ಜಾನಪದ ಹುಗ್ಗಿ ಸಂಭ್ರಮದ ಸುಗ್ಗಿ- ಪ್ರೊ.ಮಲ್ಲಿಕಾರ್ಜುನ ಕಲಮರಹಳ್ಳಿ

News Desk

ಚಂದ್ರವಳ್ಳಿ ನ್ಯೂಸ್, ದಾವಣಗೆರೆ:
ಕಳೆದ ಒಂದು ತಿಂಗಳಿನಿಂದ ರಾಜ್ಯದೆಲ್ಲೆಡೆ ಸರ್ಕಾರಿ ಪದವಿ ಕಾಲೇಜುಗಳಲ್ಲಿ ಪ್ರತಿದಿನವೂ ಒಂದಲ್ಲಾ ಒಂದು ಕಾಲೇಜಿನಲ್ಲಿ ಜಾನಪದಕ್ಕೆ ಸಂಬಂಧಿಸಿದಂತೆ ವಿಚಾರ ಸಂಕಿರಣಗಳು, ವಿಶೇಷ ಉಪನ್ಯಾಸಗಳು, ಕಲಾ ತರಬೇತಿ ಶಿಬಿರಗಳು ಕರಕುಶಲ ತಯಾರಿಕೆ ಪ್ರದರ್ಶನಗಳು, ಉತ್ಸವಗಳು, ಸಂಭ್ರಮಗಳು ನಡೆಯುತ್ತಿರುವ ವರದಿಗಳನ್ನು ಮಾಧ್ಯಮಗಳಲ್ಲಿ ಗಮನಿಸುತ್ತಿದ್ದೇವೆ.

ಯಾವತ್ತೂ ಪಾಶ್ಚಾತ್ಯ ಸಂಸ್ಕೃತಿ ಪ್ರಭಾವಳಿಯಲ್ಲಿ ಸುತ್ತುತ್ತಾ ಮೊಬೈಲ್ ಮಾಯಾಜಾಲದೊಂದಿಗೆ ಗಿರಿಕೆ ಹೊಡೆಯುತ್ತಿದ್ದ ಕಾಲೇಜು ಯುವ ಸಮುದಾಯ ದಿಢೀರನೆ ಈ ದೇಸೀ ದಾರಿಗೆ ಹಿಂತಿರುಗಿದ್ದಾದರೂ ಹೇಗೆ? ಎಂಬ ಕುತೂಹಲ ಮೂಡದೇ ಇರದು. ಇದಕ್ಕೆಲ್ಲ ಮೂಲ ಕಾರಣ ಕಾಲೇಜು ಶಿಕ್ಷಣ ಇಲಾಖೆಯ ಒಂದು ಆದೇಶ.

ಕಾಲೇಜು ಶಿಕ್ಷಣ ಇಲಾಖೆ ಕಳೆದ ಫೆಬ್ರವರಿಯಲ್ಲಿ ನಮ್ಮ ಸಂಸ್ಕೃತಿ ನಮ್ಮ ಹೆಮ್ಮೆಪರಿಕಲ್ಪನೆಯಲ್ಲಿ ಕಾಲೇಜುಗಳಲ್ಲಿ ಜಾನಪದ ಉತ್ಸವ ಜರುಗಿಸುವ ಕುರಿತು ಕಟ್ಟುನಿಟ್ಟಿನ ಆದೇಶ ಹೊರಡಿಸಿತು. ದೇಶಿ ಸಂಸ್ಕೃತಿಯನ್ನು ಸಂರಕ್ಷಿಸುವ ಹಾಗೂ ಮನುಷ್ಯನ ಬದುಕಿನೊಂದಿಗೆ ಅವಿನಾಭಾವ ಸಂಬಂಧವನ್ನು ಹೊಂದಿ ತಲೆ ತಲೆಮಾರುಗಳಿಂದ ಬಂದಿರುವ ಆಯಾ ಪ್ರಾದೇಶಿಕ ಗ್ರಾಮೀಣ ವ್ಯಾಪ್ತಿಯಲ್ಲಿ ಆಚರಣೆಯಲ್ಲಿರುವ ಮೌಖಿಕ ಪರಂಪರೆಯ ಜಾನಪದ ಸಂಸ್ಕೃತಿ ಸೊಗಡುಗಳ ಬಗ್ಗೆ ವಿದ್ಯಾರ್ಥಿಗಳಲ್ಲಿ ಅರಿವನ್ನು ಮೂಡಿಸುವ

