ಆಧಾರ್ ಲಿಂಕ್ ಸರ್ವೆಯೊಂದಿಗೆ ಶೀಘ್ರ ಒಳ ಮೀಸಲು ಜಾರಿ ಮಾಡಿ-ಮಾಜಿ ಸಚಿವ ಆಂಜನೇಯ

News Desk

ಚಂದ್ರವಳ್ಳಿ ನ್ಯೂಸ್,  ಚಿತ್ರದುರ್ಗ:
ಒಳಮೀಸಲಾತಿ ವಿಷಯದಲ್ಲಿ ರಾಜ್ಯ ಸರ್ಕಾರ ಬಹಳಷ್ಟು ವಿಳಂಬ ನೀತಿ ಮಾಡಿದೆ ಎಂಬ ಆತಂಕ ಮಾಡಿದ್ದು
, ಅದನ್ನು ಹೊಗಲಾಡಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಕೆಲ ಕ್ರಮಕೈಗೊಂಡಿರುವುದು ಸ್ವಾಗತರ್ಹ ಎಂದು ಮಾಜಿ ಸಚಿವ ಎಚ್.ಆಂಜನೇಯ ಹೇಳಿದರು.

ನಗರದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಸುಪ್ರೀಂ ಕೋರ್ಟ್ ತೀರ್ಪು ನೀಡಿ 7 ತಿಂಗಳು ಆಗಿದೆ. ಈಗಾಗಲೇ ತೆಲಂಗಾಣದಲ್ಲಿ ಮುಖ್ಯಮಂತ್ರಿ ರೇವಂತ್ ರೆಡ್ಡಿ ಒಳಮೀಸಲಾತಿ ಜಾರಿಗೊಳಿಸಿದ್ದಾರೆ. ಅದೇ ರೀತಿ ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ದಿಟ್ಟ ನಡೆ ಕೈಗೊಂಡಿದ್ದಾರೆ. ಆದರೆ, ಕಾಣದ ಕೈಗಳು ನಿರಂತರ ಅಡ್ಡಿ ಪಡಿಸುತ್ತಿವೆ ಎಂದು ದೂರಿದರು.

ಒಳಮೀಸಲಾತಿಗಾಗಿ 30 ವರ್ಷ ಹೋರಾಟ ನಡೆಸಿ, ಅನೇಕರು ನಮ್ಮನ್ನು ಅಗಲಿದ್ದಾರೆ. ಈ ಮಧ್ಯೆ ಮೀಸಲು ಸೌಲಭ್ಯಕ್ಕಾಗಿ ಸಮುದಾಯದವರು ಸರ್ಕಾರದ ಕಡೆ ಆಸೆಗಣ್ಣಿನಲ್ಲಿ ನೋಡುತ್ತಿದ್ದಾರೆ. ಆದರೆ, ರಾಜ್ಯ ಸರ್ಕಾರ ಈ ವಿಷಯದಲ್ಲಿ ವಿಳಂಬ ನೀತಿ ಅನುಸುರಿಸುತ್ತಿದೆ ಎಂಬ ಆಕ್ರೋಶ ಮನೆ ಮಾಡಿದೆ. ಆದ್ದರಿಂದ ಎಲ್ಲ ಆತಂಕಗಳನ್ನು ದೂರಗೊಳಿಸಲು ಮ ಮುಂದಾಗಬೇಕೆಂದು ಆಗ್ರಹಿಸಿದರು.

ತಟ್ಟೆಯಲ್ಲಿ ಅನ್ನ ಇಟ್ಟು, ಊಟ ಹೊಟ್ಟೆ ಸೇರಿದಾಗಲೇ ತೃಪ್ತಿ ಎಂಬಂತೆ ಒಳಮೀಸಲಾತಿ ವಿಷಯದಲ್ಲಿ ಕಳವಳ ಇದೆ. ಕಾರಣ ನ್ಯಾ.ನಾಗಮೋಹನ್ ದಾಸ್ ಆಯೋಗ, ಸರ್ಕಾರಿ ಉದ್ಯೋಗದಲ್ಲಿ ಪರಿಶಿಷ್ಟರಲ್ಲಿ ಯಾವ ಜಾತಿಯವರು ಇದ್ದಾರೆಂಬ ಮಾಹಿತಿ ಕೇಳಿದರೂ ಇಲ್ಲಿಯವರೆಗೂ ಕೊಟ್ಟಿಲ್ಲ. ಜೊತೆಗೆ ಸುಪ್ರೀಂ ಕೋರ್ಟ್ ತೀರ್ಪು ಬಳಿಕ ತರಾತುರಿಯಲ್ಲಿ 10 ಸಾವಿರ ಹುದ್ದೆಗಳ ನೇಮಕಾತಿಗೆ ಆದೇಶ ಹೊರಡಿಸಲಾಗಿದೆ. ಇದೆಲ್ಲವೂ ಕುತಂತ್ರದ ಭಾಗವಾಗಿದೆ ಎಂದರು.

