ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಇತ್ತೀಚಿಗೆ ಆತ್ಮಹತ್ಯೆ ಮಾಡಿಕೊಂಡ ಮಹಿಳಾ ವಕೀಲೆಯೊಬ್ಬರ ಡೆತ್ ನೋಟ್ ಆರೋಪದ ನಂತರ ಮಹಿಳಾ ಡಿವೈಎಸ್ ಪಿ ವಿರುದ್ಧ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ.
ರಾಜ್ಯ ಭೋವಿ ನಿಗಮ ಹಗರಣ ಕುರಿತಾದ ತನಿಖೆಗೆ ಸಂಬಂಧ ಪೊಲೀಸ್ ಅಧಿಕಾರಿ ವಿವಸ್ತ್ರಗೊಳಿಸಿ ವಿಚಾರಣೆ ನಡೆಸಿದ್ದಲ್ಲದೆ, 25 ಲಕ್ಷ ರೂ. ಲಂಚ ನೀಡುವಂತೆ ಬೇಡಿಕೆ ಇಟ್ಟಿದ್ದ ಕುರಿತು ರಾಘವೇಂದ್ರ ಲೇಔಟ್ ನ ಮನೆಯಲ್ಲಿ ನವೆಂಬರ್ 22 ರಂದು ಆತ್ಮಹತ್ಯೆಗೆ ಶರಣಾಗಿದ್ದ ವಕೀಲೆ ಜೀವಾ ಬರೆದಿಟ್ಟಿದ್ದ ಡೆತ್ ನೋಟ್ ಆಧಾರದ ಮೇಲೆ ಸಿಐಡಿ ಡಿವೈಎಸ್ ಪಿ ಕನಕಲಕ್ಷ್ಮಿ ವಿರುದ್ಧ ಬನಶಂಕರಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಆರೋಪಿ ಪೊಲೀಸ್ ಅಧಿಕಾರಿ ವಿರುದ್ಧ ಎಫ್ಐಆರ್ ದಾಖಲಾದ ನಂತರ ಸಿಸಿಬಿಯಿಂದ ತನಿಖೆಗೆ ನಗರ ಪೊಲೀಸ್ ಆಯುಕ್ತ ಬಿ. ದಯಾನಂದ ಆದೇಶಿಸಿದ್ದಾರೆ.
ಏನಿದು ಹಗರಣ:
ಭೋವಿ ಅಭಿವೃದ್ಧಿ ನಿಗಮದಲ್ಲಿ ಸಾಲ ಕೊಡಿಸುವುದಾಗಿ ಹಲವು ಮಹಿಳೆಯರಿಂದ ಹಣ ಪಡೆದು ವಂಚಿಸಲಾಗಿದೆ ಎಂದು ಆರೋಪಿಸಿ ಸಂತ್ರಸ್ತರಾದ ಕೆ.ಎನ್. ಸೂರ್ಯ ಕಲಾವತಿ ಎಂಬುವರು ಕಳೆದ ಮಾರ್ಚ್-18, 2023ರಲ್ಲಿ ಸಿದ್ದಾಪುರ ಠಾಣೆಯಲ್ಲಿ ದೂರು ದಾಖಲಿಸಿದ್ದನ್ನು ಸ್ಮರಿಸಬಹುದಾಗಿದೆ.
ಸರಸ್ವತಿ ಮತ್ತು ಲಕ್ಷ್ಮಿಯವರು ಸಂಪರ್ಕಿಸಿದ 40 ಮಹಿಳೆಯರಲ್ಲಿ ಸೂರ್ಯಕಲಾವತಿ ಒಬ್ಬರು. ಒಂದು ತಿಂಗಳ ನಂತರ 50,000 ರೂ.ಗಳನ್ನು ಮಂಜೂರು ಮಾಡಲಾಗಿದ್ದು, ಒಪ್ಪಂದದಂತೆ 25,000 ರೂ.ಗಳನ್ನು ಅವರ ಖಾತೆಯಿಂದ ಹಿಂಪಡೆಯಲಾಗಿದೆ ಎಂದು ಆರೋಪಿತ ಮಹಿಳೆಯರು ಸೂರ್ಯಕಲಾವತಿ ಅವರಿಗೆ ಹೇಳಿದ್ದಾರೆ.
ಭೋವಿ ಅಭಿವೃದ್ಧಿ ನಿಗಮದ ಅಧಿಕಾರಿಗಳು ಅವರನ್ನು ಸಂಪರ್ಕಿಸಿದ್ದು, ಅವರು ತೆಗೆದುಕೊಂಡಿರುವ 5 ಲಕ್ಷ ರೂ. ಸಾಲ ಮರುಪಾವತಿಸಬೇಕೆಂದು ಹೇಳಿದ್ದಾರೆ. ಇದನ್ನು ತಿಳಿದು ಬೆಚ್ಚಿಬಿದ್ದ ಆಕೆ ಬ್ಯಾಂಕ್‌ಗೆ ತೆರಳಿ ಪರಿಶೀಲಿಸಿದಾಗ ಭೋವಿ ಅಭಿವೃದ್ಧಿ ನಿಗಮದಿಂದ 5 ಲಕ್ಷ ಮಂಜೂರು ಆಗಿರುವುದು ತಿಳಿದುಬಂದಿದೆ.
5 ಲಕ್ಷದ ಹಣದಲ್ಲಿ 4,75,000 ರೂ.ಗಳನ್ನು ನ್ಯೂ ಡ್ರೀಮ್ಸ್ ಎಂಟರ್‌ಪ್ರೈಸಸ್‌ಗೆ ವರ್ಗಾಯಿಸಲಾಗಿದೆ. ಆಕೆಯ ದೂರಿನ ಆಧಾರದ ಮೇಲೆ ಸಿಐಡಿ ತನಿಖೆ ಆರಂಭಿಸಿತ್ತು. ತನಿಖೆಯ ಸಂದರ್ಭದಲ್ಲಿ, ಹಲವಾರು ವ್ಯಕ್ತಿಗಳನ್ನು ವಿಚಾರಣೆಗೆ ಒಳಪಡಿಸಲಾಗಿತ್ತು. ಅವರಲ್ಲಿ ವಕೀಲೆ ಜೀವಾ ಕೂಡಾ ಒಬ್ಬರಾಗಿದ್ದರು. ಆಕೆಯನ್ನು ವಿಚಾರಣೆಗಾಗಿ ಕರೆಸಿ ಹಣಕ್ಕೆ ಬೇಡಿಕೆ ಇಡಲಾಗಿತ್ತು ಎನ್ನಲಾಗಿದೆ.