ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಸಾಮಾಜಿಕ ಜಾಲತಾಣದಲ್ಲಿ ರಮ್ಯಾ ವಿರುದ್ಧ ದರ್ಶನ್ ಅಭಿಮಾನಿಗಳು ಅವಹೇಳನಕಾರಿಯಾಗಿ ಕಮೆಂಟ್ ಮಾಡುತ್ತಿದ್ದಾರೆ. ನಟಿಗೆ ಅನೇಕರು ಅಶ್ಲೀಲ ಪದ ಬಳಕೆ ಮಾಡಿ ಸಂದೇಶ ಕಳಿಸಿದ್ದಾರೆ. ಅವುಗಳನ್ನು ರಮ್ಯಾ ಅವರು ಜಗಜ್ಜಾಹೀರು ಮಾಡಿದ್ದಾರೆ. ಈ ಕುರಿತಂತೆ ಅವರು ದರ್ಶನ್ ಅಭಿಮಾನಿಗಳ ವಿರುದ್ಧ ಸೈಬರ್ ಪೊಲೀಸರಿಗೆ ದೂರು ನೀಡಲು ರಮ್ಯಾ ಮುಂದಾಗಿದ್ದಾರೆ.
ಮಾಜಿ ಸಂಸದೆ, ನಟಿ ರಮ್ಯಾ ಪರವಾಗಿ ರಾಜ್ಯ ಮಹಿಳಾ ಆಯೋಗ ನಿಂತಿದ್ದು ಅಶ್ಲೀಲವಾಗಿ ಸಂದೇಶ ಕಳಿಸಿದವರ ವಿರುದ್ಧ ತನಿಖೆ ಮಾಡಿ ಕ್ರಮ ಕೈಕೊಳ್ಳಬೇಕು ಎಂದು ಪೊಲೀಸ್ ಆಯುಕ್ತರಿಗೆ ಮಹಿಳಾ ಆಯೋಗ ಪತ್ರ ಬರೆದಿದೆ.
ಮಾಜಿ ಸಂಸದೆ ಹಾಗೂ ಚಲನಚಿತ್ರ ನಟಿ ರಮ್ಯಾರವರ ವಿರುದ್ಧ, ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಸಂದೇಶಗಳನ್ನು ನೀಡಿರುವ ಬಗ್ಗೆ ವರದಿಯಾಗಿರುತ್ತದೆ.
ಇದರಿಂದ ಮಹಿಳೆಯ ಸ್ಥಾನಮಾನಕ್ಕೆ ತೊಂದರೆಯಾಗುತ್ತಿದ್ದು ರಾಜ್ಯ ಮಹಿಳಾ ಆಯೋಗವು ಗಂಭೀರವಾಗಿ ಪರಿಗಣಿಸಿದೆ. ನಿಯಮಾನುಸಾರ ಪರಿಶೀಲಿಸಿ, ಸಾಮಾಜಿಕ ಜಾಲತಾಣದಲ್ಲಿ ಪ್ರಸಾರವಾಗುತ್ತಿರುವ ಅವಹೇಳನಕಾರಿ ಸಂದೇಶಗಳನ್ನು ಕೂಡಲೇ ಸ್ಥಗಿತಗೊಳಿಸಿ, ಸಂಬಂಧಿಸಿದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಚೌಧರಿ ಪತ್ರ ಬರೆದಿದ್ದಾರೆ.
ಏನಿದು ಆಕ್ರೋಶ?
ಸುಪ್ರೀಂ ಕೋರ್ಟ್ನಲ್ಲಿ ದರ್ಶನ್ ಜಾಮೀನು ವಿಚಾರಣೆ ನಡೆದು ಜಾಮೀನು ಮಂಜೂರು ಮಾಡಿದ್ದ ಹೈಕೋರ್ಟ್ ಗೆ ಚಾಟಿ ಬೀಸಿತ್ತು. ಆ ಬಳಿಕ ರಮ್ಯಾ ಪ್ರತಿಕ್ರಿಯಿಸಿ ಭಾರತದ ಜನಸಾಮಾನ್ಯರಿಗೆ ಸುಪ್ರೀಂ ಕೋರ್ಟ್ ಒಂದು ಭರವಸೆಯ ಬೆಳಕಾಗಿದೆ ಎಂದು ಪ್ರತಿಕ್ರಿಯೆ ನೀಡಿ ರೇಣುಕಾಸ್ವಾಮಿ ಕುಟುಂಬಕ್ಕೆ ನ್ಯಾಯ ಸಿಗುವ ಭರವಸೆ ಮೂಡಿದೆ ಎಂದು ರಮ್ಯಾ ಅವರು ಇನ್ಸ್ಟಾಗ್ರಾಮ್ ಸ್ಟೋರಿ ಮತ್ತು ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದರು.
