ಕೆರೆಗಳಿಗೆ ಶೀಘ್ರ ಭದ್ರೆ ಭಾಗ್ಯ-ಮಾಜಿ ಸಚಿವ ಆಂಜನೇಯ

News Desk

 ಚಂದ್ರವಳ್ಳಿ ನ್ಯೂಸ್, ಹೊಳಲ್ಕೆರೆ:
 ಭದ್ರಾ ಮೇಲ್ದಂಡೆ ಮುಖ್ಯ ಕಾಲುವೆಯಿಂದ ಹೊಳಲ್ಕೆರೆ ತಾಲ್ಲೂಕಿನ 30 ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಅಡ್ಡಿಯಾಗಿದ್ದ ಭೂಸ್ವಾಧೀನ ಪ್ರಕ್ರಿಯೆ ಸಮಸ್ಯೆಗೆ ಮಾಜಿ ಸಚಿವ ಹೆಚ್.ಆಂಜನೇಯ ಸಂಧಾನದ ಮೂಲಕ ತೆರೆ ಎಳೆದಿದ್ದಾರೆ.

ಗಂಗಸಮುದ್ರದಲ್ಲಿ ಯೋಜನೆಯಡಿ ನಡೆಯುತ್ತಿರುವ ಕಾಮಗಾರಿ ಸ್ಥಳಕ್ಕೆ ಶನಿವಾರ ಭೇಟಿ ನೀಡಿ ವೀಕ್ಷಿಸಿದ ಬಳಿಕ ರೈತರೊಂದಿಗೆ ಚರ್ಚಿಸಿದರು. 

- Advertisement - 

ಪೈಪ್‌ಲೈನ್ ಹಾಗೂ ನೀರು ಸಂಗ್ರಹ ಟ್ಯಾಂಕ್ ನಿರ್ಮಾಣಕ್ಕೆ ಭೂಮಿ ನೀಡಲು ಆಕ್ಷೇಪ ವ್ಯಕ್ತಪಡಿಸಿದ್ದ ನಾಲ್ವರು ರೈತರನ್ನು ಮನವೊಲಿಸಿದರು.

ಆರಂಭದಲ್ಲಿ ನಾಲ್ವರು ರೈತರು ನಮಗೆ ಸೂಕ್ತ ಪರಿಹಾರ ನೀಡಬೇಕೆಂದು ಪಟ್ಟು ಹಿಡಿದರು.ಜೊತೆಗೆ ಅನೇಕ ಬೇಡಿಕೆಗಳನ್ನು ಮುಂದಿಟ್ಟರು.

- Advertisement - 

 ಎಲ್ಲ ಮಾತುಗಳನ್ನು ಆಲಿಸಿದ ಆಂಜನೇಯ ಅವರು, ಭದ್ರಾ ಮೇಲ್ದಂಡೆ ಯೋಜನೆ ವ್ಯಾಪ್ತಿಯಿಂದ ಹೊಳಲ್ಕೆರೆ ತಾಲ್ಲೂಕು ಕೈಬಿಟ್ಟು ಹೋಗಿತ್ತು. ಇದನ್ನು ಪ್ರಶ್ನೀಸಿ ಯಾರೊಬ್ಬರೂ ಧ್ವನಿಯೆತ್ತಲಿಲ್ಲ. ಆದರೆ, ನಾನು ಸಮಾಜ ಕಲ್ಯಾಣ ಸಚಿವನಾಗಿದ್ದ ಸಂದರ್ಭ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಒಪ್ಪಿಸಿ ಯೋಜನೆ ವ್ಯಾಪ್ತಿಗೆ ಹೊಳಲ್ಕೆರೆ ತಾಲ್ಲೂಕನ್ನು ಸೇರ್ಪಡೆ ಮಾಡಿದೆ ಎಂದರು.

