ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ರಾಜ್ಯದಲ್ಲಿ ಪರಿಶಿಷ್ಟ ಜಾತಿಯಲ್ಲಿ ಕೆಲವರು ನಾವು ಹೆಚ್ಚು ಸಂಖ್ಯೆಯಲ್ಲಿದ್ದೇವೆ ಎಂದು ಹೇಳುತ್ತಿದ್ದಾರೆ. ಆದರೆ, ವಾಸ್ತವವಾಗಿ ಮಾದಿಗರ ಸಂಖ್ಯೆ ಹೆಚ್ಚಿದ್ದು, ಆದಿಕರ್ನಾಟಕ, ಆದಿದ್ರಾವಿಡ, ಆದಿಆಂಧ್ರ ಹೆಸರಿನಲ್ಲಿ ಗುರುತಿಸಿಕೊಂಡಿರುವುದು ಗೊಂದಲಕ್ಕೆ ಕಾರಣವಾಗಿದೆ ಎಂದು ಮಾಜಿ ಸಚಿವ, ಕೆಪಿಸಿಸಿ ಉಪಾಧ್ಯಕ್ಷ ಹೆಚ್.ಆಂಜನೇಯ ಹೇಳಿದರು.
ಬೆಂಗಳೂರಿನ ಅಂಬೇಡ್ಕರ್ ಭವನದಲ್ಲಿ ಭಾನುವಾರ ಮಾದಿಗ ಒಳಮೀಸಲಾತಿ ಹೋರಾಟ ಸಮಿತಿ ನೇತೃತ್ವದಲ್ಲಿ ಆಯೋಜಿಸಿದ್ದ ಜಾತಿಗಣತಿ ವೇಳೆ ಮಾದಿಗರ ಪಾತ್ರವೇನು ಕಾರ್ಯಕ್ರಮದ ನೇತೃತ್ವ ವಹಿಸಿ ಮಾತನಾಡಿದರು.
ಆಂಧ್ರದಲ್ಲಿ ಮಂದಕೃಷ್ಣ ಆರಂಭಿಸಿದ ಮಾದಿಗ ಒಳಮೀಸಲಾತಿ ಹೋರಾಟ ರಾಜ್ಯದಲ್ಲಿ ತನ್ನ ಕಿಚ್ಚನ್ನು ಹಚ್ಚಿತ್ತು. ಇದಕ್ಕಾಗಿ ೩೦ ವರ್ಷಗಳ ಚಳವಳಿ ನಡೆದಿದೆ. ಈಗ ಸುಪ್ರೀಂ ಕೋರ್ಟ್ ಒಳಮೀಸಲಾತಿ ಜಾರಿ ಅಧಿಕಾರ ರಾಜ್ಯ ಸರ್ಕಾರಗಳಿಗೆ ಇದೆ ಎಂಬ ಮಹತ್ವದ ತೀರ್ಪು ನೀಡಿದೆ ಎಂದರು.
ಈಗಾಗಲೇ ತೆಲಂಗಾಣ ಸೇರಿ ಕೆಲವೆಡೆ ಒಳಮೀಸಲಾತಿ ಜಾರಿಗೆ ಅಲ್ಲಿನ ಸರ್ಕಾರಗಳು ಕ್ರಮಕೈಗೊಂಡಿವೆ. ಅದೇ ರೀತಿ ರಾಜ್ಯದಲ್ಲಿ ಸಾಮಾಜಿಕ ಹರಿಕಾರ, ಸಮ ಸಮಾಜದ ಕಲ್ಪನೆಯ ಅನುಷ್ಠಾನಕ್ಕೆ ಶ್ರಮಿಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಒಳಮೀಸಲಾತಿ ಜಾರಿಗೊಳಿಸಲು ದಿಟ್ಟ ಕ್ರಮಕೈಗೊಂಡಿದ್ದಾರೆ. ಸರ್ಕಾರಿ ಉದ್ಯೋಗಗಳ ನೇಮಕಾತಿಗೆ ತಡೆ ನೀಡಿದ್ದು, ಒಳಮೀಸಲಾತಿ ನೀವು ಬೇಡ ಎಂದರೂ ನಾನು ಜಾರಿಗೊಳಿಸಿಯೇ ಸಿದ್ಧ ಎಂದು ಸಿದ್ದರಾಮಯ್ಯ ಘೋಷಿಸಿದ್ದಾರೆ ಎಂದು ಹೇಳಿದರು.
