ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ರಾಷ್ಟ್ರೀಯ ಅಂದೋನಾ ಸಮಿತಿ ಅಡಿಯಲ್ಲಿ ಕನಿಷ್ಠ ಪಿಂಚಣಿಗಾಗಿ ಆಗ್ರಹಿಸಿ ಚಿತ್ರದುರ್ಗ KSRTC ನಿವೃತ್ತ ಪಿಂಚಣಿದಾರರ ಸಂಘವು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ಒತ್ತಾಯಿಸಿತು.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ಅತ್ಯಂತ ಕಡಿಮೆ ವೇತನಕ್ಕೆ ಕೆಲಸ ಮಾಡುತ್ತಿದ್ದೇವೆ. ನಿವೃತ್ತಿ ನಂತರ ಕೇವಲ 4 ಸಾವಿರ ರೂ.ಗಳನ್ನು ನೀಡಲಾಗುತ್ತಿದೆ. ವಯೋ ಸಹಜ ಕಾಯಿಲೆಗಳು ಹೆಚ್ಚಾಗಿ ಭಾದಿಸುತ್ತಿರುತ್ತವೆ.
ಈ ಮೊತ್ತದಲ್ಲಿ ಪಿಂಚಣಿದಾರರು ಜೀವನ ನಡೆಸುವುದು ಕಷ್ಟಸಾಧ್ಯ. ನ್ಯಾಯಯುತ ಪಿಂಚಿಣಿ ಹಕ್ಕಿಗಾಗಿ ಹೋರಾಟ ಪ್ರಾರಂಭಿಸಿ ದಶಕಗಳೇ ಕಳೆದಿದೆ. ಇದೂವರೆಗೂ ಯಾವುದೇ ಬೇಡಿಕೆಗಳು ಈಡೇರಿಲ್ಲ. ಇದು ಅತ್ಯಂತ ಶೋಚನೀಯ ಸಂಗತಿ. ನಮ್ಮ ಬೇಡಿಕೆಗಳಾದ ಕನಿಷ್ಠ ಪಿಂಚಣಿ 7,500 ರೂ.ಗಳಿಗೆ ಹೆಚ್ಚಳ ಮಾಡಬೇಕು. ಜೊತೆಗೆ ಡಿ.ಎ ನೀಡಬೇಕು,
ವೈದ್ಯಕೀಯ ಸೌಲಭ್ಯ, ವಿಧವೆಯರಿಗೆ ಪೂರ್ಣ ವೇತನ, ಪಿಂಚಣಿ ವಂಚಿತರಿಗೆ ಕನಿಷ್ಠ ಪಿಂಚಣೆ 5,000 ರೂ.ಗಳನ್ನು ಈಡೇರಿಸುವಂತೆ ಸಾಕಷ್ಟು ಸಲ ಬೇಡಿಕೆ ಇಟ್ಟಿದ್ದರೂ ಏನು ಪ್ರಯೋಜನವಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ದೇಶಾದ್ಯಂತ 1700 ಕಂಪನಿಗಳು ಅಂದರೆ ಸರ್ಕಾರಿ ಹಾಗೂ ಖಾಸಗಿ ಸ್ವಾಮ್ಯದ ಕಾರ್ಖಾನೆಗಳು ಇದ್ದು, ಲಕ್ಷಾಂತರ ನಿವೃತ್ತ ನೌಕರರು ತಮ್ಮ ಬದುಕಿಗಾಗಿ ಹೋರಾಟದ ಪ್ರಯತ್ನ ನಡೆಸಿದರೂ ಸಹ ಯಶಸ್ಸು ಮಾತ್ರ ಮರೀಚಿಕೆಯಾಗಿದೆ. ದುರಾದೃಷ್ಟವೋ ಏನೋ ಅಮಾಯಕ ಜೀವಗಳು ಇಳಿವಯಸ್ಸಿನಲ್ಲಿ ನೆಲೆ ಕಾಣದೆ ಕಮರಿ ಹೋಗುತ್ತಿದ್ದಾರೆ ಎಂದು ನೋವು ತೋಡಿಕೊಂಡರು.
