ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ರೈತರು ಆತ್ಮಹತ್ಯೆ ಕುರಿತು ಸುಳ್ಳು ಸುದ್ದಿ ಹರಡಿರುವ ಕುರಿತು ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಮತ್ತು ಕೆಲವು ಕನ್ನಡ ಸುದ್ದಿ ತಾಣಗಳ ವಿರುದ್ಧ ಎಫ್ಐಆರ್ ದಾಖಲಾಗಿದೆ.
ವಕ್ಫ್‌ಬೋರ್ಡ್‌ಆಸ್ತಿ ವಿಚಾರ ಮತ್ತು ರೈತರ ಆತ್ಮಹತ್ಯೆ ತಳಕು ಹಾಕಿದ್ದಕ್ಕಾಗಿ ಪ್ರಕರಣ ದಾಖಲಿಸಿರುವುದಾಗಿ ಪೊಲೀಸರು ಶುಕ್ರವಾರ ತಿಳಿಸಿದ್ದಾರೆ.
ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಅವರು, ನವೆಂಬರ್ 7 ರಂದು ಮೈಕ್ರೋಬ್ಲಾಗಿಂಗ್ ತಾಣ ಎಕ್ಸ್ ನಲ್ಲಿ ಸುದ್ದಿ ತಾಣ ಒಂದರ ಸ್ಟೋರಿ ಶೇರ್ ಮಾಡಿದ್ದು, ಹಾವೇರಿ ಜಿಲ್ಲೆಯಲ್ಲಿ ರೈತರೊಬ್ಬರು ತಮ್ಮ ಜಮೀನು ಪಹಣಿಯಲ್ಲಿ ವಕ್ಫ್‌ಎಂದು ಕಂಡ ಕಾರಣ ಆತ್ಮಹತ್ಯೆ ಮಾಡಿಕೊಂಡದ್ದಾಗಿ ಉಲ್ಲೇಖಿಸಿದ್ದರ ಕಡೆಗೆ ಗಮನಸೆಳೆದಿದ್ದರು.
ಅಲ್ಲದೆ, ಅಲ್ಪಸಂಖ್ಯಾತರ ಓಲೈಕೆ ಮಾಡುತ್ತ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಸಚಿವ ಜಮೀರ್ ಅಹ್ಮದ್ ಖಾನ್ ಕರ್ನಾಟಕದಲ್ಲಿ ದುರಂತಮಯ ಸನ್ನಿವೇಶಕ್ಕೆ ಕಾರಣವಾಗಿದ್ದಾರೆ. ನಿತ್ಯದ ಬದುಕು ಕಷ್ಟವಾಗತೊಡಗಿದೆ ಎಂದು ಟೀಕಿಸಿದ್ದರು.
ಇದರ ವಿರುದ್ಧ ಹಾವೇರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಟ್ವೀಟ್ ರುದ್ರಪ್ಪ ಚನ್ನಪ್ಪ ಬಾಳಿಕಾಯಿ ಎಂಬುವವರ ಆತ್ಮಹತ್ಯೆ ಪ್ರಕರಣಕ್ಕೂ ವಕ್ಫ್ ಪ್ರಕರಣಕ್ಕೂ ಯಾವುದೇ ಸಂಬಂಧ ಇಲ್ಲ. ಈ ಆತ್ಮಹತ್ಯೆ 2022ರ ಜನವರಿ 6 ರಂದು ಆಗಿದ್ದು, ಸಾಲ ಮತ್ತು ಕೃಷಿ ನಷ್ಟಕ್ಕೆ ಕೊರಗಿ ರೈತ ಆತ್ಮಹತ್ಯೆ ಮಾಡಿಕೊಂಡಿದ್ದರು. ಕನ್ನಡ ನ್ಯೂಸ್ ನೌ ತಾಣ ಸುಳ್ಳು ಸುದ್ದಿ ಪ್ರಕಟಿಸಿದೆ ಎಂದು ಹಾವೇರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಟ್ವೀಟ್ ಮಾಡಿದ್ದರು.
ಹಾವೇರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅವರಿಂದ ಈ ಸ್ಪಷ್ಟೀಕರಣ ಬಂದ ಕೂಡಲೇ ಸಂಸದ ತೇಜಸ್ವಿ ಸೂರ್ಯ ಅವರು ತಮ್ಮ ಟ್ವೀಟ್ ಅನ್ನು ಡಿಲೀಟ್ ಮಾಡಿದ್ದಾರೆ. ಅಷ್ಟೇ ಅಲ್ಲ, ಹಾವೇರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಪತ್ರಿಕಾ ಹೇಳಿಕೆ ಟ್ವೀಟ್‌ಗೆ ಪ್ರತಿಕ್ರಿಯೆಯನ್ನೂ ನೀಡಿದ್ದಾರೆ.
ತಾನು ಇನ್ನು ಸುಳ್ಳು ಸುದ್ದಿ ಹರಡುವ ತಾಣದ ವರದಿಯನ್ನು ನಂಬುವುದಿಲ್ಲ. ಈಗ ವಿಷಯ ಸ್ಪಷ್ಟವಾಗಿದೆ ಎಂದು ಹೇಳಿದ್ದಾರೆ. ಹಾವೇರಿ ಜಿಲ್ಲಾ ಪೊಲೀಸ್‌ನ ಸಾಮಾಜಿಕ ಮಾಧ್ಯಮ ಮೇಲ್ವಿಚಾರಣಾ ಕೋಶದಲ್ಲಿ ಪೊಲೀಸ್ ಅಧಿಕಾರಿಯೊಬ್ಬರು ನೀಡಿದ ದೂರಿನ ಆಧಾರದ ಮೇಲೆ, ಕಲಂ 353 (2) ಅಡಿಯಲ್ಲಿ ಕನ್ನಡ ದುನಿಯಾ ಇ-ಪೇಪರ್ ಮತ್ತು ಕನ್ನಡ ನ್ಯೂಸ್ ಇ-ಪೇಪರ್ ಸಂಪಾದಕ ಮತ್ತು ಸಂಸದ ತೇಜಸ್ವಿ ಸೂರ್ಯ ವಿರುದ್ಧ ಪ್ರಕರಣ ದಾಖಲಾಗಿದೆ.