ಚಂದ್ರವಳ್ಳಿ ನ್ಯೂಸ್, ಹುಬ್ಬಳ್ಳಿ:
ಸಾಮಾಜಿಕ ಜಾಲತಾಣಗಳನ್ನು ದುರ್ಬಳಕೆ ಮಾಡಿಕೊಂಡು ಸಮಾಜದಲ್ಲಿ ಹವಾ ಸೃಷ್ಟಿ ಮಾಡುತ್ತಿದ್ದ 28 ರೌಡಿಶೀಟರ್ಗಳ ಮೇಲೆ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.
ಹುಬ್ಬಳ್ಳಿ- ಧಾರವಾಡ ಪೊಲೀಸ್ ಕಮಿಷನರ್ ಎನ್.ಶಶಿಕುಮಾರ್ ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ನಗರದಲ್ಲಿ ರೌಡಿಶೀಟರ್ ಚಟುವಟಿಕೆ ನಡೆಸುವವರ ಮೇಲೆ ನಿರಂತರ ಕ್ರಮ ವಹಿಸಿದ್ದೇವೆ. 1,700 ರೌಡಿಗಳನ್ನು ಎ, ಬಿ, ಸಿ ವರ್ಗ ಮಾಡಿ ಕ್ರಮ ಕೈಗೊಳ್ಳುತ್ತಾ ಬಂದಿದ್ದೇವೆ. 1,158 ಜನರ ಮೇಲೆ ಮುಂಜಾಗ್ರತಾ ಕ್ರಮವಾಗಿ ಬಾಂಡ್ ಬರೆಸಿಕೊಂಡಿದ್ದೇವೆ. 52 ರೌಡಿ ಶೀಟರ್ ಗಳಿಗೆ ಗಡಿಪಾರು ಆದೇಶ ಹೊರಡಿಸಿದ್ದೇವೆ. ಪ್ರಮುಖ ರೌಡಿಶೀಟರ್ಗಳ ಮೇಲೆ ಗೂಂಡಾ ಆ್ಯಕ್ಟ್ ಹಾಕಿದ್ದೇವೆ ಎಂದು ಮಾಹಿತಿ ನೀಡಿದರು.
ಚಿಕ್ಕ ಮಕ್ಕಳು ಕೂಡ ಇತ್ತೀಚೆಗೆ ಚಾಕು ಇರಿಯುವ ಪ್ರಕರಣ ಬೆಳಕಿಗೆ ಬಂದಿದೆ. ಸಾಮಾಜಿಕ ಜಾಲತಾಣಗಳನ್ನು ತಮ್ಮ ವೈಭವಕ್ಕೆ ಉಪಯೋಗಿಸಿಕೊಳ್ಳುತ್ತಿರುವವರ ಮೇಲೆ ನಿಗಾ ಇಟ್ಟಿದ್ದೇವೆ. 28 ಪ್ರತ್ಯೇಕ ಪ್ರಕರಣ ದಾಖಲಿಸಿಕೊಂಡಿದ್ದೇವೆ. ಈ ಪ್ರಕರಣಗಳಲ್ಲಿ 58 ರೌಡಿಶೀಟರ್ಗಳನ್ನು ಗುರಿಯಾಗಿಸಿಕೊಂಡಿದ್ದೇವೆ ಎಂದು ಶಶಿಕುಮಾರ್ ತಿಳಿಸಿದರು.
700 ಸಾಮಾಜಿಕ ಜಾಲತಾಣಗಳ ಖಾತೆಗಳ ಮೇಲೆ ಹದ್ದಿನ ಕಣ್ಣನ್ನು ಇರಿಸಲಾಗಿದೆ. ಕಾಮೆಂಟ್ಗಳನ್ನು ಸಹ ಪರಿಶೀಲನೆ ನಡೆಸಿದ್ದೇವೆ. ತಲ್ವಾರ್ ಸೇರಿ ಆಯುಧಗಳನ್ನು ಇಟ್ಟುಕೊಂಡು ವೈಯಕ್ತಿಕ ವೈಭವೀಕರಣ ಮಾಡುವಂತವರ ಮೇಲೆ ಕ್ರಮ ಕೈಗೊಳ್ಳಲಾಗಿದೆ ಎಂದು ಆಯುಕ್ತರು ಮಾಹಿತಿ ನೀಡಿದರು.
