ಚಂದ್ರವಳ್ಳಿ ನ್ಯೂಸ್, ಹೊಳಲ್ಕೆರೆ:
ರಾಜ್ಯದಲ್ಲಿ ಆರಂಭವಾಗಿರುವ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಸಮೀಕ್ಷೆ ನಾಡಿನ ಪ್ರಗತಿಗೆ ಬುನಾದಿ ಆಗಲಿದೆ ಎಂದು ಮಾಜಿ ಸಚಿವ ಹೆಚ್.ಆಂಜನೇಯ ಹೇಳಿದರು.
ತಾಲೂಕಿನ ಬಿ.ದುರ್ಗದಲ್ಲಿ ಗಣತಿದಾರರೊಂದಿಗೆ ಮನೆ ಮನೆಗೆ ಭೇಟಿ ನೀಡಿದ ಬಳಿಕ ಆಯೋಜಿಸಿದ್ದ ಜಾಗೃತಿ ಸಭೆಯಲ್ಲಿ ಮಾತನಾಡಿ, ರಾಜ್ಯದಲ್ಲಿ ಯಾವ ಸಮುದಾಯ ಎಷ್ಟು ಸಂಖ್ಯೆಯಲ್ಲಿದೆ, ಅವರು ಯಾವ ಮಟ್ಟದಲ್ಲಿ ಹಿಂದುಳಿದಿದ್ದಾರೆಂಬ ಮಾಹಿತಿ ಸಂಗ್ರಹಿಸಿ, ಅವರ ಸಮಗ್ರ ಅಭಿವೃದ್ಧಿಗೆ ಯೋಜನೆಗಳನ್ನು ರೂಪಿಸಿ, ಅನುಷ್ಠಾನಗೊಳಿಸಲು ಸರ್ಕಾರಕ್ಕೆ ಸಮೀಕ್ಷೆ ಕಾರ್ಯ ಸಹಕಾರಿ ಆಗಲಿದೆ ಎಂದರು.
ಸಮೀಕ್ಷೆ ಕುರಿತು ಅಪಸ್ವರ, ಅಸಡ್ಡೆ ಮಾತುಗಳು ನೊಂದ ಜನರ ಬದುಕಿಗೆ ಕಂಟಕವಾಗಲಿದೆ. ಆದ್ದರಿಂದ ಈ ವಿಷಯದಲ್ಲಿ ಪಕ್ಷಾತೀತವಾಗಿ ಒಗ್ಗೂಡಿ, ಬದ್ಧತೆಯಿಂದ ಸಮೀಕ್ಷೆಯಲ್ಲಿ ಪಾಲ್ಗೊಳ್ಳಬೇಕಿದೆ. ಎಲ್ಲ ಪಕ್ಷಗಳ ಕಾರ್ಯಕರ್ತರು ಜನರಲ್ಲಿ ಅರಿವು ಮೂಡಿಸುವ ಕೆಲಸ ಮಾಡಬೇಕಿದೆ ಎಂದು ತಿಳಿಸಿದರು.
ಲಿಂಗಾಯಿತ, ಕುಂಚಿಟಿಗ, ಗೊಲ್ಲರು, ಮಾದಿಗರು, ಕುರುಬರು, ಬ್ರಾಹ್ಮಣರು ಸೇರಿ ಎಲ್ಲ ಜಾತಿಗಳಲ್ಲೂ ಬಡವರಿದ್ದಾರೆ. ಈ ವರ್ಗದ ಜನರನ್ನು ಮುಖ್ಯವಾಹಿನಿಗೆ ತರಲು ಸಮೀಕ್ಷೆ ಬುನಾದಿ ಆಗಲಿದೆ ಎಂಬ ಸತ್ಯ ಅರಿತುಕೊಳ್ಳಬೇಕು ಎಂದರು.
ಕುಟುಂಬವೊಂದರಲ್ಲಿ ಎಷ್ಟು ಜನರಿದ್ದಾರೆ, ಅವರ ಆರ್ಥಿಕ, ಶೈಕ್ಷಣಿಕ ಪರಿಸ್ಥಿತಿ ಏನು ಹೀಗೆ ಅನೇಕ ವಿಷಯಗಳನ್ನು ಅರಿತರೇ ಮಾತ್ರ ಸಮುದಾಯದ ಸಮಗ್ರ ಅಭಿವೃದ್ಧಿಗೆ ಸರ್ಕಾರ ಮುಂದಾಗಲು ಸಾಧ್ಯ. ಇಲ್ಲದಿದ್ದರೇ ಮೀಸಲಾತಿ, ಸರ್ಕಾರಿ ಸೌಲಭ್ಯಗಳು ಬಡ ಜನರಿಗೆ ತಲುಪಲು ಕಷ್ಟವಾಗಲಿದೆ ಎಂದು ತಿಳಿಸಿದರು.
