ಶಿರಾ-ಬಡವನಹಳ್ಳಿ ಹೆದ್ದಾರಿಗೆ ಹಣಕಾಸು ಸ್ಥಾಯಿ ಸಮಿತಿ ಒಪ್ಪಿಗೆ

News Desk

ಚಂದ್ರವಳ್ಳಿ ನ್ಯೂಸ್, ಶಿರಾ:
ಶಿರಾ-ಬಡವನಹಳ್ಳಿ ಬಳಿ ರಾಷ್ಟ್ರೀಯ ಹೆದ್ದಾರಿ- ೫೯ (ಶಿರಾ ನಗರ ಪರಿಮಿತಿ) ಅಭಿವೃದ್ಧಿಗಾಗಿರೂ. ೫೬೨ ಕೋಟಿ ಮೊತ್ತಕ್ಕೆ ಹಣಕಾಸು ಸ್ಥಾಯಿ ಸಮಿತಿ ಹಸಿರು ನಿಶಾನೆ ತೋರಿದೆ ಎಂದು ಸಂಸದ ಗೋವಿಂದ ಎಂ. ಕಾರಜೋಳ ತಿಳಿಸಿದ್ದಾರೆ.

ರಾಷ್ಟ್ರೀಯ ಹೆದ್ದಾರಿ- ೫೯ (ಹೊನ್ನಾವರ-ಬಾಣಾವರ) ಹೆದ್ದಾರಿಯು ಶಿರಾ ಬಳಿ ರಾಷ್ಟ್ರೀಯ ಹೆದ್ದಾರಿ-೪೮ನ್ನು (ಪೂನಾ-ಬೆಂಗಳೂರು) ಕಿ.ಮೀ. ೧೧೬.೮೦೦ ರಲ್ಲಿ ಛೇಧಿಸಿದ್ದು, ಹೊನ್ನಾವರ-ಬಾಣಾವರ ರಾಷ್ಟ್ರೀಯ ಹೆದ್ದಾರಿಯನ್ನು ಕಿ.ಮೀ. ೩೪೭ ರಿಂದ ೩೬೭ ರವರೆಗೆ ಶಿರಾ ಪಟ್ಟಣದ ಪರಿಮಿತಿಯಲ್ಲಿ ಸುಮಾರು ೨೦ ಕಿ.ಮೀ. ಉದ್ದದ ನಾಲ್ಕು ಪಥದ ಹೆದ್ದಾರಿಯನ್ನಾಗಿ ಮಾರ್ಪಡಿಸಲು ೨೦೨೪-೨೫ನೇ ಸಾಲಿನ EPC mode under Annual Plan 2024-25 (Engineering, Procurement & Construction) ನಲ್ಲಿ ಅಭಿವೃದ್ಧಿ ಪಡಿಸಲು ರೂ. ೫೬೨.೫೩ ಕೋಟಿ ಅನುದಾನ ಕೋರಿ ಸಮಗ್ರ ಯೋಜನಾ ವರದಿಯನ್ನು ಹೆದ್ದಾರಿ ವಿಭಾಗದವರು ಹೆದ್ದಾರಿ ಸಚಿವಾಲಯಕ್ಕೆ ಸಲ್ಲಿಸಿದ್ದರು.

ಇತ್ತೀಚಿಗೆ ಹೆದ್ದಾರಿ ಸಚಿವರಾದ ನಿತಿನ್‌ ಗಡ್ಕರಿಯವರನ್ನು ಸಂಸದರು ಭೇಟಿಯಾಗಿ ಚಿತ್ರದುರ್ಗ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಪ್ರಸ್ಥಾವನೆಗಳಿಗೆ ಅನುಮೋದನೆ ನೀಡುವಂತೆ ಮನವಿ ಮಾಡಿಕೊಂಡಿದ್ದರು. ಇದರ ಫಲವಾಗಿ ದೆಹಲಿಯಲ್ಲಿ ಶುಕ್ರವಾರ ನಡೆದ ಹಣಕಾಸು ಸ್ಥಾಯಿ ಸಮಿತಿ ಸಭೆಯಲ್ಲಿ ಚಿತ್ರದುರ್ಗ ಲೋಕಸಭಾ ಕ್ಷೇತ್ರ ವ್ಯಾಪ್ತಿಗೊಳಪಡುವ ಈ ಪ್ರಸ್ಥಾನವನೆಗೆ ಕ್ಲಿಯರೆನ್ಸ್ ನೀಡಲಾಗಿದೆ.

ಚಿತ್ರದುರ್ಗ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಅಭಿವೃದ್ಧಿ ಕೆಲಸಕ್ಕೆ ರೂ. ೫೬೨.೫೩ ಕೋಟಿ ಮೊತ್ತಕ್ಕೆ ಕ್ಲಿಯರೆನ್ಸ್ ನೀಡಿದ ಹಣಕಾಸು ಸ್ಥಾಯಿ ಸಮಿತಿ ಅಧ್ಯಕ್ಷರು, ನೀತಿ ಆಯೋಗದ ಸಲಹೆಗಾರರಿಗೆ ಮತ್ತು ಹೆದ್ದಾರಿ ಸಚಿವಾಲಯದ ಎಲ್ಲಾ ಅಧಿಕಾರಿಗಳಿಗೆ ಹಾಗೂ ಇಲಾಖೆಯ ಕೇಂದ್ರ ಮತ್ತು ರಾಜ್ಯ ಮಟ್ಟದ ಅಧಿಕಾರಿಗಳಿಗೆ ಸಂಸದರು ಧನ್ಯವಾದಗಳನ್ನು ತಿಳಿಸಿದ್ದಾರೆ.

ಮುಂದಿನ ಒಂದು ವಾರದೊಳಗೆ ಹೆದ್ದಾರಿ ಸಚಿವರಾದ ನಿತಿನ್‌ ಗಡ್ಕರಿಯವರು ರೂ. ೫೬೨.೫೩ ಕೋಟಿ ಅನುದಾನಕ್ಕೆ ಆಡಳಿತಾತ್ಮಕ ಅನುಮೋದನೆ ನೀಡಲಿದ್ದಾರೆ ಎಂದು ಸಂಸದರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Share This Article
error: Content is protected !!
";