ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ನೆಲದ ಮಾತು-58
12ನೇ ಶತಮಾನದ ಕ್ರಾಂತಿಕಾರಿ, ಗುರು ಬಸವೇಶ್ವರರ ಜೊತೆಗಿದ್ದಂತಹ, ಸಂಗಮದ ವಚನಕಾರರ ಸಾಂಗತ್ಯದಲ್ಲಿ, ಎಲ್ಲ ಕುಲಗಳಲ್ಲಿಯೂ ಒಬ್ಬೊಬ್ಬ ಶರಣರ ದರ್ಶನ ಭಾಗ್ಯವಾಗಿದೆ.
ನನ್ನನ್ನು ಕಾಡುತ್ತಿರುವ ಪ್ರಶ್ನೆ, ಇತಿಹಾಸ, ಪುರಾಣಗಳಲ್ಲಿ, ಶೌರ್ಯ ಪರಾಕ್ರಮಗಳಲ್ಲಿ, ಬರವಣಿಗೆಯಲ್ಲಿ, ಉಲ್ಲೇಖಿಸಿಕೊಂಡಿರುವಂತಹ ಬೇಡರ ಕುಲ, ಬಸವೇಶ್ವರರ ಕಾಲಕ್ಕೆ ನಶಿಸಿ ಹೋಗಿತ್ತೇ?
ಈ ಪ್ರಶ್ನೆಯನ್ನು ನನ್ನ ಆತ್ಮೀಯ ಎಸ್ ಜೆ ಎಂ ನೌಕರ, ಗಡ್ಡದ ತಿಪ್ಪಣ್ಣನ ಜೊತೆ, ಅಂದು ಅವರ ಅತಿಥಿಯಾಗಿ ಬಂದಿದ್ದ ಸಾಹಿತಿ, ಎಸ್.ಜಿ.ಸಿದ್ದರಾಮಯ್ಯ ಅವರನ್ನೇ ಪ್ರಶ್ನಿಸಿದ್ದೆ. ನನ್ನ ಪ್ರಶ್ನೆಯನ್ನು ಗಂಭೀರವಾಗಿಯೇ ಸ್ವೀಕರಿಸಿದ್ದ ಅವರು, ಸ್ವಲ್ಪ ಹೊತ್ತು ಮಾತಾಡಲೇ ಇಲ್ಲ.
ಏಕೆಂದರೆ ಇದು ಒಂದು ಕುಲದ ಪ್ರಶ್ನೆಯಲ್ಲ, ಸಮೂಹದ ಪ್ರಶ್ನೆ. ಅದಕ್ಕವರ ಉತ್ತರ, ಬೇಡ ಸಮುದಾಯ ನಾಡಿಗಿಂತ ಕಾಡಾಶ್ರಯದಲ್ಲಿಯೇ ಬದುಕಿರುವುದು. ಹಾಗಾಗಿ ಬಸವೇಶ್ವರರ ಕೂಡಲ ಸಂಗಮದ ದಾರಿ ಅಷ್ಟಾಗಿ ಬೇಡರಿಗೆ ತಿಳಿಯದೇ ಇರಬಹುದೇನೋ ಅಂದರು. ಸಮಂಜಸವಲ್ಲದ ಉತ್ತರ, ಸಮಾಧಾನಿಸಿಕೊಂಡು ಸುಮ್ಮನಾದೆ.
ಇದೇ ಪ್ರಶ್ನೆಯನ್ನು ಹಂಪೆ ಯುನಿವರ್ಸಿಟಿ ಪ್ರೊಫೆಸರ್ ಹಾಗೂ ಸಂಶೋಧಕ ಪೂಜಾರಹಳ್ಳಿ ವಿರೂಪಾಕ್ಷಿ ಅವರನ್ನೂ, ಒಂದು ಸಂದರ್ಭದಲ್ಲಿ ಕೇಳಿದ್ದೆನೆ. ಅದಕ್ಕವರು, ಆಂಧ್ರ ಮೂಲದ ಗುಂಡಯ್ಯ ಎಂಬ ವಚನಕಾರರನ್ನು ಹಾಗೂ ಅಲ್ಲಮಪ್ರಭು ವನ್ನು ಹೆಸರಿಸಿದ್ರು. ಆದರೂ ನನಗೆ ಅಸ್ಪಷ್ಟದ ಉತ್ತರವೇ,ಈ ಪ್ರಶ್ನೆಗೆ ಉತ್ತರ ಹುಡುಕುವವರೇ ಮೌನ ವಹಿಸಿರುವಾಗ ನಾನೆಷ್ಟರನು, ಸುಮ್ಮನಾದೆ.
