ಚಂದ್ರವಳ್ಳಿ ನ್ಯೂಸ್, ದಾವಣಗೆರೆ:
ತಪ್ಪು ಮಾಹಿತಿ, ನಕಲಿ ದಾಖಲೆ ನೀಡಿ ವೃದ್ಧಾಪ್ಯ ವೇತನ ಪಡೆಯುತ್ತಿದ್ದ ರೋಪಿಗಳ ವಿರುದ್ಧ ಬಸವಾಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಬಸವಾಪಟ್ಟಣ ಹೋಬಳಿಯ ಯಲೋದಹಳ್ಳಿ-ದಾಗಿನಕಟ್ಟೆ ಗ್ರಾಮಗಳಲ್ಲಿ ಸರ್ಕಾರಕ್ಕೆ ತಪ್ಪು ಮಾಹಿತಿ ನೀಡಿ ವೃದ್ಧಾಪ್ಯ ವೇತನ ಪಡೆಯುತ್ತಿದ್ದ ಒಟ್ಟು 23 ಜನರ ವಿರುದ್ಧ ಎಫ್ಐಆರ್ ದಾಖಲು ಮಾಡಲಾಗಿದೆ.
ವೃದ್ಧರಿಗೆ ಸೇರಬೇಕಿದ್ದ ವೃದ್ಧಾಪ್ಯ ವೇತನ ಪರರ ಪಾಲಾಗುತ್ತಿರುವುದನ್ನು ಅಧಿಕಾರಿಗಳು ತಡೆದಿದ್ದಾರೆ. ಈ ಸಂಬಂಧ ಇಲ್ಲಿ ತನಕ ಸುಳ್ಳು ಮಾಹಿತಿ ನೀಡಿ ವೇತನ ಪಡೆದಿದ್ದಾರೆ. ಒಟ್ಟು 23 ಜನರ ವಿರುದ್ಧ ಬಸವಾಪಟ್ಟಣ ಪೋಲಿಸ್ ಠಾಣೆಯಲ್ಲಿ ಮಾರ್ಚ್ ತಿಂಗಳಲ್ಲಿ ಪ್ರಕರಣ ದಾಖಲು ಮಾಡಿದ್ದಾರೆ.
ವೃದ್ಧಾಪ್ಯ ವೇತನ: ಕೇಂದ್ರ ಸರ್ಕಾರದ ಇಂದಿರಾ ಗಾಂಧಿ ರಾಷ್ಟ್ರೀಯ ವೃದ್ಧಾಪ್ಯ ಪಿಂಚಣಿ ಯೋಜನೆ ಮತ್ತು ರಾಜ್ಯ ಸರ್ಕಾರ ನೇತೃತ್ವದ ಸಂಧ್ಯಾ ಸುರಕ್ಷಾ ಯೋಜನೆ ದುರ್ಬಳಕೆ ಮಾಡಿಕೊಂಡಿರುವವರ ವಿರುದ್ಧ ದೂರು ದಾಖಲಾಗಿದ್ದು, ಈ ಎರಡೂ ಯೋಜನೆಗಳ ಪೈಕಿ ಒಟ್ಟು 1,11,200 ಲಕ್ಷ ರೂ.ಗಳನ್ನು 23 ಜನ ಅನರ್ಹ ಫಲಾನುಭವಿಗಳ ಪಾಲಾಗಿದೆ ಎಂದು ತನಿಖೆಯಲ್ಲಿ ತಿಳಿದು ಬಂದಿದೆ ಎಂದು ಹೊನ್ನಾಳಿ ಕಂದಾಯ ಉಪವಿಭಾಗದ ಉಪ ವಿಭಾಗಾಧಿಕಾರಿ ವಿ.ಅಭಿಷೇಕ್ ತಿಳಿಸಿದ್ದಾರೆ.
ಸರ್ಕಾರದ ಬೊಕ್ಕಸಕ್ಕೆ ನಷ್ಟ ಮಾಡಿರುವ ಹಣವನ್ನು ಆರೋಪಿಗಳಿಂದಲೇ ವಸೂಲಿ ಮಾಡುವಂತೆ ತನಿಖೆಯಲ್ಲಿ ಶಿಫಾರಸು ಕೂಡ ಮಾಡಲಾಗಿದೆ.
ಅಕ್ರಮ ಬಯಲು: ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ್ ಸ್ವಾಮಿ ಅವರ ಆದೇಶದಂತೆ ದಾಗಿನಕಟ್ಟೆ ಹಾಗೂ ಯಲೋದಹಳ್ಳಿ ಗ್ರಾಮಗಳಿಗೆ ಹೊನ್ನಾಳಿ ಕಂದಾಯ ಉಪ ವಿಭಾಗಾಧಿಕಾರಿ ವಿ.ಅಭಿಷೇಕ್ ಭೇಟಿ ನೀಡಿ ಪರಿಶೀಲನೆ ನಡೆಸಿದಾಗ ಈ ಅಕ್ರಮ ಬೆಳಕಿಗೆ ಬಂದಿದೆ.
