ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಅಲೆಮಾರಿ ಸಮುದಾಯದ ಅಪ್ರಾಪ್ತರ ಮೇಲೆ ಈಚೆಗೆ ನಡೆಯುತ್ತಿರುವ ಅತ್ಯಾಚಾರಗಳು ಆತಂಕಕ್ಕೆ ಕಾರಣವಾಗಿದ್ದು, ಇದಕ್ಕೆ ತಡೆ ಹಾಕಲು ಸರ್ಕಾರ ಕಠಿಣ ಕ್ರಮಕೈಗೊಳ್ಳ ಬೇಕೆಂದು ಮಾಜಿ ಸಚಿವ ಹೆಚ್.ಆಂಜನೇಯ ತಿಳಿಸಿದರು.
ಕರ್ನಾಟಕ ಪರಿಶಿಷ್ಟ ಜಾತಿ ಅಲೆಮಾರಿ ಅಭಿವೃದ್ದಿ ವೇದಿಕೆ ಆಶ್ರಯದಲ್ಲಿ ಬೆಂಗಳೂರಿನ ಶಾಸಕರ ಭವನದ ಸಭಾಂಗಣದಲ್ಲಿ ಆಯೋಜಿಸಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಅಲೆಮಾರಿಗಳ ಮೇಲೆ ನಡೆಯುತ್ತಿರುವ ನಿರಂತರ ಅತ್ಯಾಚಾರ, ದೌರ್ಜನ್ಯ ಕೊಲೆಯಂತಹ ಗಂಭೀರ ವಿಚಾರಗಳ ಬಗ್ಗೆ ಸರ್ಕಾರದ ಗಮನ ಸೆಳೆಯಲು ಸಿಎಂ ಸಿದ್ದರಾಮಯ್ಯ ಬಳಿ ನಿಯೋಗ ತೆರಳುವ ಅಗತ್ಯ ಇದೆ. ಈ ಮೂಲಕ ಅಲೆಮಾರಿಗಳ ಹಕ್ಕುಗಳ ಈಡೇರಿಕೆ ಜೊತೆಗೆ ಒಳಮೀಸಲಾತಿಯಲ್ಲಿ ಪ್ರತ್ಯೇಕ ಗುಂಪು ರಚಿಸಲು ಒತ್ತಡ ತರಬೇಕಿದೆ ಎಂದರು.
ದಿಕ್ಕುದೆಸೆ ಇಲ್ಲದ ಅಸ್ಪೃಶ್ಯ ನೋವು ಅನುಭವಿಸುತ್ತಿರುವ 49 ಅಲೆಮಾರಿ ಜಾತಿಗಳನ್ನು ನಾಗರಿಕ ಸಮಾಜದ ಮುಖ್ಯವಾಹಿನಿಗೆ ತರಲು ನಾವೆಲ್ಲರೂ ಬೆಂಬಲವಾಗಿ ನಿಲ್ಲಬೇಕಿದೆ. ಶೀಘ್ರದಲ್ಲೇ ಸಿದ್ದರಾಮಯ್ಯ ಅವರ ಸಮ್ಮುಖದಲ್ಲಿ ರಾಜ್ಯಮಟ್ಟದ ಅಲೆಮಾರಿಗಳ ಸಮಾವೇಶ ಏರ್ಪಡಿಸಿ ಸಮುದಾಯದಲ್ಲಿ ಜಾಗೃತಿ ಮೂಡಿಸಬೇಕಾಗಿದೆ ಎಂದರು.
ಬೆಂಗಳೂರು ದಕ್ಷಿಣ ಜಿಲ್ಲೆ ಮಾಗಡಿ ತಾಲೂಕಿನ ತಾವರೆಕೆರೆಯಲ್ಲಿ 13 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಮಾಡಿ ಕೊಲೆ ಮಾಡಿರುವ ಅಮಾನವೀಯ ಘಟನೆ ನಾಗರಿಕ ಸಮಾಜವೇ ತಲೆತಗ್ಗಿಸುವ ಹೇಯ ಕೃತ್ಯ. ಆ ನೊಂದ ಕುಟುಂಬಕ್ಕೆ ಪರಿಹಾರ, ಒಬ್ಬರಿಗೆ ಉದ್ಯೋಗ ನೀಡಲು ಸರ್ಕಾರದ ಮೇಲೆ ಒತ್ತಡ ತರಬೇಕಿದೆ ಎಂದು ತಿಳಿಸಿದರು.