ಸ್ಥಳೀಯವಾಗಿ ಬೇಡ ಸಮುದಾಯಕ್ಕೆ ಮುರುಘಾ ಮಠವೇ ಗುರು, ಪರಂಪರೆ, ದೈವ ಎಲ್ಲವೂ. ಆದರೂ ಎಲ್ಲೋ ಒಂದು ಕಡೆ, ದಾರಿ ದಿಕ್ಕು ತಪ್ಪುತ್ತಿರುವುದು, ಖಚಿತವಾಗಿ ಕಾಣುತ್ತಿದೆ. ಮುರುಘಾ ವನದಲ್ಲಿ ಮದಕರಿಯವರನ್ನ, ಗೊಂಬೆಯಾಗಿಸಿ, ಗುರುಗಳ ಪಾದದ ಬಳಿ ಕೈ ಮುಗಿದು, ಬೇಡುತ್ತಿರುವ ಬಂಗಿಯಲ್ಲಿ ಕೂರಿಸಿರುವುದು ಒಂದಾದರೆ, ಪ್ರತಿವರ್ಷ ವಿಜಯದಶಮಿಯಂದು ಬನ್ನಿ ಮುಡಿಯಲು, ಮೆರವಣಿಗೆ ಮೂಲಕ ಊರ ಬೀದಿಗಳಲ್ಲಿ ಸಾಗಿ,ಸಂಪಿಗೆ ಸಿದ್ದಪ್ಪನ ಗುಡಿಯ ಬಯಲಲ್ಲಿ, ದೊಡ್ಡ ಮದಕರಿಯ ಸಂತತಿಯವರೆಂದು ಹೇಳಲ್ಪಡುವ,ಕಾಟಪ್ಪನಟ್ಟಿಯ ಪಾಳೆಗಾರರ ವಂಶಸ್ಥರನ್ನು ಕರೆಸಿ,ಸನ್ಮಾನ ಮಾಡಿಸಿಕೊಂಡು ಪಾದಕ್ಕೆ ಬಿಳಿಸಿಕೊಳ್ಳುವ ಶರಣರು, ಈ ದುರ್ಗ ಆಳಿದ ರಾಜರೋ ಅಥವಾ ಮಠದ ಸ್ವಾಮಿಗಳೋ ಅರ್ಥವಾಗುತ್ತಿಲ್ಲ.
ಸೌಜನ್ಯಕ್ಕಾದರೂ ಮದಕರಿ ವಂಶಸ್ಥರನ್ನ,ಪಕ್ಕಕ್ಕೆ ಕೂರಿಸಿ ಸನ್ಮಾನಿಸಿ ಆಶೀರ್ವದಿಸುವುದು ಔಚಿತ್ಯವಲ್ಲವೇ.ಈ ದುರ್ಗದ ನೀಲಕಂಠೇಶ್ವರ ದೇವಸ್ಥಾನದಲ್ಲಿ, ಮಲ್ಲಿಕಾರ್ಜುನ ಮುರುಘರಾಜೇಂದ್ರರು, ನಡೆಸಿಕೊಂಡು ಬರುತ್ತಿದ್ದ, ವಿಜಯದಶಮಿ,ದೇವಿ ಪೂಜೆಗಳು ಅಳಿಸಿದಂತೆ,ಮದಕರಿ ವಂಶಸ್ಥರನ್ನು ಪಾದಕ್ಕೆ ಬೀಳಿಸಿಕೊಳ್ಳುತ್ತಿರುವ ಪದ್ಧತಿಯು ಇತ್ತೀಚಿನದೇ. ಹಿಂದಿನ ದೈವ ಸಂಭೂತರಾದಂತಹ,ಯಾವ ಗುರುಗಳು ಇಂತಹ ಅಪಚಾರಕ್ಕೆ ಕೈ ಹಾಕಿರಲಿಲ್ಲ.
