ಬ್ಯಾಕ್‌ ಲಾಗ್ ಹುದ್ದೆಗಳನ್ನು ಕೂಡಲೆ ಭರ್ತಿ ಮಾಡಿ

News Desk

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ :
ಒಳ ಮೀಸಲಾತಿಯನ್ನು ಜಾರಿಗೊಳಿಸಿರುವ ರಾಜ್ಯ ಕಾಂಗ್ರೆಸ್ ಸರ್ಕಾರ ಬ್ಯಾಕ್‌ಲಾಗ್ ಹುದ್ದೆಗಳನ್ನು ಕೂಡಲೆ ಭರ್ತಿ ಮಾಡಬೇಕೆಂದು ಆಲ್ ಇಂಡಿಯಾ ಬಹುಜನ ಸಮಾಜ ಪಾರ್ಟಿ ರಾಜ್ಯಾಧ್ಯಕ್ಷ ಮಾರಸಂದ್ರ ಮುನಿಯಪ್ಪ ಒತ್ತಾಯಿಸಿದರು.

ಪ್ರವಾಸಿ ಮಂದಿರದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಒಳ ಮೀಸಲಾತಿಯನ್ನು ಜಾರಿಗೊಳಿಸುವ ಅಧಿಕಾರ ಆಯಾ ರಾಜ್ಯ ಸರ್ಕಾರಗಳಿಗಿದೆಯೆಂದು ಸುಪ್ರಿಂಕೋರ್ಟ್ ತೀರ್ಪು ನೀಡಿ ಒಂದು ವರ್ಷಗಳಾದರೂ ರಾಜ್ಯ ಸರ್ಕಾರ ಅನುಷ್ಟಾನಕ್ಕೆ ತರುವಲ್ಲಿ ತಡವಾಯಿತು. ಕಾಂಗ್ರೆಸ್‌ಗೆ ದಲಿತರ ಓಟು ಬೇಕು. ಹಿತ ಬೇಕಾಗಿಲ್ಲ.

- Advertisement - 

ನಾಗಮೋಹನ್‌ದಾಸ್ ಆಯೋಗ ದತ್ತಾಂಶವನ್ನು ವೈಜ್ಞಾನಿಕವಾಗಿ ಸಂಗ್ರಹಿಸಿರುವ ಆಧಾರದ ಮೇಲೆ ಮಾದಿಗರಿಗೆ ಶೇ.೬, ಒಲೆಯರಿಗೆ ಶೇ.೬, ಲಂಬಾಣಿ, ಭೋವಿ, ಕೊರಮ, ಕೊರಚ ಜನಾಂಗಕ್ಕೆ ಶೇ.೫ ರಷ್ಟು ಮೀಸಲಾತಿ ನೀಡಿದ್ದು, ಅಲೆಮಾರಿ, ಅರೆಅಲೆಮಾರಿಗಳಿಗೆ ಅನ್ಯಾಯವಸಗಿದೆ ಎಂದು ಆಪಾದಿಸಿದರು.

ಒಳ ಮೀಸಲಾತಿಗಾಗಿ ಪ್ರೊ.ಬಿ.ಕೃಷ್ಣಪ್ಪ ೧೯೯೫ ರಲ್ಲಿ ಚಳುವಳಿ ಆರಂಭಿಸಿದರು. ಅಂದಿನಿಂದ ಅವರ ಜೊತೆ ಕೂಡಿಕೊಂಡು ನಿರಂತರವಾಗಿ ಹೋರಾಟ ಮಾಡಿಕೊಂಡು ಬಂದಿದ್ದೇವೆ. ಹರಿಯಾಣ, ಪಂಜಾಬ್‌ನಲ್ಲಿ ವಾಲ್ಮೀಕಿ ಜನಾಂಗ ೧೯೭೮-೭೯ ರಲ್ಲಿ ಹೋರಾಟ ಆರಂಭಿಸಿದಾಗ ಚಮ್ಮಾರರು ಒಪ್ಪಿರಲಿಲ್ಲ. ಆಂಧ್ರ, ಕರ್ನಾಟಕ, ಕೇರಳ, ತಮಿಳುನಾಡು ಒರಿಸ್ಸಾದಲ್ಲೂ ಹೋರಾಟ ಶುರುವಾಯಿತು. ಜನತಾದಳ, ಬಿಜೆಪಿ. ಪಕ್ಷಗಳು ನಮ್ಮನ್ನು ಯಾಮಾರಿಸಿದವು ಎಂದರು.

