ಕೋಟೆ ನಾಡಿನ ಹೆಣ್ಣುಮಕ್ಕಳ ಭವಿಷ್ಯಕ್ಕೆ ‘ಜಾಗದ’ ಗ್ರಹಣ: 20 ಕೋಟಿ ಅನುದಾನವಿದ್ದರೂ ಸೂರು ಸಿಗದ ದುಸ್ಥಿತಿ!

News Desk
- Advertisement -  - Advertisement - 

ಚಿತ್ರದುರ್ಗ ಸರ್ಕಾರಿ ಮಹಿಳಾ ಕಾಲೇಜಿಗೆ 20 ಕೋಟಿ ಅನುದಾನ:
ಹೆಚ್.ತನುಶ್ರೀ, ಹರಿಯಬ್ಬೆ.
 ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಕಲ್ಲಿನ ಕೋಟೆಯ ನಾಡು ಚಿತ್ರದುರ್ಗದ ಶೈಕ್ಷಣಿಕ ಇತಿಹಾಸದಲ್ಲಿ ಒಂದು ಸುಸಂಸ್ಕೃತ ಮೈಲಿಗಲ್ಲಾಗಬೇಕಿದ್ದ ಸರ್ಕಾರಿ ಮಹಿಳಾ ಕಾಲೇಜಿನ ಹೈಟೆಕ್ ಕಟ್ಟಡ ನಿರ್ಮಾಣದ ಕನಸು, ಈಗ ಜಾಗದ ಗೊಂದಲದ ಸುಳಿಯಲ್ಲಿ ಸಿಲುಕಿ ನಲುಗುತ್ತಿದೆ.

ಸರ್ಕಾರವು ಹೆಣ್ಣುಮಕ್ಕಳ ಉನ್ನತ ಶಿಕ್ಷಣಕ್ಕಾಗಿ 20 ಕೋಟಿ ರೂಪಾಯಿಗಳ ಬೃಹತ್ ಅನುದಾನ ಬಿಡುಗಡೆ ಮಾಡಿದ್ದರೂ, ಸೂಕ್ತ ಜಾಗದ ಹಂಚಿಕೆಯಾಗದೆ ಈ ಸೌಭಾಗ್ಯ ನಮ್ಮ ಜಿಲ್ಲೆಯಿಂದ ಬೇರೆಡೆಗೆ ವರ್ಗಾವಣೆಯಾಗುವ ಭೀತಿ ಎದುರಾಗಿದೆ.

- Advertisement - 

​ಕಣ್ಣೆದುರಿಗಿದೆ ಅವಕಾಶ; ಆದರೆ ಮನಸ್ಸಿಲ್ಲವೇ?:
​ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ ಎಂಬ ಮಾತಿದೆ. ಆದರೆ ಚಿತ್ರದುರ್ಗದಲ್ಲಿ ಹೆಣ್ಣುಮಕ್ಕಳು ಕಲಿಯಲು ಒಂದು ಸುಸಜ್ಜಿತ ಕಟ್ಟಡ ಕಟ್ಟಲು “ಎರಡು ಎಕರೆ” ಜಾಗ ನೀಡಲು ಪಡಿಪಾಟಲು ಪಡುತ್ತಿರುವುದು ದುರದೃಷ್ಟಕರ. ಕೇವಲ ತಾಂತ್ರಿಕ ಕಾರಣಗಳು ಅಥವಾ ಜಾಗದ ಗೊಂದಲದಿಂದಾಗಿ ಈ 20 ಕೋಟಿ ರೂಪಾಯಿ ವಾಪಸ್ ಹೋದರೆ, ಅದು ಕೇವಲ ಹಣದ ನಷ್ಟವಲ್ಲ; ನಮ್ಮ ಜಿಲ್ಲೆಯ ಸಾವಿರಾರು ಬಡ ವಿದ್ಯಾರ್ಥಿನಿಯರ ಶೈಕ್ಷಣಿಕ ಭವಿಷ್ಯಕ್ಕೆ ಮಾಡುವ ದ್ರೋಹ.

