ಐದು ನಗರ ಪಾಲಿಕೆಗಳ ಪಕ್ಷ ಸಂಘಟನೆ ಐದು ಸಚಿವರ ನೇಮಿಸಿದ ಡಿಸಿಎಂ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಪಕ್ಷ ಸಂಘಟನೆ ಉದ್ದೇಶದಿಂದ ಗ್ರೇಟರ್​ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿಯ ಐದು ನಗರ ಪಾಲಿಕೆಗಳಲ್ಲಿ ಬೆಂಗಳೂರು ನಗರ ವ್ಯಾಪ್ತಿಯ ಸಚಿವರನ್ನು ಉಸ್ತುವಾರಿಗಳನ್ನಾಗಿ ನೇಮಿಸಿ ಕೆಪಿಸಿಸಿ ಅಧ್ಯಕ್ಷ ಹಾಗೂ
ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಆದೇಶಿಸಿದ್ದಾರೆ.

ಬೆಂಗಳೂರು ಪೂರ್ವ ನಗರ ಪಾಲಿಕೆಗೆ ಕಂದಾಯ ಸಚಿವ ಕೃಷ್ಣ ಬೈರೇಗೌಡ, ಬೆಂಗಳೂರು ಪಶ್ಚಿಮ ನಗರ ಪಾಲಿಕೆಗಳಿಗೆ ಸಚಿವ ಬೈರತಿ ಸುರೇಶ್, ಬೆಂಗಳೂರು ಉತ್ತರ ನಗರ ಪಾಲಿಕೆಗೆ ಸಚಿವ ಕೆ. ಜೆ. ಜಾರ್ಜ್, ಬೆಂಗಳೂರು ದಕ್ಷಿಣ ನಗರ ಪಾಲಿಕೆಗೆ ಸಚಿವ ರಾಮಲಿಂಗಾ ರೆಡ್ಡಿ ಮತ್ತು ಬೆಂಗಳೂರು ಕೇಂದ್ರ ನಗರ ಪಾಲಿಕೆಗೆ ಸಚಿವ ದಿನೇಶ್ ಗುಂಡೂರಾವ್ ಮತ್ತು ಜಮೀರ್ ಅಹಮದ್ ಖಾನ್ ಅವರನ್ನು ನೇಮಿಸಿ ಡಿಸಿಎಂ ಆದೇಶಿಸಿದ್ದಾರೆ.

- Advertisement - 

ಆಯ್ಕೆಯಾದ ಐವರು ಸಚಿವರಿಗೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಪತ್ರ ಬರೆದು, ತಮಗೆ ತಿಳಿದಿರುವಂತೆ ಈಗಾಗಲೇ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಅಸ್ತಿತ್ವಕ್ಕೆ ಬಂದಿದ್ದು ಇದಕ್ಕೆ ಪೂರಕವಾಗಿ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಯಲ್ಲಿ 5 ನಗರಪಾಲಿಕೆಗಳನ್ನಾಗಿ ವಿಂಗಡಣೆ ಮಾಡಿ ಆದೇಶ ಹೊರಡಿಸಲಾಗಿದೆ. ಈ ನಿಟ್ಟಿನಲ್ಲಿ ಜಿ.ಬಿ.ಎ. ಪ್ರಕ್ರಿಯೆಯಲ್ಲಿ ತಾವುಗಳು ನೀಡುತ್ತಿರುವ ಸಹಕಾರಕ್ಕಾಗಿ ಧನ್ಯವಾದಗಳನ್ನು ತಿಳಿಸಬಯಸುತ್ತೇನೆ ಎಂದಿದ್ದಾರೆ.

ಗ್ರೇಟರ್ ಬೆಂಗಳೂರು ಪ್ರಾಧಿಕಾರದ 5 ನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ ಪಕ್ಷದ ಸಂಘಟನೆ ಹಾಗೂ ಮುಂಬರುವ ನಗರಪಾಲಿಕೆ ಚುನಾವಣೆಗೆ ಪಕ್ಷವನ್ನು ಸಜ್ಜುಗೊಳಿಸಲು ಈ ಕೆಳಕಾಣಿಸಿದಂತೆ 5 ನಗರ ಪಾಲಿಕೆಗಳಿಗೆ ಬೆಂಗಳೂರು ನಗರ ವ್ಯಾಪ್ತಿಯ ಸಚಿವರನ್ನು ಉಸ್ತುವಾರಿಗಳನ್ನಾಗಿ ನೇಮಿಸಲಾಗಿದೆ ಎಂದು ತಿಳಿಸಿದ್ದಾರೆ.

- Advertisement - 

ಪಕ್ಷ ಬಲಪಡಿಸಿ: ತಾವು ತಮಗೆ ನೀಡಿರುವ ಜವಾಬ್ದಾರಿಯನ್ನು ವಹಿಸಿಕೊಂಡು ತಮ್ಮ ಉಸ್ತುವಾರಿಯಲ್ಲಿ ಬೆಂಗಳೂರು ಕೇಂದ್ರ ನಗರಪಾಲಿಕೆ ವ್ಯಾಪ್ತಿಯ ಸಚಿವರು, ಸಂಸದರು, ಶಾಸಕರು, ಲೋಕಸಭೆ/ವಿಧಾನಸಭೆ ಅಭ್ಯರ್ಥಿಗಳು, ಡಿಸಿಸಿ/ಬಿಸಿಸಿ ಅಧ್ಯಕ್ಷರು, ಮಾಜಿ ಶಾಸಕರು, ಮಾಜಿ ಬಿಬಿಎಂಪಿ ಸದಸ್ಯರು, ಕೆಪಿಸಿಸಿ ಸದಸ್ಯರು, ಮುಂಚೂಣೆ ಘಟಕ, ಸೆಲ್, ವಿಭಾಗಗಳ ಅಧ್ಯಕ್ಷರು ಹಾಗೂ ಇತರ ಮುಖಂಡರೊಂದಿಗೆ ಚರ್ಚಿಸಿ ಮುಂಬರುವ ಚುನಾವಣೆಯಲ್ಲಿ ಪಕ್ಷ ಸಘಟನೆ ಮಾಡುವ ಮೂಲಕ ಯಶಸ್ಸು ಕಾಣಲು ಎಲ್ಲ ರೀತಿಯಲ್ಲಿ ಸಜ್ಜುಗೊಳಿಸಲು ಸಹಕರಿಸಬೇಕಾಗಿ ಸೂಚಿಸಿದ್ದಾರೆ.

ಪ್ರಾಧಿಕಾರ ರಚನೆ: ಇತ್ತೀಚೆಗೆ ಬೃಹತ್​ ಬೆಂಗಳೂರು ಮಹಾನಗರ ಪಾಲಿಕೆಯನ್ನು ವಿಘಟಿಸಿ ಗ್ರೇಟರ್​ ಬೆಂಗಳೂರು ಪ್ರಾಧಿಕಾರ ಎಂದು ಹೊಸದಾಗಿ ರೂಪಿಸಲಾಗಿದೆ. ಅಂದರೆ ಜಿಬಿಎ ವ್ಯಾಪ್ತಿಯಲ್ಲಿ ಐದು ಪಾಲಿಕೆಗಳು ರಚನೆಯಾಗಿವೆ. ಅವುಗಳಿಗೆ ಪ್ರತ್ಯೇಕ ಆಯುಕ್ತ, ಉಪ ಆಯುಕ್ತರನ್ನು ಸಹ ನೇಮಿಸಲಾಗಿದೆ.

 

 

 

Share This Article
error: Content is protected !!
";