ಜಾತಿ ಗಣತಿ ಸಮೀಕ್ಷೆ ವಿಸ್ತರಣೆ ಅಗತ್ಯ-ಮಾಜಿ ಸಚಿವ ಆಂಜನೇಯ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಪರಿಶಿಷ್ಟ ಜಾತಿ ಒಳ ಮೀಸಲಾತಿ ಜಾರಿಗಾಗಿ ಕೈಗೊಂಡಿರುವ ಜಾತಿಗಣತಿ ಸಮೀಕ್ಷೆ ಕಾರ್ಯ ಬೆಂಗಳೂರು ನಗರದಲ್ಲಿ ಮಂದಗತಿಯಲ್ಲಿ ಸಾಗುತ್ತಿದ್ದು
, ಆದ್ದರಿಂದ ಅವಧಿ ವಿಸ್ತರಣೆ ಜೊತೆಗೆ ಗಣತಿದಾರರಿಗೆ ಸೂಕ್ತ ಮಾರ್ಗದರ್ಶನದೊಂದಿಗೆ ಸರ್ವೇ ಕಾರ್ಯ ಚುರುಕುಗೊಳಿಸುವಂತೆ ಕೋರಿ ನ್ಯಾಯಮೂರ್ತಿ ಹೆಚ್.ಎನ್.ನಾಗಮೋಹನ್ ದಾಸ್ ಏಕಸದಸ್ಯ ವಿಚಾರಣಾ ಆಯೋಗಕ್ಕೆ ಪತ್ರ ಬರೆದಿದ್ದೇನೆ ಎಂದು ಮಾಜಿ ಸಚಿವ ಹೆಚ್.ಆಂಜನೇಯ ತಿಳಿಸಿದ್ದಾರೆ.

- Advertisement - 

 ಬೆಂಗಳೂರಿನ ಸಿ.ವಿ.ರಾಮನ್ ನಗರ ವ್ಯಾಪ್ತಿಯ ಎಂ.ಸಿ.ಕಾಲೋನಿಯ ದೊಡ್ಡಗುಂಟ ಬಡಾವಣೆಯಲ್ಲಿ ಬುಧವಾರ ಜಾತಿಗಣತಿ ಜಾಗೃತಿ ಪಾದಯಾತ್ರೆ ವೇಳೆ, ಮಾದಿಗರು ಹಾಗೂ ಪೌರಕಾರ್ಮಿಕರ ಮನೆಗಳಿಗೆ ಭೇಟಿ ನೀಡಿ ಕಡ್ಡಾಯವಾಗಿ ಜಾತಿಗಣತಿ ಕಾರ್ಯದಲ್ಲಿ 061-ಮಾದಿಗ ಎಂದು ಬರೆಯಿಸುವಂತೆ ತಿಳಿಸಿದರು.

- Advertisement - 

ಈ ವೇಳೆ ಸಮೀಕ್ಷೆದಾರರ ಜೊತೆ ಹೆಜ್ಜೆ ಹಾಕಿದ ಆಂಜನೇಯ, ನೋಂದಣಿ ಕಾರ್ಯ ವೀಕ್ಷಿಸಿದರು. ಈ ವೇಳೆ ಚಿಕ್ಕ ಮಕ್ಕಳು ಹಾಗೂ ಆಧಾರ್ ಕಾರ್ಡ್ ಇಲ್ಲದ 18 ವರ್ಷದೊಳಗಿನವರ ನೋಂದಣಿಗೆ ನಿರಾಕರಿಸುತ್ತಿದ್ದವರೊಂದಿಗೆ ಚರ್ಚೆ ನಡೆಸಿದರು.

ಆಯೋಗ ಈಗಾಗಲೇ ಆಗ ತಾನೇ ಹುಟ್ಟಿದ ಮತ್ತು 18 ವರ್ಷದೊಳಗಿನವರ ನೋಂದಣಿಗೆ ಆಧಾರ್ ಕಾರ್ಡ್ ಬೇಕಿಲ್ಲ ಎಂದು ಸೂಚಿಸಿದೆ. ಮನೆಯ ಹಿರಿಯರೊಬ್ಬರ ಆಧಾರ್ ಕಾರ್ಡ್ ಲಿಂಕ್ ಮಾಡಿ, ಮಕ್ಕಳ ಹೆಸರನ್ನು ನೋಂದಾಯಿಸಬಹುದು ಎಂದು ತಿಳಿಸಿದರು.

