ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ :
ತಾಂತ್ರಿಕ ದೋಷವಿದೆಯೆಂಬ ಕಾರಣವಿಟ್ಟುಕೊಂಡು ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಮುಖ್ಯ ಕಾರ್ಯದರ್ಶಿ ಇವರುಗಳು ಗೊಂದಲ ಸೃಷ್ಟಿಸುತ್ತಿರುವುದರಿಂದ ಒಳ ಮೀಸಲಾತಿಗೆ ಒತ್ತಾಯಿಸಿ ಆ.೧ ರಂದು ರಾಜ್ಯದ ಪ್ರತಿ ಜಿಲ್ಲೆಗಳಲ್ಲಿ ಹೋರಾಟ ನಡೆಸುತ್ತೇವೆಂದು ಮಾಜಿ ಸಂಸದ ಎ.ನಾರಾಯಣಸ್ವಾಮಿ ಎಚ್ಚರಿಕೆ ನೀಡಿದರು.
ಪ್ರವಾಸಿ ಮಂದಿರದಲ್ಲಿ ಶನಿವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಆ.೧ ರಿಂದ ಹದಿನೈದರೊಳಗೆ ಒಳ ಮೀಸಲಾತಿ ಜಾರಿಯಾಗದಿದ್ದರೆ ರಾಜ್ಯ ಬಂದ್‌ಗೆ ಕರೆ ನೀಡಿ ಅಸಹಕಾರ ಚಳುವಳಿ ನಡೆಸಿ ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸಲು ತೀರ್ಮಾನಿಸಿದ್ದೇವೆ. ನಾಗಮೋಹನ್‌ದಾಸ್ ಆಯೋಗ ಸರ್ಕಾರಕ್ಕೆ ಇನ್ನು ವರದಿ ಕೊಟ್ಟಿಲ್ಲ. ಈಗಾಗಲೆ ಮಾದಿಗರು ದಣಿದಿದ್ದೇವೆ. ಶೋಷಿತರ ಮೇಲೆ ದಬ್ಬಾಳಿಕೆ ನಡೆಯುತ್ತಲೆ ಇದೆ. ಅನ್ಯಾಯವಾದರೆ ಸುಮ್ಮನಿರಲ್ಲ ಎಂದು ಹೇಳಿದರು.
ಪರಿಶಿಷ್ಟ ಜಾತಿಯಲ್ಲಿನ ೧೦೧ ಜಾತಿಗಳಿಗೆ ಒಳ ಮೀಸಲಾತಿಗಾಗಿ ಮೂರ ದಶಕಗಳಿಂದಲೂ ಹೋರಾಟ ನಡೆಯುತ್ತಿದೆ. ಆಂಧ್ರ, ತಮಿಳುನಾಡಿನಲ್ಲಿಯೂ ಹೋರಾಟ ನಡೆದಿತ್ತು. ರಾಷ್ಟ್ರೀಯ ಪಕ್ಷಗಳು ಪ್ರತಿ ಚುನಾವಣೆಯ ಪ್ರಣಾಳಿಕೆಯಲ್ಲಿ ನಾವು ಗೆದ್ದರೆ ಒಳ ಮೀಸಲಾತಿಯನ್ನು ಜಾರಿಗೆ ತರುತ್ತೇವೆಂದು ಹೇಳಿಕೊಂಡು ಮತ ಪಡೆಯುತ್ತಿವೆ. ಆದರೆ ಆರ್ಟಿಕಲ್ ೩೪೧ ತಿದ್ದುಪಡಿಯಾಗಬೇಕೆಂದು ಚುನಾವಣೆ ಪೂರ್ವದಲ್ಲಿ ಯಾವ ಪಕ್ಷಗಳು ಧ್ವನಿ ಎತ್ತಲಿಲ್ಲ. ೨೦೨೪ ರಲ್ಲಿ ಒಳ ಮೀಸಲಾತಿ ವಿರುದ್ದ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ತೀರ್ಪು ನೀಡಿದಾಗ ಪಂಜಾಬ್ ರಾಜ್ಯ ಹೊರತು ಪಡಿಸಿ ದೇಶದ ಬೇರೆ ಯಾವ ರಾಜ್ಯಗಳು ಸುಪ್ರೀಂಕೋರ್ಟ್‌ಗೆ ಹೋಗಲಿಲ್ಲವೆಂದು ಆಪಾದಿಸಿದರು.
ಸಿದ್ದರಾಮಯ್ಯನವರು ನಮ್ಮ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬಂದರೆ ಮೊದಲ ಕ್ಯಾಬಿನೆಟ್‌ನಲ್ಲೇ ತೀರ್ಮಾನಿಸಿ ಒಳ ಮೀಸಲಾತಿ ಜಾರಿಗೆ ತರುತ್ತೇವೆಂಬ ಭರವಸೆ ನೀಡಿದ್ದರು. ವಿಪರ್ಯಾಸವೆಂದರೆ ಮುಖ್ಯಮಂತ್ರಿಯಾಗಿ ಎರಡು ವರ್ಷಗಳನ್ನು ಪೂರೈಸಿದ್ದರು. ದತ್ತಾಂಶದ ನೆಪ ಹೇಳಿಕೊಂಡು ಕಾಲ ಕಳೆಯುತ್ತಿದ್ದಾರೆ. ಒಳ ಮೀಸಲಾತಿ ಜಾರಿಗೊಳಿಸುವ ಅಧಿಕಾರ ಆಯಾ ರಾಜ್ಯ ಸರ್ಕಾರಗಳಿಗಿದೆ ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿ ಆ. ೧ ಕ್ಕೆ ಒಂದು ವರ್ಷವಾಗುತ್ತಿದೆ.
