ ಆಗಿಲ್ಲ.
ಕೃಷಿ ಇಲಾಖೆ ಕಳಪೆ ಬಿತ್ತನೆ ಬೀಜ ವಿತರಿಸಿರುವುದು ಅಧಿಕಾರಿಗಳ ಬೇಜವಾಬ್ದಾರಿ ಎದ್ದು ಕಾಣುತ್ತಿದೆ. ಕಳಪೆ ಬೀಜ ವಿತರಿಸಿದ ಕಂಪನಿ ಹಾಗೂ ರೈತರಿಗೆ ಸುಳ್ಳು ಹೇಳಿ ಕಳಪೆ ಬೀಜ ಕೊಟ್ಟ ಕೃಷಿ ಇಲಾಖೆ ಅಧಿಕಾರಿಗಳ ಮೇಲೆ ಶಿಸ್ತು ಕ್ರಮ ಕೈಗೊಳ್ಳಬೇಕಾಗಿದೆ.
ಜಿಲ್ಲೆಯಾದ್ಯಂತ ತೊಗರಿ ಬೆಳೆ ಅಪಾರ ಪ್ರಮಾಣದಲ್ಲಿ ಹಾನಿಯಾಗಿದೆ. ಇಡೀ ಜಿಲ್ಲೆಯಲ್ಲಿ ಬಿ.ಆರ್.ಜಿ–5 ತೊಗರಿ ಬೀಜ ಬಿತ್ತನೆ ಮಾಡಿದ ಎಲ್ಲ ರೈತರ ಗೋಳು ಇದೆ ಆಗಿದೆ.
ಅಧಿಕಾರಿಗಳು ಸೂಚನೆ ನೀಡಿದ ಮಾಹಿತಿ ಪ್ರಕಾರವೇ ತೊಗರಿ ಬೀಜ ಬಿತ್ತನೆ ಮಾಡಲಾಗಿತ್ತು. ಕಂಪನಿಯವರು ನೀಡಿದ ಬೀಜದ ಬಗ್ಗೆ ಯಾವುದೇ ತೊಂದರೆ ಇಲ್ಲ ಹಾಗೂ ಇದು ಒಣ ಬೇಸಾಯದಲ್ಲಿ ಹೆಚ್ಚಿನ ಇಳುವರಿ ಬರುತ್ತದೆ ಎಂದು ಕೃಷಿ ಅಧಿಕಾರಿಗಳು ರೈತರನ್ನು ನಂಬಿಸಿ ದ್ರೋಹ ಮಾಡಿದ್ದಾರೆ.
ತೊಗರಿ ಗಿಡಗಳು 7-8 ಅಡಿ ಎತ್ತರಕ್ಕೆ ಬೆಳೆದಿವೆ. ಆದರೆ ಒಂದೇ ಒಂದು ಕಾಯಿ ಕಟ್ಟಿಲ್ಲ. ಈ ಸಂದರ್ಭದಲ್ಲಿ ಮತ್ತೆ ರೈತರು ಕೃಷಿ ಅಧಿಕಾರಿಗಳನ್ನು ಸಂಪರ್ಕ ಮಾಡಿದಾಗ ಅವರು ತೊಗರಿ ಬೆಳೆದ ತಾಕಿಗೆ ಭೇಟಿ ನೀಡಿ ಡ್ರೋನ್ ಮೂಲಕ ಸಿಂಪರಣೆ (ಔಷಧೋಪಚಾರ) ಮಾಡಿ ಎನ್ನುವ ಸಲಹೆ ನೀಡಿದ್ದು ಅದರಂತೆ ರೈತರು ಹತ್ತಾರು ಸಾವಿರ ಖರ್ಚು ಮಾಡಿ ಡ್ರೋನ್ ಮೂಲಕ ಔಷಧೋಪಚಾರ ಮಾಡಿ ಮತ್ತೊಷ್ಟು ಆರ್ಥಿಕ ನಷ್ಟ ಅನುಭವಿಸಿದ್ದಾರೆ.

