ಚಂದ್ರವಳ್ಳಿ ನ್ಯೂಸ್, ಬೆಂಗಳೂರು
ರಾಜ್ಯಪಾಲ, ಮುಖ್ಯಮಂತ್ರಿ, ಕೇಂದ್ರ ಸಚಿವ, ಪಂಚಾಯಿತಿ ಸದಸ್ಯ, ನಿಗಮ ಮಂಡಳಿ ಸೇರಿದಂತೆ ಇತರೇ ಅಧಿಕಾರಯುತ ಸ್ಥಾನ ಬೇಕು ಎಂದು ಪಕ್ಷ ಸೇರುವುದು ಮುಖ್ಯವಲ್ಲ. ಈ ಪಕ್ಷಕ್ಕಾಗಿ ದುಡಿಯುವುದು ಮುಖ್ಯ. ಎಲ್ಲರಿಗೂ ಮಾತನಾಡುವ ಧ್ವನಿ ಶಕ್ತಿ ನೀಡಿರುವುದೇ ಹೆಗ್ಗಳಿಕೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅಭಿಪ್ರಾಯಪಟ್ಟಿದ್ದಾರೆ.
ಭಾರತ್ ಜೋಡೋ ಭವನದಲ್ಲಿಂದು ಕಾಂಗ್ರೆಸ್ ಪಕ್ಷ ಸೇರ್ಪಡೆಯಾದ ಮಾಜಿ ಸಚಿವೆ ಬಿ.ಟಿ.ಲಲಿತಾ ನಾಯಕ್ಗೆ ಕಾಂಗ್ರೆಸ್ ಬಾವುಟ ನೀಡಿ ಪಕ್ಷಕ್ಕೆ ಬರಮಾಡಿಕೊಂಡ ಬಳಿಕ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ಬೇರೆ ಯಾವುದೇ ಪಕ್ಷದಲ್ಲಿ ಇಂತಹ ಅವಕಾಶ ಸಿಗುವುದಿಲ್ಲ. ನನಗೆ ಬೇರೆ ಪಕ್ಷದಲ್ಲಿ ಇಂತಹ ಖುರ್ಚಿ (ಅಧಿಕಾರ) ನೀಡಲು ಸಾಧ್ಯವಾಗುತ್ತಿರಲಿಲ್ಲ. ವೇದಿಕೆಯಲ್ಲಿರುವ ಪಕ್ಷದ ನಾಯಕರಿಗೆ ಇಂತಹ ಸ್ಥಾನ ನೀಡಲು ಯಾವುದೇ ಪಕ್ಷಕ್ಕೂ ಆಗುತ್ತಿರಲಿಲ್ಲ. ಕಾಂಗ್ರೆಸ್ದಿಂದ ಮಾತ್ರ ಸಾಧ್ಯ ಎಂದರು.
ಹೋರಾಟ ಲಲಿತಾ ನಾಯಕ್ ಬ್ರಾಂಡ್ – ಡಿಕೆಶಿ: ಬಿ.ಟಿ.ಲಲಿತಾ ನಾಯಕ್ ಅವರು ಕವಿ ಮನಸ್ಸಿನ ಹೋರಾಟಗಾರ್ತಿ. ಅವರ ಬದುಕೇ ಒಂದು ಹೋರಾಟ. ಮಾಜಿ ಮಂತ್ರಿಯಾಗಿ, ಶಾಸಕರಾಗಿ ಅನೇಕ ಸಂಘಟನೆಗಳಲ್ಲಿ ದುಡಿದಿರುವವರು. ಹೋರಾಟ ಅನ್ನುವುದೇ ಲಲಿತಾ ನಾಯಕ್ ಅವರ ಬ್ರಾಂಡ್. ಮಾನವೀಯ ಮೌಲ್ಯಗಳನ್ನು ಇಟ್ಟುಕೊಂಡು ಕೆಲಸ ಮಾಡುತ್ತಿದ್ದಾರೆ. ಅವರ ಜೊತೆ ಕಾಂಗ್ರೆಸ್ ಪಕ್ಷ ಸೇರಿರುವ ಎಲ್ಲಾ ಮುಖಂಡರುಗಳಿಗೆ ತುಂಬು ಹೃದಯದ ಸ್ವಾಗತ ಎಂದು ಹೇಳಿದರು.
ನಾವು ರಾಜ್ಯದಲ್ಲಿ ಭಾರತ್ ಜೋಡೋ ಯಾತ್ರೆ ಮಾಡುವಾಗ ಮೊಣಕಾಲ್ಮೂರಿನ ಬಳಿ ಓರ್ವ ವೃದ್ಧೆ ಬಂದು ರಾಹುಲ್ ಗಾಂಧಿ ಅವರಿಗೆ ಸೌತೇ ಕಾಯಿ ಕೊಟ್ಟರು. ಆಗ ಆ ಅಜ್ಜಿ ಒಂದು ಮಾತು ಹೇಳಿದರು. ಭೂಮಿಯಲ್ಲಿ ಬೆಳೆದಿರುವ ಸೌತೇಕಾಯಿ ಎಂದು ಹೇಳಿದರು. ಇಂತಹ ಕಾರ್ಯಕ್ರಮವನ್ನು ಬಿಜೆಪಿ, ಜನತಾದಳ ನೀಡಲಿಲ್ಲ. ಪಿಂಚಣಿಗಳು, ವಿದ್ಯೆ, ಆಸ್ಪತ್ರೆ, ಹಸಿದವರಿಗೆ ಅನ್ನ ಸೇರಿದಂತೆ ಬಡವರ ಬದುಕಿನಲ್ಲಿ ಬದಲಾವಣೆ ತಂದಿರುವ ಪಕ್ಷ ಎಂದರೆ ಕಾಂಗ್ರೆಸ್ ಪಕ್ಷ ಮಾತ್ರ ಎಂದರು.