​ಜಿಲ್ಲಾಧಿಕಾರಿಗಳ ಮುಂದಿರುವ ಸುಲಭ ಪರಿಹಾರಗಳು:
​ಚಿತ್ರದುರ್ಗ ಜಿಲ್ಲಾಡಳಿತ ಮನಸ್ಸು ಮಾಡಿದರೆ ಈ ಸಮಸ್ಯೆಯನ್ನು ಕ್ಷಣಾರ್ಧದಲ್ಲಿ ಪರಿಹರಿಸಬಹುದು. ಸಾರ್ವಜನಿಕರು ಮತ್ತು ವಿದ್ಯಾರ್ಥಿ ಸಂಘಟನೆಗಳ ಆಶಯದಂತೆ ಎರಡು ಸ್ಪಷ್ಟ ದಾರಿಗಳು ನಮ್ಮ ಮುಂದಿವೆ:

- Advertisement - 

​ಸರ್ಕಾರಿ ಕಲಾ ಕಾಲೇಜಿನ ಆವರಣ:
ಇಲ್ಲಿ ಲಭ್ಯವಿರುವ 12 ಎಕರೆ ವಿಶಾಲವಾದ ಜಾಗದಲ್ಲಿ ಕೇವಲ 2 ಎಕರೆಯನ್ನು ಮಹಿಳಾ ಕಾಲೇಜಿಗೆ ಮೀಸಲಿಡುವುದು.

​ಹಾಸ್ಟೆಲ್ ಆವರಣದ ಜಾಗ:
ಇಲ್ಲಿರುವ 7 ಎಕರೆ ಜಾಗದಲ್ಲಿ 2 ಎಕರೆಯನ್ನು ತುರ್ತಾಗಿ ಹಂಚಿಕೆ ಮಾಡಿ, ಹೈಟೆಕ್ ಕಟ್ಟಡಕ್ಕೆ ಹಸಿರು ನಿಶಾನೆ ತೋರಿಸುವುದು.

​ಒಂದು ಮನವಿ:
“ಬಡತನದ ನಡುವೆಯೂ ಶಿಕ್ಷಣದ ಕನಸು ಕಾಣುವ ಗ್ರಾಮೀಣ ಭಾಗದ ಹೆಣ್ಣು ಮಕ್ಕಳಿಗೆ ಈ ಕಾಲೇಜು ಕೇವಲ ಕಟ್ಟಡವಲ್ಲ, ಅದು ಅವರ ಬದುಕಿನ ಭರವಸೆ. ಜಾಗದ ತಾಂತ್ರಿಕ ಕಾರಣಗಳಿಗಾಗಿ ಸರ್ಕಾರಿ ಹಣ ವಾಪಸ್ ಹೋದರೆ, ಇತಿಹಾಸ ನಮ್ಮನ್ನು ಕ್ಷಮಿಸುವುದಿಲ್ಲ.”

​ಆಡಳಿತ ವರ್ಗಕ್ಕೆ ನಮ್ಮದೊಂದು ಪ್ರಶ್ನೆ:
​ನಮ್ಮ ಜಿಲ್ಲೆಯ ಹೆಣ್ಣು ಮಕ್ಕಳ ಭವಿಷ್ಯಕ್ಕಿಂತ ಜಾಗದ ವಿವಾದ ದೊಡ್ಡದೇ? ಹತ್ತಾರು ಎಕರೆ ಭೂಮಿ ಕಣ್ಣೆದುರಿಗಿದ್ದರೂ, ವಿದ್ಯಾರ್ಥಿನಿಯರು ಶಿಥಿಲಾವಸ್ಥೆಯ ಅಥವಾ ಸೌಲಭ್ಯರಹಿತ ಕಟ್ಟಡಗಳಲ್ಲಿ ಕಲಿಯಬೇಕೆ? ಜಿಲ್ಲಾಧಿಕಾರಿಗಳು ತಕ್ಷಣ ಮಧ್ಯಪ್ರವೇಶಿಸಿ, 20 ಕೋಟಿ ಅನುದಾನವನ್ನು ಸದ್ಬಳಕೆ ಮಾಡಿಕೊಳ್ಳುವ ಮೂಲಕ ಚಿತ್ರದುರ್ಗಕ್ಕೆ ಒಂದು “ಮಾದರಿ ಮಹಿಳಾ ಕಾಲೇಜು” ಉಡುಗೊರೆಯಾಗಿ ನೀಡಬೇಕಿದೆ.

