ಚಂದ್ರವಳ್ಳಿ ನ್ಯೂಸ್, ಹುಬ್ಬಳ್ಳಿ:
ಕಾರು ಹಾಗೂ ಲಾರಿ ನಡುವೆ ಡಿಕ್ಕಿ ಸಂಭವಿಸಿ, ಒಂದೇ ಕುಟುಂಬದ ಐವರು ಸ್ಥಳದಲ್ಲೇ ಮೃತಪಟ್ಟ ಘಟನೆ ತಾಲೂಕಿನ ಇಂಗಳಹಳ್ಳಿ ಕ್ರಾಸ್ ಬಳಿ ಮಂಗಳವಾರ ಬೆಳಗ್ಗೆ ಸಂಭವಿಸಿದೆ.
ಮೃತರನ್ನು ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಮೂರಕೈ ಗ್ರಾಮದ ವಿಠಲ್ ಶೆಟ್ಟಿ (55) ಶಶಿಕಲಾ ಶೆಟ್ಟಿ (44), ಸಂದೀಪ್ ಶೆಟ್ಟಿ (26), ಶ್ವೇತಾ ಶೆಟ್ಟಿ (29) ಹಾಗೂ ಅಂಜಲಿ ಶೆಟ್ಟಿ (26) ಎಂದು ಗುರುತಿಸಲಾಗಿದೆ.
ನಿಶ್ಚಿತಾರ್ಥ ಹಾಗೂ ನೂತನ ಗೃಹ ಪ್ರವೇಶ ಕಾರ್ಯಕ್ರಮ ಮುಗಿಸಿಕೊಂಡು ಬಾಗಲಕೋಟೆಗೆ ಮರಳುತ್ತಿದ್ದರು ಎನ್ನಲಾಗಿದೆ. ಡಿಕ್ಕಿ ರಭಸಕ್ಕೆ ಕಾರಿನಲ್ಲಿ ಮೂವರು ಮಹಿಳೆಯರು ಹಾಗೂ ಇಬ್ಬರು ಪುರುಷರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಜರುಗಿದೆ.
ವಿಠಲ್ ಶೆಟ್ಟಿ ಅವರು ಸೋಮವಾರ ತಮ್ಮ ಮಗಳು ಶ್ವೇತಾ ಶೆಟ್ಟಿ ಅವರ ವಿವಾಹ ನಿಶ್ಚಿತಾರ್ಥ ಹಾಗೂ ಗೃಹ ಪ್ರವೇಶ ಕಾರ್ಯಕ್ರಮವನ್ನು ಸಾಗರದಲ್ಲಿ ಇಟ್ಟುಕೊಂಡಿದ್ದರು. ಈ ಕಾರ್ಯಕ್ರಮ ಮುಗಿಸಿಕೊಂಡು ಮರಳಿ ಕುಳಗೇರಿಯತ್ತ ಹೊರಟಿದ್ದರು. ಆದರೆ, ಹುಬ್ಬಳ್ಳಿಯ ಹೊರವಲಯದಲ್ಲಿ ಈ ಅವಘಡ ಸಂಭವಿಸಿದೆ. ಕಾರಿನಲ್ಲಿದ್ದ ಅಂಜಲಿ ಎಂಬ ಯುವತಿ ಗದಗ ಜಿಲ್ಲೆಯ ನರಗುಂದ ತಾಲೂಕಿನಲ್ಲಿ ಗ್ರಾಮ ಲೆಕ್ಕಾಧಿಕಾರಿಯಾಗಿದ್ದರು ಎಂದು ತಿಳಿದುಬಂದಿದೆ.
ಮೃತರ ಸಂಬಂಧಿ ಸತೀಶ್ ಶೆಟ್ಟಿ ಘಟನೆ ಕುರಿತು ಪ್ರತಿಕ್ರಿಯಿಸಿ, ಮೃತ ಕುಟುಂಬದವರೆಲ್ಲ ಶಿವಮೊಗ್ಗ ಜಿಲ್ಲೆಯ ಸಾಗರ ಸಮೀಪದ ಮೂರಕೈ ಗ್ರಾಮದವರು. ಬಾಗಲಕೋಟೆ ಜಿಲ್ಲೆಯ ಕುಳಗೇರಿ ಕ್ರಾಸ್ನಲ್ಲಿ ಹೋಟೆಲ್ ಹೊಂದಿದ್ದರು. ಮಗಳ ನಿಶ್ಚಿತಾರ್ಥ ಹಾಗೂ ಗೃಹ ಪ್ರವೇಶ ಕಾರ್ಯಕ್ರಮಕ್ಕೆಂದು ಸಾಗರಕ್ಕೆ ತೆರಳಿದ್ದರು. ಅದನ್ನು ಮುಗಿಸಿಕೊಂಡು ಮರಳಿ ಹೋಗುವಾಗ ಅಪಘಾತ ಸಂಭವಿಸಿದೆ ಎಂದು ಮಾಹಿತಿ ನೀಡಿದರು.
ಧಾರವಾಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಗೋಪಾಲ ಬ್ಯಾಕೋಡ್ ಮಾಧ್ಯಮದವರಿಗೆ ಮಾಹಿತಿ ನೀಡಿ, ಹುಬ್ಬಳ್ಳಿ ಮತ್ತು ಮನವಗುಂದ ಮಧ್ಯದಲ್ಲಿ ಕಾರುಹಾಗೂ ಲಾರಿ ನಡುವೆ ಸಂಭವಿಸಿದ ಅಪಘಾತದಲ್ಲಿ ಮೂವರು ಮಹಿಳೆಯರು ಹಾಗೂ ಇಬ್ಬರು ಪುರುಷರು ಸೇರಿ ಐದು ಮಂದಿ ಮೃತಪಟ್ಟಿದ್ದಾರೆ. ಕಾರಿನಲ್ಲಿದ್ದವರು ಸಾಗರದಿಂದ ಕುಳಗೇರಿ ಕ್ರಾಸ್ ಕಡೆಗೆ ಹೊರಟಿದ್ದರು. ಘಟನೆಗೆ ಕಾರಣ ಏನೆಂಬುದರ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ತಿಳಿಸಿದರು.