ದಾಗಿನಕಟ್ಟೆ ಹಾಗೂ ಯಲೋದಹಳ್ಳಿ ಈ 2 ಗ್ರಾಮಗಳಲ್ಲಿ ವೃದ್ಧಾಪ್ಯ ವೇತನ ಪಡೆಯುತ್ತಿರುವವರ ಮನೆಗಳಿಗೆ ತೆರಳಿ ಪರಿಶೀಲಿಸಿದ್ದರು. ಈ ವೇಳೆ 23 ಜನ ಅನರ್ಹರು ವೃದ್ಧಾಪ್ಯ ವೇತನ ಹಾಗೂ 6 ಜನರು ಅಂಗವಿಕಲರ ಮಾಸಾಶನ ಪಡೆಯುತ್ತಿರುವುದು ಪತ್ತೆಯಾಗಿದೆ. ಈ ಹಿನ್ನೆಲೆ ತಪ್ಪು ಮಾಹಿತಿ ನೀಡಿ ಹಲವು ತಿಂಗಳಿಂದ ಪಡೆದಿದ್ದ ಮಾಸಾಶನಕ್ಕೆ ತಡೆ ಒಡ್ಡಲಾಗಿದೆ.
ಜಿಲ್ಲಾಧಿಕಾರಿ ಗಮನಕ್ಕೆ ತಂದಿದ್ದ ಜನಪ್ರತಿನಿಧಿ:
ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ್ ಸ್ವಾಮಿ ಅವರ ಗಮನಕ್ಕೆ ಜನಪ್ರತಿನಿಧಿ ಒಬ್ಬರು ತಂದಿದ್ದರು. ಚನ್ನಗಿರಿ ತಾಲೂಕಿನ ಬಸವಾಪಟ್ಟಣ ಹೋಬಳಿ ಯಲೋದಹಳ್ಳಿ, ದಾಗಿನಕಟ್ಟೆ ವೃದ್ಧಾಪ್ಯ ವೇತನ ಅನರ್ಹರ ಪಾಲಾಗುತ್ತಿದ್ದ ವಿಚಾರವನ್ನು ತಿಳಿಸಿದ್ದರು ಎನ್ನಲಾಗಿದೆ.
ಈ ಮಾಹಿತಿ ಆಧರಿಸಿ ಜಿಲ್ಲಾಧಿಕಾರಿಗಳು ಹೊನ್ನಾಳಿ ಉಪವಿಭಾಗಾಧಿಕಾರಿ ವಿ. ಅಭಿಷೇಕ್ ಅವರಿಗೆ ತನಿಖೆಗೆ ಆದೇಶಿಸಿದ್ದರು. ತನಿಖಾಧಿಕಾರಿಯಾಗಿ ಅಭಿಷೇಕ್ ಅವರು ಸಿಬ್ಬಂದಿಯೊಂದಿಗೆ ಮಾರ್ಚ್‌ತಿಂಗಳಲ್ಲಿ ಎರಡು ಗ್ರಾಮಕ್ಕೆ ತೆರಳಿ ತನಿಖೆ ನಡೆಸಿ ಜಿಲ್ಲಾಧಿಕಾರಿಗೆ ವರದಿ ಸಲ್ಲಿಸಿದ್ದರು.
ಉಪ ತಹಶೀಲ್ದಾರ್ ವಿರುದ್ಧ ಕ್ರಮ: ಬಸವಾಪಟ್ಟಣ ಹೋಬಳಿಯ ಉಪ ತಹಶೀಲ್ದಾರ್ ನೀಲಮ್ಮ ಅವರು ದಾಖಲೆಗಳನ್ನು ಕೂಲಂಕಷವಾಗಿ ಪರಿಶೀಲಿಸದೇ ಮಂಜೂರಾತಿ ನೀಡಿದ್ದರಿಂದ ವೃದ್ಧಾಪ್ಯ ವೇತನ ಪ್ರಕರಣದಲ್ಲಿ ತಪ್ಪಿತಸ್ಥರು ಎಂಬುದು ಮೇಲ್ನೋಟಕ್ಕೆ ಕಂಡು ಬಂದಿದ್ದು ಎಂದು ಹೊನ್ನಾಳಿ ಎಸಿ ವಿ ಅಭಿಷೇಕ್ ತಿಳಿಸಿದ್ದಾರೆ.