ಹಾಗೂ ಸುತ್ತಲಿನ ಪರಿಸರ ಮತ್ತು ಸಂಸ್ಕೃತಿಯ ಬಗ್ಗೆ ಹೆಮ್ಮೆ ಪಡುವಂತೆ ಮಾಡುವ ಮೂಲಕ ಅವರಲ್ಲಿ ಆತ್ಮವಿಶ್ವಾಸವನ್ನು ಸೃಜನಶೀಲತೆಯನ್ನು ಹೆಚ್ಚಿಸುವ ದೃಷ್ಟಿಯಿಂದ ಜಾನಪದ ಸಂಬಂಧಿತ ಕಾರ್‍ಯಕ್ರಮಗಳನ್ನು ರೂಪಿಸಿಕೊಳ್ಳಬೇಕೆಂಬುದು ಇಲಾಖೆಯ ಸುತ್ತೋಲೆಯ ತಿರುಳು. ಇದಲ್ಲದೆ ಎರಡು ತಿಂಗಳ ಒಳಗೆ ಕಾರ್‍ಯಕ್ರಮ ನಡೆಸಿದ ಬಗ್ಗೆ ದಾಖಲೆ ಸಮೇತ ಇಲಾಖೆಗೆ ವರದಿ ಸಲ್ಲಿಸುವ ಕಟ್ಟುನಿಟ್ಟಿನ ಆದೇಶವೂ ಇತ್ತು.

ಆರ್ಥಿಕ ಸಂಪನ್ಮೂಲವಿಲ್ಲದೆ ಕಾರ್‍ಯಕ್ರಮ ಮಾಡುವುದಾದರೂ ಹೇಗೆ? ಎಂಬ ಗೊಣಗಾಟದಲ್ಲೇ ಒಂದೊಂದೇ ಕಾಲೇಜಿನಲ್ಲಿ ಕಾರ್‍ಯಕ್ರಮಗಳು ಪ್ರಾರಂಭವಾದವು. ತದನಂತರದಲ್ಲಿ ಕಾಲೇಜು ಪ್ರಾಂಶುಪಾಲರು, ಪ್ರಾಧ್ಯಾಪಕರಲ್ಲಿ ಅದೇನು ಉತ್ಸಾಹ ಬಂದಿತೋ ನಾ ಮುಂದು, ತಾ ಮುಂದು ಎಂಬಂತೆ, ಸ್ಪರ್ಧೆಗೆ ಇಳಿದವರಂತೆ ಮುನ್ನುಗ್ಗಿ ಒಂದು ಕಾಲೇಜಿಗಿಂತ ಮತ್ತೊಂದು ಕಾಲೇಜು, ಮಗದೊಂದು ಕಾಲೇಜುಗಳು ವಿಭಿನ್ನ ರೀತಿಯಲ್ಲಿ ಕಾರ್‍ಯಕ್ರಮಗಳನ್ನು ರೂಪಿಸಿಕೊಳ್ಳಲಾರಂಭಿಸಿದವು.

ಪೂಜಾ ಕುಣಿತ, ಡೊಳ್ಳು, ಕಂಸಾಳೆ, ವೀರಗಾಸೆ, ತಮಟೆ, ನಂದಿಕೋಲು, ಕೋಲಾಟ, ವಾಲಗ ಮುಂತಾದ ಪ್ರದರ್ಶನಾತ್ಮಕ ಕಲೆಗಳನ್ನು ವಿದ್ಯಾರ್ಥಿಗಳು ತಾವೇ ಕಲಿತು ಪ್ರದರ್ಶಿಸಿದ್ದಾರೆ. ಜೋಗುಳ, ಬೀಸುವಪದ, ಸೋಬಾನೆ, ಗೀಗಿ, ಲಾವಣಿ ಪದಗಳನ್ನು ಭಾವತುಂಬಿ ಹಾಡಿದ್ದಾರೆ. ಲಗೋರಿ, ಚಿನ್ನಿದಾಂಡು, ಹಗ್ಗದಾಟ, ಕೆರೆದಡ ಆಟ, ಕುಂಟೆಬಿಲ್ಲೆ ಮುಂತಾದ ದೇಸಿ ಆಟಗಳನ್ನು ಮರುಕಳಿಸಿಕೊಂಡು ಮೈದುಂಬಿ ಆಟವಾಡಿ ಬಾಲ್ಯದೆಡೆ ಸರಿದು ಹೋಗಿದ್ದಾರೆ.