ಈ ಷಡ್ಯಂತ್ರಕ್ಕೆ ಕಡಿವಾಣ ಹಾಕಲು ಸಿದ್ದರಾಮಯ್ಯ ಸರ್ಕಾರಿ ನೇಮಕಾತಿಗೆ ತಡೆ ಹಾಕಿದ್ದಾರೆ. ಜೊತೆಗೆ ಒಳಮೀಸಲಾತಿ ವಿಷಯದಲ್ಲಿ ಆದಿಕರ್ನಾಟಕ, ಆದಿದ್ರಾವಿಡ ವಿಷಯ ಬಹಳಷ್ಟು ಗೊಂದಲಕ್ಕೆ ಎಡೆಮಾಡಿಕೊಟ್ಟಿದ್ದು, ಅದನ್ನು ಶಾಶ್ವತವಾಗಿ ನಿರ್ಮೂಲನೆ ಮಾಡಲು ಪರಿಶಿಷ್ಟ ಜಾತಿಗೆ ಸೀಮಿತಗೊಳಿಸಿ ಜಾತಿಗಣತಿ ಕಾರ್ಯ ಕೈಗೊಳ್ಳಲು ಸಿದ್ಧತೆ ಆರಂಭಿಸಿರುವುದು ಆಶಾಭಾವನೆ ಮೂಡಿಸಿದೆ ಎಂದು ಹೇಳಿದರು.

ಜಾತಿಗಣತಿ ಕಾರ್ಯ ಹಾಗೂ ಒಳಮೀಸಲಾತಿ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಪತ್ರ ಬರೆದು, ಕೆಲ ಬೇಡಿಕೆಗಳನ್ನು ಮುಂದಿಟ್ಟಿದ್ದೇವೆ.

ಬೆಂಗಳೂರು, ಮೈಸೂರು ವಿಭಾಗಗಳಲ್ಲಿ ಪರಿಶಿಷ್ಟ ಜಾತಿಗೆ ಸೇರಿದ ಮಾದಿಗರು ಮತ್ತು ಹೊಲೆಯ ಜಾತಿಯವರು ಆದಿ ಕರ್ನಾಟಕ, ಆದಿ ದ್ರಾವಿಡ ಎಂಬ ಹೆಸರಿನಲ್ಲಿ ಜಾತಿ ಪತ್ರವನ್ನು ಪಡೆದಿದ್ದಾರೆ. ಇದು ಬಹಳಷ್ಟು ಗೊಂದಲಕ್ಕೆ ಎಡೆಮಾಡಿಕೊಟ್ಟಿದೆ. ಇದನ್ನು ತೊಡೆದು ಹಾಕಲು ಮೂಲ (ಮಾದಿಗ ಅಧವಾ ಛಲವಾದಿ) ಜಾತಿಯನ್ನು ಕಡ್ಡಾಯವಾಗಿ ದಾಖಲಿಸಬೇಕು. ಮೂಲ ಜಾತಿ ನಮೋದಿಸದಿದ್ದರೆ ವೆಬ್‍ಸೈಟ್ ಸ್ವೀಕರಿದ ರೀತಿ ತಂತ್ರಾಂಶ ಸಿದ್ಧಪಡಿಸಬೇಕು ಎಂದರು.

ನ್ಯಾ.ಎ.ಜೆ.ಸದಾಶಿವ ಹಾಗೂ ಹಿಂದುಳಿದ ವರ್ಗಗಗಳ ಆಯೋಗದ ಕಾಂತರಾಜ್ ವರದಿ ಸಿದ್ಧಪಡಿಸುವಾಗ ಅಳವಡಿಸಿಕೊಂಡಿದ್ದ ಪ್ರಶ್ನಾವಳಿಯನ್ನು ಅಳವಡಿಸಿಕೊಳ್ಳಬೇಕು. ಜಿಲ್ಲಾಧಿಕಾರಿ, ಜಿಪಂ ಸಿಇಒ ನೇತೃತ್ವದಲ್ಲಿ ಉಪ ವಿಭಾಗಾಧಿಕಾರಿಗಳು, ತಹಶೀಲ್ದಾರ್ ಉಸ್ತುವಾರಿಯಲ್ಲಿ ಶಿಕ್ಷಕರಿಂದ ಗಣತಿಕಾರ್ಯ ನಡೆಸಬೇಕು. ಗ್ರಾಮಾಂತರ ಪ್ರದೇಶ, ಹಟ್ಟಿ, ಕಾಲೋನಿ ಹಾಗೂ ನಗರ ಪ್ರದೇಶದ ಕೆಲ ಬಡಾವಣೆಗಳಲ್ಲಿ ಗುಂಪು ಗುಂಪಾಗಿ ವಾಸಿಸುವ ಪ್ರದೇಶದ ಪ್ರತಿ ಮನೆಗೆ ಕಡ್ಡಾಯವಾಗಿ ಭೇಟಿ ನೀಡಬೇಕು. ಪಿಡಿಓ, ಗ್ರಾಮಲೆಕ್ಕಿಗರು ಕಡ್ಡಾಯ ಹಾಜರಿರಬೇಕು ಎಂದರು.

