145 ಕಿ.ಮೀ. ಮಾನವ ಸರಪಳಿ ಕಾರ್ಯಕ್ರಮದ ಅಂತಿಮ ಸಿದ್ಧತೆಯ ಪರಿಶೀಲನೆ

News Desk

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಇದೇ ಸೆ. 15 ರಂದು ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ಜಿಲ್ಲೆಯಲ್ಲಿ ಏರ್ಪಡಿಸಲಾಗುವ 145 ಕಿ.ಮೀ. ಮಾನವ ಸರಪಳಿ ಕಾರ್ಯಕ್ರಮದ ಅಂತಿಮ ಸಿದ್ಧತೆಯನ್ನು ಜಿಲ್ಲಾಧಿಕಾರಿ ವೆಂಕಟೇಶ್ ಟಿ., ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಜೆ. ಸೋಮಶೇಖರ್ ಸೇರಿದಂತೆ ವಿವಿಧ ಅಧಿಕಾರಿಗಳು ಶನಿವಾರದಂದು ಮಾನವ ಸರಪಳಿಯ ಪ್ರಾರಂಭ ಹಾಗೂ ಗಡಿ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

      ರಾಜ್ಯದಲ್ಲಿ ಬೀದರ್ ನಿಂದ ಚಾಮರಾಜನಗರವರೆಗೆ ಅಂದರೆ ರಾಜ್ಯದ ಉತ್ತರ ತುದಿಯಿಂದ ದಕ್ಷಿಣದ ತುದಿಯವರೆಗೆ ಪ್ರತಿಯೊಂದು ಜಿಲ್ಲೆಯ ವ್ಯಾಪ್ತಿಯನ್ನೂ ಒಳಗೊಳ್ಳುವಂತೆ ಮಾನವ ಸರಪಳಿ ನಿರ್ಮಾಣವಾಗಲಿದೆ.  ಈ ಪೈಕಿ ರಾಜ್ಯದಲ್ಲಿಯೇ ಚಿತ್ರದುರ್ಗ ಜಿಲ್ಲೆಯಲ್ಲಿ ಅತಿ ಉದ್ದನೆಯ 145 ಕಿ.ಮೀ. ಮಾನವ ಸರಪಳಿ ಸೆ. 15 ರಂದು ನಿರ್ಮಾಣಗೊಳ್ಳಲಿದ್ದು, ಇಡೀ ರಾಜ್ಯವೇ ಈ ಅದ್ಭುತ ಕಾರ್ಯಕ್ರಮಕ್ಕೆ ಕಾತುರದಿಂದ ಎದುರು ನೋಡುತ್ತಿದೆ.

 ಜಿಲ್ಲೆಯ ಎಲ್ಲ ಸಾರ್ವಜನಿಕರು, ವಿದ್ಯಾರ್ಥಿಗಳು, ಸ್ವಯ ಸೇವಾ ಸಂಸ್ಥೆಗಳು, ಹಲವು ಸಂಘಟನೆಗಳು ಸ್ವಯಂ ಪ್ರೇರಿತವಾಗಿ ಪಾಲ್ಗೊಳ್ಳಲು ತುದಿಗಾಲಲ್ಲಿ ನಿಂತಿದ್ದು, ಜಿಲ್ಲಾಡಳಿತ ಕಾರ್ಯಕ್ರಮವನ್ನು ಅಭೂತಪೂರ್ವವಾಗಿ ಯಶಸ್ವಿಗೊಳಿಸಲು ಸಕಲ ಸಿದ್ಧತೆಯನ್ನು ಕೈಗೊಂಡಿದೆ.  ಈಗಾಗಲೆ ಈ ನಿಟ್ಟಿನಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರುಗಳು, ಜಿಲ್ಲಾಧಿಕಾರಿಗಳು ಸೇರಿದಂತೆ ವಿವಿಧ ಉನ್ನತ ಅಧಿಕಾರಿಗಳು ನಿತ್ಯ ಎಡಬಿಡದೆ ನಿರಂತರವಾಗಿ ಸಿದ್ಧತಾ ಸಭೆಗಳನ್ನು ನಡೆಸಿದ್ದು, ಸಂಬಂಧಪಟ್ಟ ಜಿಲ್ಲಾ, ತಾಲ್ಲೂಕು ಹಾಗೂ ಗ್ರಾಮ ಮಟ್ಟದ ಅಧಿಕಾರಿಗಳಿಗೂ ಸಾಕಷ್ಟು ಜವಾಬ್ದಾರಿಗಳನ್ನು ವಹಿಸಲಾಗಿದೆ.  ಜಿಲ್ಲೆಯ ಎಲ್ಲ ಸಂಘ ಸಂಸ್ಥೆಗಳು, ಶಿಕ್ಷಣ ಸಂಸ್ಥೆಗಳು, ಸಂಘಟನೆಗಳೊಂದಿಗೆ ಸಭೆಗಳನ್ನು ನಡೆಸಿ, ಮಾನವ ಸರಪಳಿ ನಿರ್ಮಾಣಕ್ಕೆ ಕೈ ಜೋಡಿಸುವಂತೆ ಮನವಿ ಮಾಡಿಕೊಳ್ಳಲಾಗಿದೆ.

