ಚಂದ್ರವಳ್ಳಿ ನ್ಯೂಸ್, ವಿಜಯನಗರ:
ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ನಾಲ್ಕು ದಿನಗಳ ಬಳ್ಳಾರಿ, ವಿಜಯನಗರ ಜಿಲ್ಲೆಗಳ ಭೇಟಿ ಹಿನ್ನಲೆಯಲ್ಲಿ ಬುಧವಾರ ಐತಿಹಾಸಿಕ ವಿಶ್ವವಿಖ್ಯಾತ ಹಂಪಿಗೆ ಭೇಟಿ ನೀಡಿ ವಿವಿಧ ಐತಿಹಾಸಿಕ ಸ್ಥಳಗಳು ಸೇರಿದಂತೆ ದೇವಾಲಯ ವೀಕ್ಷಣೆ ಮಾಡಿದರು.
ಹಂಪಿ ವಿರೂಪಾಕ್ಷೇಶ್ವರನ ದರ್ಶನ ಪಡೆದ ಕೇಂದ್ರ ಸಚಿವೆ, ನನಗೆ ಬಹಳಷ್ಟು ಜನ ಹಂಪಿಯನ್ನು ವೀಕ್ಷಣೆ ಮಾಡಿ ಅಂತ ಹೇಳುತ್ತಿದ್ದರು. ಆ ಅವಕಾಶ ಇಂದು ನನಗೆ ಸಿಕ್ಕಿರೊದು ನನ್ನ ಅದೃಷ್ಟ. ಹಂಪಿಯ ಸಾಂಸ್ಕೃತಿಕ ಪರಂಪರೆಯನ್ನು ಕಣ್ತುಂಬಿಕೊಂಡಿರುವುದು ತುಂಬಾ ಹೆಮ್ಮಯ ಅನುಭವವಾಗುತ್ತಿದೆ.
ಇಲ್ಲಿಯ ಕಲೆ ಸಂಸ್ಕೃತಿ ಈ ನಾಡಿನ ಪರಂಪರೆಯ ಪ್ರತೀಕವಾಗಿದೆ. ಯುನೆಸ್ಕೊ ಗುರುತಿಸಿರುವ ಐತಿಹಾಸಿಕ ತಾಣ ಹಂಪಿಯ ಪ್ರತಿಯೊಂದು ಶಿಲೆಯು ಇಲ್ಲಿಯ ಪರಂಪರೆಯನ್ನು ಪ್ರತಿಬಿಂಬಿಸುವಂತಿದೆ. ಇಲ್ಲಿ ಅನೇಕ ಉತ್ಖನನ ಕಾರ್ಯಗಳು ಕೂಡ ನಡೆಯುತ್ತಿವೆ.

ಹಾಗೂ ಹಂಪಿಯ ಅಭಿವೃದ್ಧಿ ಕಾರ್ಯಗಳು ಕೂಡ ಸಾಗುತ್ತಿವೆ. ನನಗೆ ಇಲ್ಲಿಯ ಇತಿಹಾಸ ಪರಂಪರೆಯ ಬಗ್ಗೆ ಸಂಸದ ತುಕರಾಂ ಅವರು ವಿವರಿಸಿದ್ದರು. ಹಂಪಿಯ ಪ್ರಾಚೀನ ಸಂಸ್ಕತಿ ಕಣ್ತುಂಬಿಕೊಳ್ಳುವುದು ಹೆಮ್ಮೆಯ ಸಂಗತಿ ಎನಿಸುತ್ತಿದೆ ಎಂದು ಸಂತಸ ಪಟ್ಟರು.

