ಚಂದ್ರವಳ್ಳಿ ನ್ಯೂಸ್, ತುಮಕೂರು:
ಇಲಾಖಾ ನೇಮಕಾತಿಗಳು ಸೇರಿದಂತೆ ಕೆಪಿಟಿಸಿಎಲ್ ವತಿಯಿಂದ ನೇಮಕ ಮಾಡಿಕೊಳ್ಳುವ ಹುದ್ದೆಗಳನ್ನು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ನಡೆಸುವುದರ ಮೂಲಕವೇ ನೇಮಕ ಮಾಡಿಕೊಳ್ಳಬೇಕು ಎಂದು ಒತ್ತಾಯಿಸಿ ತುಮಕೂರು ನಗರದ ಜಿಲ್ಲಾಧಿಕಾರಿಗಳ ಕಛೇರಿ ಸ್ಪರ್ಧಾತ್ಮಕ ವಿದ್ಯಾರ್ಥಿಗಳ ವತಿಯಿಂದ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು.
ಮನವಿ ಸಲ್ಲಿಸಿ ಮಾತನಾಡಿದ ಮುಖಂಡರಾದ ಲವ ಸುದ್ಧಿಗಾರರೊಂದಿಗೆ ಮಾತನಾಡಿ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ ಮತ್ತು ವಿವಿಧ ವಿದ್ಯುತ್ ಸರಬರಾಜು ಕಂಪನಿಗಳಲ್ಲಿ ಕಲ್ಯಾಣ ಕರ್ನಾಟಕ ಮತ್ತು ಉಳಿಕೆ ಮೂಲ ವೃಂದದ ಕಿರಿಯ ಸ್ಟೇಷನ್ ಪರಿಚಾರಕ ಮತ್ತು ಕಿರಿಯ ಪವರ್ ಮ್ಯಾನ್ ೨೯೭೫ ಹುದ್ದೆಗಳನ್ನು ಎಸ್.ಎಸ್.ಎಲ್.ಸಿ ಅಂಕಗಳು ಮತ್ತು ದೈಹಿಕ ಪರೀಕ್ಷೆಯ ಆಧಾರದ ಮೇಲೆ ನೇಮಕಾತಿ ಮಾಡಿಕೊಳ್ಳಲು ಅಧಿಸೂಚನೆ ಹೊರಡಿಸಲಾಗಿದೆ.
ಅರ್ಜಿ ಸಲ್ಲಿಕೆಗೆ ಅಕ್ಟೋಬರ್ ೨೧ ರಿಂದ ನವಂಬರ್ ೨೦ ರವರೆಗೆ ದಿನಾಂಕವನ್ನು ನಿಗದಿಗೊಳಿಸಲಾಗಿದೆ. ಈ ರೀತಿ ಸ್ಪರ್ಧಾತ್ಮಕ ಪರೀಕ್ಷೆಯನ್ನು ಹೊರತುಪಡಿಸಿ ಅಂಕಗಳ ಆಧಾರದ ನೇಮಕಾತಿಯು ಎಲ್ಲಾ ಹುದ್ದೆ ಆಕಾಂಕ್ಷಿಗಳಿಗೂ ನ್ಯಾಯ ಒದಗಿಸುವ ಕ್ರಮವಲ್ಲ ಎಂಬುದನ್ನು ನಿಮ್ಮ ಗಮನಕ್ಕೆ ತರಲಾಗುತ್ತಿದೆ, ಪ್ರಸ್ತುತ ಕಾಲಘಟ್ಟದಲ್ಲಿ ರಾಜ್ಯದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನಿರುದ್ಯೋಗ ತಾಂಡವವಾಡುತ್ತಿದೆ.
ಇಂತಹ ಸಂದರ್ಭದಲ್ಲಿ ನ್ಯಾಯ ಸಮ್ಮತವಲ್ಲದ ಮತ್ತು ಪ್ರಾಮಾಣಿಕವಲ್ಲದ ನೇಮಕಾತಿ ಪ್ರಕ್ರಿಯೆಯು ನಿರುದ್ಯೋಗಿಗಳಲ್ಲಿ ಮತ್ತಷ್ಟು ಆಕ್ರೋಶವನ್ನು ಹೆಚ್ಚಿಸುತ್ತದೆ. ಈ ರೀತಿ ಎಸ್.ಎಸ್.ಎಲ್.ಸಿ ಅಂಕಗಳ ಆಧಾರದ ಮೇಲಿನ ನೇಮಕಾತಿ ಪ್ರಕ್ರಿಯೆಯಿಂದ ಕರೋನ ನಂತರದ ವರ್ಷಗಳಲ್ಲಿನ ಅಭ್ಯರ್ಥಿಗಳಿಗೆ ಹೆಚ್ಚು ಅನುಕೂಲವಾಗುತ್ತದೆ.
