ಚಂದ್ರವಳ್ಳಿ ನ್ಯೂಸ್, ಮೊಳಕಾಲ್ಮೂರು:
ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಮುಖ್ಯವಾಹಿನಿಗೆ ತರಬೇಕು ಎಂದು ತಹಶೀಲ್ದಾರ್ ನಾಗವೇಣಿ ಅಧಿಕಾರಿಗಳಿಗೆ ಸೂಚಿಸಿದರು.
ಮೊಳಕಾಲ್ಮೂರು ತಾಲ್ಲೂಕು ಕಚೇರಿಯಲ್ಲಿ ಶುಕ್ರವಾರ ಬಾಲ ಹಾಗೂ ಕಿಶೋರ ಕಾರ್ಮಿಕ ಪದ್ಧತಿ ನಿಷೇಧ ಕಾಯ್ದೆ 1986 ರ ಅಡಿ ಬಾಲ ಹಾಗೂ ಕಿಶೋರ ಕಾರ್ಮಿಕರನ್ನು ಪತ್ತೆ, ರಕ್ಷಣೆ ಮತ್ತು ಪುನರ್ವಸತಿ ಕಲ್ಪಿಸುವ ನಿಟ್ಟಿನಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮೊಳಕಾಲ್ಮೂರು ವ್ಯಾಪ್ತಿಯಲ್ಲಿ ಬಾಲ ಹಾಗೂ ಕಿಶೋರ ಕಾರ್ಮಿಕರನ್ನು ಪತ್ತೆ ಹಚ್ಚಿ ಅವರನ್ನು ಪುನಃ ಶಾಲೆಗೆ ಕಳುಹಿಸುವ ಕೆಲಸ ಆಗಬೇಕು. ಈ ಹಿನ್ನಲೆಯಲ್ಲಿ ಈಗಾಗಲೇ ಎರಡು ತಂಡಗಳನ್ನು ರಚಿಸಲಾಗಿದೆ. ಪ್ರತಿ ತಿಂಗಳಿಗೊಮ್ಮೆ ಪ್ರತ್ಯೇಕ ತಂಡಗಳು ಸೂಕ್ತ ಸ್ಥಳಗಳಿಗೆ ಭೇಟಿ ನೀಡಿ ಬಾಲ ಕಾರ್ಮಿಕರನ್ನು ರಕ್ಷಿಸಿ ಅವರ ಹಕ್ಕುಗಳನ್ನು ಕಾಪಾಡಬೇಕಿದೆ ಎಂದು ನಿರ್ದೇಶಿಸಿದರು.
ತದನಂತರ ತಹಶೀಲ್ದಾರ್ ನಾಗವೇಣಿ ನಿರ್ದೇಶನದಲ್ಲಿ ಮೊಳಕಾಲ್ಮೂರು ತಾಲ್ಲೂಕಿನ ರಾಂಪುರ ಗ್ರಾಮದಲ್ಲಿ ವಿವಿಧ ವಾಣಿಜ್ಯ ಸಂಸ್ಥೆಗಳಿಗೆ ಹಠಾತ್ ದಾಳಿ ನಡೆಸಿ, ಗ್ಯಾರೇಜ್‍ನಲ್ಲಿ ಕೆಲಸಕ್ಕೆ ನೇಮಿಸಿಕೊಂಡಿದ್ದ ಒಬ್ಬ ಬಾಲ ಕಾರ್ಮಿಕನನ್ನು ಪತ್ತೆ ಮಾಡಿ, ರಕ್ಷಣಾ ಕಾರ್ಯಾಚರಣೆ ಕೈಗೊಂಡು, ಬಾಲಕನನ್ನು ಮಕ್ಕಳ ಕಲ್ಯಾಣ ಸಮಿತಿಯ ಸುಪರ್ದಿಗೆ ಒಪ್ಪಿಸಲಾಯಿತು.
ಈ ಸಂದರ್ಭದಲ್ಲಿ ಚಳ್ಳಕೆರೆ ವೃತ್ತದ ಕಾರ್ಮಿಕ ನಿರೀಕ್ಷಕಿ ಟಿ. ಕುಸುಮ, ಜಿಲ್ಲಾ ಬಾಲ ಕಾರ್ಮಿಕ ಯೋಜನಾ ಸೊಸೈಟಿ ಯೋಜನಾ ನಿರ್ದೇಶಕ ಪಿ.ಸತೀಶ್ ಕುಮಾರ್, ಕ್ಷೇತ್ರ ಶಿಕ್ಷಣಾಧಿಕಾರಿ ನಿರ್ಮಲಾ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ನವೀನ್ ಕುಮಾರ್, ಮಕ್ಕಳ ಸಹಾಯವಾಣಿಯ ಸಂಯೋಜಕ ಚಂದನ, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಿಬ್ಬಂದಿ ಸಂತೋಷ್, ಆಶ್ರಿತ ಸಂಸ್ಥೆಯ ಬಟ್ರಳ್ಳಿ ಧನಂಜಯ, ಅಲೆಮಾರಿ ಪಂಗಡದ ಸಮಾಜದ ಮುಖಂಡ ಮಂಜುನಾಥ ಹಾಗೂ ಪೊಲೀಸ್ ಇಲಾಖೆಯ ಸಿಬ್ಬಂದಿಗಳು ಇದ್ದರು.