ಸುಪ್ರೀಂ ಕೋರ್ಟ್ ಆದೇಶದಂತೆ ದತ್ತಾಂಶ (ಎಂಪೋರಿಯಲ್ ಡಾಟಾ) ಸಂಗ್ರಹಕ್ಕೆ ರಾಜ್ಯ ಸರ್ಕಾರ ಮೇ ೫ರಿಂದ ೧೭ರವರೆಗೆ ರಾಜ್ಯದಲಿ ಪರಿಶಿಷ್ಟ ಜಾತಿಗೆ ಸೀಮಿತಗೊಳಿಸಿ ಜಾತಿಗಣತಿ ಕಾರ್ಯಕ್ಕೆ ದಿಟ್ಟ ಕ್ರಮಕೈಗೊಂಡಿದೆ. ಈ ಅವಧಿಯಲ್ಲಿ ಮಾದಿಗ ಸಮುದಾಯದವರು ಅತ್ಯಂತ ಜವಾಬ್ದಾರಿಯುತವಾಗಿ ವರ್ತಿಸಬೇಕು ಎಂದರು.
ಮಾದಿಗ ಸಮುದಾಯ ಜಾತಿ, ಉತ್ಸವ, ಹಬ್ಬ, ಜಯಂತಿಗಳ ಆಚರಣೆಯಲ್ಲಿ ಮುಳುಗುವ ಮುಗ್ದ ಸಮುದಾಯ. ಇಂತಹ ಆಚರಣೆಗಳನ್ನು ಜಾತಿಗಣತಿ ಕಾರ್ಯ ಮುಗಿಯುವವರೆಗೂ ಆಚರಿಸಬಾರದು. ನಮ್ಮ ಗುರಿ ಜಾತಿಗಣತಿಯತ್ತ ಇರಬೇಕು ಎಂದು ತಿಳಿಸಿದರು.
ಹೋರಾಟ, ಚಳವಳಿ, ಜಯಂತಿ ಇತರೆ ನೆಪದಲ್ಲಿ ಗುಂಪು ಗುಂಪಾಗಿ ಸೇರುವುದು, ಹಬ್ಬ ಆಚರಿಸುವುದು ಎಲ್ಲವನ್ನು ಕೈಬಿಡಬೇಕು. ಇಂದಿನಿಂದಲೇ ಜಾತಿಗಣತಿ ಕಾರ್ಯ ಪೂರ್ಣಗೊಂಡು ಒಳಮೀಸಲಾತಿ ಜಾರಿಗೊಳ್ಳುವವರೆಗೂ ನಾವೆಲ್ಲರೂ ಕಾಲೋನಿ, ಹಟ್ಟಿ, ಬಡಾವಣೆಗಳ ನಮ್ಮ ನಮ್ಮ ಮನೆಗಳಲ್ಲಿ ಇದ್ದು, ಜಾತಿಗಣತಿದಾರರು ಬಂದಾಗ ಅವರೊಂದಿಗೆ ಸೇರಿ ಬಡಾವಣೆ ಸುತ್ತಬೇಕು. ಸಮುದಾಯದವರಲ್ಲಿ ಮಾದಿಗ ಎಂದು ಕಡ್ಡಾಯವಾಗಿ ಬರೆಸುವ ಕುರಿತು ಜಾಗೃತಿ ಮೂಡಿಸಬೇಕು ಎಂದು ಹೇಳಿದರು.
ಯಾವುದೇ ಕಾರಣಕ್ಕೂ ಆದಿಕರ್ನಾಟಕ, ಆದಿದ್ರಾವಿಡ, ಆದಿಆಂಧ್ರ ಎಂಬ ಸೂಚಕವನ್ನು ಬರೆಸಲೇಬಾರದು. ಮಾದಿಗ ಎಂದೇ ನಾವೆಲ್ಲರೂ ಬರೆಸಯಬೇಕು. ಈಗಾಗಲೇ ನ್ಯಾ.ನಾಗಮೋಹನ್ ದಾಸ್ ಆಯೋಗಕ್ಕೆ ದತ್ತಾಂಶ ಸಂಗ್ರಹ ಮಾಡಲು ಸವಾಲು ಆಗಿತ್ತು. ಆದ್ದರಿಂದಲೆ ನಾವು ಸಿದ್ದರಾಮಯ್ಯ ಅವರ ಬಳಿ ಮನವಿ ಮಾಡಿಕೊಂಡ ತಕ್ಷಣವೇ ಪರಿಶಿಷ್ಟ ಜಾತಿಗೆ ಸೀಮಿತಗೊಳಿಸಿ ಜಾತಿಗಣತಿ ಕಾರ್ಯಕ್ಕೆ ಮುಂದಾಗಿದೆ. ಈ ವೇಳೆ ನಾವು ಬಹಳಷ್ಟು ಜಾಗೃತಿ ವಹಿಸಿ, ಸಮುದಾಯದ ಯಾವೊಬ್ಬರೂ ಕೂಡ ಹೊರಗುಳಿಯದಂತೆ ಎಚ್ಚರವಹಿಸಬೆಕು ಎಂದರು.