ಡ್ರೋನ್ ಮೂಲಕ ಔಷಧಿ ಸಿಂಪರಣೆ ಮಾಡಿದ ಒಂದು ತಿಂಗಳ ನಂತರ ತೊಗರಿ ಗಿಡದಲ್ಲಿ ಕಾಯಿ ಕಟ್ಟದಿದ್ದಾಗ ಹಿರಿಯೂರು ಕೃಷಿ ವಿಜ್ಞಾನ ಕೇಂದ್ರದ ನಾಲ್ಕೈದು ಮಂದಿ ವಿಜ್ಞಾನಿಗಳ ತಂಡ ಸಮಸ್ಯಾತ್ಮಕ ತೊಗರಿ ತಾಕಿಗೆ ಭೇಟಿ ನೀಡಿ ಈ ತೊಗರಿ ಫಸಲು ಆಗುವುದಿಲ್ಲ ಎಂದು ರೈತರಿಗೆ ಮೌಖಿಕವಾಗಿ ತಿಳಿಸಿದ್ದಾರೆ. ಆದರೆ ಇಂದಿಗೂ ತೊಗರಿ ಗಿಡ ಕಾಯಿ ಕಟ್ಟದಿರುವುದಕ್ಕೆ ವಿಜ್ಞಾನಿಗಳು ನಿರ್ದಿಷ್ಟವಾಗಿ ಕಾರಣ ತಿಳಿಸಿಲ್ಲ.
ವಿಮಾ ಕಂತು ವಾಪತಿ:
ಇದರ ಮಧ್ಯ ತೊಗರಿ ಬೀಜ ಬಿತ್ತನೆ ಮಾಡುವ ಸಂದರ್ಭದಲ್ಲೇ ರೈತರು ವಿಮಾ ಕಂತು ಕಟ್ಟಿದ್ದಾರೆ. ವಿಮಾ ಕಂಪನಿಯವರು ಜಮೀನಿಗೆ ಆಗಮಿಸಿ ಪರಿಶೀಲನೆ ಮಾಡಿ ಹೋಗಿದ್ದಾರೆ. ಅವರಿಂದಲೂ ಏನು ಪ್ರಯೋಜನವಾಗಿಲ್ಲ.
ಬಿತ್ತನೆ ಬೀಜ ಕಳಪೆ ಆಗಿಲ್ಲದಿದ್ದರೆ ಹವಾಮಾನ ವೈಫರೀತ್ಯದಿಂದ ತೊಗರಿ ಕಾಯಿ ಕಟ್ಟಿಲ್ಲ ಎನ್ನುವುದಾದರೆ ಬೆಳೆ ವಿಮೆಯನ್ನಾದರೂ ರೈತರಿಗೆ ಕಂಪನಿ ನೀಡಬೇಕಿತ್ತು. ಬೆಳೆ ವಿಮಾ ಕಂಪನಿಯು ಇಂದಿಗೂ ಒಂದಾಣಿ ಬೆಳೆ ಹಾನಿ ಪರಿಹಾರ ನೀಡಿಲ್ಲ. ಇದಕ್ಕೆ ಜಿಲ್ಲಾಡಳಿತ ಸೂಕ್ತ ಕ್ರಮ ಜರುಗಿಸಬೇಕಾಗಿದೆ.
ಅಧಿಕಾರಿಗಳ ಷಡ್ಯಂತ್ರ:
ಕಳಪೆ ತೊಗರಿ ಬೀಜ ವಿಷಯ ಮರೆ ಮಾಚಲು ಅಧಿಕಾರಿಗಳು, ಡೀಲರ್‍ಗಳು ಮುಂದಾಗಿದ್ದಾರೆ. ಒಟ್ಟಾರೆ ತೊಗರಿ ಬೀಜವೇ ಮೊದಲು ಕಳಪೆ ಮಟ್ಟದ್ದಾಗಿದೆ. ಎತ್ತರದಲ್ಲಿ ತೊಗರಿ ಬೀಜ ಬೆಳೆದರೂ ಒಂದು ತೊಗರಿ ಕಾಯಿ ಆಗಿಲ್ಲ ಎಂದು ರೈತರಾದ ಸಾಕಮ್ಮ ಅನಂತರೆಡ್ಡಿ, ನವೀನ್ ಕುಮಾರ್ ಅನಂತರೆಡ್ಡಿ ಸೇರಿದಂತೆ ಮತ್ತಿತರ ರೈತರ ಅಳಲಾಗಿದೆ.
ರಾಜ್ಯ ಬೀಜ ನಿಗಮದವರು ತೊಗರಿ ಬೀಜದ ಗುಣಮಟ್ಟ ಮಾಡದೇ ತೊಗರಿ ಬಿತ್ತನೆ ಬೀಜವನ್ನು ರೈತರಿಗೆ ವಿತರಿಸಿದ್ದು ಏಕೆ, ಬೀಜ ನಿಗಮವು ತೊಗರಿ ಬಿತ್ತನೆ ಬೀಜವನ್ನು ಸರ್ಟಿಪೈ ಮಾಡಿದ್ದಾದರೂ ಹೇಗೆ? ಸರ್ಟಿಪೈ ಮಾಡಬೇಕಾದರೆ ಯಾವ ಆಧಾರದ ಮೇಲೆ ಸರ್ಟಿಪೈ ಮಾಡಿದ್ದಾರೆಂಬುದು ಇದರ ಗುಣಮಟ್ಟವನ್ನು ಲ್ಯಾಬ್ ನಲ್ಲಿ ಪರೀಕ್ಷೀಸಬೇಕು. ಇದು ಬೀಜ ನಿಗಮದವರು ಹಾಗೂ ಕೃಷಿ ಇಲಾಖೆಯವರ ಕೈವಾಡ ಇದೆ ಎಂಬುದು ಸ್ಪಷ್ಟ ಪಡಿಸುತ್ತದೆ.