ಪಾಳೇಗಾರರ ಸಮಾಲೋಚನ ಸಭೆಯ ಹತ್ತಾರು ಗೌರವಾನ್ವಿತರಲ್ಲಿ, ಈ ಗುರುಪಂತಕ್ಕೂ ಒಂದು ಸ್ಥಾನವಷ್ಟೇ.ಅರಸರು ಗುರುಗಳ ಪಾದಕ್ಕೆ ಬೀಳುವುದು ಅದು ದೈವಾಶೀರ್ವಾದ,ಮುರುಘಾ ಮಠ ಈ ನೆಲದ ದೈವ ಪರಂಪರೆ.ನನ್ನ ಬರವಣಿಗೆ ಬೀಳಿಸಿಕೊಳ್ಳುವ ರೀತಿ ತಪ್ಪಿದೆ ಅನ್ನುವುದು ಮಾತ್ರ. ನಾನು ಸಹ ಗುರು ಪರಂಪರೆಯ ಭಕ್ತನಾಗಿಯೇ ಬರೆದುಕೊಳ್ಳುತ್ತಿದ್ದೇನೆ.
ರಾಜವಂಶಸ್ಥ ಮೆರವಣಿಗೆ ಬಂದು,ಗುರುಗಳನ್ನ ಸನ್ಮಾನಿಸಿ ಆಶೀರ್ವಾದ ಪಡೆಯಬೇಕು,ಇದು ದೇಶದ ಉದ್ದಗಲಕ್ಕೂ ಇರುವಂತಹ ಪದ್ಧತಿಯೆಂದು ಭಾವಿಸಿದ್ದೇನೆ. ಉದಾಹರಣೆಗೆ ಮೈಸೂರು ಅರಸರು,ಶಮಿ ವೃಕ್ಷಕ್ಕೆ ಪೂಜೆ ಮಾಡಿ ಬನ್ನಿ ಮುಡಿಯುವಾಗ ಕುಲ ಗುರುಗಳನ್ನು ಕರೆಸಿ,ಪೂಜಿಸಿ ಆಶೀರ್ವಾದ ಪಡೆಯುತ್ತಾರೆ. ಇದೊಂದು ಗುರು ಭಕ್ತಿ, ಇದಕ್ಕೊಂದು ಗೌರವಭಾವ, ಪೂಜನೀಯ ಸ್ಥಾನವಿದೆ. ಇಂಥದ್ದೆಲ್ಲ ಈ ನೆಲದಲ್ಲಿ ನಡೆಸಲು ಅವಕಾಶವಿಲ್ಲವೆಂಬ ಅರಿವು ಸಹ ನನ್ನಲ್ಲಿದೆ.
ಭಯ ಭಕ್ತಿಗಳ ಸಂಗಮವಾಗಿ ತಾವೇ ಬಂದರೂ ಸರಿ.ನಿಮ್ಮ ಮೆರವಣಿಗೆ, ಮೇಲುಕೋಟೆಗೆ ಬಂದು ಬನ್ನಿ ಮುಡಿದು ಅರಸು ಕುಲವನ್ನ ಸನ್ಮಾನಿಸಿ ಆಶೀರ್ವದಿಸಿದರೆ, ಸಂಪೂರ್ಣ ಊರೇ ಸಂಪನ್ನ, ವಿಜಯದಶಮಿಯೂ ಸಂಪನ್ನ,ತಾಯಿ ಏಕನಾಥೇಶ್ವರಿಯೂ ನಿಮಗೆ ಆಶೀರ್ವದಿಸುತ್ತಾಳಲ್ಲವೇ. ಪಾಳೇಗಾರರ ಏಳನೇ ತಲೆಮಾರಿನ ಪರಶುರಾಮ ನಾಯಕನನ್ನ ಈ ವಿಚಾರವಾಗಿ ಒಮ್ಮೆ ಕೇಳಿದೆ.