ದರ್ಶನ್ ಅಭಿಮಾನಿಗಳು ಇದರಿಂದ ಸಿಟ್ಟಾಗಿ ರಮ್ಯಾಗೆ ಅಶ್ಲೀಲ ಸಂದೇಶ ಕಳಿಸಲು ಆರಂಭಿಸಿದರು. ದರ್ಶನ್ ಅಭಿಮಾನಿಗಳ ಸಂದೇಶ ನೋಡಿ ಕೋಪಗೊಂಡ ರಮ್ಯಾ ಅವರು, ‘ಎಲ್ಲ ಡಿ ಬಾಸ್ ಅಭಿಮಾನಿಗಳಿಗೂ ನನ್ನ ಇನ್ಸ್ಟಾಗ್ರಾಮ್ ಖಾತೆಗೆ ಸ್ವಾಗತ. ರೇಣುಕಾಸ್ವಾಮಿ ಕುಟುಂಬಕ್ಕೆ ಯಾಕೆ ನ್ಯಾಯ ಸಿಗಬೇಕು ಎಂಬುದಕ್ಕೆ ನಿಮ್ಮ ಕಮೆಂಟ್ಗಳೇ ಸಾಕ್ಷಿ ಎಂದು ಬರೆದುಕೊಂಡರು. ದರ್ಶನ್ ಅಭಿಮಾನಿಗಳು ಬಳಸಿರುವ ಅಶ್ಲೀಲ ಪದಗಳಿಗೆ ಸೋಶಿಯಲ್ ಮೀಡಿಯಾದಲ್ಲಿ ವ್ಯಾಪಕ ಖಂಡನೆ ವ್ಯಕ್ತವಾಗುತ್ತಿದೆ.
ಈ ಘಟನೆ ನಂತರ ನಟ ಪ್ರಥಮ್ ಕೂಡ ಪ್ರತಿಕ್ರಿಯೆ ನೀಡಿ ರಮ್ಯಾ ಮೇಡಂ ಘನತೆ ಪರವಾಗಿ ನಾನು ನಿಲ್ಲುತ್ತೇನೆ. ಎಲ್ಲರೂ ನಟಿ ರಮ್ಯಾ ಪರ ನಿಲ್ಲೋಣ. ಈಗಲೂ ನಾವು ರಮ್ಯಾರವರ ಆತ್ಮಗೌರವದ ಪರ ನಿಲ್ಲದೇ ಹೋದರೆ ನಾವು ಕಲಾವಿದರಾಗೋಕೆ ನಾಚಿಕೆಯಾಗಬೇಕು. ಕನ್ನಡ ಚಿತ್ರರಂಗವನ್ನ ಭಯದಿಂದ ಮುಕ್ತಗೊಳಿಸೋಣ. ಇಷ್ಟೆಲ್ಲಾ ಆದ್ರೂ ಜಾಣಕಿವುಡರಾಗಿರೋ ಪುಣ್ಯಾತ್ಮ ಕಲಾವಿದರಿಗೆ ದೇವರು ನೂರ್ಕಾಲ ಆಯಸ್ಸು ನೀಡಲೆಂದು ಪ್ರಾರ್ಥನೆ ಎಂದು ಪ್ರಥಮ್ ಪೋಸ್ಟ್ ಮಾಡಿದ್ದರು.