​ಇದು ಕೇವಲ ಕಟ್ಟಡದ ಪ್ರಶ್ನೆಯಲ್ಲ;
ಜಿಲ್ಲೆಯ ಸಾವಿರಾರು ಹೆಣ್ಣುಮಕ್ಕಳ ಆತ್ಮಾಭಿಮಾನದ ಪ್ರಶ್ನೆ. ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಇಚ್ಛಾಶಕ್ತಿ ತೋರಿ, ಶೀಘ್ರವೇ ಭೂಮಿ ಮಂಜೂರು ಮಾಡುವ ಮೂಲಕ ಈ “ಶಿಕ್ಷಣದ ಭಾಗ್ಯ” ಕೈತಪ್ಪದಂತೆ ನೋಡಿಕೊಳ್ಳಬೇಕಿದೆ.

ಏನಿದು ಕಾಲೇಜ್ ಚಿತ್ರಣ ಮತ್ತು ಅನುದಾನ?:
ಇಲ್ಲಿನ ಮದಕರಿ ವೃತ್ತದಲ್ಲಿರುವ
ಬಿಗ್ರೇಡ್ ಮಾನ್ಯತೆ ಪಡೆದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಮೂಲಸೌಕರ್ಯ ಅಭಿವೃದ್ಧಿಗೆ ಹೊಸ ವೇಗ ಸಿಕ್ಕಿದೆ. ಕರ್ನಾಟಕ ಗಣಿ ಬಾಧಿತ ಪ್ರದೇಶಗಳ ಪುನಶ್ಚೇತನ ನಿಗಮ (KMERC) ವತಿಯಿಂದ ಮಂಜೂರಾಗಿರುವ 20 ಕೋಟಿ ರೂಪಾಯಿ ಅನುದಾನದಲ್ಲಿ ನೂತನ ಕಟ್ಟಡ ನಿರ್ಮಾಣಕ್ಕೆ ಸಂಬಂಧಿಸಿದಂತೆ ಪರಿಷ್ಕೃತ ಅಗತ್ಯ ಸೌಲಭ್ಯಗಳ ಪಟ್ಟಿಯನ್ನು ಕಾಲೇಜು ಆಡಳಿತ ಮಂಡಳಿಯು ಸಲ್ಲಿಸಿದೆ. 

​ಭವಿಷ್ಯದ ಕೋರ್ಸ್‌ಗಳ ಮೇಲೆ ಕಣ್ಣು:
​ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಬಿ.ಎ. ಮತ್ತು ಬಿ.ಕಾಂ. ಕೋರ್ಸ್‌ಗಳ ಜೊತೆಗೆ, 2026-27ನೇ ಸಾಲಿನಿಂದ ಪ್ರಾರಂಭವಾಗಲಿರುವ BCA, IFADP ಹಾಗೂ ಭವಿಷ್ಯದಲ್ಲಿ ಉದ್ದೇಶಿಸಿರುವ ಬಿ.ಎಸ್ಸಿ (PCM, CBZ, PMCS) ಮತ್ತು ಸ್ನಾತಕೋತ್ತರ ಪದವಿ (M.A, M.Com, M.Sc) ಕೋರ್ಸ್‌ಗಳನ್ನು ಗಮನದಲ್ಲಿಟ್ಟುಕೊಂಡು ಈ ಪ್ರಸ್ತಾವನೆ ಸಿದ್ಧಪಡಿಸಲಾಗಿದೆ. 

​ಪ್ರಸ್ತಾವನೆಯಲ್ಲಿರುವ ಪ್ರಮುಖ ಸೌಲಭ್ಯಗಳು:
​ಕೊಠಡಿಗಳು: ಒಟ್ಟು 40 ಸುಸಜ್ಜಿತ ತರಗತಿ ಕೊಠಡಿಗಳ ನಿರ್ಮಾಣಕ್ಕೆ ಬೇಡಿಕೆ ಇಡಲಾಗಿದೆ. ಇದರಲ್ಲಿ ಶೇ. 30 ರಷ್ಟು ಕೊಠಡಿಗಳನ್ನು ತಲಾ 40 ವಿದ್ಯಾರ್ಥಿಗಳ ಸಾಮರ್ಥ್ಯಕ್ಕೆ ಅನುಗುಣವಾಗಿ ವಿನ್ಯಾಸಗೊಳಿಸಲು ಸೂಚಿಸಲಾಗಿದೆ. 