ಮಂದಕೃಷ್ಣ ಮಾದಿಗ ಒಳಮೀಸಲಾತಿಯ ಜನಕನಾಗಿದ್ದು, ಆಂಧ್ರದಲ್ಲಿ ಚಂದ್ರಬಾಬು ನಾಯ್ಡು ಮೊದಲ ಬಾರಿಗೆ ಒಳಮೀಸಲಾತಿ ಜಾರಿಗೊಳಿಸಿದರು. ಆದರೆ, ನಮ್ಮ ಪ್ರಗತಿ ಸಹಿಸಿದ ಕೆಲವರು ಕೋರ್ಟ್ ಮೊರೆ ಹೋಗಿದ್ದರಿಂದ ಒಳಮೀಸಲಾತಿ ಜಾರಿಗೆ ೨೫ ವರ್ಷ ಬೇಕಾಯಿತು. ಈಗ ಸುಪ್ರೀಂ ಕೋರ್ಟ್ ಅಸ್ಪೃಶ್ಯ ಸಮಾಜಕ್ಕೆ ಉಸಿರು ಕೊಟ್ಟಿದ್ದು, ಅದನ್ನು ಗಟ್ಟಿಗೊಳಿಸಲು ಸಿದ್ದರಾಮಯ್ಯ ಸರ್ಕಾರ ಮುಂದಾಗಿದೆ ಎಂದು ಹೇಳಿದರು.
ಆಂಧ್ರದಲ್ಲಿ ಮಾದಿಗ ಸಮುದಾಯ ಆಯೋಜಿಸಿದ್ದ ಒಳಮೀಸಲಾತಿ ಹೋರಾಟದಲ್ಲಿ ಸಚಿವ ಸ್ಥಾನ ಪಣಕ್ಕಿಟ್ಟು ಈ ಹಿಂದೆ ನಾನು ಪಾಲ್ಗೊಂಡಿದ್ದೇ. ನನಗೆ ಮಾದಿಗ ಸಮುದಾಯದ ಪ್ರಗತಿ ಮುಖ್ಯ. ಈಗ ಅಲ್ಲಿ ಒಳಮೀಸಲಾತಿ ಜಾರಿಗೊಂಡಿದ್ದು, ರಾಜ್ಯದಲ್ಲಿ ದಿನಗಣನೆ ಆರಂಭವಾಗಿದೆ. ಅದರ ಭಾಗವಾಗಿಯೇ ಜಾತಿಗಣತಿ ಕಾರ್ಯ ಎಂದರು.
ರಾಜ್ಯದಲ್ಲಿ ಒಳಮೀಸಲಾತಿ ಹಂಚಿಕೆ ವೇಳೆ ನಮಗೆ ಹೆಚ್ಚು ಪಾಲು ದೊರೆಯಲೇಬೇಕು. ಅದಕ್ಕೆ ನಾವೆಲ್ಲರೂ ಬಹಳ ಎಚ್ಚರಿಕೆ ಹೆಜ್ಜೆ ಇಡಬೇಕು. ಮಾದಿಗ ಸಮುದಾಯದಲ್ಲಿ ಹೆಚ್ಚು ಜಾಗೃತಿ ಮೂಡಿಸಬೇಕು. ಜೊತೆಗೆ ಹಟ್ಟಿ, ಕಾಲೋನಿ, ಬಡಾವಣೆಗಳಲ್ಲಿದ್ದು ಜಾತಿಗಣತಿದಾರರು ಆಗಮಿಸಿದ ವೇಳೆ ಅವರೊಂದಿಗೆ ಮನೆ ಮನೆಗೆ ಭೇಟಿ ನೀಡಿ ಸಮುದಾಯದವರು ಮಾದಿಗ ಎಂದು ಬರೆಯಿಸುವ ರೀತಿ ಕೆಲಸ ಮಾಡಬೇಕು ಎಂದು ತಿಳಿಸಿದರು.