ಕವಿ ಎಸ್.ಜಿ.ಸಿದ್ದರಾಮಯ್ಯ ಮಾತನಾಡಿ, ಅಶಕ್ತ, ಅಸ್ಪೃಶ್ಯ ಸಮುದಾಯದ ರಕ್ಷಣೆ ಸರ್ವರ ಹೊಣೆಯಾಗಿದೆ.ಬಲಾಢ್ಯರು, ಬಹುಸಂಖ್ಯಾತರ ಜೊತೆ ಇವರನ್ನು ಸೇರಿಸಿ ಮೀಸಲಾತಿ ನೀಡುವ ಪದ್ಧತಿ ರದ್ದಾಗಬೇಕು. 49 ಅಲೆಮಾರಿಗಳಿಗೆ ಪ್ರತ್ಯೇಕ ಮೀಸಲಾತಿ ಸೌಲಭ್ಯ ನೀಡಬೇಕೆಂದು ಹೇಳಿದರು.
ಸಾಹಿತಿ ಡಾ.ಬಂಜಗೆರೆ ಜಯಪ್ರಕಾಶ್ ಮಾತನಾಡಿ, ಈ ಸಮುದಾಯಗಳ ಮೇಲಿನ ಅತ್ಯಾಚಾರ, ದೌರ್ಜನ್ಯಗಳಿಗೆ ಕಡಿವಾಣ ಹಾಕಲು ಹಾಗೂ ಈ ವರ್ಗವನ್ನು ಮುಖ್ಯವಾಹಿನಿಗೆ ತರಲು ಕಾನೂನು ಜಾರಿಗೊಳಿಸಬೇಕೆಂದು ಆಗ್ರಹಿಸಿದರು.
ಇವರ ಮೇಲೆ ದೌರ್ಜನ್ಯವನ್ನು ಎಸ್ಸಿ, ಎಸ್.ಟಿ. ಸಮುದಾಯದವರೇ ನಡೆಸಿದ್ದರೂ ಅವರ ವಿರುದ್ಧ ಕಠಿಣ ಕಾನೂನು ಕ್ರಮಕೈಗೊಳ್ಳಲು ಕಾಯ್ದೆಗೆ ತಿದ್ದುಪಡಿ ಮಾಡಿ ಇವರಿಗೆ ರಕ್ಷಣೆ ಒದಗಿಸುವ ಮಹತ್ವದ ನಿರ್ಧಾರ ಸರ್ಕಾರ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಮಾಜಿ ಸಂಸದ ಬಿ.ಎನ್.ಚಂದ್ರಪ್ಪ, ಕೆಪಿಸಿಸಿ ಎಸ್‌ಸಿ ವಿಭಾಗದ ಅಧ್ಯಕ್ಷ ಧರ್ಮಸೇನ, ಪತ್ರಕರ್ತರಾದ ಜಾಣಗೆರೆ ವೆಂಕಟರಮಣಯ್ಯ, ಸಾಹಿತಿಗಳಾದ ವಡ್ಡಗೆರೆ ನಾಗರಾಜಯ್ಯ, ಡಾ.ಬಾಲಗುರುಮೂರ್ತಿ, ಆದಿಜಾಂಭವ ಅಭಿವೃದ್ದಿ ನಿಗಮದ ಅಧ್ಯಕ್ಷ ಜಿ.ಎಸ್.ಮಂಜುನಾಥ್, ಮಾದಿಗ ಮೀಸಲಾತಿ ಹೋರಾಟ ಸಮಿತಿ ಮುಖಂಡರಾದ ಅಂಬಣ್ಣ ಆರೋಲಿಕರ, ಭೀಮಾಶಂಕರ್, ಅಲೆಮಾರಿ ಮುಖಂಡರಾದ ಶೇಷಪ್ಪ ಅಂದೋಳ್ ಮಾತನಾಡಿದರು.
ಈ ಸಂದರ್ಭದಲ್ಲಿ ಅಲೆಮಾರಿ ಸಮುದಾಯದ ಪ್ರಮುಖರಾದ ಚಾವಡೆ ಲೋಕೇಶ್, ಲೋಹಿತ್, ಕೆ.ವೀರೇಶ್, ಸುಭಾಷ್ ಚವಾಣ್, ಶಾಂತರಾಜ್, ಶಿವಕುಮಾರ್ ಬಳ್ಳಾರಿ, ಹನುಮಂತು, ಬಸವರಾಜ್ ನಾರಾಯಣಕೆರೆ, ಸಾವಿತ್ರಮ್ಮ ರತ್ನಾಕರ್, ಮಹಾಂತೇಶ್ ಸಂಕಲ್ ಇದ್ದರು.