      ಜಿಲ್ಲೆಯ ಮೊಳಕಾಲ್ಮೂರು, ಚಳ್ಳಕೆರೆ, ಹಿರಿಯೂರು ಮಾರ್ಗದಲ್ಲಿ ಮಾನವ ಸರಪಳಿ ನಿರ್ಮಾಣವಾಗಲಿದ್ದು, ಇದರಲ್ಲಿ ಚಿತ್ರದುರ್ಗ, ಹೊಳಲ್ಕೆರೆ ಹಾಗೂ ಹೊಸದುರ್ಗ ತಾಲ್ಲೂಕಿನ ವಿದ್ಯಾರ್ಥಿಗಳು, ನೌಕರರು, ಜನಪ್ರತಿನಿಧಿಗಳೂ, ಸಂಘ ಸಂಸ್ಥೆಗಳು, ಸಂಘಟನೆಗಳು ಪಾಲ್ಗೊಳ್ಳುವಂತಾಗಲು ಸಿದ್ಧತೆ ಮಾಡಲಾಗಿದೆ. ಜಿಲ್ಲೆಯ ಸುಮಾರು 1.50 ಲಕ್ಷ ಜನ ಈ ಮಾನವ ಸರಪಳಿಯಲ್ಲಿ ಭಾಗವಹಿಸುವ ನಿರೀಕ್ಷೆ ಹೊಂದಿದ್ದು, ಆ ನಿಟ್ಟಿನಲ್ಲಿ ಅಗತ್ಯ ಸಿದ್ಧತೆಗಳನ್ನು ಕೂಡ ಮಾಡಿಕೊಳ್ಳಲಾಗಿದೆ.  ವಿದ್ಯಾರ್ಥಿಗಳನ್ನು ಮಾನವ ಸರಪಳಿ ಸ್ಥಳಕ್ಕೆ ಕರೆದೊಯ್ಯಲು ಸುಮಾರು 410 ಕ್ಕೂ ಹೆಚ್ಚು ಶಾಲಾ ಕಾಲೇಜುಗಳ ಬಸ್‍ಗಳು, 20 ಕ್ಕೂ ಹೆಚ್ಚು ಖಾಸಗಿ ಬಸ್‍ಗಳು ಸೇರಿದಂತೆ ವಿವಿಧ ವಾಹನದ ವ್ಯವಸ್ಥೆ ಮಾಡಿಕೊಳ್ಳಲಾಗಿದೆ.

 ಇದರ ಮೇಲುಸ್ತುವಾರಿಗಾಗಿ ಜಿಲ್ಲಾ, ತಾಲ್ಲೂಕು ಮಟ್ಟದ ಅಧಿಕಾರಿಗಳನ್ನು ನೋಡಲ್ ಅಧಿಕಾರಿಗಳನ್ನಾಗಿ ನೇಮಿಸಲಾಗಿದೆ.  ಮಾನವ ಸರಪಳಿಯು ಬಹುತೇಕ ರಾಷ್ಟ್ರೀಯ ಹೆದ್ದಾರಿಯಲ್ಲಿಯೇ ನಿರ್ಮಾಣವಾಗುವುದರಿಂದ, ಸೆ. 15 ರಂದು ವಾಹನಗಳ ಸುಗಮ ಸಂಚಾರಕ್ಕೆ ಹಾಗೂ ಮಾನವ ಸರಪಳಿ ನಿರ್ಮಾಣಕ್ಕೆ ತೊಂದರೆಯಾಗದ ರೀತಿ ಕ್ರಮ ಕೈಗೊಳ್ಳಲಾಗಿದೆ.