ಅಪರಾಧ ಜಗತ್ತಿಗೆ ಯುವ ಸಮುದಾಯ ಸೆಳೆಯುವಂತೆ ಮಾಡುವುದು, ಪ್ರತಿಭಟನೆ, ಧಾರ್ಮಿಕ ಕಾರ್ಯಕ್ರಮಗಳಲ್ಲಿ ಬೆಂಬಲಿಗ ಪಡೆ ಮಾಡಿಕೊಂಡು ಭಯಪಡಿಸುವ ವಾತಾವರಣ ಸೃಷ್ಟಿ ಮಾಡುವುದು. ಶಾಲಾ-ಕಾಲೇಜು ಆವರಣದಲ್ಲಿ ವಿದ್ಯಾರ್ಥಿಗಳಿಗೆ ಭಯ ಹುಟ್ಟಿಸುವ ವಿಡಿಯೋಗಳನ್ನು ತಮ್ಮ ಸಾಮಾಜಿಕ ಜಾಲತಾಣ ಖಾತೆಗಳಲ್ಲಿ ಹರಿಬಿಡುತ್ತಾರೆ. ಹೀಗಾಗಿ, ಹು-ಧಾ ಕಾನೂನು-ಸುವ್ಯವಸ್ಥೆಯ 15 ಠಾಣೆಗಳಲ್ಲಿ ಒಟ್ಟು 28 ಪ್ರಕರಣಗಳನ್ನು ದಾಖಲಿಸಿದ್ದೇವೆ ಎಂದು ಆಯುಕ್ತರು ವಿವರಿಸಿದರು.
ಸಮಾಜಘಾತುಕ ಕೃತ್ಯಗಳಲ್ಲಿ ಭಾಗಿಯಾಗಿರುವಂತ ಸೋಶಿಯಲ್ ಮೀಡಿಯಾ ಅಕೌಂಟ್ಗಳನ್ನು ಬಂದ್ ಮಾಡುವ ಕೆಲಸವನ್ನೂ ಸಹ ಮಾಡಲಾಗುತ್ತಿದೆ. ಸಾಮಾಜಿಕ ಜಾಲತಾಣಗಳ ಮೇಲೆ ನಮ್ಮ ಹಿರಿಯ ಅಧಿಕಾರಿಗಳು ನಿಗಾ ಇಡುತ್ತಿದ್ದಾರೆ. ನಮಗೆ ಗೃಹ ಇಲಾಖೆಯಿಂದ ಈ ಬಗ್ಗೆ ನಿರ್ದೇಶನ ಬಂದಿತ್ತು. ಈ ಹಿನ್ನೆಲೆಯಲ್ಲಿ ಕಳೆದ ಹಲವು ದಿನಗಳಿಂದ ಕಾರ್ಯಾಚರಣೆ ನಡೆಸುತ್ತಿದ್ದೇವೆ” ಎಂದು ಪೊಲೀಸ್ ಆಯುಕ್ತ ಶಶಿಕುಮಾರ್ ಮಾಹಿತಿ ನೀಡಿದರು.
ಇತ್ತೀಚೆಗೆ ನಮ್ಮಲ್ಲೇ ಒಂದು ಬಾಲಕಿಯ ಸಾವಾಗಿತ್ತು. ಮಕ್ಕಳ ರಕ್ಷಣೆ ಕೇವಲ ಇಲಾಖೆಗಳ ಜವಾಬ್ದಾರಿ ಅಲ್ಲ. ಪ್ರತಿಯೊಬ್ಬ ಪೋಷಕರು, ನಾಗರಿಕರ ಜವಾಬ್ದಾರಿಯಾಗಿದೆ. ಈ ರೀತಿಯ ಹಲವು ಪ್ರಕರಣಗಳು ನಮ್ಮ ವ್ಯಾಪ್ತಿಯಲ್ಲಿ ನಡೆದಿವೆ. 2023ರ ಏಪ್ರಿಲ್ನಲ್ಲಿ 7 ವರ್ಷದ ಮಗುವಿನ ಮೇಲೆ 26 ವರ್ಷದ ಯುವಕ ದೌರ್ಜನ್ಯ ಎಸಗಿದ್ದ. ಆ ಪ್ರಕರಣದಲ್ಲಿ ಪೋಕ್ಸೋ ನ್ಯಾಯಾಲಯ ಅಪರಾಧಿಗೆ 5 ವರ್ಷ ಜೈಲು ಶಿಕ್ಷೆ ಹಾಗೂ 15 ಸಾವಿರ ರೂ. ದಂಡ ವಿಧಿಸಿದೆ ಎಂದು ಆಯುಕ್ತ ಎನ್.ಶಶಿಕುಮಾರ್ ಮಾಹಿತಿ ನೀಡಿದರು.