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ನರಸಿಂಹಲು ಮಾತನಾಡಿ, “ಅಣ್ಣಾವ್ರು ಅಭಿಮಾನಿಗಳೇ ದೇವರೆಂದು ಹೇಳುತ್ತಿದ್ದರು. ಈಗ ಸ್ಟಾರ್ ನಟರ ಹೆಸರಲ್ಲಿ ಕೆಲ ಅಭಿಮಾನಿಗಳು ಸೋಷಿಯಲ್ ಮೀಡಿಯಾದಲ್ಲಿ ನಟ ಹಾಗೂ ನಟಿಯರ ಬಗ್ಗೆ, ಸಿನಿಮಾಗಳ ಬಗ್ಗೆ ಕೆಟ್ಟ ಪೋಸ್ಟ್ ಹಾಕೋದು ಕಾಮನ್ ಆಗಿಬಿಟ್ಟಿದೆ.
ಅಂಥವರನ್ನು ಸುಮ್ಮನೆ ಬಿಡಬಾರದು ಎಂದು ಅವರು ಗುಡುಗಿದರು. ನಟಿ ರಮ್ಯಾ ಅವರ ವಿಷಯದಲ್ಲಿ ಅಶ್ಲೀಲ ಮೆಸೇಜ್, ಕೆಟ್ಟ ಪೋಸ್ಟ್ ಹಾಕಿರೋದು ದರ್ಶನ್ ಅಭಿಮಾನಿಯೆಂದು ಸಾಬೀತಾದರೆ ಅವರಿಗೆ ಶಿಕ್ಷೆ ಆಗಬೇಕು ಎಂದು ಆಗ್ರಹಿಸಿದರು.
ಸಾಮಾಜಿಕ ಜಾಲತಾಣದಲ್ಲಿ ನಟಿ ರಮ್ಯಾ ಅವರಿಗೆ ಅಶ್ಲೀಲ ಸಂದೇಶಗಳು ಬರುತ್ತಿವೆ. ದರ್ಶನ್ ಅಭಿಮಾನಿಗಳು ಅವಾಚ್ಯ ಪದಗಳನ್ನು ಬಳಸಿದ್ದಾರೆ ಎನ್ನುವ ಆರೋಪವಿದೆ.
ಸ್ವತಃ ರಮ್ಯಾ ಅವರೇ ರೇಣುಕಾಸ್ವಾಮಿ ಮೆಸೇಜ್ಗೂ ನಟ ದರ್ಶನ್ ಫ್ಯಾನ್ಸ್ ಸಂದೇಶಗಳಿಗೂ ಏನೂ ವ್ಯತ್ಯಾಸವಿಲ್ಲ ಎಂದು ಬಹಿರಂಗವಾಗಿ ಆರೋಪಿಸಿದ್ದು ಈಗ ಇದು ಬಿರುಗಾಳಿಯೆಬ್ಬಿಸಿದೆ.
ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ನಟಿ ರಮ್ಯಾ, ನಾನು ಯಾರಿಗೂ ಹೆದರೋದಿಲ್ಲ. ಕನ್ನಡ ಚಿತ್ರರಂಗದಲ್ಲಿ ಯಾರೂ ಮಾತನಾಡುತ್ತಿಲ್ಲ. ನನಗೇನೇ ಕೆಟ್ಟ ರೀತಿಯ ಪೋಸ್ಟ್ ಹಾಕಿ ಟ್ರೋಲ್ ಮಾಡ್ತಾರೆ ಅಂದ್ರೆ ಇನ್ನೂ ಸಾಮಾನ್ಯ ಹೆಣ್ಣು ಮಕ್ಕಳ ಗತಿಯೇನು?.
ಒಂದು ಹೆಣ್ಣಿನ ಬಗ್ಗೆ ಮಾತನಾಡುತ್ತಾರಂದ್ರೆ ಅವರು ಎಷ್ಟು ಅನ್‌ಎಜುಕೇಟೆಡ್ ಆಗಿರಬೇಕು. ರೇಣುಕಾಸ್ವಾಮಿ ಮಾಡಿರೋ ಮೆಸೇಜ್ಗೂ ಈಗ ಕೆಲವರು ಹಾಕುತ್ತಿರೋ ಪೋಸ್ಟ್ಗೂ ಯಾವುದೇ ವ್ಯತ್ಯಾಸವಿಲ್ಲ. ಇಂಥವರನ್ನು ನಾನು ಸುಮ್ನೆ ಬಿಡೋದಿಲ್ಲ ಎಂದು ದರ್ಶನ್ ಅಭಿಮಾನಿಗಳ ವಿರುದ್ಧ ರಮ್ಯಾ ಗುಡುಗಿದ್ದಾರೆ.

