ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಮೀಸಲಾತಿಯಿಂದ ವಂಚಿತರಾದವರಿಗೆ ಸಾಮಾಜಿಕ ನ್ಯಾಯ ಒದಗಿಸಲು ಒಳ ಮೀಸಲಾತಿ ಜಾರಿಗೊಳಿಸಬೇಕು ಎಂದು ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದರು.
ಶಿವಶರಣ ಮಾದಾರ ಚನ್ನಯ್ಯ ಗುರುಪೀಠದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ನಾಗಮೋಹನ್ ದಾಸ್ ಆಯೋಗ ದತ್ತಾಂಶ ಸಂಗ್ರಹಿಸಿ ಈಗಾಗಲೆ ರಾಜ್ಯ ಸರ್ಕಾರಕ್ಕೆ ವರದಿ ಸಲ್ಲಿಸಿದೆ. ಪರಿಶಿಷ್ಟ ಜಾತಿಯಲ್ಲಿನ 101 ಜಾತಿಗಳಿಗೆ ನ್ಯಾಯ ಸಿಗಬೇಕಾಗಿರುವುದರಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯ ಮಂತ್ರಿ ಡಿ.ಕೆ.ಶಿವಕುಮಾರ್ ಇವರುಗಳನ್ನು ಭೇಟಿ ಮಾಡಿ ಒಳ ಮೀಸಲಾತಿ ಜಾರಿಗೊಳಿಸುವಂತೆ ಮನವಿ ಮಾಡಿದ್ದೇವೆ. ನಮ್ಮ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಸ್ವಾಮೀಜಿಗಳು ತಿಳಿಸಿದರು. ಸಹೋದರ ಸಮುದಾಯದ ಕೆಲವು ನಾಯಕರುಗಳಿಂದ ಗೊಂದಲಗಳು ಕೇಳಿ ಬರುತ್ತಿವೆ.
ಎಡಗೈ ಸಮುದಾಯಕ್ಕೆ ಸೇರಿದ ಕೆಲವರನ್ನು ಬಲಗೈ ಸಮುದಾಯಕ್ಕೆ, ಬಲಗೈ ಸಮುದಾಯಕ್ಕೆ ಸೇರಿದ ಕೆಲವರನ್ನು ಎಡಗೈ ಸಮುದಾಯಕ್ಕೆ ಸೇರಿಸಲಾಗಿದೆ. ಅದೇನೆ ಇದ್ದರೂ ಮೊದಲು ಮೀಸಲಾತಿ ಜಾರಿಗೊಳಿಸಿ ನಂತರ ಗೊಂದಲಗಳನ್ನು ಸರಿಪಡಿಸಿಕೊಳ್ಳಲಿ ಎಂದು ಮಾದಾರಶ್ರೀಗಳು ಒತ್ತಾಯಿಸಿದರು.
ರಾಜ್ಯ ಸರ್ಕಾರ 19 ರಂದು ಕರೆದಿರುವ ವಿಶೇಷ ಸಚಿವ ಸಂಪುಟದ ಸಭೆಯಲ್ಲಿ ಚರ್ಚಿಸಿ ಒಳ ಮೀಸಲಾತಿ ಜಾರಿಗೊಳಿಸಬೇಕು. ಯಾವುದೇ ಕಾರಣಕ್ಕೂ ಮುಂದೂಡಬಾರದು, ಅಲ್ಲದೆ ಮತ್ತೊಂದು ಉಪ ಸಮಿತಿ ಅಥವಾ ಸಂಪುಟ ಸಮಿತಿ ರಚನೆ ಮಾಡಿ ಕಾಲಹರಣ ಮಾಡುವ ಅಗತ್ಯವಿಲ್ಲ ಎಂದು ಸ್ವಾಮೀಜಿಗಳು ಹೇಳಿದರು.
ಸರ್ಕಾರ ಮತ್ತೊಂದು ಉಪ ಸಮಿತಿ ರಚಿಸುವುದಾಗಿ ಸಾರ್ವಜನಿಕರಿಂದ ಊಹಾಪೋಹಗಳು ಕೇಳಿ ಬರುತ್ತಿವೆ. ನಮ್ಮ ಮಠ 101 ಜಾತಿಗಳ ಹಿತವನ್ನು ಬಯಸುತ್ತದೆ. ಯಾರಿಗೂ ಅನ್ಯಾಯವಾಗುವುದು ಬೇಡ. ಆಯಾ ಜಾತಿಗನುಗುಣವಾಗಿ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ದೊರಕಲಿ ಎಂದು ಬಸವಮೂರ್ತಿ ಮಾದಾರ ಚನ್ನಯ್ಯಸ್ವಾಮೀಜಿಗಳು ಹೇಳಿದರು.