ಎತ್ತಿನಗಾಡಿಗಳನ್ನು ಅಲಂಕರಿಸಿ ಊರುತುಂಬಾ ಸುತ್ತಾಡಿದ್ದಾರೆ. ಸಗಣಿಯಿಂದ ನೆಲಸಾರಣೆ, ಚಿತ್ತಾಕರ್ಷಕ ರಂಗೋಲಿ ಚಿತ್ತಾರ, ಮಣ್ಣಿನ ಒಲೆಗಳನ್ನು ಮಾಡಿ ಸೌದೆ ಉರುವಲು ಹಾಕಿ ಅಡುಗೆ ಮಾಡಿ ಸಾಮೂಹಿಕವಾಗಿ ಊಟ ಮಾಡಿದ್ದಾರೆ. ಹೆಣ್ಣು ಮಕ್ಕಳು ಬಳೆಗಾರನನ್ನು ಕರೆಸಿಕೊಂಡು ಸಾಮೂಹಿಕವಾಗಿ ಬಳೆ ತೊಡಿಸಿಕೊಂಡು ಮೇಂದಿ ಹಚ್ಚಿಕೊಂಡು ಮುದಗೊಂಡಿದ್ದಾರೆ.

ಪರಿಸರ ಸ್ನೇಹಿ ಕೃಷಿ ಸೊಬಗಿನ ಕರಕುಶಲ ಪರಿಕರಗಳ ಮಾದರಿಗಳನ್ನು ತಯಾರಿಸಿ ಪ್ರದರ್ಶನವೇರ್ಪಡಿಸಿದ್ದಾರೆ. ಹೀಗೆ ನೂರೆಂಟು ವೈವಿಧ್ಯಮಯ ಕಾರ್‍ಯಕ್ರಮಗಳನ್ನು ಹಮ್ಮಿಕೊಂಡು ವಿದ್ಯಾರ್ಥಿಗಳು, ಪ್ರಾಧ್ಯಾಪಕರು, ಪೋಷಕರು, ಸಾರ್ವಜನಿಕರು ಕಾಲೇಜುಗಳ ಆವರಣದಲ್ಲಿ ಸಂಭ್ರಮದ ಹುಗ್ಗಿ ಉಂಡಿದ್ದಾರೆ.

ದಾವಣಗೆರೆಯ ಸರ್ಕಾರಿ ಮಹಿಳಾ ಪದವಿ ಕಾಲೇಜಿನಲ್ಲಿ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಸಂಪ್ರದಾಯದ ಅಣಕು ಮದುವೆಯನ್ನೂ ಸಹ ಮಾಡಿ ಪಾರಂಪರಿಕ ಮಾಯಾಲೋಕವನ್ನೇ ಮರು ಸೃಷ್ಟಿ ಮಾಡಿದ್ದರೆಂಬ ಸಂಗತಿ ಸಾಮಾಜಿಕ ಜಾಲತಾಣಗಳಲ್ಲಿ ಗುಣಾತ್ಮಕವಾಗಿ ಸುದ್ದಿ ಮಾಡುತ್ತಿದೆ.

ಇಷ್ಟೆಲ್ಲಾ ಸಂಭ್ರಮದ ನಡುವೆ ಕೆಲವು ಕಾಲೇಜುಗಳಲ್ಲಿ ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಕಲಾವಿದರನ್ನು ಆಹ್ವಾನಿಸಿ ಅವರಿಂದ ಕಾರ್ಯಕ್ರಮ ಉದ್ಘಾಟಿಸಿರುವುದು ಔಚಿತ್ಯಪೂರ್ಣ ನಡೆಯಾಗಿರುತ್ತದೆ. ಕವಿರಾಜಮಾರ್ಗಕಾರ ಹೇಳುವ ಕುರುತೋದದೆಯುಂ ಕಾವ್ಯ ಪರಿಣಿತಮತಿಗಳಾದ ಜನಪದರಿಗೆ ಓದುವ, ಬರೆಯುವ, ಅಕ್ಷರ ಮಂದಿರಗಳಲ್ಲಿ ದೊರೆತ ಬಹುದೊಡ್ಡ ಗೌರವವೆಂದೇ ಪರಿಭಾವಿಸಬೇಕಾಗುತ್ತದೆ.