      ಜಿಲ್ಲೆಯಲ್ಲಿ ಮಾನವ ಸರಪಳಿ ಪ್ರಾರಂಭವಾಗುವ ಸ್ಥಳವಾದ ಮೊಳಕಾಲ್ಮೂರು ತಾಲ್ಲೂಕಿನ ಮೇಲಿನ ಕಣಿವೆ ಪ್ರದೇಶ ಹಾಗೂ ವೇದಿಕೆ ಕಾರ್ಯಕ್ರಮ ಜರುಗುವ ಹಿರಿಯೂರಿನ ಅಂಬೇಡ್ಕರ್ ಸರ್ಕಲ್, ಜವಗೊಂಡನಹಳ್ಳಿ ಸೇರಿದಂತೆ ಮಾನವ ಸರಪಳಿ ಸಾಗುವ ಮಾರ್ಗಕ್ಕೆ ಶನಿವಾರ ಜಿಲ್ಲಾಧಿಕಾರಿ ವೆಂಕಟೇಶ್ ಟಿ., ಜಿ.ಪಂ. ಸಿಇಒ ಎಸ್.ಜೆ. ಸೋಮಶೇಖರ್, ಅಪರ ಜಿಲ್ಲಾಧಿಕಾರಿ ಬಿ.ಟಿ. ಕುಮಾರಸ್ವಾಮಿ ಸೇರಿದಂತೆ ವಿವಿಧ ಅಧಿಕಾರಿಗಳು ಭೇಟಿ ನೀಡಿ, ಅಂತಿಮ ಸಿದ್ಧತೆಯ ಪರಿಶೀಲನೆ ನಡೆಸಿದರು.  ಮಾನವ ಸರಪಳಿ ನಿರ್ಮಾಣ ಮಾರ್ಗದಲ್ಲಿ ಮಾಹಿತಿ ಫಲಕ ಅಳವಡಿಕೆ, ಜನರಿಗೆ ಕುಡಿಯುವ ನೀರು, ವೈದ್ಯಕೀಯ ತುರ್ತು ಮುಂಜಾಗ್ರತಾ ನೆರವು ಸೇರಿದಂತೆ ಸಕಲ ಸಿದ್ಧತೆಗಳನ್ನು ಪರಿಶೀಲಿಸಿ, ಅಧಿಕಾರಿಗಳಿಗೆ ಸೂಕ್ತ ಸಲಹೆ ಸೂಚನೆಗಳನ್ನು ನೀಡಲಾಯಿತು.

      ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ನಿರ್ಮಾಣವಾಗುವ ಮಾನವ ಸರಪಳಿಗಾಗಿ ಪ್ರತಿಯೊಬ್ಬರೂ ಆನ್‍ಲೈನ್‍ನಲ್ಲಿ ನೊಂದಾಯಿಸಿಕೊಂಡು ಪ್ರಮಾಣಪತ್ರ ಪಡೆಯಲು ಅವಕಾಶ ಕಲ್ಪಿಸಲಾಗಿದ್ದು, ಜಿಲ್ಲೆಯಲ್ಲಿ ಈಗಾಗಲೆ ಸುಮಾರು 95 ಸಾವಿರ ಜನ ನೊಂದಾಯಿಸಿಕೊಂಡಿದ್ದಾರೆ.  ಮಾನವ ಸರಪಳಿಯಲ್ಲಿ ಭಾಗವಹಿಸಿ, ಅದರ ಫೋಟೋವನ್ನು ಆನ್‍ಲೈನ್‍ನಲ್ಲಿ ಅಪ್‍ಲೋಡ್ ಮಾಡಲು ಸೆ. 24 ರವರೆಗೂ ಕಾಲಾವಕಾಶ ಕಲ್ಪಿಸಲಾಗಿದೆ ಎಂದು ಸಮಾಜ ಕಲ್ಯಾಣ ಇಲಾಖೆ ಜಂಟಿನಿದೇಶಕ ಜಗದೀಶ್ ಹೆಬ್ಬಳ್ಳಿ ಮಾಹಿತಿ ನೀಡಿದರು.

     ಅಪರ ಜಿಲ್ಲಾಧಿಕಾರಿ ಬಿ.ಟಿ. ಕುಮಾರಸ್ವಾಮಿ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಮಹೇಂದ್ರಕುಮಾರ್, ಸೇರಿದಂತೆ ವಿವಿಧ ಅಧಿಕಾರಿಗಳು ಈ ಸಂದರ್ಭದಲ್ಲಿದ್ದರು.

 

- Advertisement -  - Advertisement - 
Share This Article
error: Content is protected !!
";