ರಾಷ್ಟ್ರಕ್ಕೆ ಗೌರವ ತಂದುಕೊಡುವ ಕೆಲಸ ಮಾಡಿದ್ದು ಕಾಂಗ್ರೆಸ್ ಮಾತ್ರ – ಬಿ ಟಿ ಲಲಿತಾ ನಾಯಕ್: ಈ ದೇಶಕ್ಕೆ ಸಂವಿಧಾನ, ರಾಷ್ಟ್ರಗೀತೆ, ಜಾತ್ಯತೀತ ತತ್ವ, ರಾಷ್ಟ್ರಧ್ವಜ ಹೀಗೆ ಈ ರಾಷ್ಟ್ರಕ್ಕೆ ಗೌರವ ತಂದುಕೊಟ್ಟಿರುವ ಕೆಲಸ ಮಾಡಿರುವುದು ಕಾಂಗ್ರೆಸ್ ಮಾತ್ರ. ಈ ಕೆಲಸವನ್ನು ಬಿಜೆಪಿ ಮಾಡಿದೆಯೇ? ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ಎಂದು ನಾವು ಘೋಷಣೆ ಮಾಡಿದ್ದೇವೆ. ಈ ಕ್ರಾಂತಿಕಾರಿ ಕೆಲಸವನ್ನು ಬಿಜೆಪಿ ಮಾಡಿದ್ದಾರೆಯೇ? ಜೈ ಬಾಪು, ಜೈ ಭೀಮ್, ಜೈ ಸಂವಿಧಾನ ಎಂದು ಸಂವಿಧಾನ ರಕ್ಷಣೆಗೆ ನಾವು ಬೆಳಗಾವಿಯಲ್ಲಿ ಸಮಾವೇಶ ಮಾಡಿದ್ದೇವೆ. ಮಹಾತ್ಮ ಗಾಂಧಿ ಅವರು ಕುಳಿತಂತಹ ಸ್ಥಾನದಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರು ಕುಳಿತಿದ್ದಾರೆ ಎಂದು ಹೇಳಿದರು.
ಇದೇ ವೇಳೆ ಮಾತನಾಡಿದ ಮಾಜಿ ಸಚಿವೆ ಬಿ.ಟಿ.ಲಲಿತಾ ನಾಯಕ್, ಪಂಚಶೀಲ ತಂಡ ಇಂದು ಕಾಂಗ್ರೆಸ್ಸಿಗೆ ಸೇರಿದ್ದೇವೆ. ಡಿಕೆಶಿ ನೇತೃತ್ವದಲ್ಲಿ ಪಕ್ಷ ಸೇರ್ಪಡೆಯಾಗ್ತಿದ್ದೇವೆ. 400ಕ್ಕೂ ಹೆಚ್ಚು ಜನ ಪಕ್ಷಕ್ಕೆ ಸೇರುತ್ತಿದ್ದೇವೆ. ಎಲ್ಲ ಸದಸ್ಯರೂ ಸೇರಿ ಪಕ್ಷಕ್ಕೆ ಬಂದಿದ್ದೇವೆ. ನಾನು ಏನನ್ನೂ ಕೇಳೋದಿಲ್ಲ, ಬಯಸಿಯೂ ಇಲ್ಲ. ಅಧಿಕಾರ ಬಯಸಿ ಬಂದರೆ ಇಲ್ಲಿ ಏನು ಸಿಗಲ್ಲ. ಬೀಜ ಬಿತ್ತಿದರೆ ಅದು ಫಲ ನೀಡುತ್ತದೆ. ಅದು ತಕ್ಷಣ ಫಲ ನೀಡುತ್ತದೆ ಅಂದ್ರೆ ಆಗಲ್ಲ. ಇದು ಸ್ವಾತಂತ್ರ್ಯ ಪೂರ್ವದಿಂದ ಇರೋ ಪಕ್ಷ. ಕಾಂಗ್ರೆಸ್ ಪಕ್ಷ ಕೋಮುವಾದಿಯ ಪಕ್ಷವಲ್ಲ. ಎಲ್ಲ ಪಕ್ಷ ನೂರರಷ್ಟು ನ್ಯಾಯ ಒದಗಿಸಲ್ಲ. ಕಾಂಗ್ರೆಸ್ ಪಕ್ಷ ನ್ಯಾಯ ಒದಗಿಸೋ ಕೆಲಸ ಮಾಡ್ತಿದೆ. ನಾವು ಸರ್ಕಾರದ ಗ್ಯಾರಂಟಿ ಯೋಜನೆ. ಎಲ್ಲ ಕ್ಷೇತ್ರಗಳಲ್ಲಿಯೂ ಸಹ ಸಾರಿ ಹೇಳ್ತೇವೆ. ಇದಕ್ಕೆ ಕಾರ್ಯಕರ್ತರು ತಯಾರಾಗಿರಬೇಕು ಎಂದರು.