ಜನಸಾಮಾನ್ಯರ ಅನುಭವದ ಸಂಪತ್ತಿನ ಹಿನ್ನೆಲೆಯಲ್ಲಿ ರೂಪುಗೊಂಡಿರುವ ಈ ದೇಸೀ ಜ್ಞಾನ ನಿಧಿಯಲ್ಲಿ ಒಂದು ನಾಡಿನ ಮೌಲ್ಯ, ವಿವೇಕ ಮತ್ತು ಆದರ್ಶಗಳು ಅಡಗಿರುತ್ತವೆ. ಜನಪದರ ಸಹಬಾಳ್ವೆ, ನಿಸರ್ಗ ಪ್ರೇಮ ಹಾಗೂ ಕರೆಬಳಗದ ನಿತ್ಯಮಂಗಳಕರ ತತ್ವದ ನಡೆನುಡಿಗಳು ಸ್ವಸ್ಥ ಸಮಾಜದ ನಿರ್ಮಾಣಕ್ಕೆ ಅಡಿಗಲ್ಲಾಗಬಲ್ಲವು. ಈ ನೆಲೆಯೊಳಗೆ ಕಾಲೇಜು ಶಿಕ್ಷಣ ಇಲಾಖೆ ಕೈಗೊಂಡ ಜಾನಪದ ಉತ್ಸವ ಪರಿಕಲ್ಪನೆ ಸ್ತುತ್ಯಾರ್ಹವಾದುದಾಗಿದ್ದು ಕಾಲೇಜುಗಳಲ್ಲಿ ಹೊಸ ಸಂಚಲನವನ್ನೇ ಹುಟ್ಟುಹಾಕಿದೆ.

ಕಾಲೇಜು ಶಿಕ್ಷಣ ಇಲಾಖೆ ಇದೇ ಪರಿಕಲ್ಪನೆಯನ್ನು ಪ್ರತೀವರ್ಷ ಕಾರ್‍ಯರೂಪಕ್ಕೆ ತರಬೇಕಾಗಿದೆ. ಈ ಸಂಬಂಧವಾಗಿ ಜಾನಪದ ಮತ್ತು ಸಾಂಸ್ಕೃತಿಕ ಹಿನ್ನೆಲೆಯ ಸರಕಾರದ ವಿವಿಧ ಅಕಾಡೆಮಿ ಪ್ರಾಧಿಕಾರಗಳ ಸಹಭಾಗಿತ್ವವನ್ನು ಪಡೆದುಕೊಂಡು ಇನ್ನಷ್ಟು ಯೋಜನಾ ಬದ್ಧವಾಗಿ ಮಾಡಿದಲ್ಲಿ ಈಗಾಗಲೇ ಹೊರಳು ದಾರಿಯಲ್ಲಿರುವ ಯುವ ಮನಗಳು ನಾವು ನಮ್ಮವರಾಗಿಬುದ್ಧ ಗುರುವಿನ ಅರಿವಿನಲ್ಲಿ ಅಂಬೇಡ್ಕರ್ ಹಾದಿ ಹಿಡಿದು ಹೂವಾಗಿ ಅರಳಬಲ್ಲವು. ಲೇಖನ- ಪ್ರೊ.ಮಲ್ಲಿಕಾರ್ಜುನ ಕಲಮರಹಳ್ಳಿ, ಸದಸ್ಯರು, ಕರ್ನಾಟಕ ಜಾನಪದ ಅಕಾಡೆಮಿ, ದಾವಣಗೆರೆ.
(ಮಾಹಿತಿ ಸಹಕಾರ: ಅನಿತಾ. ಹೆಚ್, ಕಾವ್ಯ ಬಿ.ಕೆ, ಪತ್ರಕರ್ತರು, ದಾವಣಗೆರೆ)

 

 

Share This Article
error: Content is protected !!
";