​ಸಭಾಂಗಣ ಹಾಗೂ ಕ್ರೀಡೆ: 1,000 ಆಸನಗಳ ಬೃಹತ್ ಸಭಾಂಗಣ ಮತ್ತು ಒಂದು ಇಂಡೋರ್ ಸ್ಟೇಡಿಯಂ ನಿರ್ಮಾಣದ ಯೋಜನೆ ಇದೆ. 

​ವಿಶೇಷ ಘಟಕಗಳು: ಗ್ರಂಥಾಲಯ, ಸುಸಜ್ಜಿತ ಕಂಪ್ಯೂಟರ್ ಲ್ಯಾಬ್‌ಗಳು, ಭಾಷಾ ಕೊಠಡಿಗಳು, ಐ.ಕ್ಯೂ.ಎ.ಸಿ (IQAC) ಕೊಠಡಿ ಮತ್ತು ಮಹಿಳಾ ಘಟಕಕ್ಕೆ ಪ್ರತ್ಯೇಕ ವ್ಯವಸ್ಥೆ ಕಲ್ಪಿಸಲಾಗುವುದು. 

​ಇತರೆ ಸೌಲಭ್ಯಗಳು: ಎನ್.ಎಸ್.ಎಸ್, ಎನ್.ಸಿ.ಸಿ ಹಾಗೂ ರೋವರ್ಸ್ ಘಟಕಗಳಿಗೆ ಪ್ರತ್ಯೇಕ ಕೊಠಡಿಗಳು, ಪ್ರತಿ ಮಹಡಿಯಲ್ಲೂ ವಿಕಲಚೇತನ ಸ್ನೇಹಿ ಶೌಚಾಲಯಗಳು (ಒಟ್ಟು 6) ಇರಲಿವೆ. 

​ಪರಿಸರ ಸ್ನೇಹಿ ಮತ್ತು ಸುರಕ್ಷಿತ ಕ್ಯಾಂಪಸ್:
​ನೂತನ ಕಟ್ಟಡವು ಕೇವಲ ಇಟ್ಟಿಗೆ-ಸಿಮೆಂಟ್ ರಚನೆಯಾಗದೆ ಆಧುನಿಕ ತಂತ್ರಜ್ಞಾನವನ್ನೂ ಒಳಗೊಳ್ಳಲಿದೆ. ಮಳೆ ನೀರು ಕೊಯ್ಲು, ಘನತ್ಯಾಜ್ಯ ನಿರ್ವಹಣಾ ಘಟಕ, ಸೋಲಾರ್ ವಿದ್ಯುತ್ ವ್ಯವಸ್ಥೆ, ಸಿಸಿ ಕ್ಯಾಮೆರಾ ಕಾವಲು, ಲಿಫ್ಟ್ ಮತ್ತು ಫೈರ್ ಸೇಫ್ಟಿ ಸೌಲಭ್ಯಗಳನ್ನು ಅಳವಡಿಸಲು ಕಾಲೇಜು ಪ್ರಾಂಶುಪಾಲರು ಕೆ.ಎಂ.ಇ.ಆರ್.ಸಿ ವ್ಯವಸ್ಥಾಪಕ ನಿರ್ದೇಶಕರಿಗೆ ಪತ್ರದ ಮೂಲಕ ಮನವಿ ಮಾಡಿದ್ದಾರೆ. 

​ಈ ಬೃಹತ್ ಯೋಜನೆಯಿಂದಾಗಿ ಜಿಲ್ಲೆಯ ಹೆಣ್ಣುಮಕ್ಕಳ ಉನ್ನತ ಶಿಕ್ಷಣಕ್ಕೆ ಪೂರಕವಾದ ಅತ್ಯಾಧುನಿಕ ಶೈಕ್ಷಣಿಕ ವಾತಾವರಣ ನಿರ್ಮಾಣವಾಗುವ ನಿರೀಕ್ಷೆಯಿದೆ.

 

 

Share This Article
error: Content is protected !!
";