ಮೊದಲೇ ಬರಗಾಲ, ಹವಾಮಾನ ವೈಫರೀತ್ಯದಿಂದ ರೈತರು ತತ್ತರಿಸಿದ್ದಾರೆ. ಇಂತಹದರಲ್ಲಿ ಬೀಜ ವಿತರಿಸಿದ ಕಂಪನಿಯವರು, ಕೃಷಿ ಇಲಾಖೆ ಅಧಿಕಾರಿಗಳು ಒಂದಾಗಿ ರೈತರಿಗೆ ಮೋಸವೆಸಗುತ್ತಿದ್ದಾರೆ. ಇದರಿಂದ ರೈತರು ತೀವ್ರ ಆರ್ಥಿಕ ತೊಂದರೆ ಅನುಭವಿಸುವಂತಾಗಿದೆ. ಆದ್ದರಿಂದ ಹಾನಿಗೊಳಗಾದ ತೊಗರಿಗೆ ಸೂಕ್ತ ಪರಿಹಾರ ನೀಡಬೇಕು ಹಾಗೂ ಕಳಪೆ ಬೀಜ ವಿತರಿಸಿದ ಕಂಪನಿಯನ್ನು ಕಪ್ಪು ಪಟ್ಟಿಗೆ ಸೇರಿಸಿ ಕಂಪನಿಯ ಪರವಾನಿಗೆ ರದ್ದು ಪಡಿಸಬೇಕೆಂದು ಸಂತ್ರಸ್ತ ರೈತರ ಆಗ್ರಹವಾಗಿದೆ.
ಲಕ್ಷಾಂತರ ನಷ್ಟ:
ಬಿತ್ತನೆ ಪೂರ್ವದಲ್ಲಿ ಜಮೀನು ಹಸನು ಮಾಡಲು ರೈತರು ಸಾಕಷ್ಟು ಖರ್ಚು ಮಾಡಿರುತ್ತಾರೆ. ಬಿತ್ತನೆ ನಂತರ ಬೀಜೋತ್ಪಾದನೆ, ಕಳೆ, ಎಡೆ ಹೊಡೆಯುವುದು, ಔಷಧಿ ಸಿಂಪರಣೆ, ಗೊಬ್ಬರ, ಬಿತ್ತನೆ ಬೀಜದ ಖರ್ಚು ಹೀಗೆ ಪ್ರತಿ ಎಕರೆಗೆ 25 ರಿಂದ 30 ಸಾವಿರ ರೂ.ಗಳನ್ನು ಸಾಲ ಸೋಲ ಮಾಡಿ ರೈತರು ಭೂಮಿಗೆ ಹಾಕಿದ್ದಾರೆ. ಇದರ ನಷ್ಟವನ್ನು ಸಂಬಂಧಿಸಿದ ಬೀಜ ನಿಗಮ, ಸರ್ಕಾರ, ಕೃಷಿ ಇಲಾಖೆ ಅಧಿಕಾರಿಗಳೇ ರೈತರಿಗೆ ನೀಡಬೇಕಾಗಿದೆ.