ಮುಖ್ಯವಾಗಿ ಆಧಾರ್ ಕಾರ್ಡ್ ಲಿಂಕ್ ಕಡ್ಡಾಯಗೊಳಿಸಬೇಕು. ಗಣಿತಿದಾರರು ಪ್ರತಿದಿನ ಗಣಿತಿ ಮಾಡಿದ ವಿವರವನ್ನು ಅಂದೇ ವೆಬ್‍ಸೈಟ್‍ಗೆ ಅಪ್‍ಲೋಡ್ ಮಾಡಬೇಕು. ನಮ್ಮ ವಿವರ ದಾಖಲಿದೆಯೇ ಎಂದು ಖಚಿತಪಡಿಸಿಕೊಳ್ಳುವ ಅವಕಾಶ ಆಧಾರ್ ಕಾರ್ಡ್ ಲಿಂಕ್‍ಗೆ ಒಳಪಟ್ಟ ವ್ಯಕ್ತಿಗೆ ಇರಬೇಕು. ಪರಿಶಿಷ್ಟ ಸಮುದಾಯದ ಪ್ರತಿ ವ್ಯಕ್ತಿಗೆ ಆಧಾರ್‍ಕಾರ್ಡ್ ರೀತಿ ಗುರುತಿನ ಚೀಟಿ ನೀಡಬೇಕು. ಅದರಲ್ಲಿ ಜಾತಿಗಣತಿಯಲ್ಲಿ ನೋಂದಾಯಿಸಿಕೊಂಡ ಸಂಖ್ಯೆ ಸೇರಿ ಕೆಲ ವಿವರಗಳು ಇರಬೇಕು ಎಂದು ಆಗ್ರಹಿಸಿದರು.

ಒಳಮೀಸಲಾತಿ ಜಾರಿ ಬಳಿಕ ಉದ್ಯೋಗ, ಶಿಕ್ಷಣ, ಯೋಜನೆಗಳ ಸೌಲಭ್ಯಗಳನ್ನು ಪಡೆಯುವಾಗ ಮಾದಿಗ, ಛಲವಾದಿ, ಲಂಬಾಣಿ, ಭೋವಿ ಜಾತಿ ಸೂಚಕ ಪ್ರಮಾಣ ಪತ್ರ ಪಡೆಯುವ ಸಂದರ್ಭ ಗುರುತಿನ ಚೀಟಿ ಸಾಕ್ಷಿಯಾಗಿ ಪರಿಗಣಿಸಬಹುದು.

ಜಾತಿಗಣತಿ ಕಾರ್ಯಕ್ಕೆ ಪರಿಶಿಷ್ಟ ಜಾತಿಯ ಶಿಕ್ಷಕರನ್ನು ಯಾವುದೇ ಕಾರಣಕ್ಕೂ ನೇಮಿಸಬಾರದು. ಪಟ್ಟಣ, ನಗರ ಪ್ರದೇಶದಲ್ಲಿ ಹರಿದು ಹಂಚಿ ಹೋಗಿರುವ ಪರಿಶಿಷ್ಟರು ಜಾತಿಗಣತಿ ಕಾರ್ಯದಲ್ಲಿ ಪಾಲ್ಗೊಳ್ಳಲು ಸಹಾಯವಾಗುವ ರೀತಿ ನಗರಸಭೆ, ತಾಲ್ಲೂಕು ಕಚೇರಿ, ಮಹಾನಗರ ಪಾಲಿಕೆಯಲ್ಲಿ ಜಾತಿಗಣತಿ ವಿಭಾಗ ತೆರೆಯಬೇಕು. ಎಂದರು.