ಜೊತೆಗೆ 110 ಕೋಟಿ ರೂ. ವೆಚ್ಚದಲ್ಲಿ 22 ಕೆರೆಗಳಿಗೆ ಭದ್ರೆ ನೀರು ತುಂಬಿಸುವ ಮಹತ್ವದ ಯೋಜನೆಗೆ ಟೆಂಡರ್ ಪ್ರಕ್ರಿಯೆ ನಡೆಸಿ, ಕಾಮಗಾರಿ ಆರಂಭಿಸಲಾಗಿತ್ತು. ಆದರೆ, ಈ ಯೋಜನೆ ಪೂರ್ಣಗೊಂಡಲ್ಲಿ ಆಂಜನೇಯ ಮತ್ತು ಕಾಂಗ್ರೆಸ್ ಪಕ್ಷಕ್ಕೆ ಹೆಸರು ಬರಲಿದೆ ಎಂದು ಕೆಲವರು ಅನಗತ್ಯವಾಗಿ ಕಾಮಗಾರಿ ಮಂದಗತಿ ಆಗುವ ರೀತಿ ಷಡ್ಯಂತರ ನಡೆಸಿದರು ಎಂದು ದೂರಿದರು.

ಆದರೂ ಯೋಜನೆ ತ್ವರಿತಗತಿಯಲ್ಲಿ ಸಾಗಲು ಅನುದಾನ, ತಾಂತ್ರಿಕ ಸೇರಿ ಎಲ್ಲ ರೀತಿ ಸಮ್ಮತಿ ಸರ್ಕಾರದಿಂದ ಒಪ್ಪಿಗೆ ತರುವಲ್ಲಿ ಶ್ರಮಿಸಿದ್ದೇನೆ. ಜೊತೆಗೆ ಯಾವೊಬ್ಬ ರೈತರಿಗೂ ಪರಿಹಾರದಲ್ಲಿ ಅನ್ಯಾಯವಾಗದ ರೀತಿ ಒತ್ತಡ ತಂದಿರುವೆ. ಆದರೆ, ನಾಲ್ವರು ರೈತರು ಆಕ್ಷೇಪ ವ್ಯಕ್ತಪಡಿಸಿರುವುದರಿಂದ ಮಹತ್ವದ ಯೋಜನೆಗೆ ಅಡ್ಡಿಯಾಗಿದೆ. ಸರ್ಕಾರದ ನೀತಿನಿಯಮದಂತೆ ನಿಮಗೆ ಸೂಕ್ತ ಪರಿಹಾರ ಕೊಡಿಸಲಾಗುವುದು ಎಂದರು.

ಒಟ್ಟು 200 ಕೋಟಿ ರೂ. ವೆಚ್ಚದಲ್ಲಿ ತಾಳ್ಯ ಸೇರಿ ಹೆಚ್ಚುವರಿ ಗ್ರಾಮಗಳ ಸೇರ್ಪಡೆಯೊಂದಿಗೆ 30 ಕೆರೆಗಳನ್ನು ಭದ್ರೆ ನೀರಿನಿಂದ ತುಂಬಿಸಿ ತಾಲ್ಲೂಕಿನಲ್ಲಿ ಕೃಷಿ ಚಟುವಟಿಕೆ ಗರಿಗೆದರುವ ಜೊತೆಗೆ ರೈತರ ಬದುಕು ಹಸನುಗೊಳಿಸುವ ಪ್ರಯತ್ನಕ್ಕೆ ರೈತರು ಬೆಂಬಲವಾಗಿ ನಿಲ್ಲಬೇಕೆಂದು ಕೋರಿದರು.

 ತಕ್ಷಣ ಭೂಮಿ ನೀಡಲು ಆಕ್ಷೇಪ ವ್ಯಕ್ತಪಡಿಸಿದ್ದ ರೈತರು ಯೋಜನೆ ಕಾಮಗಾರಿಗೆ ಭೂಮಿ ನೀಡುವುದಾಗಿ ವಾಗ್ದಾನ ನೀಡಿದರು.
ಈ ವೇಳೆ ರೈತರನ್ನು ಅಭಿನಂದಿಸಿ ಮಾತನಾಡಿದ ಆಂಜನೇಯ, ಅರೆಮಲೆನಾಡು ಎಂಬ ಖ್ಯಾತಿಯ ಹೊಳಲ್ಕೆರೆ ಈಚೆಗೆ ಬರಗಾಲಕ್ಕೆ ತುತ್ತಾಗುತ್ತಿದೆ. ಅದರಿಂದ ಹೊರಬರಲು ಭದ್ರಾ ಮೇಲ್ದಂಡೆ ಯೋಜನೆ ಸಹಕಾರಿ ಆಗಲಿದೆ. ಜನ-ಜಾನುವಾರುಗಳಿಗೆ ಕುಡಿಯುವ ನೀರಿಗೆ ಶಾಶ್ವತ