ಏಕೆಂದರೆ, ಕರೋನ ನಂತರದ ವರ್ಷಗಳಲ್ಲಿ ಶೇಕಡ ೯೦ ಕ್ಕಿಂತ ಹೆಚ್ಚು ಅಂಕಗಳನ್ನು ಪಡೆದ ಅಭ್ಯರ್ಥಿಗಳೇ ದೊಡ್ಡ ಸಂಖ್ಯೆಯಲ್ಲಿ ಇದ್ದಾರೆ, ಇದರಿಂದ ಕರೋನ ಪೂರ್ವ ವರ್ಷಗಳಲ್ಲಿ ಎಸ್.ಎಸ್.ಎಲ್.ಸಿ ಮುಗಿಸಿದ ಅಭ್ಯರ್ಥಿಗಳಿಗೆ ಮತ್ತು ಈಗಾಗಲೇ ಇದೇ ಹುದ್ದೆಗಳಿಗೆ ತಯಾರಿ ನಡೆಸುತ್ತಿರುವ ಅಭ್ಯರ್ಥಿಗಳಿಗೆ ಅನ್ಯಾಯವಾಗುತ್ತದೆ ಜೊತೆಗೆ ನಮ್ಮ ನೆರೆಹೊರೆ ರಾಜ್ಯಗಳಲ್ಲಿಯೂ ಕೂಡ ಇದೇ ಹುದ್ದೆಗಳಿಗೆ ಸ್ಪರ್ಧಾತ್ಮಕ ಪರೀಕ್ಷೆ ಮುಖಾಂತರ ನೇಮಕಾತಿ ಮಾಡಲಾಗುತ್ತಿದೆ. ಆದ್ದರಿಂದ ನಮ್ಮ ರಾಜ್ಯದಲ್ಲಿಯೂ ಕೂಡ ಇದೇ ನಿಯಮಗಳನ್ನು ಅಳವಡಿಸಿಕೊಳ್ಳಬೇಕೆಂದು ಮನವಿಯನ್ನು ಸಲ್ಲಿಸಲಾಗುತ್ತಿದೆ ಎಂದು ತಿಳಿಸಿದರು.
ಮುಂದುವರೆದು ಮಾತನಾಡುತ್ತಾ ಕಂದಾಯ ಸಚಿವರಿಗೆ ತಿಳಿದಿರುವಂತೆ ಕಂದಾಯ ಇಲಾಖೆಯಲ್ಲಿ ಗ್ರಾಮ ಲೆಕ್ಕಿಗರ ಹುದ್ದೆಗಳಿಗೆ ಪಿ.ಯು.ಸಿ ಅಂಕಗಳ ಆಧಾರದ ನೇಮಕಾತಿ ಪ್ರಕ್ರಿಯೆಯನ್ನು ಕೈಬಿಟ್ಟು ಸ್ಪರ್ಧಾತ್ಮಕ ಪರೀಕ್ಷೆ ಮುಖಾಂತರ ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ.
ಆದ್ದರಿಂದ, ಈಗ ಕೆಪಿಟಿಸಿಎಲ್ ನಿಂದ ಅಧಿಸೂಚನೆ ಹೊರಡಿಸಿರುವ ಈ ಹುದ್ದೆಗಳಿಗೂ ಕೂಡ ಸ್ಪರ್ಧಾತ್ಮಕ ಪರೀಕ್ಷೆ ಮುಖಾಂತರ ನೇಮಕಾತಿ ಮಾಡಿಕೊಳ್ಳಬೇಕೆಂದು ಲಕ್ಷಾಂತರ ಹುದ್ದೆ ಆಕಾಂಕ್ಷಿಗಳ ಮನವಿಯನ್ನು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಲಾಗಿದೆ ಎಂದು ತಿಳಿಸಿದರು.
ಚಿತ್ರದಲ್ಲಿರುವಂತೆ ಸ್ಪಧಾರ್ಥತ್ಮಕ ವಿದ್ಯಾರ್ಥಿಗಳಾದ ಲವ, ನಾಗರಾಜ, ರವೀಶ, ಗೋಪಾಲಕೃಷ್ಣ, ದಯಾನಂದ, ಪ್ರಜ್ವಲ್, ಸಂತೋಷ್, ಶಶಿ, ಗಿರಿ, ಬಾಲರಾಜು, ಇನ್ನಿತರು ಉಪಸ್ಥಿತರಿದ್ದು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.