ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಶೃಂಗೇರಿ ಕ್ಷೇತ್ರದ ಕೆರೆಕಟ್ಟೆ ಬಳಿ ನಡೆದ ಕಾಡಾನೆ ದಾಳಿಯಲ್ಲಿ ಬಿಜೆಪಿ ಪಕ್ಷದ ಮಹಾಶಕ್ತಿ ಕೇಂದ್ರದ ಅಧ್ಯಕ್ಷರಾದ ಹರೀಶ್ ಮತ್ತು ಉಮೇಶ್ ಅವರು ಭೀಕರವಾಗಿ ಸಾವನ್ನಪ್ಪಿರುವ ದಾರುಣ ಘಟನೆ ನಿಜಕ್ಕೂ ನೋವು ತರಿಸಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಸಂತಾಪ ಸೂಚಿಸಿದ್ದಾರೆ.
ಅರಣ್ಯ ಪ್ರದೇಶಗಳಲ್ಲಿ ಇತ್ತೀಚಿನ ದಿನಗಳಲ್ಲಿ ಹುಲಿ ಹಾಗೂ ಆನೆ ದಾಳಿಗಳ ಪ್ರಕರಣಗಳು ಮೇಲಿಂದ ಮೇಲೆ ವರದಿಯಾಗುತ್ತಿರುವ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಹೆಚ್ಚಿನ ಮುಂಜಾಗ್ರತಾ ಕ್ರಮ ವಹಿಸಬೇಕು.
ಅರಣ್ಯವೂ ಉಳಿಯಬೇಕು, ಅರಣ್ಯ ಜೀವಿಗಳಿಗೂ ರಕ್ಷಣೆ ಸಿಗಬೇಕು, ಅಷ್ಟೇ ಮುಖ್ಯವಾಗಿ ಅರಣ್ಯದಂಚಿನ ವಾಸಿಗಳಿಗೂ ಸುರಕ್ಷತೆ ದೊರಕಬೇಕು. ಈ ನಿಟ್ಟಿನಲ್ಲಿ ಅರಣ್ಯ ಇಲಾಖೆ ವಿಶೇಷ ಕ್ರಿಯಾ ಯೋಜನೆ ರೂಪಿಸಲಿ.
ಕಾಡಾನೆ ದಾಳಿಯಿಂದ ಜೀವ ಕಳೆದುಕೊಂಡ ಮೃತರ ಕುಟುಂಬಕ್ಕೆ ತಕ್ಷಣ ಹೆಚ್ಚಿನ ಪರಿಹಾರ ಸರ್ಕಾರ ನೀಡಲಿ. ಮೃತರ ಸಾವಿಗೆ ಸಂತಾಪ ಕೋರುವೆ. ಅವರ ಕುಟುಂಬ ವರ್ಗದವರಿಗೆ ಈ ಅನಿರೀಕ್ಷಿತ ಸಾವಿನ ದುಃಖ ಸಹಿಸುವ ಶಕ್ತಿಯನ್ನು ಭಗವಂತನು ಕರುಣಿಸಲಿ ಎಂದು ವಿಜಯೇಂದ್ರ ಪ್ರಾರ್ಥಿಸಿದ್ದಾರೆ.