ಆದಾಯ ನಷ್ಟ:
ಬೇರೆ ರೈತರ ತಾಕುಗಳಲ್ಲಿ ತೊಗರಿ ಫಸಲು ಹೆಚ್ಚಿನ ಇಳುವರಿಯೊಂದಿಗೆ ಉತ್ಕೃಷ್ಟವಾಗಿ ಬಂದಿದೆ. ಪ್ರತಿ ಎಕರೆಗೆ ಐದಾರು ಕ್ವಿಂಟಲ್ ತೊಗರಿ ಇಳಿವರಿ ಬಂದಿದ್ದು ಮಾರುಕಟ್ಟೆಯಲ್ಲಿ 5500 ಸಾವಿರದಿಂದ 6500 ಸಾವಿರ ತನಕ ಖರೀದಿ ಆಗಿದೆ. ಸರಾಸರಿ ಪ್ರತಿ ಎಕರೆಗೆ 6 ಕ್ವಿಂಟಲ್ ತೊಗರಿ ಎಂದು ಕೊಂಡರೂ 36 ರಿಂದ 40 ಸಾವಿರ ರೂ. ಆದಾಯ ಬರುತ್ತಿತ್ತು. ಅಧಿಕಾರಿಗಳು ಮಾಡಿರುವ ತಪ್ಪಿನಿಂದಾಗಿ ಈಗ ಆದಾಯವೂ ಇಲ್ಲ, ಜಮೀನಿಗೆ ಖರ್ಚು ಮಾಡಿರುವ ವೆಚ್ಚವೂ ಇಲ್ಲವಾಗಿದ್ದು ರೈತರು ಸಾಲದ ಸುಳಿಗೆ ಸಿಲುಕಿ ಆತ್ಮಹತ್ಯೆಯ ದಾರಿ ಹಿಡಿದರೂ ಅಚ್ಚರಿ ಪಡಬೇಕಿಲ್ಲ.
“ತೊಗರಿ ಗಿಡ ಕಾಯಿ ಕಟ್ಟದಿರುವುದಕ್ಕೆ ಕಾರಣ ನಮ್ಮ ಹಂತದಲ್ಲಿ ತೀರ್ಮಾನಿಸಲು ಸಾಧ್ಯವಾಗಲಿಲ್ಲ. ಕೇವಲ ಇದು ಇಬ್ಬರು ರೈತರ ಸಮಸ್ಯೆ ಅಲ್ಲ, ಇತರ ರೈತರ ಜಮೀನಿನಲ್ಲೂ ಇದೇ ರೀತಿಯ ಸಮಸ್ಯೆ ಕಂಡು ಬಂದಿದೆ. ಹಾಗಾಗಿ ಕೃಷಿ ವಿಜ್ಞಾನಿಗಳು ಸಮಸ್ಯಾತ್ಮಕ ತಾಕಿಗೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದು ಇನ್ನೂ ಯಾವುದೇ ರೀತಿಯ ವರದಿಯನ್ನು ನೀಡಿಲ್ಲ. ವರದಿ ಬಂದ ತಕ್ಷಣ ಅಗತ್ಯ ಕ್ರಮ ಕೈಗೊಳ್ಳಲಾಗುತ್ತದೆ”. ಆಶಾರಾಣಿ, ಎಓ, ಕೃಷಿ ಇಲಾಖೆ.
“ತೊಗರಿ ಗಿಡ ಹೂ ಬಿಟ್ಟು ಕಾಯಿ ಕಟ್ಟುವ ಹಂತದಲ್ಲಿ ಮಳೆ ಜಾಸ್ತಿ ಆಗಿ ಭೂಮಿಯಲ್ಲಿ ತೇವಾಂಶ ಹೆಚ್ಚಾಗಿದ್ದು ಒಂದು ಕಾರಣವಾಗಿದೆ. ಪ್ರಸಕ್ತ ಸಾಲಿನಲ್ಲಿ ಎರಡು ಸಲ ಸೈಕ್ಲೋನ್ ಎಫೆಕ್ಟ್ ಆಗಿ ತಿಂಗಳು ಗಟ್ಟಲೆ ಮೋಡ ಮುಚ್ಚಿದ್ದರಿಂದಾಗಿ ತೊಗರಿ ಗಿಡಗಳಿಗೆ ಬಿಸಿಲು ಬಿದ್ದಿಲ್ಲ. ಹೂ ಬಿಟ್ಟು, ಕಾಯಿ ಕಟ್ಟುವ ಸಂದರ್ಭದಲ್ಲಿ ಹೆಚ್ಚಿನ ಬಿಸಿಲಿನ ಅಗತ್ಯ ಇರುತ್ತದೆ. ಕಾಯಿ ಕಟ್ಟದಿರುವುದಕ್ಕೆ ಕಳಪೆ ಬೀಜದ ಸಮಸ್ಯೆ ಆಗಿಲ್ಲ. ಕಳಪೆ ಬೀಜವಾಗಿದ್ದರೆ ತೊಗರಿ ಬೀಜ ಮೊಳಕೆ ಹೊಡೆದು ಹುಟ್ಟಿ, 7-8 ಅಡಿ ಎತ್ತರಕ್ಕೆ ಬೆಳೆಯುತ್ತಿರಲಿಲ್ಲ”.
ಪ್ರವೀಣ್, ತಾಂತ್ರಿಕ ಸಹಾಯಕರು, ಕೃಷಿ ಇಲಾಖೆ, ಚಿತ್ರದುರ್ಗ.

