ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಜಾನುವಾರು ಹತ್ಯೆ ಪ್ರತಿಬಂಧಕ ಹಾಗೂ ಸಂರಕ್ಷಣಾ ಕಾಯಿದೆ-೨೦೨೦ ನ್ನು ಬೆಳಗಾವಿಯ ಚಳಿಗಾಲದ ಅಧಿವೇಶನದಲ್ಲಿ ಕಾಂಗ್ರೆಸ್ ಸರ್ಕಾರ ಸಡಿಲಗೊಳಿಸುವ ಸೂಚನೆಗಳು ಕಂಡು ಬರುತ್ತಿರುವುದರಿಂದ ಸೋಮವಾರ ರಾಜ್ಯಾದ್ಯಂತ ಬೃಹತ್ ಪ್ರತಿಭಟನೆ ನಡೆಸಲಾಗುವುದೆಂದು ಬಜರಂಗದಳ ಕರ್ನಾಟಕ ಪ್ರಾಂತ ಸಂಯೋಜಕ ಪ್ರಭಂಜನ್ ತಿಳಿಸಿದರು.
ಪತ್ರಕರ್ತರ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ರಾಜ್ಯ ಸರ್ಕಾರ ಮುಸಲ್ಮಾನರಿಗೆ, ಕಳ್ಳಕಾಕರಿಗೆ, ದರೋಡೆಕೋರರಿಗೆ ಪ್ರಿಯವಾಗಿರುವುದರಿಂದ ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಹಾಗೂ ಸಂರಕ್ಷಣಾ ಕಾಯಿದೆ-೨೦೨೦ ನ್ನು ಬದಲಾಯಿಸಿ ಕಾನೂನು ದುರ್ಬಲಗೊಳಿಸುವ ಹುನ್ನಾರ ನಡೆಸುತ್ತಿದೆ. ಸಿದ್ದರಾಮಯ್ಯನವರು ರಾಜ್ಯದ ಮುಖ್ಯಮಂತ್ರಿಯಾದಾಗಿನಿಂದಲೂ ಹಿಂದೂಗಳಿಗೆ ಒಂದಲ್ಲ ಒಂದು ರೀತಿಯ ಕಿರುಕುಳ ನೀಡುತ್ತಾ ಬರುತ್ತಿದ್ದಾರೆ.
ಹಿಂದೂಗಳು ದೇವರೆಂದು ಪೂಜಿಸುವ ಗೋವುಗಳನ್ನು ಹಿಂಸಾತ್ಮಕವಾಗಿ ಸಾಗಾಟ ಮಾಡುವ ವಾಹನಗಳನ್ನು ಪೊಲೀಸರು ವಶಪಡಿಸಿಕೊಂಡಾಗ ಐದು ಲಕ್ಷ ರೂ.ಗಳ ಬಾಂಡ್ ಕೊಟ್ಟರೆ ವಾಹನವನ್ನು ಬಿಡಲು ಸುಲಭವಾಗುವಂತೆ ಜಾನುವಾರು ಹತ್ಯೆ ಪ್ರತಿಬಂಧಕ ಹಾಗೂ ಸಂರಕ್ಷಣಾ ಕಾಯಿದೆ ಸಡಿಲಗೊಳಿಸಿ ತಿದ್ದುಪಡಿ ತರಲು ಕ್ಯಾಬಿನೆಟ್ ಸಭೆಯಲ್ಲಿ ಬಿಲ್ ಪಾಸ್ ಮಾಡಿರುವುದಾಗಿ ಗೊತ್ತಾಗಿದೆ. ಇದರಿಂದ ಪಶುಗಳ ಹತ್ಯೆ ಜಾಸ್ತಿಯಾಗುತ್ತದೆ. ತಿದ್ದುಪಡಿಯನ್ನು ತಕ್ಷಣವೆ ಹಿಂದಕ್ಕೆ ಪಡೆಯುವಂತೆ ರಾಜ್ಯ ಸರ್ಕಾರದ ವಿರುದ್ದ ಪ್ರತಿಭಟನೆ ನಡೆಯಲಿದೆ ಎಂದು ಪ್ರಬಂಜನ್ ಹೇಳಿದರು.
ಆನೆಬಾಗಿಲಿನಿಂದ ಜಿಲ್ಲಾಧಿಕಾರಿಗೆ ಕಚೇರಿಗೆ ತೆರಳುವ ಪ್ರತಿಭಟನೆಯಲ್ಲಿ ಸಾಧು ಸಂತರು, ಗೋ ಪ್ರೇಮಿಗಳು ಹಿಂದೂಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಪ್ರಬಂಜನ್ ಮನವಿ ಮಾಡಿದರು. ವಿಶ್ವಹಿಂದೂ ಪರಿಷತ್ ಜಿಲ್ಲಾ ಕಾರ್ಯದರ್ಶಿ ಕೇಶವ ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.

