ಚಂದ್ರವಳ್ಳಿ ನ್ಯೂಸ್, ಬೀದರ್:
ಭೀಕರ ರಸ್ತೆ ಅಪಘಾತದಲ್ಲಿ ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಕುಂಭಮೇಳಕ್ಕೆ ಹೋಗಿದ್ದ ಬೀದರ್ ಮೂಲದ ಐದು ಜನ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಜರುಗಿದೆ.
ಉತ್ತರ ಪ್ರದೇಶದ ರಾಷ್ಟ್ರೀಯ ಹೆದ್ದಾರಿ ಮಿರಾಜಾಪೂರ್ ಜಿಲ್ಲೆಯ ರೂಪಾಪೂರ ಬಳಿ ಅಪಘಾತ ಸಂಭವಿಸಿದೆ.
ಮೃತರನ್ನು ಬೀದರ್ ನಗರದ ಲಾಡಗೇರಿ ಬಡಾವಣೆಯ ನಿವಾಸಿಗಳೆಂದು ಗುರುತಿಸಲಾಗಿದ್ದು, ಒಂದೇ ಕುಟುಂಬದಮೂರು ಜನ ಸೇರಿದಂತೆ ಐದು ಜನ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.
ಕಾಶಿಯಿಂದ 20 ಕಿಲೋಮೀಟರ್ ದೂರದಲ್ಲಿ ಲಾರಿಗೆ ಹಿಂಬದಿಯಿಂದ ರಭಸವಾಗಿ ಕ್ರೂಸರ್ ಡಿಕ್ಕಿಯಾಗಿ ಐದು ಜನ ಸಾವನ್ನಪ್ಪಿದ್ದು, 7 ಜನರ ಸ್ಥಿತಿ ಗಂಭೀರವಾಗಿದೆ.
ಸಂತೋಷ (45) ಸುನೀತಾ (40), ನೀಲ್ಲಮ್ಮ (62) ಸೇರಿದಂತೆ ಐದು ಜನ ಸಾವನ್ನಪ್ಪಿದ್ದು, ಮೃತರ ಶವಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಮೃತರಲ್ಲಿ ಮೂರು ಒಂದೇ ಕುಟುಂಬಕ್ಕೆ ಸೇರಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಪ್ರಯಾಗ್ರಾಜ್ನಿಂದ ಕಾಶಿ ಕಡೆ ಹೋಗುವಾಗ ಈ ಭೀಕರ ರಸ್ತೆ ಅಪಘಾತ ಸಂಭವಿಸಿದೆ.
ಕಳೆದ ಎರಡು ದಿನಗಳ ಹಿಂದೇ ಒಂದೇ ವಾಹನದಲ್ಲಿ ಕುಂಭಮೇಳಕ್ಕೆ ತೆರಳಿದ್ದ 12 ಜನರ ಭಕ್ತರಲ್ಲಿ ಐದು ಜನ ಸಾವನ್ನಪ್ಪಿದ್ದಾರೆ. ಶವಗಳನ್ನು ಶವಗಾರಕ್ಕೆ ರವಾನಿಸಿದ್ದು ಗಾಯಗೊಂಡವರಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಈ ಕುರಿತು ಮಿರ್ಜಾ ಮುರಾರಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಡಿಕ್ಕಿ ರಭಸಕ್ಕೆ ಕ್ರೂಸರ್ ವಾಹನದ ಮುಂಭಾಗ ಸಂಪೂರ್ಣ ಜಖಂ ಆಗಿದೆ. ವಾಹನದಲ್ಲಿ ಸಿಲುಕಿದ್ದ ಜನರನ್ನು ಹೊರತೆಗೆಯಲು ಪೊಲೀಸರು ಹರಸಾಹಸ ಪಡಬೇಕಾಯಿತು. ಗಾಯಾಳುಗಳನ್ನು ಬನಾರಸ್ ಹಿಂದೂ ವಿಶ್ವವಿದ್ಯಾಲಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತರ ಶವಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಕರ್ನಾಟಕ ಪೊಲೀಸರಿಗೆ ಮಾಹಿತಿ ನೀಡಲಾಗಿದೆ ಎಂದು ಮಿರ್ಜಾಮುರಾದ್ ಪೊಲೀಸ್ ಠಾಣೆಯ ಸ್ಟೇಷನ್ ಹೌಸ್ ಆಫೀಸರ್ (ಎಸ್‌ಎಚ್‌ಒ) ಅಜಯ್ ರಾಜ್ ವರ್ಮಾ ಹೇಳಿದ್ದಾರೆ.