- Advertisement - 

ಎಸ್ಸಿ.ಎಸ್ಟಿ. ಆಯೋಗ ರಚಿಸಬೇಕು. ಐವತ್ತು ಸಾವಿರ ಹುದ್ದೆಗಳು ಖಾಲಿಯಿವೆ. ನಿರುದ್ಯೋಗಿಗಳು ಜಾಸ್ತಿಯಾಗುತ್ತಿದ್ದಾರೆ. ಅತಿ ಹಿಂದುಳಿದವರಿಗೆ ಶೇ.೧ ರಷ್ಟು ಮೀಸಲಾತಿ ನೀಡಬೇಕು. ಕೋವೇರಹಟ್ಟಿಯ ವರ್ಷಿತಾಳನ್ನು ಕೊಲೆಗೈದಿರುವವರಿಗೆ ಕಠಿಣ ಶಿಕ್ಷೆಯಾಗಬೇಕು. ಎಂಟರಿಂದ ಹತ್ತು ಲಕ್ಷ ರೂ. ಪರಿಹಾರವನ್ನು ಕುಟುಂಬಕ್ಕೆ ನೀಡಿ ಐದು ಎಕರೆ ಜಮೀನು ಮಂಜೂರು ಮಾಡಬೇಕು. ಎಸ್ಸಿ. ಎಸ್ಟಿ.ಗಳಲ್ಲಿ ದೌರ್ಜನ್ಯ, ದಬ್ಬಾಳಿಕೆ ನಡೆದರೆ ಜಾತಿ ನಿಂದನೆಯಾಗುವುದಿಲ್ಲ ಎನ್ನುವುದು ಸರಿಯಲ್ಲ. ತಿದ್ದುಪಡಿ ಮಾಡಿ ರಾಜ್ಯ ಸರ್ಕಾರ ಕೇಂದ್ರಕ್ಕೆ ಶಿಫಾರಸ್ಸು ಮಾಡಬೇಕೆಂದು ಮಾರಸಂದ್ರ ಮುನಿಯಪ್ಪ ಆಗ್ರಹಿಸಿದರು.

ದಲಿತರ ಮೇಲೆ ಎಲ್ಲಾ ಕಡೆ ದೌರ್ಜನ್ಯಗಳು ನಡೆಯುತ್ತಿದೆ. ರಾಜ್ಯಾದ್ಯಂತ ಸುತ್ತಾಡಿದ್ದೇನೆ. ದಲಿತ ಹೆಣ್ಣು ಮಕ್ಕಳು ಮರ್ಯಾದೆಯಿಂದ ಬದುಕುವಂತಿಲ್ಲ. ಆನ್‌ಲೈನ್ ಬೆಟ್ಟಿಂಗ್ ದಂಧೆ ನಡೆಸುತ್ತಿರುವ ಈ ಭಾಗದ ಶಾಸಕ ಕೆ.ಸಿ.ವೀರೇಂದ್ರಪಪ್ಪಿಯಿಂದ ಲಕ್ಷಾಂತರ ಕುಟುಂಬಗಳು ಬೀದಿಗೆ ಬಿದ್ದಿವೆ. ಸಮಾಜಘಾತುಕರು ರಾಜಕೀಯಕ್ಕೆ ಬರಬಾರದು. ಕಾಂಗ್ರೆಸ್ ನಾಯಕರು ಹಣ ಪಡೆದು ಚುನಾವಣೆಯಲ್ಲಿ ಪಪ್ಪಿಗೆ ಟಿಕೇಟ್ ನೀಡಿದ್ದಾರೆ. ಮತದಾರರು ಆಮಿಷಕ್ಕೆ ಒಳಗಾಗಿ ಗೆಲ್ಲಿಸಿದ್ದಾರೆಂದು ದೂರಿದರು.

ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದ ಅಭಿವೃದ್ದಿಗೆ ಮೀಸಲಿದ್ದ ಹಣವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಬೇರೆ ಬೇರೆ ಉದ್ದೇಶಗಳಿಗೆ ಬಳಸಿದ್ದಾರೆ. ಎಸ್.ಟಿ.ಅಭಿವೃದ್ದಿ ನಿಗಮದ ಇನ್ನೂರು ಕೋಟಿ ರೂ.ಗಳು ಬೇರೆ ಬೇರೆ ಕಡೆ ಚುನಾವಣೆಗೆ ಹರಿದಾಡಿವೆ. ಕಾಂಗ್ರೆಸ್‌ನಲ್ಲಿರುವ ಶಾಸಕ, ಸಂಸದರು, ವಿಧಾನಪರಿಷತ್ ಸದಸ್ಯರು ಯಾರು ದಲಿತರ ಪರವಾಗಿ ಧ್ವನಿ ಎತ್ತುತ್ತಿಲ್ಲ.

ಸಚಿವ ರಾಜಣ್ಣನವರನ್ನು ವಜಾ ಮಾಡಿದ ಕಾಂಗ್ರೆಸ್ ಹೈಕಮಾಂಡ್ ಆರ್.ಎಸ್.ಎಸ್.ಹಾಡು ಹಾಡಿದ ಡಿ.ಕೆ.ಶಿವಕುಮಾರ್ ಮೇಲೆ ಏಕೆ ಕ್ರಮ ಕೈಗೊಳ್ಳುತ್ತಿಲ್ಲ. ಕೆ.ಹೆಚ್.ಮುನಿಯಪ್ಪ ಏಳು ಬಾರಿ ಶಾಸಕರಾಗಿ ಎರಡು ಸಾರಿ ಮಂತ್ರಿಯಾಗಿದ್ದಾರೆ. ಅಂತಹ ಹಿರಿಯರಿಗೆ ಆಹಾರ ಇಲಾಖೆ ಖಾತೆ ನೀಡಿದೆ. ಆರ್.ಬಿ.ತಿಮ್ಮಾಪುರ್‌ಗೆ ಅಬಕಾರಿ ಖಾತೆ ವಹಿಸಲಾಗಿದೆ. ಇದರಿಂದ ಯಾರಿಗೂ ಸಹಾಯ ಮಾಡಲು ಆಗಲ್ಲ. ಅದಕ್ಕಾಗಿ ಮುಂದಿನ ದಿನಗಳಲ್ಲ ಸಮಾಜ ಕಲ್ಯಾಣ ಖಾತೆ ನೀಡಬೇಕು. ರೈತರು ಕಾರ್ಮಿಕರು ಸಮಸ್ಯೆಯಲ್ಲಿದ್ದಾರೆ. ಲಂಬಾಣಿ ಸಮಾಜಕ್ಕೆ ಪ್ರಾತಿನಿಧ್ಯವಿಲ್ಲದಂತಾಗಿದೆ ಎಂದು ಹೇಳಿದರು.

ಆಲ್ ಇಂಡಿಯಾ ಬಹುಜನ ಸಮಾಜ ಪಾರ್ಟಿ ರಾಜ್ಯ ಸಂಯೋಜಕ ಆರ್.ಮುನಿಯಪ್ಪ, ರಾಜ್ಯ ಕಾರ್ಯದರ್ಶಿಗಳಾದ ಭೀಮನಕೆರೆ ಶಿವಮೂರ್ತಿ, ದೊಡ್ಡೆಟ್ಟಪ್ಪ, ಜಿಲ್ಲಾಧ್ಯಕ್ಷ ಪ್ರಕಾಶ್, ಉಪಾಧ್ಯಕ್ಷರುಗಳಾದ ತಿಮ್ಮಪ್ಪ, ದೇವೇಗೌಡ, ಪ್ರಧಾನ ಕಾಯದರ್ಶಿ ಹನುಮಂತರಾಯ, ಖಜಾಂಚಿ ಶ್ರೀನಿವಾಸ್, ಮಹಾಂತೇಶ್ ಕೂನಬೇವು ಇವರುಗಳು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

 

Share This Article
error: Content is protected !!
";