ಪರಿಹಾರ ದೊರಕಿಸಲಿದೆ. ಅಂತರ್ಜಲ ಹೆಚ್ಚಿ, ಕೊಳವೆಬಾವಿಗಳಲ್ಲಿ ನೀರು ಹೆಚ್ಚಲಿದೆ. ಈ ಕಾರ್ಯಕ್ಕೆ ಭೂಮಿ ನೀಡುವ ರೈತರ ಉದಾರತೆಗೆ ನಾವೆಲ್ಲರೂ ಕೃತಜ್ಞರಾಗಿರುತ್ತೇವೆ. ಈ ಮೂಲಕ ತಾಲ್ಲೂಕಿನಲ್ಲಿ ಕೃಷಿಕರು ಆರ್ಥಿಕವಾಗಿ ಸಬಲರಾಗಲಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು.

ಭದ್ರಾ ಮೇಲ್ದಂಡೆ ಮುಖ್ಯ ಕಾಲುವೆಯಿಂದ ಗಂಗಸಮುದ್ರದಲ್ಲಿನ ಟ್ಯಾಂಕ್‌ಗೆ ನೀರು ಹರಿದುಬರಲಿದ್ದು, ದೇವರಹೊಸಹಳ್ಳಿ, ತಾಳಿಕಟ್ಟೆ, ದುಮ್ಮಿ, ಕೆಂಗುಂಟೆ,ರಂಗಾಪುರ, ಹನುಮಲಿ, ಆರ್.ನುಲೇನೂರು, ಚಿಕ್ಕಜಾಜೂರು ಸೇರಿ 30 ಕೆರೆಗಳಿಗೆ ಭದ್ರೆ ನೀರು ತುಂಬಲಿದ್ದು, ಈ ಮೂಲಕ ಕ್ಷೇತ್ರದ ಜನಜೀವನ ಸುಧಾರಿಸಲಿದೆ ಎಂದರು.

ಈ ಸಂದರ್ಭದಲ್ಲಿ ತಹಶೀಲ್ದಾರ್ ವಿಜಯಕುಮಾರ್, ಭದ್ರಾ ಮೇಲ್ದಂಡೆ ಯೋಜನೆಯ ಎಇಇ ನಾಗರಾಜ್, ಎಇ ಕಿರಣ್, ತಾಪಂ ಇಒ ವಿಶ್ವನಾಥ್, ಸರ್ಕಲ್ ಇನ್ಸಪೆಕ್ಟರ್ ಚಿಕ್ಕಣ್ಣನವರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಟಿ.ಹನುಮಂತಪ್ಪ, ತಾಪಂ ಮಾಜಿ ಸದಸ್ಯರಾದ ರಾಮಚಂದ್ರಪ್ಪ, ಎಂ.ಎಸ್.ನಾಗಪ್ಪ, ನಾಗಣ್ಣ, ಜಿಪಂ ಮಾಜಿ ಸದಸ್ಯರಾದ ಗಂಗಾಧರ್, ಲೋಹಿತ್ ಕುಮಾರ್, ಡಿ.ಕೆ.ಶಿವಮೂರ್ತಿ, ರಂಗಸ್ವಾಮಿ, ಶಿವಪುರದ ಶಿವಕುಮಾರ್, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಮುತ್ತುಗದೂರು ರುದ್ರಣ್ಣ ಇತರರಿದ್ದರು. ಇದೇ ವೇಳೆ ಸುತ್ತಮುತ್ತಲಿನ ಗ್ರಾಮಸ್ಥರು ಆಂಜನೇಯ ಅವರನ್ನು ಅಭಿನಂದಿಸಿದರು.

 

 

Share This Article
error: Content is protected !!
";