ಸರ್ವೇ ಕಾರ್ಯ ಕೈಗೊಳ್ಳಲು ಸಿದ್ಧಪಡಿಸಿದ ಅರ್ಜಿಯ ಪ್ರತಿಯನ್ನು ಪರಿಶಿಷ್ಟ ಸಮುದಾಯದ ಮುಖಂಡರ ಸಮ್ಮುಖದಲ್ಲಿ ಎಲ್‍ಇಡಿ ಸ್ಕ್ರೀನ್ ಮೇಲೆ ಪ್ರದರ್ಶಿಸಿ, ಅಲ್ಪಸ್ವಲ್ಪ ತಿದ್ದುಪಡಿಗಳು ಇದ್ದರೇ ಸರಿಪಡಿಸಿ ಬಳಿಕ ಜಾತಿಗಣತಿ ಕಾರ್ಯ ಆರಂಭಿಸಬೇಕು. ಆಧುನೀಕತೆ, ತಂತ್ರಜ್ಞಾನ ಯುಗದಲ್ಲಿ ಎಲ್ಲ ಕಾರ್ಯಗಳನ್ನು ಸುಸಜ್ಜಿತ ಹಾಗೂ ತ್ವರಿತವಾಗಿ ಕೈಗೊಳ್ಳಲು ಅವಕಾಶ ಇದೆ.

ಆದರೂ ಈ ವಿಷಯದಲ್ಲಿ ಬಹಳಷ್ಟು ಗೊಂದಲದ ಜತೆಗೆ ವಿಳಂಬ ಆಗಿದೆ. ಇದೆಲ್ಲವನ್ನೂ ಹೊಗಲಾಡಿ ಒಳಮೀಸಲಾತಿಯನ್ನು ತುರ್ತಾಗಿ ಜಾರಿಗೊಳಿಸಬೇಕು. ಸಾಮಾಜಿಕ ನ್ಯಾಯದ ಹರಿಕಾರ ಹೆಗ್ಗಳಿಕೆ ಹೊಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ವಿಷಯದಲ್ಲಿ ದಿಟ್ಟ ಕ್ರಮಕೈಗೊಳ್ಳಬೇಕು ಎಂದು ಪತ್ರ ಬರೆದು ಆಗ್ರಹಿಸಿದ್ದೇನೆ. ಜೊತೆಗೆ ಜೊತೆಗೆ ಏ.13ರಂದು ಮಾದಿಗ ಸಮುದಾಯದ ಮುಖಂಡರ ನಿಯೋಗ ತೆರಳಿ ಮನವಿ ಸಲ್ಲಿಸಲಿದ್ದೇವೆ ಎಂದರು.

ಒಳಮೀಸಲಾತಿಗಾಗಿ 30 ವರ್ಷ ಹೋರಾಟ ನಡೆಸಿದ್ದೇವೆ. ಹೊಟ್ಟೆ ಹಸಿದಿದೆ, ಕಣ್ಣೀರು ಹಾಕಿದ್ದೇವೆ. ಇನ್ನೂ ನಮ್ಮಲ್ಲಿ ಕಣ್ಣೀರು ಇಲ್ಲ, ಏನಿದ್ದರೂ ಅತ್ತರೇ ರಕ್ತವೇ ಬರಲಿದೆ. ಅದಕ್ಕೆ ಅವಕಾಶ ನೀಡಬಾರದು. ಮಗು ಅಳುವುದಕ್ಕಿಂತ ಮುಂಚಿತವಾಗಿಯೇ ತಾಯಿ ಹಾಲುಣಿಸಬೇಕು. ಈ ವಿಷಯದಲ್ಲಿ ಸಿದ್ದರಾಮಯ್ಯ ತಾಯಿ ಸ್ಥಾನದಲ್ಲಿ ನಿಂತು ನಮಗೆ ನ್ಯಾಯ ದೊರಕಿಸಲಿದ್ದಾರೆಂಬ ವಿಶ್ವಾಸ ಇದೆ ಎಂದು ಹೇಳಿದರು.

 ಪತ್ರಿಕಾಗೋಷ್ಠಿಯಲ್ಲಿ ಲಿಡ್ಕರ್ ಮಾಜಿ ಅಧ್ಯಕ್ಷ ಓ.ಶಂಕರ್, ಅಂಬೇಡ್ಕರ್ ವಿದ್ಯಾರ್ಥಿ ಪರಿಷತ್ ಅಧ್ಯಕ್ಷ ಬಿ.ಪಿ.ತಿಪ್ಪೇಸ್ವಾಮಿ ಇದ್ದರು.

 

Share This Article
error: Content is protected !!
";