ಸರ್ಕಾರಿ ಯೋಜನೆಗಳನ್ನು ಯಾವ ಆಧಾರದ ಮೇಲೆ ರೂಪಿಸುತ್ತೀರಿ, ಯಾವ ಸಮುದಾಯದ ಸಂಖ್ಯೆ ಎಷ್ಟು, ಅವರ ಹಿಂದುಳಿಯುವಿಕೆಗೆ ನಿಮ್ಮಲ್ಲಿ ಯಾವ ಅಂಕಿ ಅಂಶ ಇದೆ ಎಂದು ಅನೇಕ ಪ್ರಸಂಗಗಳಲ್ಲಿ ನ್ಯಾಯಾಲಯ ಕೂಡ ಸರ್ಕಾರಗಳನ್ನು ಪ್ರಶ್ನೇ ಮಾಡಿದೆ. ಇಂತಹ ಎಲ್ಲ ಪ್ರಶ್ನೇಗಳಿಗೂ ಸಮೀಕ್ಷೆ ಕಾರ್ಯ ಉತ್ತರದ ಜೊತೆಗೆ ರಾಜ್ಯದ ಸರ್ವ ಸಮುದಾಯಗಳ ಪ್ರಗತಿಗೆ ಆಧಾರವಾಗಲಿದೆ ಎಂದರು.
ಈ ವಿಷಯದಲ್ಲಿ ಯಾವುದೇ ಪಕ್ಷದ ಮುಖಂಡರು ರಾಜಕಾರಣ ಮಾಡುವುದು ತಮ್ಮದೇ ಸಮುದಾಯಕ್ಕೆ ಅನ್ಯಾಯ ಮಾಡಿದಂತೆ. ಆದ್ದರಿಂದ ರಾಜಕೀಯಕ್ಕಾಗಿ ವಿರೋಧ ಮಾಡದೆ ತಮ್ಮ ಜಾತಿಗಳಲ್ಲಿ ಸಮೀಕ್ಷೆಯಲ್ಲಿ ಸಮರ್ಥವಾಗಿ ಪಾಲ್ಗೊಳ್ಳುವಂತೆ ಜಾಗೃತಿ ಮೂಡಿಸಿದರೆ ಬಡ, ಮಧ್ಯಮ ವರ್ಗದ ಜನರಿಗೆ ಅನುಕೂಲವಾಗಲಿದೆ ಎಂದು ತಿಳಿಸಿದರು.
ಸ್ವತಂತ್ರ ಭಾರತದ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಕರ್ನಾಟಕ ರಾಜ್ಯದಲ್ಲಿ ಜಾತಿಗಣತಿ ಕಾರ್ಯ ಕೈಗೊಂಡ ಹೆಗ್ಗಳಿಕೆ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರಕ್ಕೆ ಸಲ್ಲುತ್ತದೆ. ಕಾಂತರಾಜ್ ಆಯೋಗದ ವರದಿ ಬಿಡುಗಡೆ ವಿಳಂಬ ಆಗಿದ್ದರಿಂದ, ಮರು ಸಮೀಕ್ಷೆ ನಡೆಸಲಾಗುತ್ತಿದೆ. ಆದರೆ, ಸಮೀಕ್ಷೆ ವೇಳೆ ೬೦ ಪ್ರಶ್ನೇಗಳಲ್ಲಿ ಕೆಲವುಗಳಿಗೆ ಕಡಿವಾಣ ಹಾಕಬಹುದಿತ್ತು. ಅದರಲ್ಲೂ ಮತದಾರರ ಚೀಟಿ, ಜನನ ಪ್ರಮಾಣ ಪತ್ರ ಕೇಳುವುದು ಅನಗತ್ಯ. ಪರಿಣಾಮ ಜನಸಂಖ್ಯೆ ಕಡಿಮೆ ದಾಖಲಾಗುವ ಆತಂಕ ಇದೆ. ಆದ್ದರಿಂದ ಆಯೋಗ ಇದನ್ನು ಗಮನಿಸಿ, ಸರಿಪಡಿಸುವ ಕೆಲಸ ಮಾಡಬೇಕು ಎಂದು ಒತ್ತಾಯಿಸಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಸ್.ಟಿ.ಹನುಮಂತಪ್ಪ, ಜಿಪಂ ಮಾಜಿ ಅಧ್ಯಕ್ಷ ಪಿ.ಆರ್.ಶಿವಕುಮಾರ್, ಮಾಜಿ ಸದಸ್ಯ ರಂಗಸ್ವಾಮಿ, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಮುತ್ತುಗದೂರು ರುದ್ರಪ್ಪ, ಯುವ ಘಟಕದ ಅಧ್ಯಕ್ಷ ಚೇತನಕುಮಾರ್ ಬೋರೇನಹಳ್ಳಿ, ಮುಖಂಡರಾದ ಗಿರಿಜಮ್ಮ ಬಸವರಾಜ್, ಸಾಸಲು ದೇವಣ್ಣ, ಕೆ.ಸಿ.ಪುರುಷೋತ್ತಮ್, ಹನುಮಂತಪ್ಪ ಗೋಡೆಮನೆ, ಪ್ರಕಾಶ್, ಬಸವರಾಜ್, ಸಂಗನಗುಂಡಿ ಮಂಜಣ್ಣ ಇತರರಿದ್ದರು.