- Advertisement - 

ಈ ವೇಳೆ ನೋಂದಾಣಿ ಮಾಡಿಕೊಳ್ಳಲು ನಿರಾಕರಿಸುತ್ತಿದ್ದಂತೆ ಸಮಾಜ ಕಲ್ಯಾಣ ಇಲಾಖೆ ಆಯುಕ್ತರಿಗೆ ಫೋನ್ ಕರೆ ಮಾಡಿ ಅವರೊಂದಿಗೆ ಗಣತಿದಾರರಿಗೆ ಆಯೋಗದ ಸೂಚನೆ ತಿಳಿಸಿ ಸಮಸ್ಯೆ ಪರಿಹರಿಸಿದರು.

ಈ ವೇಳೆ ಮಾತನಾಡಿದ ಆಂಜನೇಯ, ಈಗಾಗಲೇ ರಾಜ್ಯಾದ್ಯಂತ ಸುತ್ತುವರಿದಿದ್ದೇನೆ. ಗ್ರಾಮೀಣ ಪ್ರದೇಶದಲ್ಲಿ ಸರ್ವೇ ಕಾರ್ಯ ಚೆನ್ನಾಗಿ ಆಗುತ್ತಿದೆ. ಆದರೆ, ಬೆಂಗಳೂರು ನಗರ ಪ್ರದೇಶದಲ್ಲಿ ಮಂದಗತಿಯಲ್ಲಿ ಸಾಗುತ್ತಿದೆ. ಜೊತೆಗೆ ಬಹಳಷ್ಟು ಗಣತಿದಾರರಿಗೆ ಆಯೋಗದ ಹೊಸ ಸೂಚನೆಗಳ ಮಾಹಿತಿ ಇಲ್ಲ. ಆದ್ದರಿಂದ ಬಹಳಷ್ಟು ಗೊಂದಲ ಉಂಟಾಗಿದೆ ಎಂದರು.

ಈ ಕಾರಣಕ್ಕೆ ತಕ್ಷಣವೇ ಆಯೋಗಕ್ಕೆ ಪತ್ರ ಬರೆದು, ಸಮಸ್ಯೆ ಪರಿಹಾರಕ್ಕೆ ಶೀಘ್ರ ಕ್ರಮಕೈಗೊಳ್ಳುವಂತೆ ಕೋರಿದ್ದೇನೆ. ಮುಖ್ಯವಾಗಿ ಗಣತಿಕಾರ್ಯ ಪೂರ್ಣಗೊಳ್ಳಲು ಬಹಳಷ್ಟು ಸಮಯ ಬೇಕಾಗಿದೆ. ಆದ್ದರಿಂದ ತಕ್ಷಣವೇ ಸರ್ವೇ ಕಾರ್ಯ ಅವಧಿಯನ್ನು ವಿಸ್ತರಿಸಬೇಕು. ಜೊತೆಗೆ ಗಣತಿದಾರರಿಗೆ ಮತ್ತೊಮ್ಮೆ ಸವಿಸ್ತರವಾಗಿ ಅಗತ್ಯ ತರಬೇತಿ ನೀಡಬೇಕು.

ಮುಖ್ಯವಾಗಿ ಆಪ್ ಮೂಲಕ ಸರ್ವೇ ಆಗುತ್ತಿರುವುದರಿಂದ ಅದಕ್ಕೆ ತಕ್ಕಂತೆ ಗುಣಮಟ್ಟದ 5ಜಿ ಮೊಬೈಲ್ ಸೇರಿ ಅಗತ್ಯ ಪರಿಕರಗಳನ್ನು ವಿತರಿಸುವಂತೆ ಕೋರಿ ಪತ್ರ ಬರೆದಿದ್ದೇನೆ. ನಮ್ಮ ಮನವಿಗೆ ಆಯೋಗ ಸ್ಪಂದಿಸಲಿದೆ ಎಂಬ ವಿಶ್ವಾಸ ಇದೆ ಎಂದರು.