ಕೇಂದ್ರ ಸರ್ಕಾರ ಮತ್ತು ಪಿಂಚಣಿ ಇಲಾಖೆಗೆ ಅನೇಕ ಬಾರಿ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ, ಮನವಿ ಕೊಡುವುದರ ಮುಖಾಂತರ ಪ್ರತಿಭಟನೆಗಳು, ಸರದಿ ಉಪವಾಸ ಸತ್ಯಾಗ್ರಹಗಳನ್ನು ಸಹ ಮಾಡಿರುತ್ತೇವೆ. ಕೇಂದ್ರ ಸರ್ಕಾರ ಮತ್ತು ಪಿಂಚಣಿ ಇಲಾಖೆ ನಮ್ಮ ಬೇಡಿಕೆಗಳನ್ನು ಈಡೇರಿಸುವುದಾಗಿ ಹೇಳಿ ಮುಷ್ಕರ ಕೈಬಿಡುವಂತೆ ತಿಳಿಸಿಯೂ ಇದುವರೆಗೂ ಯಾವುದೇ ಬೇಡಿಕೆ ಈಡೇರಿಸಿರುವುದಿಲ್ಲ ಎಂದು ನೋವು ತೋಡಿಕೊಂಡರು.
ಗೌರವಾನ್ವಿತ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ, ಕೇಂದ್ರ ಕಾರ್ಮಿಕ ಮಂತ್ರಿಗಳಾದ ಮಂಸೂಖ್ ಮಾಂಡೋವಿಯವರಿಗೆ ಹಾಗೂ ಭವಿಷ್ಯದಿ ಮುಖ್ಯ ಆಯುಕ್ತರು ಬೆಂಗಳೂರು ಇವರಿಗೆ ಜಿಲ್ಲಾಧಿಕಾರಿಗಳ ಮೂಲಕ ಮನವಿಗಳನ್ನು ಕೊಡಲಾಗಿದೆ ಎಂದು ಅವರು ತಿಳಿಸಿದರು.
ಆದಷ್ಟು ಬೇಗ ಕೇಂದ್ರ ಸರ್ಕಾರ ಮತ್ತು ಪಿಂಚಣಿ ಇಲಾಖೆ ಸಮಸ್ಯೆಗಳನ್ನು ಬಗೆಹರಿಸಿ, ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹ ಮಾಡಿದ್ದಾರೆ.
ಚಿತ್ರದುರ್ಗ KSRTC ನಿವೃತ್ತ ಪಿಂಚಣಿದಾರರ ಸಂಘದ ಗೌರವ ಅಧ್ಯಕ್ಷ ಆರ್.ರಾಜಪ್ಪ, ಅಧ್ಯಕ್ಷ ಎ.ಕೆ.ಮಹಾದೇವಪ್ಪ, ಪದಾಧಿಕಾರಿಗಳಾದ ಆರ್.ಶ್ರೀನಿವಾಸ್ ರೆಡ್ಡಿ, ಎ.ಡಿ.ಗುರುಬಸಪ್ಪ, ಜಿ.ಬಿ.ಶರಣಪ್ಪ, ಟಿ.ಎಲ್.ಪ್ರಕಾಶ ರೆಡ್ಡಿ, ಎಸ್. ದೇವರಾಜ, ಸಂಘಟನಾ ಕಾರ್ಯದರ್ಶಿ ಗೊಳಾಲಪ್ಪ ಗೌಡ, ಬಿ.ಎಸ್.ವೆಂಕಟೇಶರೆಡ್ಡಿ, ರಹೀಂ ಸಾಬ್ ಸೇರಿದಂತೆ ಮತ್ತಿತರರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು. ಇದಕ್ಕೂ ಮೊದಲು ಸಭೆ ಮಾಡಿ ಹೋರಾಟದ ರೂಪರೇಷಗಳನ್ನು ತೀರ್ಮಾನಿಸಿದರು.