ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ವಾಣಿಜ್ಯ ಕಟ್ಟಡದಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ ಒಂದೇ ಕುಟುಂಬದ ನಾಲ್ವರು ಸೇರಿ ಐವರು ಸಾವನ್ನಪ್ಪಿರುವ ದುರ್ಘಟನೆ ಬೆಂಗಳೂರಿನ ಕೆ.ಆರ್ ಮಾರ್ಕೆಟ್ ಬಳಿಯ ನಗರ್ತಪೇಟೆಯಲ್ಲಿ ನಡೆದಿದೆ.
ಅಗ್ನಿ ದುರಂತದಲ್ಲಿ ಒಂದೇ ಕುಟುಂಬಕ್ಕೆ ಸೇರಿದ ಮದನ್ (38), ಪತ್ನಿ ಸಂಗೀತಾ(33) ಮಿತೇಶ್(8), ವಿಹಾನ್ (5) ಸಜೀವ ದಹನವಾಗಿದ್ದಾರೆ. ಮತ್ತೊಂದು ಮಹಡಿಯಲ್ಲಿ ಸುರೇಶ್ ಎಂಬವರೂ ಸುಟ್ಟು ಕರಕಲಾಗಿದ್ದಾರೆ. ಘಟನಾ ಸ್ಥಳಕ್ಕೆ ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಭೇಟಿ ನೀಡಿ ಪರಿಶೀಲಿಸಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿ,
ರಾತ್ರಿ 2.30ರ ಸುಮಾರಿಗೆ ಅಗ್ನಿ ಅವಗಢ ಸಂಭವಿಸಿದ ಮಾಹಿತಿ ಬಂತು. ಅಗ್ನಿಶಾಮಕ ದಳದವರು ಮತ್ತು ಪೊಲೀಸರು ಪರಿಶೀಲನೆ ಮಾಡುತ್ತಿದ್ದಾರೆ ಎಂದು ತಿಳಿಸಿದರು. ಗ್ರೌಂಡ್ ಫ್ಲೋರ್ ನಲ್ಲಿರುವ ಗೋಡೌನ್ ನಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ನಂತರ ಅದು ಮೇಲಿನ ಫ್ಲೋರ್ ಗಳಿಗೆ ಆವರಿಸಿದೆ. ಬೆಂಕಿ ಹೊತ್ತಿಕೊಂಡ ಕೂಡಲೇ ಕಟ್ಟಡದಲ್ಲಿದ್ದ ಬಹುತೇಕ ಜನ ಓಡಿ ಹೋಗಿದ್ದಾರೆ.
ಆದರೆ ಒಂದು ಫ್ಯಾಮಿಲಿ ಮಾತ್ರ ಬೆಂಕಿ ಕೆನ್ನಾಲಿಗೆಗೆ ಸಿಲುಕಿಕೊಂಡಿದೆ. ಎರಡು ಮೃತದೇಹಗಳನ್ನ ಈಗಾಗಲೇ ಹೊರ ತೆಗೆಯಲಾಗಿದೆ. ಮೇಲಿನ ಫ್ಲೋರ್ ನಲ್ಲಿ ಕಂಪ್ಲೀಟ್ ಬೆಂಕಿ, ಹೊಗೆ ಆವರಿಸಿದೆ ಒಳಗಡೆ ಹೋಗೋದಕ್ಕೆ ಆಗುತ್ತಿಲ್ಲ, ಹೀಗಾಗಿ ಒಳಗಡೆ ಸಿಲುಕಿದವರನ್ನ ಹುಡುಕಲು ಆಗುತ್ತಿಲ್ಲ.
ಕಾರ್ಯಾಚರಣೆ ಮುಂದುವರಿಸಲಾಗಿದೆ. ಅಗ್ನಿಶಾಮಕ ಸಿಬ್ಬಂದಿ, ವಿಧಿವಿಜ್ಞಾನ ಪ್ರಯೋಗಾಲಯ ಅಧಿಕಾರಿಗಳು ಹಾಗೂ ರಕ್ಷಣಾ ತಂಡದವರು ಕಾರ್ಯಾಚರಣೆ ಮಾಡುತ್ತಿದ್ದಾರೆ. ಇನ್ನು ಮೃತದೇಹಗಳು ಇರುವ ಶಂಕೆ ಇದ್ದು ಪರಿಶೀಲನೆ ಮಾಡಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.