ಆಯೋಗ ಸಮಗ್ರವಾಗಿ ಪರಿಶೀಲಿಸಿ, ಗಣತಿದಾರರಿಂದ ಮಾಹಿತಿ ಪಡೆದು ಸರ್ವೇ ಕಾರ್ಯ ಅವಧಿಯನ್ನು ವಿಸ್ತರಿಸುವುದು ತುರ್ತು ಅಗತ್ಯವಾಗಿದೆ. ಜೊತೆಗೆ ತರಬೇತಿಯೂ ಮುಖ್ಯವಾಗಿದೆ ಎಂದು ತಿಳಿಸಿದರು.

ಒಳಮೀಸಲಾತಿ ಜಾರಿಗಾಗಿ ಸಿದ್ದರಾಮಯ್ಯ ಜೇನುಗೂಡಿಗೆ ಕೈ ಹಾಕಿದ್ದಾರೆಂಬುದು ಸುಳ್ಳು, ಅವರು ಜೇನಿನ ಸಿಹಿಗೆ ಕೈಹಾಕಿ, ಅದನ್ನು ಜಾತಿಗಣತಿ ಕಾರ್ಯದ ಮೂಲಕ ಪರಿಶಿಷ್ಟ ಗುಂಪಿನಲ್ಲಿನ 101 ಜಾತಿಗೂ ಅವರವರ ಸಂಖ್ಯೆಗೆ ಅನುಗುಣವಾಗಿ ಹಂಚಿಕೆ ಮಾಡುವ ಮೂಲಕ ಕ್ರಾಂತಿಕಾರಿ ನಿರ್ಧಾರ ಕೈಗೊಂಡಿದ್ದಾರೆ. ಇದಕ್ಕೆ ಎಲ್ಲ ಪಕ್ಷದವರ ಬೆಂಬಲ ಅಗತ್ಯ ಎಂದು ಕೋರಿದರು.

ಈಗಾಗಲೇ ಒಳಮೀಸಲಾತಿ ಜಾರಿಗೆ ಸರ್ಕಾರ ಕೈಗೊಂಡಿರುವ ಎಲ್ಲ ಕ್ರಮಗಳು ಉತ್ತಮವಾಗಿದ್ದು, ಇದಕ್ಕೆ ನಾವೆಲ್ಲರೂ ಬೆಂಬಲವಾಗಿ ನಿಂತಿದ್ದೇವೆ. ಸಣ್ಣಪುಟ್ಟ ದೋಷಗಳು ಕಂಡುಬಂದ ತಕ್ಷಣವೇ ಆಯೋಗದ ಗಮನಕ್ಕೆ ತರುವ ಮೂಲಕ ಪಾರದರ್ಶನಕ ಜಾತಿಗಣತಿ ಕಾರ್ಯ ಆಗಲು ಸಹಕರಿಸುತ್ತಿದ್ದೇವೆ. ನನ್ನಂತೆ ವಿವಿಧ ಸಮುದಾಯವರು ಕೂಡ ಆಯೋಗದ ಕಾರ್ಯಕ್ಕೆ ಬೆಂಬಲವಾಗಿದ್ದಾರೆ. ಜೊತೆಗೆ ಸಮುದಾಯದಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ ಎಂದರು.

ಈ ಸಂದರ್ಭದಲ್ಲಿ ಮುಖಂಡರಾದ ತಿಲಕ್ ಚಂದನ್, ಎಂ.ಎನ್.ಶ್ರೀಧರ್, ಡಿ.ಪಿ.ಕೃಷ್ಣಬಾಬು, ರಾಮಕೃಷ್ಣ, ಅರುಣಮೇರಿ, ಸರಸ ವೇಣಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

 

Share This Article
error: Content is protected !!
";