ಅದಕ್ಕೆ ಆ ಅರಸ ಕೊಟ್ಟ ಉತ್ತರ,ನನ್ನ ತಾಯಿ ಆಸ್ಪತ್ರೆಯಲ್ಲಿದ್ದಾಗ ಮುರುಘಾ ಶರಣರು ಸಹಾಯ ಮಾಡಿದ್ದು, ಸಮುದಾಯದ ಯಾರೊಬ್ಬರು,ನಮಗೆ ಸಹಾಯ ಮಾಡಲಿಲ್ಲ ಅಂದ. ಚಳ್ಳಕೆರೆಯಲ್ಲಿ ದೊಡ್ಡ ಮದಕರಿಯ ಸಮಾಧಿಯನ್ನು ಮಾರಿಕೊಂಡವರು,ನನಗೆ ಹೇಳಿದ ಮಾತಿದು.ಇಂತಹ ಅಲ್ಪ ಸಹಾಯಗಳಿಗೆ, ಇತಿಹಾಸವನ್ನೇ ತಿರುಚಿ, ಮುಂಬರುವ ಪೀಳಿಗೆಗೆ ಯಾವ ಚಿತ್ರಣ ತೋರಿಸಲು ಹೊರಟಾಗಿದೆಯೋ! ತಿಳಿಯುತ್ತಿಲ್ಲ.
ಸ್ಥಿತಿ ಗತಿಗಳನ್ನ ಅವಲೋಕಿಸಿದರೆ,ಊರ ಸಾಂಸ್ಕೃತಿಕ ವೈಭವಗಳು, ಮತ್ತೊಂದು ದಾರಿಯ ಪರಂಪರೆಯಲ್ಲಿ, ಸಾಗುತ್ತಿರುವ ವಿಲಕ್ಷಣಗಳು ಕಾಣಿಸುತ್ತಿವೆ,ಇದು ಇತಿಹಾಸದ ಅಪಚಾರವಲ್ಲವೇ.ಒಬ್ಬ ಇತಿಹಾಸ ಮಹಾಸಾಧಕ, ಇತ್ತೀಚೆಗೆ ಪ್ರಾರಂಭ ಮಾಡಿಸಿದ ಕೀಳಿರಿಮೆಯ ಕಥೆ ಇದು.ಇದನ್ನು ಪ್ರಾರಂಭ ಮಾಡಿದ ವರ್ಷವೇ, ದುರ್ಗದ ಇತಿಹಾಸವನ್ನು ಅತ್ಯಂತ ಪ್ರೀತಿ ಗೌರವದಿಂದ ಕಾಣುತ್ತಿದ್ದ,ತ ರಾ ಸು ಜೊತೆಯ ಸಮಾಲೋಚನಾ ಸ್ನೇಹಮಯಿ,ಶ್ರೀಶೈಲಾರಾಧ್ಯರು ಈ ಪದ್ಧತಿ ತಪ್ಪು ಅಂತ ಅಂದೇ ವಿರೋಧಿಸಿದ್ದರು.
ದೇವರು ದೇವರಾಗಿರಬೇಕೇ ವಿನಹ ಆಶ್ರಯ ಕೊಟ್ಟ ಕುಲಕ್ಕೆ ಅವಮಾನಿಸಬಾರದು.ನನ್ನ ಅಕ್ಷರಗಳ ಅರ್ಥ ಯಾವುದೂ ಯಾರಿಗೂ ಹಿಂದಿರುಗಿಸಬೇಕೆಂದಲ್ಲ, ಸಮಾಜದಲ್ಲಿ ಗೌರವಿಸುವ ನಡೆ-ನುಡಿಯ ಎಲ್ಲರೊಳಗೊಂಡ ಸಾಂಸ್ಕೃತಿಕ ಹಬ್ಬಗಳು, ಮುಂದುವರೆಯಲಿ ಎಂಬುದಷ್ಟೇ ಕಳಕಳಿ.ಪ್ರಭು ದೇಶಿಕೇಂದ್ರ ಗುರುಗಳು,ಹಾಗೂ ಮದಕರಿ ನಾಯಕರ ಸಂಗಮದಂತೆ ಅದೇ ನನ್ನ ಆಶಯ.
ಮುಂದುವರೆಯುವುದು…….
ಲೇಖನ-ಕುಮಾರ್ ಬಡಪ್ಪ, ಚಿತ್ರದುರ್ಗ.