ಸಮಾಜ ಕಲ್ಯಾಣ ಸಚಿವ ಹೆಚ್.ಸಿ.ಮಹದೇವಪ್ಪ ಸುಪ್ರೀಂಕೋರ್ಟ್ ತೀರ್ಪಿನ ವಿರುದ್ದ ಮಾತನಾಡಿ ಮಾದಿಗರನ್ನು ದಿಕ್ಕುತಪ್ಪಿಸುವ ಕೆಲಸ ಮಾಡುತ್ತಿದ್ದಾರೆಂದರು.
ನಾಗಮೋಹನ್‌ದಾಸ್ ವರದಿ ತರಿಸಿಕೊಂಡು ಒಳ ಮೀಸಲಾತಿ ಜಾರಿಗೊಳಿಸುತ್ತೇವೆಂದು ರಾಜ್ಯ ಸರ್ಕಾರ ಕಣ್ಣೊರೆಸುವ ತಂತ್ರಗಾರಿಕೆ ನಡೆಸುತ್ತಿದೆ. ಸಾಮಾಜಿಕ, ಶೈಕ್ಷಣಿಕ ಆರ್ಥಿಕವಾಗಿ ಹಿಂದುಳಿದಿರುವ ಈ ಜನಾಂಗಗಳಿಗೆ ಯಾವ ರೀತಿ ಒಳ ಮೀಸಲಾತಿ ನೀಡಬೇಕೆನ್ನುವುದಕ್ಕಾಗಿ ದತ್ತಾಂಶ ಸಂಗ್ರಹಕ್ಕಾಗಿ ಆಯೋಗ ರಚಿಸಿದೆಯೇ ವಿನಃ ಇನ್ನು ವರದಿ ತರಿಸಿಕೊಳ್ಳಲು ಆಗುತ್ತಿಲ್ಲ. ಬೆಂಗಳೂರಿನ ಬಿಬಿಎಂಪಿ.ಯಲ್ಲಿ ಮನೆ ಮನೆಗೆ ಹೋಗಿ ಸಮೀಕ್ಷೆ ಕೂಡ ನಡೆಸಿಲ್ಲ.
ತೆಲಂಗಾಣ, ಆಂಧ್ರದಲ್ಲಿ ಯಾವುದೇ ದತ್ತಾಂಶ ಸಂಗ್ರಹಿಸದೆ ಕೇವಲ ೨೦ ದಿನಗಳಲ್ಲಿಯೇ ಒಳ ಮೀಸಲಾತಿಯನ್ನು ಜಾರಿಗೊಳಿಸಲಾಗಿದೆ. ಬೊಮ್ಮಾಯಿ ರಾಜ್ಯದ ಮುಖ್ಯಮಂತ್ರಿಯಾಗಿದ್ದಾಗ ಮಾಧುಸ್ವಾಮಿ ಆಯೋಗ ರಚಿಸಿ ಭೋವಿ, ಲಂಬಾಣಿಯನ್ನು ಒಳ ಮೀಸಲಾತಿಯಿಂದ ಕೈಬಿಡುವುದಿಲ್ಲವೆಂದು ಆಶ್ವಾಸನೆ ಕೊಟ್ಟು ಕೇಂದ್ರಕ್ಕೆ ಪತ್ರ ಬರೆದು ಶಿಫಾರಸ್ಸು ಮಾಡಿದ್ದರು. ಈಗಿನ ಮುಖ್ಯಮಂತ್ರಿ ಏಕೆ ಇನ್ನು ಮೀನಾಮೇಷ ಎಣಿಸುತ್ತಿದ್ದಾರೆಂಬುದೇ ಪ್ರಶ್ನೆಯಾಗಿ ಉಳಿದಿದೆ ಎಂದು ದೂರಿದರು.
ಬಿಜೆಪಿ ಎಸ್ಸಿ ಮೋರ್ಚಾ ಉಪಾಧ್ಯಕ್ಷ ಹೂಡಿ ಮಂಜು, ದೀಪಕ್ ದೊಡ್ಡಯ್ಯ, ಬಿಜೆಜಿ ಜಿಲ್ಲಾ ಕಾರ್ಯದರ್ಶಿ ಮೋಹನ್, ಸೂರನಹಳ್ಳಿ ಶ್ರೀನಿವಾಸ್, ಗೂಳಿಹಟ್ಟಿ ಕೃಷ್ಣಮೂರ್ತಿ, ಮಲ್ಲೇಶ್, ತಿಪ್ಪೇಸ್ವಾಮಿ ಇವರುಗಳು ಪತ್ರಿಕಾಗೋಷ್ಟಿಯಲ್ಲಿ ಹಾಜರಿದ್ದರು.