50 ಕೋಟಿ ಹಣಕ್ಕೆ ಬೇಡಿಕೆ, ಕೇಂದ್ರ ಸಚಿವ ಕುಮಾರಸ್ವಾಮಿ ವಿರುದ್ಧ ದೂರು ದಾಖಲು

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಉದ್ಯಮಿ ವಿಜಯ ಟಾಟಾ ಎನ್ನುವರು ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ ಕೇಂದ್ರ ಸಚಿವ ಎಚ್‌.ಡಿ ಕುಮಾರಸ್ವಾಮಿ 50 ಕೋಟಿ ರೂ. ಹಣಕ್ಕೆ ಡಿಮ್ಯಾಂಡ್ ಮಾಡಿ ಬೆದರಿಕೆ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ದೂರು ದಾಖಲು ಮಾಡಿದ್ದಾರೆ.

ರಿಯಲ್ ಎಸ್ಟೇಟ್ ಉದ್ಯಮಿಯಾದ ನಾನು 2018 ರಿಂದ ಜೆಡಿಎಸ್ ಪಕ್ಷದಲ್ಲಿ ಗುರುತಿಸಿಕೊಂಡಿದ್ದೇನೆ. ಎಚ್‌ಡಿ ದೇವೆಗೌಡರ ಪಕ್ಷದ ಸೋಷಿಯಲ್‌ಮೀಡಿಯಾ ಉಪಾಧ್ಯಕ್ಷನಾಗಿ ನನ್ನನ್ನು ನೇಮಿಸಿದರು. 2019ರ ಮಂಡ್ಯ ಲೋಕಸಭಾ ಚುನಾವಣೆ ವೇಳೆ ಕುಮಾರಸ್ವಾಮಿ ಪರ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಅಭಿಯಾನ ನಡೆಸಿದ್ದೇನೆ.

ಕಳೆದ ಕೆಲ ವರ್ಷಗಳಿಂದ ರಿಯಲ್ ಎಸ್ಟೇಟ್ ಉದ್ಯಮದ ಬಗ್ಗೆ ಗಮನಹರಿಸಿದ್ದೆ. ಪಕ್ಷದ ಕಾರ್ಯಗಳಲ್ಲಿ ಭಾಗವಹಿಸಲು ಸಾಧ್ಯವಾಗಿರಲಿಲ್ಲ. ಆಗಸ್ಟ್ 24, 2024 ರಂದು ರಮೇಶ್ ಗೌಡ ನನ್ನ ನಿವಾಸಕ್ಕೆ ಆಗಮಿಸಿದ್ದರು.

 ನನ್ನ ಮನೆಯಲ್ಲಿ ಜತೆಗೆ ಊಟ ಮಾಡುತ್ತಾ ಚೆನ್ನಪಟ್ಟಣ ಚುನಾವಣೆ ಬಗ್ಗೆ ವಿವರಿಸಿದರು. ನಿಖಿಲ್ ಕುಮಾರಸ್ವಾಮಿಯವರಿಗೆ ಚನ್ನಪಟ್ಟಣ ಚುನಾವಣೆಗೆ ಟಿಕೆಟ್ ನೀಡುವುದು ಅಂತಿಮವಾಗಿದೆ ಎಂದರು. ಇದೇ ವೇಳೆ ಕುಮಾರಸ್ವಾಮಿ ಫೋನ್ ಮಾಡಿದ್ದರು.

ನಿಖಿಲ್ ಚನ್ನಪಟ್ಟಣ ಚುನಾವಣೆಗೆ ನಿಲ್ಲುತ್ತಿದ್ದಾರೆ, ಚುನಾವಣೆಗೆ 50 ಕೋಟಿ ರೂ. ಕೊಡಿ ಅಂದರು. ಈ ವೇಳೆ ನಾನು ಆಗಲ್ಲ ಸರ್ ಅಂತೇಳ್ದೆ, ಅದಕ್ಕೆ ಕುಮಾರಸ್ವಾಮಿ ಕೋಪ ಮಾಡಿಕೊಂಡರು. ನೀವು ಬೆಂಗಳೂರಲ್ಲಿ ರಿಯಲ್ ಎಸ್ಟೇಟ್ ನಡೆಸೋದಷ್ಟೇ ಅಲ್ಲ.

ಬದುಕುವುದೇ ಕಷ್ಟವಾಗತ್ತೆ ಅಂತ ಬೆದರಿಕೆ ಹಾಕಿ ಫೋನ್ ಕಟ್ ಮಾಡಿದ್ದರು. ನಿಮ್ಮ ರಿಯಲ್ ಎಸ್ಟೇಟ್ ಪ್ರಾಜೆಕ್ಟ್ ಕಂಪ್ಲೀಟ್ ಮಾಡಲಿಕ್ಕೆ ಬಿಡೊಲ್ಲ ಎಂದು ಹೇಳಿದ್ದರಂತೆ. ಕುಮಾರಸ್ವಾಮಿ ಜತೆ ಫೋನ್‌ನಲ್ಲಿ ಮಾತಾಡುವ ವೇಳೆ ರಮೇಶ್ ಗೌಡ ಎದುರಲ್ಲಿ ಕುಳಿತಿದ್ದರು.

ಈ ವೇಳೆ ರಮೇಶ್ ಗೌಡ ಕೂಡ ಐದು ಕೋಟಿ ಕೇಳಿದರು. ದೇವಾಲಯ ಹಾಗೂ ಶಾಲೆ ಕಟ್ಟಿಸುತ್ತಿದ್ದು ಅದಕ್ಕಾಗಿ ಐದು ಕೋಟಿ ರೂ. ಕೊಡಿ ಎಂದು ರಮೇಶ್ ಗೌಡ ಕೇಳಿದರು. ತುಂಬಾ ಕಷ್ಟ ಇದೆ ಯಾವುದೇ ಕಾರಣಕ್ಕೂ ಆಗಲ್ಲ ಅಂತ ಹೇಳಿದೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಈ ಸಂಬಂಧ ಉದ್ಯಮಿ ವಿಜಯ್ ಟಾಟಾ ಪ್ರತಿಕ್ರಿಯಿಸಿ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಹಾಗೂ ರಮೇಶ್ ಗೌಡ ವಿರುದ್ಧ ದೂರು ನೀಡಿದ್ದೇನೆ. ಒಂದು ವಾರದಿಂದ ಮೆಸೇಜ್, ಕಾಲ್ ಮಾಡುವ ಕೆಲಸ ರಮೇಶ್ ಗೌಡ ಮಾಡುತ್ತಿದ್ದರು.

2019ರ ಚುನಾವಣೆಗೆ ಅವರಿಗಾಗಿ ತುಂಬಾ ಖರ್ಚು ಮಾಡಿದ್ದೀವಿ. ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ ಎನ್‌ಸಿಆರ್ ದಾಖಲಾಗಿದೆ. ಕುಮಾರಸ್ವಾಮಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ಬಿಎನ್ಎಸ್ 352 ಅಡಿಯಲ್ಲಿ ಎನ್ ಸಿ ಆರ್ ದಾಖಲಿಸಿದ್ದಾರೆ ಎಂದು ವಿಜಯ್ ಟಾಟಾ ತಿಳಿಸಿದ್ದಾರೆ.

 

 

- Advertisement -  - Advertisement -  - Advertisement - 
Share This Article
error: Content is protected !!
";